ಕೊರಟಗೆರೆ ಸೀಮೆಯ ಕನ್ನಡ | ‘ಯಂಗೈತೆ ಅಂದ್ರೆ ನೊಣ ಕೂಕಂಡ್ರೆ ಜಾರ್ತತೆ…’

Date:

Advertisements

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)

ಕಳ್ದ ಗೌರಿ ಹಬ್ಬುದ ದಿನ ಸುತ್ತೇಳಳ್ಳಿ ಜನೆಲ್ಲಾ ಬರ್ಕದ ಕಡೆ ಹೆಜ್ಜೆ ಹಾಕ್ತಿದ್ರು. ಯಾಕಂದ್ರೆ, ಸುತ್ತಳ್ಳಿಗೆಲ್ಲಾ ಆವ್ಗೆ ಇದ್ದಿದ್ದು ಆ ಊರ್ನಾಗ್ಮಾತ್ರ. ಬಾಳ ವರ್ಸದ ಮ್ಯಾಲೆ ಬಂದಿದ್ದ ರಾಮಣ್ಣ, “ಏನಣ್ಯ, ಆವ್ಗೆ ಮೇಲೆಲ್ಲಾ ಈಪಾಟಿ ಅಲ್ಬು-ಅಟ್ರೆ ಬೆಳ್ಕಂಡು, ಐತೋ ಇಲ್ವೋ ಅಂಬಂಗೈತೆ! ಯಾಕಿಂಗಿಕ್ಕಂಡಿದ್ಯಾ?” ಅಮ್ತ ಕುಂಬಾರ ಸಂಜೀವಪ್ಪುನ್ನ ಕೇಳ್ತು. “ಎಲೆ ಹೋಗೋ ರಾಮಣ್ಣ… ಮಕ್ಳು-ಮರೆಲ್ಲಾ ಕಸುಬ್ಬಿಟ್ಟು ಪ್ಯಾಟೆಗೋಗವ್ರೆ. ಯಾತ್ರು ಐಸಿರಿಗೆ ಮಾಡ್ಬೇಕೇಳು ನೀನೆ ಮತ್ತೆ… ಎಲ್ಲಾ ಸ್ಟೀಲು, ಪ್ಲಾಸ್ಟಿಕ್ನೋವು ಪಾತ್ರೆ-ಪಗ್ಡೆ ತಗಮ್ತರೆ. ಆ ನಮ್ಮಮ್ಮ ಕಾವಲ್ಲಮ್ ತಾಯ್ಗೆ ಪರ್ಸೆನಾಗೆ ಮಡ್ಕೆ, ಕುಡ್ಕೆ, ದೀಪ, ಧೂಪ್ಕುಣ್ಕೆ ಕೊಡದ್ಗಾನೆ ಇಲ್ದಿದ್ರೆ ಯಾವಾಗ್ಲೂ ಕಿತ್ತಾಕಿ ಸೀಮೆಹಸಿಗೆ ಶೆಡ್ ಕಟ್ತಿದ್ದೆ,” ಅನ್ತು. “ಅದು ಸರ್ಬಿಡು… ನೀನೇಳದು ದಿಟ್ವೆ,” ಅನ್ತ ರಾಮಣ್ಣ ಸ್ಯಾದ್ರೆನ್ನೆಲ್ಲಾ ವಾರ್ಮಾಡಿ ಅಲ್ಲೇ ಬಿದ್ದಿದ್ದ ಬೋಕಿನಾಗೆ ಕೆರ್ದು-ಕೆರ್ದು ಮೂರಿಡಿ ಬೂದಿನ ಕವರೊಳಿಕೆ ಹಾಕಂಡು, “ಬತ್ತೀನಣ್ಯ…” ಅನ್ತ ಊರಿನ್ದಾರಿ ಇಡಿತು. ಬತ್ತಾ ಅಂಗೆ ಹೊಲ್ತಾಕೋಗಿ ಬೂದಿ ಕವರ್ನ ವಂಗೆ ಮರುಕ್ಕೆ ತಗ್ಲಾಕಿ, ಬೇಲಿ ಒಳ್ಗೆ ಬಚ್ಚಿಕ್ಕಿದ್ದ ಕುಡ್ಳು ತಗಂಡು ಸಿಗ್ಬರ್ಕದ ಕಡೆ ನಡಿತು. ನಾಕೈದು ಪಚ್ಚಾಲಿ ಮರನ ನೋಡಿ, ಸೀಡೆ ಇಲ್ದ ಮರ ಹತ್ತಿ ನೆಟ್ಗೆ, ವೈನಾಗಿ ಅಕ್ಲುಗಳುನುವ-ಸೋಪ್ಪುನು ಇರೋ ಬಾರುದ್ದದೋವು ನಾಕು ಕೊನೆನ ಕಡ್ಕಂಡು ಯಗ್ಲುಗಿಕ್ಕಂಡು ಬಂತು.

ಮನಿಗ್ಬಂದು ಯಂಡ್ರುಗೆ, “ಬೈನ್ಕಡಿಕೆ ಹಸ್ರುಗೆ ಬೆಚ್ಚಿಕ್ಕಂಡು ಬತ್ತೀನಿ. ಗಾಡನ ಬಿಸೇ ಅನ್ನ ಮಾಡಿ ಯಂಜ್ಲು ಮಾಡ್ದಂಗೆ ರವಷ್ಟು ತಗ್ದಿಕ್ಕು. ಅಂಗೆನೇ ಒಂದೀಟು ಮೊಸ್ರುನ ಎತ್ತಿಕ್ಕಿ ಪೂಜ್ಗೆ ಕೊಡು,” ಅಂದ. ಗಂಗಮ್ಮ ಬಿಸೇ ಅನ್ನ ಮಾಡಿ ಒಂದು ಬಟ್ಳುಗೆ ತೆಗ್ದಿಕ್ಕಿ, ಅದುಕ್ಕೆ ಒಂದ್ಲೋಟ ಮೊಸ್ರು ಹಾಕಿಳು. ಅರುಸ್ಣ-ಕುಕ್ಮನ ಕಾಜ್ಗದಾಗೆ ಸುತ್ತಿ ಬ್ಯಾಗೋಳಿಕೆ ಇಕ್ತು. ಜತ್ಗೆ ನಾಕೈದು ಊದ್ಗಡ್ಡಿ, ಯಲೆಅಡ್ಕೆ, ಒಂದ್ರುಪಾಯಿ, ಹಣ್ಣು-ಕಾಯಿ ಸೇರ್ದಂಗೆ ಪೂಜ್ಗೆ ಜೋಡುಸ್ತು. ವತ್ತು ವಾಲಿದ್ಮೇಲೆ ಬ್ಯಾಗ್ನ ಬಗ್ಲುಗೆ ಯಸ್ಕಂಡು ಸೀದಾ ಸೌಳ್ಬಾರೆನಾಗಿದ್ದ ದಿನ್ನೆ ಹೊಲ್ಕೆ ಬಂದ ರಾಮಣ್ಣ, ಕಳ್ಳೆ ಗಿಡ್ದ ತುಂಡಕ್ಕೊಂದು, ಪುಣ್ಜಿ ಹಾಕಿದ್ದ ಕೊರುಕ್ಲುಗೊಂದು ನಿಲ್ಸಿ, ಕಡೆಗೆ ಕತ್ರುಸ ತೆನೆ ಆಗಿದ್ದ ನಡಿ ರಾಗಿ ಹೊಲುಕ್ಕೆ ಬಂದು, ಐದಾರು ಗುಮ್ಮಿ ತಾಳ್ನ ಕಿತ್ತು ಬೆಚ್ಚಿನ ಕೊನೆ ಹೂಣ್ದ. ಆ ಕಡೆ ಈ ಕಡೆ ತಾರಾಮಾರಿ ಅಡ್ಡಾಡಿ, ಬೆಳ್ಳುದ್ದದೋವು ಮೂರು ಬೆಣಚ್ಕಲ್ಲು ಆಯ್ಕಂಡ್ಬಂದ. ಬೆಚ್ಚಿನ ಕೊನೆ ಬುಡ್ದಗೆ ಮಳ್ಳಿನ ದಿಡ್ಡೆ ಮಾಡಿ, ಸೊಂಬೊಳ್ಗಿರೋ ನೀರ್ ತಗಂಡು ತೊಳ್ದು ಬೆನ್ಕಪ್ಪನ್ನ ಇಕ್ದ. ಅಂಗೆ ಒಂದಿಡಿ ಬೇವಿನ್ಸೊಪ್ಪು ತಂದ. ಬೆನ್ಕಪ್ಪಂಗೂ, ಬೆಚ್ಚಿನ ಕೊನ್ಗೂ ಅರುಸ್ಣ-ಕುಕ್ಮ ಇಕ್ದ. ಬದಿನಾಗಿದ್ದ ತುಂಬೆ ಹುವ್ವ, ತಂಗ್ಡಿ ಹುವ್ವ, ಹೊಲ್ದಾಗಿದ್ದ ಅಣ್ಣೆ ಹುವ್ವ ಕಿತ್ಕಂಡಿಕ್ದ. ಅಮ್ಯಾಕೆ ಆವ್ಗೆ ಬೂದಿನ ಮೇಲಿಂದ ಕೆಳಿಕೆ ಎರ್ಸಿ ಒಂದಿಡಿನ ಮಿಗುಸ್ದ.  ಬೇವಿನ್ಸೊಪ್ನ ಹಾಸಿ ಮ್ಯಾಕೆ ಮೂರ್ ಪಿಡ್ಸೆ ಮೊಸ್ರನ್ನ ಎಡೆ ಹಾಕಿ ಮಿಕ್ಕಿದ್ದ ಅನ್ನಕ್ಕೆ ಆವ್ಗೆ ಬೂದಿ ಹಾಕಿ ಪೂಜೆ ಮಾಡ್ದ. ಒಂದು ಪಿಡ್ಸೆನಾ ಕೂಳಂತ ತಿಂದು, ಒಂದುನ್ನ ಅಲ್ಲೇ ಬಿಟ್ಟು, ಇನ್ನೊಂದು ಪಿಡ್ಸೆನಾ ಮೊಸ್ರನ್ನ-ಬೂದಿ ಇದ್ದ ಬಟ್ಳುಗಾಕಿ ಮೂರ್ಕುಡಿ ಬೇವಿನ್ಸೊಪ್ಪು ಹಾಕಿ ಕಲುಸ್ಕಂಡು, “ಓಲ್ಗಸಮೋಲ್ಗ ಬೋಲ್ಗ ಬೋಲ್ಗ…” ಅನ್ತ ಕೂಗ್ತ, ಮೊದ್ಲಿಗೆ ಬೆಚ್ಗೆ ಎರ್ಸಿ, ಆಮ್ಯಾಕೆ ಮೂಡ್ಗಡೆಯಿಂದ ಸುರುಮಾಡ್ಕಂಡು ಹೊಲನ ಸುತ್ಬಳ್ಸಿ ಎರುಸ್ಕಂಡು ಬಂದ.

Advertisements

ನಾಳಿಕೆ ಬೆಚ್ಚಿಕ್ಕಕೆ ಅನ್ತ ಕೊನೆ ಕಡ್ಕಂಡು ಬಂದ ಪಕ್ಕದೊಲ್ದ ನಾಗಣ್ಣ, “ಏನಪ್ಪೋ ರಾಮಣ್ಣ, ನಿಮ್ದೆ ಸರ್ಬಿಡು ಸೀಬೆಚ್ಚು. ನಮ್ದೋ ಸುಮ್ನಿರಂಗೂ ಇಲ್ಲ, ಬಿಡಂಗೂ ಇಲ್ಲ…” “ಅಯ್ಯೋ… ಇವ್ನ್ ಪಾಸ್ಕೂಲ ಹೇಳಯ್ಯ ಕತೆನಾ! ಮದ್ಲಿಂದ ನೀವು ಮಾಡ್ಕಂಡು ಬಂದಿರದು ಅಂಗೆ, ನಮ್ದು ಇಂಗೆ. ಈಗೇನು ನೀನು ಇನ್ಮ್ಯಾಕೆ ಸೀಬೆಚ್ಚೆ ರೂಡಿ ಮಾಡು,” ಅಂದ ರಾಮಣ್ಣ. “ಎಲ್ಲನ ಉಂಟಾ! ನಮ್ಮಪ್ಪ ಬರ್ಗಾಲದಗೆ ಗೋಟಿಗೆಡ್ಡೆ ತಿನ್ನೋವಾಗ್ಲೇ ಕೋಳಿ ಕುಯ್ದು ನಾಕ್ ಜನ್ಕೆ ಅನ್ನ ಹಾಕವ್ನೆ. ಈಗ ಬಿಡಕಾಗ್ತದ? ವತಾರಿಕೆ ಇಟ್ನೊತ್ಗೆ ಬಾ ಉಂಡೋಗಿವಂತೆ,” ಅಂದ ನಾಗಣ್ಣ. “ಎರಡ್ ಕಾಲ, ನಾಕ್ ಕಾಲ?” ಅನ್ತ ರಾಮಣ್ಣ ಕೇಳಿದ್ಕೆ, “ನಾಕ್ ಕಾಲಿಂದೆ ಕಣ್ಬಾರಪ್ಪೋ… ರಾಂಪುರುಕ್ಕೋಗಿ ಸುಮಾರದೊಂದು ಮಣ್ಕ ಇಡ್ಕಬಂದಿದಿನಿ, ಯಂಗೈತೆ ಅಂದ್ರೆ ನೊಣ ಕೂಕಂಡ್ರೆ ಜಾರ್ತತೆ…” ಅಂದ ನಾಗಣ್ಣ. “ಆತು ಬರನ್ಬಿಡು…” ಅಮ್ತ ಮನೆ ಕಡೆ ಬತ್ತ, ತಿಪ್ಪೆಗೊಂದು ಬೆಚ್ಚಿನ ಕೊನೆ ಇಕ್ಕಿ, ಮೂರ್ದಾರಿ ಕೂಡಿರತವ ಕರೆಭಂಟನ ಚಿತ್ರ ಬರ್ದು, “ಹಸ್ರು ಹುಲ್ಸಾಗ್ಲಿ…” ಅಂತ ಕೈಮುಗ್ದು ಮನಿಗ್ಬಂದ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕಾಂತರಾಜು ಗುಪ್ಪಟ್ಣ
ಕಾಂತರಾಜು ಗುಪ್ಪಟ್ಣ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣ ಗ್ರಾಮದವರು. ತನ್ನ ಸುತ್ತಲಿನ ಜನಪದ ಐತಿಹ್ಯ, ನುಡಿಗಟ್ಟು, ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ ಹೊಂದಿದ ಬರಹಗಾರ. ಪ್ರಾಥಮಿಕ ಶಾಲಾ ಶಿಕ್ಷಕ. ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ಲಿಪಿ ವಿಕಾಸ ತರಬೇತಿ; ಈವರೆಗೆ 12 ಅಪ್ರಕಟಿತ ಶಾಸನಗಳ ಸಂಶೋಧನೆ ಮತ್ತು ಅಧ್ಯಯನ.

4 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X