(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ರಜಾಯಿದ್ ಟೈಮಲ್ಲಿ ಆಡು-ಕುರಿ ಮೇಯ್ಸಕ್ಕೆ ಮಂಟಿಗೆ ಹೋಯ್ತಿದ್ದ ಉಡುಗ್ರು, ಗಣಪತಿ ಅಬ್ಬ ಇದ್ದಾಗ ಆಡುಕುರಿ ಕಡೆ ತಲೆನೆ ಕಡುಸ್ಕಳ್ಳಲ್ಲ. ಎಮ್ಮೆ-ದನನಾದ್ರು ಇರ್ಲಿ ಏನಾದ್ರು ಇರ್ಲಿ ಅವೆಲ್ಲ ಅಪ್ಪ-ಅವ್ವನ್ ಪಾಡು. ತಮ್ಗೂ-ಅವ್ಕೂ ಸಂಬಂಧ್ವೇ ಇಲ್ಲ ಅನ್ನಂಗೆ ಊರೊಳಗೆ ಓಗ್ಬಿಡ್ತಾರೆ
ಗಣ್ಪತಿ ಅಬ್ಬ ಬತ್ತು ಅಂದ್ರೆ ನಮ್ಮೂರ್ ಐಕ್ಳುಗೆ ಕುಸ್ಯೋ ಕುಸಿ. ಅಬ್ಬಕ್ಕಿಂತ ಮೂರ್ ದಿನ ಮುಂಚೆನೇ ಅಬ್ಬಕ್ಕೆ ತಯಾರಿ ಸುರು ಮಾಡ್ಕಬುಡ್ತರೆ. ಮನೆ-ಮನೆಗೋಗಿ ಗಣಪತಿ ತರಕೆ ಅಂತ ದುಡ್ಡು ವಸೂಲಿ ಮಾಡದು, ಚಪ್ಪರ ಆಕರೆ ಪಾರೆಸ್ಟ್‌ಗೋಗಿ ನೀಲ್‌ಗಿರಿ ಗಳ ಕಡ್ಕಂಡ್ ಬಂದ್ ಮನೆತವು ಆಕಳದು, ತೆಂಗಿನ್‌ಗರಿ ಕಡ್ಕಂಡ್ ಬಂದು ಎಣಿಯೋದ್ರಲ್ಲಿ ಐಕ್ಳು ಫುಲ್ ಬಿಸಿ ಆಗೋಗ್ತಾರೆ. ಚಿಕ್ಕ ಐಕ್ಳಿಂದ ಇಡ್ದು ಕಾಲೇಜ್‌ಗೋಗೊ ಉಡುಗ್ರೆಲ್ಲ ಒಂದ್ ವಾರ ಪೂರ್ತಿ ಅಪ್ಪ-ಅವ್ವನ ಕೈಗೆ ಸಿಗದಿಲ್ಲ. ಅಪ್ಪ-ಅವ್ವಂದ್ರೂ ಇವ್ರನ್ನ ಉಡ್ಕಕ್ಕೆ ಓಗದಿಲ್ಲ. ಎಲ್ಲೋ ಓಗವೆ, ಬರ್ತವೆ ಅನ್ಕಂಡ್ ಸುಮ್ನಿರ್ತರೆ. ಉಣ್ಣೋ ಟೈಮ್‌ಗೆ ಮನೆಗ್ ಬಂದ್ರೆ ಅಷ್ಟೇ ಸಾಕು.
ರಜಾಯಿದ್ ಟೈಮಲ್ಲಿ ಆಡು-ಕುರಿ ಮೇಯ್ಸಕ್ಕೆ ಮಂಟಿಗೆ ಹೋಯ್ತಿದ್ದ ಉಡುಗ್ರು, ಗಣ್ಪತಿ ಅಬ್ಬ ಇದ್ದಾಗ ಆಡುಕುರಿ ಕಡೆ ತಲೆನೆ ಕಡುಸ್ಕಳ್ಳಲ್ಲ. ಎಮ್ಮೆ-ದನನಾದ್ರು ಇರ್ಲಿ ಏನಾದ್ರು ಇರ್ಲಿ ಅವೆಲ್ಲ ಅಪ್ಪ-ಅವ್ವನ್ ಪಾಡು. ತಮ್ಗೂ-ಅವ್ಕೂ ಸಂಬಂಧ್ವೇ ಇಲ್ಲ ಅನ್ನಂಗೆ ಊರೊಳಗೆ ಓಗ್ಬಿಡ್ತಾರೆ. ಆಳಾದ್ ಐಕ್ಳು ಎಲ್ ಆಳಾಗೋದ್ವೊ ಅಂತ ಬೈಕಂಡು, ಅಪ್ಪ-ಅವ್ವ ದನ-ಎಮ್ಮೆ ಒಡ್ಕಂಡ್ ಮಂಟಿಕಡಿಕೆ ಓಯ್ತರೆ. ಸ್ಕೂಲ್ ಕತೆಯಂತೂ ಕೇಳಂಗೇ ಇಲ್ಲ. ಅಬ್ಬುಕ್ಕೆ ಅಂತ ಎಲ್ಡ್ ದಿನ ರಜಾ ಕೊಟ್ರೆ, ಐಕ್ಳು ನಾಲ್ಕ್ ದಿನ ರಜಾ ತಕಂಡ್ ಗಣಪತಿನ ಕೆರೆಗೆ ಬಿಡೋವರ್ಗು ಸ್ಕೂಲ್ ಕಡೆಗೆ ತಲೆ ಆಕಕಿಲ್ಲ. ಇದೆಲ್ಲ ಎಲ್ಲ ವರ್ಸವೂ ಮಿಸ್ಸಾಗ್ದೆ ನಡಿಯೋ ಕತೆ.
ಇನ್ನ ಅಬ್ಬದ್ ದಿನ ಅಂತೂ ಉಡುಗ್ರೆಲ್ಲ ವತ್ತಾರೆನೇ ಎದ್ಬುಟ್ಟು, ಗಣ್ಪತಿಗೆ ಪೆಂಡಾಲ್ ಆಕಕೆ ಓಗ್ಬುತಾರೆ. ಒಬ್ಬ ಗಳ ನೆಡಕೆ ಆರೆ ಇಡ್ಕೊಂಡ್ ಗುಂಡಿ ತೆಗಿಯಕೆ ಅಂತ ನಿಂತ್ರೆ, ಇನ್ನೊಬ್ಬ ಮಣ್ಣ ಕೈಯಲ್ಲಿ ಬಾಚಿ ಗುಂಡಿಯಿಂದ ವರಿಕಾಕ್ತಾನೆ. ಇನ್ನೊಬ್ಬ ಗಳ ನೆಟ್ಕೊಂಡ್, ಕಲ್ಲು-ಮಣ್ಣ ಗಳುದ್ ಸುತ್ತ ಗುಂಡಿಗೆ ಆಕಿ ಬಿಗಿ ಮಾಡ್ಕಂಡ್ ಬತ್ತನೆ. ಅಸ್ಟೊತ್ಗೆ ಮತ್ತೊಬ್ಬ ಚಪ್ಪರದ್ ಗಳ ಬಿಗಿಯಾಗಿ ಕಟ್ಟಕೆ ಸುತ್ಲಿ ದಾರ, ಪಿಂಜಿ ಉರಿ ರೆಡಿ ಮಾಡ್ಕಂಡ್ ಬತ್ತನೆ. ಎಲ್ಲ ಸೇರ್ಕಂಡು ಗಳ ನೆಟ್ಟು, ಮೇಕೂ ಗಳ ಕಟ್ಟಿ, ಅಡ್ಡಡ್ಡ-ಉದ್ದುದ್ದ ಗಳ ಹಾಕಿ, ಬಿಗಿಯಾಗಿ ಕಟ್ಟಿ, ಎಣ್ದಿರೋ ತೆಂಗಿನ್ ಗರಿನಾ ಚಪ್ರುದ್ಮೇಕೆ ಆಕಿ. ಪೆಂಡಾಲ್ ರೆಡಿ ಮಾಡ್ತಾರೆ.
ಗಣ್ಪತಿ ಕೋರ್ಸಕೆ ಅಂತ ಯಾರಾದ್ರು ಒಳ್ಳೆ ಟೇಬರ್ ಇಟ್ಟಿರೋರ್ ಮನೆಗೋಗಿ, ಟೇಬರ್ ಈಸ್ಕಂಡ್ ಬಂದು, ಅದ್ನೂ ಕ್ಲೀನಾಗಿ ತೊಳ್ದು, ಅದ್ಕೆ ಬಾಳೆ ಕಂದು, ಕಬ್ಬಿನ್ ಗರಿ ಕಟ್ಟಿ ಸಿಂಗಾರ ಮಾಡಿ, ಟೇಬಲ್ ಮೇಕೆ ಬಾಳೆ ಎಲೆ ಆಸ್ಬುಟ್ಟು ರೆಡಿ ಮಾಡ್ಕತಾರೆ.
ಇನ್ನು ಎಣೈಕ್ಳು, ಅಪ್ಪನೋ, ಅಣ್ಣನೋ ಕೊಟ್ಟಿದ್ ಬಾಗಿಣದ ದುಡ್ಡಲ್ಲಿ ವಸ ಬಟ್ಟೆ ತಕೊಂಡು, ಮನೆಲಿ ಒಬ್ಬಟ್ ಮಾಡಿ, ಅಕ್ಕ-ಪಕ್ಕದ್ ಮನೆಯವ್ರಿಗೆ ಊಟ ಆಕೋದ್ರಲ್ಲೇ ಮುಳುಗೋಗ್ತಾರೆ. ಮನೆ ಕೆಲ್ಸ ಎಲ್ಲನೂ ಮುಗ್ಸಿ, ಪ್ರೆಂಡ್ಸ್ ಎಲ್ಲ ಸೇರ್ಕಂಡ್ ಗೌರಿ ಪೂಜೆ ಮಾಡಿ, ಅರಟೆ ಹೊಡ್ಕೊಂಡ್ ಕೂತಿರ್ತಾರೆ.
ಗಂಡೈಕ್ಳೆಲ್ಲ ಪೆಂಡಾಲ್ ರೆಡಿ ಮಾಡಿ, ಗಣ್ಪತಿ ತರಕೆ ಒಂದ್ ಲಗೇಜ್ ಆಟೊ ತಕೊಂಡ್ ಕ್ಯಾರ್ಪೇಟೆ ಕಡಿಕೆ ಹೊಯ್ತಾರೆ. ಕ್ಯಾರ್ಪೇಟೆ ಬೀದ್ಬೀದಿ ಸುತ್ತಿ, ತಮ್ಗೆ ಯಾವ್ದ್ ಬೇಕೋ ಆ ಗಣ್ಪತಿನ ಸೆಲೆಕ್ಟ್ ಮಾಡ್ಕಂಡು, ಯಾಪಾರಿ ಜೊತೆ ಚೌಕಾಸಿ ಮಾಡಿ, ಗಣ್ಪತಿಗೆ ಆಟೋಗಾಕಂಡು, ಗಣ್ಪತಿ ಮುಂದೆ ಇಡಕೆ ಬೇಕಿರೋ ಅಣ್ಣು, ತಿಂಡಿ ಎಲ್ಲ ತಕೊಂಡ್ ಊರ್ಕಡಿಕೆ ಬಂದ್ಬುಡ್ತಾರೆ.
ಊರ್ಗೆ ಗಣ್ಪತಿ ತಂದು, ಪೂಜಾರಿ ಕರ್ಸಿ, ಪೂಜೆ ಮಾಡ್ಸಿ, ಪೆಂಡಾಲಲ್ಲಿ ಇಟ್ಟಿದ್ದ ಟೇಬಲ್ ಮೇಕೆ ಕೂರ್ಸಿ, ಚರ್ಪು ಅಂಚಿ, ತಿಂದು, ‘ಗಣ್ಪತಿ ಬಪ್ಪ ಮೋರ್ಯ’ ಅಂತ ಘೋಷ್ಣೆ ಕೂಗಿ ಖುಸಿಪಡ್ತಾರೆ.
ಗಣೇಸನ್ನ ಇಟ್ಟಾಗಿಂದ ಕೆರೆಗೆ ಬಿಡೋವರ್ಗು, ಪೆಂಡಾಲ್ ಬುಟ್ಟು ಐಕ್ಳು ಕದ್ಲಾಕಿಲ್ಲ. ಮನೆಗೋಗದು ಊಟ, ತಿಂಡಿ ಮಾಡದು, ಮತ್ತೆ ಪೆಂಡಾಲ್ ಕಡಿಕೆ ಓಡ್ ಬರದು. ಮೂರ್ನಾಕ್ ದಿನ ಇಂಗೆ ನಡೀತದೆ.
ಗಣ್ಪತಿ ಕೂರ್ಸಿದ್ ಮೂರ್ನೇ ದಿನುಕ್ಕೆ, ಇಲ್ಲ ಐದ್ನೇ ದಿನುಕ್ಕೆ ಗಣಪತಿನಾ ಕೆರೆಗೆ ಬುಡೊ ಕಾರ್ಯಕ್ರಮ ಇರ್ತದೆ. ಅವತ್ತು, ಎತ್ತಿನ್ ಗಾಡಿನ ತೊಳ್ದು, ಸಿಂಗಾರ ಮಾಡಿ ಗಣ್ಪತಿ ಮೆರ್ವಣ್ಗೆಗೆ ರೆಡಿ ಮಾಡ್ತಾರೆ. ಗಣ್ಪತಿನಾ ಗಾಡಿ ಮೇಕೆ ಕೋರುಸ್ಕಂಡು ಊರ್ನ ಎಲ್ಲ ಬೀದಿಲೂ ಮೆರ್ವಣ್ಗೆ ಮಾಡ್ತಾರೆ. ‘ಗಣ್ಪತಿ ವೊಟ್ಟೆ ನೋಡು ಐಸಾ, ಅವ್ನ ಕಾಲ್ ನೋಡು ಐಸಾ, ಅವ್ನ ಸೊಂಡ್ಲು ನೋಡು ಐಸಾ’ ಅಂತ ಘೋಷ್ಣೆ ಕೂಕಂಡು ಉಡುಗ್ರೆಲ್ಲ ಗಣಪತಿ ಇಂದೆ ಓಯ್ತಾರೆ. ಎಲ್ಲಾರ್ ಮನೆ ಮುಂದೆನೂ ಪೂಜೆ ಮಾಡಿ, ಚರ್ಪು ಅಂಚಿ ಕರೆ ಕಡಿಕೆ ತಕಂಡ್ ವೊಯ್ತಾರೆ.
ಕೆರೆ ದಡುಕ್ಕೆ ಗಣ್ಪತಿ ಇಟ್ಟು, ಕೊನೆ ಸರಿ ಪೂಜೆ ಮಾಡಿ, ಐಕ್ಳೆಲ್ಲ ಸೇರ್ಕಂಡು ಗಣ್ಪತಿನಾ ಕೆರೆ ಒಳಿಕೆ ಎತ್ಕಂಡ್ ವೋಗಿ, ‘ಚಿಕ್ ಕೆರೆಲಿ ಬಿದ್ದ, ದೊಡ್ ಕೆರೆಲಿ ಎದ್ದ’ ಅಂತ ಘೋಸ್ಣೆ ಕೂಗಿ, ಮೂರ್ಸಾರಿ ಗಣ್ಪತಿನಾ ನೀರಲ್ಲಿ ಮುಳುಗ್ಸಿ, ಎತ್ತಿ ಕೊನೆಗೆ ಮುಳ್ಗುಸ್ ಬುಡ್ತಾರೆ. ಅಲ್ಗೆ ಗೌರಿ-ಗಣೇಸನ ಅಬ್ಬುದ್ ಕತೆ ಮುಗಿತದೆ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ನಮ್ಮ ಬಾಲ್ಯದಲ್ಲಿಯೂ ವಸಿದಿನ ಮಾಡ್ದೊ ಕಣೊ ಸೋಮ! ನಮ್ಮ ಕಾಲ್ದಲಿ ಕೈ ಬರದು ಲಾಟರಿ ಟಿಕೇಟ್ ಮಾಡಿ ಮಾರೋವು. ಬಟ್ಟಲು,ಲೋಟ, ಚಮಚ, ಕಾಪಿ ಸೋರ್ಸೋ ಜಾಲ್ದರಿ ಇತ್ತಾದಿಗಳನ್ನು ತಂದು ಗಣಪತಿ ಮುಂದೆ ನೇತಾಕೋವು ಕಣ ಸೋಮ.
ನಿನ್ನ ಲೇಖನ ಓದಿ ಬಾಲ್ಯ ಅಡ್ಡಾಡಿ ಓಯ್ತು ಕಣೊ!