(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಓಬಟ್ಟಿ ಗೌಡುನುಕ ನಮ್ ಅಪ್ಪುನುಕ ಭಾಳಾ ನ್ಯಾಸ್ತ. ಇಬ್ರೂ ಒಂದೇ ಏಜು. ಪಳ್ಳಿಕೂಟಕ್ಕ ಇಬ್ರೂ ಜಮಿಟಿ ಪುಳ್ಳೆಗಳ ತರ ಹೋಗಿಬತ್ತಿದ್ದರು. ನಮ್ ಅಪ್ಪುನು ಲಗ್ಣ ಆದ್ಮ್ಯಾಲೆ ಸಂಪಂಗೆರ್ಕಾ ಬಂದ್ಬುಟ್ನು. ಓಬಟ್ಟಿ ಅಲ್ಲೇ ಉಳ್ಕತು…
ಸುದ್ದುಗುಂಟೆ ಪಾಳ್ಯ ಪರಿಶೆ ನನಗ ಮಗಿನಿಂದ್ಲೂ ಗೊತ್ತು. ವರ್ಸಾವರ್ಸ ತೆಪ್ದಿರಾ ಓಯತಾಯಿದ್ದೆ. ಇಂದ್ಕಿತನೂ ಓಗಿದ್ದೆ. ಯಾವ್ಕಿತ್ತಾ ಹೋದಾಗ್ಲೂ ಓಬಟ್ಟಿ ಗೌಡುನ ನಾನು ನೋಡ್ದಿರಾ ಬತ್ತಿರಲಿಲ್ಲ. ಈ ಕಿತ್ತನೂ ಅವರ್ ಮನ್ತಾಕ ಓಗಿದ್ದೆ.
ಓಬಟ್ಟಿ ಗೌಡುನುಕ ನಮ್ ಅಪ್ಪುನುಕ ಭಾಳಾ ನ್ಯಾಸ್ತ. ಇಬ್ರೂ ಒಂದೇ ಏಜು. ಪಳ್ಳಿಕೂಟಕ್ಕ ಇಬ್ರೂ ಜಮಿಟಿ ಪುಳ್ಳೆಗಳ ತರ ಹೋಗಿಬತ್ತಿದ್ದರು. ನಮ್ ಅಪ್ಪುನು ಲಗ್ಣ ಆದ್ಮ್ಯಾಲೆ ಸಂಪಂಗೆರ್ಕಾ ಬಂದ್ಬುಟ್ನು. ಓಬಟ್ಟಿ ಅಲ್ಲೇ ಉಳ್ಕತು.
ಪರ್ಸೆಗಳು, ಹಬ್ಬಗಳು ಬೆಲೆ ಜೋರಾಗಿ ಆಗೋ ದಿನಗಳು ಅವು. ಹಂಗಾಗಿ ಓಬಟ್ಟಿ ಗೌಡುನು, ಅವನ ಸಂಸಾರವೂ ನಮ್ ಮನಿಕಾ, ಹಂಗೆ ನಮ್ ಪಡೆ ಅವರ್ತಾವುಕೂ ಹೋಗಿಬರೋವು.
ಅಪ್ಪುನು ಜಾಸ್ತಿ ದಿನ ಬದುಕುನಿಲ್ಲ. ಓಬಟ್ಟಿ ಗೌಡುನು ಇದ ನೆಪ್ ಮಾಡ್ಕಂಡು ದಗ್ಗೋನು. ದಗ್ಗಿ-ದಗ್ಗಿ ಅವನ ಎದೆಗೂಡು ಕಾದ ಬಗ್ಲಿ ತರ ಆಗೋಗಿತ್ತು.
ನಾನೂವೆ ಪರಿಶೆ ನೆಪದಾಗ ಸುದ್ದುಗುಂಟೆ ಪಾಳ್ಯಕ ವರ್ಸಕೊಮ್ಮೆ ಪಾದ ಬೆಳೆಸೂವೆ. ಹಂಗೆ ಓಬಟ್ಟಿ ಗೌಡುನು ನೋಡ್ಕಂಡು, ಅವನು ಇಕ್ಕೋ ಕಳಿ ಮುದ್ದೆ ಉಣ್ಕಂಡು ಬರೂವೆ.
ಈಕಿತ್ತ ಪರ್ಸೆಕಾ ಅಂತ ಹೋದಾಗ ಒಂದು ಶಾನೆ ಬೇಜಾರಾಗೋ ವಾರ್ತೆ ಕ್ಯೆಳ್ದೆ – ಓಬಟ್ಟಿ ಗೌಡುನು ಸತ್ಹೋಗಿದ್ದ. ಅವನ ಸಂಸಾರ ಆ ದುಃಖಾನ ಯಾವಾಗ್ಲೋ ಮರತಂಗೆ ಕಾಣ್ತಿತ್ತು.
ಈಕಿತ್ತ ಅವನ ಮನೆನಾಗ ಕಳಿ ಮುದ್ದೆ ತಿನಲಿಲ್ಲ.
* * *
ಓಬಟ್ಟಿ ಗೌಡುನುಕ ಊರಾಗ ನ್ಯಾಸ್ತುಲು ಜೋರಾಗೆ ಅವ್ರೇ. ಕಾಲ್ಕಾಲುಕ ಅಂತೋರು ಸಿಕ್ತಾರೆ. ಕಳ್ಕುಪ್ಪಮ್ಮನು ಈಗ ಊರ ಮುಂದಲ ದುಖಾನು ಮಡಗವ್ಳೇ. ಫಸ್ಟ್ಫಸ್ಟು ಅವ್ಳು ಓಬಟ್ಟಿ ಗೌಡುನುಕ ಸಾನೆ ವರ್ಸ ರಖಾವು ಆಗಿದ್ದೋಳು.
“ಏಮ್ ಸೋಮೆ… ಮಾ ದುಖಾನ್ಲಾ ಏಮೈನಾ ತಾಗರಾದು?” ಅಂತ ಗಂತುಗಳ ಮೇಲೆ ಗಂತುಗಳ ಹಾಕುದ್ಲು.
ನನಗೂ ಏನರಾ ಕುಡಿಬೇಕು ಅನಿಸ್ತು.
“ಏಮ್ ಕುಪ್ಪಮ್ಮಾ ಬಾವುನ್ನವಾ?” ಅಂತ ಖಾಯಸು ಮಾಡಿದೆ.
“ಉನ್ನಾನು ರಾಪ್ಪ…” ಅಂತ ಒಳಗಿಂದ ಕಬ್ಬುಣದ ಮಡಚೋ ಚೇರು ತಂದು ಹಾಕಿ, ಟುವಾಲಿಂದ ಧೂಳು ವರಿಸಿದಳು.
ತರ್ವಾತ ಪೆಪ್ಸಿ ಕೊಟ್ಟು, ಅದು ಇದು ಪಲುಕುತ್ತಾ ಇರುವಾಗ ನಾನೇ ಓಬಟ್ಟಿ ಗೌಡುನು ಮಾತು ತೆಗೆದೆ.
“ಆ ಸ್ವಾಮ್ಲು ದಯಾ ಇಲ್ದಿದ್ದರೆ ನಾನು ಗಡ್ಡಿಕಾ ಬೀಳ್ತಾ ಇದ್ದನಾ!” ಅಂತ ಕಣ್ಗುಡ್ಡಿಗಳಾಗ ನೀರು ತಂದುಕೊಂಡ್ಲು. ಓಬಟ್ಟಿ ಗೌಡುನೇ ಇವ್ಳುಕ ಊರ ಮುಂದಲ ದುಖಾನು ಮಡಗಿಕೊಟ್ಟೋನು ಅಂತ ಅಲ್ಲಾರೂ ಹೇಳೋರೆ. ಇದ್ನ ನಾನೂ ನನ್ ಕಿವಿನಿಂಚಿ ಕೇಳ್ದವ್ನೇ!
ಪೆಪ್ಸಿ ತಳ ಮುಟ್ಟೋ ಟಯಾನಿಗೆ ಕಳ್ಕುಪ್ಪಮ್ಮನು, “ಓಬಟ್ಟಿ ಗೌಡುನುಕ ಬಂದ ಸಾವು ಅನ್ಯಾಯದ್ದು…” ಅಂದ್ಳು. “ಆ ಚೋದ್ಯವ ಬಿಡಿಸಿ ಹೇಳು,” ಅಂತ ನಾನು ಕಿವಿ ನಿಮಿರಿ, ಕೈನಾಗ ಖಾಲಿಯಾಗಿದ್ದ ಪೆಪ್ಸಿ ಹಿಡಿದೇ ಕುತ್ಕಂಡೆ.
“ಓಬಟ್ಟಿ ಗೌಡುನು ಸುದ್ದಗುಂಟೆ ಪಾಳ್ಯದಾಗ ಭಾರೀ ವತನ್ದಾರ. ನನ್ ಕೈನಾಗ ಹರೀದೂ ಅಂತ ಯಾರಾರೂ ಬಂದ್ರೆ, ಹಿಂದಕ ಮುಂದಕ ನೋಡ್ದೆ ಅವ್ರ ಕಷ್ಟಕ ನಿಂತ್ಕತಿದ್ದ. ಅವನ ಎಂಡರುಕ ಉರಿ. ಪುಳ್ಳೆಗಳು ಕೂಡ ಅಮ್ಮುನ ತೊಟ್ಟೆ. ಹಿಂಗೆ ಅವ್ರುಕ ಇವ್ರುಕ ಸಾಯ ಮಾಡಿ-ಮಾಡಿ ಸಾಲ ಮಾಡ್ಕಂಡ…”
“…ಸಾಲ ಫೈಸಲ್ ಮಾಡಾಕ ವಲ ಮಾರ್ದ. ಜನಗಳು ಸಾಯ ಕೇಳೋವಾಗ ಪಿಲ್ಲಿಗಳು ತರ ಡ್ರಾಮಾಗಳು ಮಾಡೋರು. ಅವ್ನ ಸಾಯ ತಕ್ಕಂಡ ಮ್ಯಾಲೆ ಓಬಟ್ಟಿಗುನುಕ ತಲ್ಕಾಯಿ ಸರಿಯಿಲ್ಲ ಅನ್ನೋರು…”
“…ವಲ ಮಾರಿ ಸಾಲಗಳು ತೀರ್ದುಮ್ಯಾಕ, ಆಗ್ಲೂ ಜನಗಳು ಓಬಟ್ಟಿ ಗೌಡುನುಕ ತಲ್ಕಾಯಿ ಸರಿಯಿಲ್ಲ ಅಂದ್ರು. ಯಾಕಪಾ ಅಂದುದಕ, ಜನಗಳು ಅಂದ್ರು; ‘ಈ ಕಾಲದಾಗ ತಲ್ಕಾಯಿ ನೆಟ್ಗಿರೋನು ಯಾವನಾರಾ ಸಾಲಗಳು ತಿರ್ಗ ಕೊಡ್ತಾರಾ!’ ಅಂತಾರೆ!”
“…ಧರ್ಮುಮುಗ ನಡ್ಕಂಡ್ರು ಜನಗಳು ನೆಗಾಡ್ತಾರೆ ಅಂದ್ರೆ ಓಬಟ್ಟಿ ಗೌಡುನುಕ ಹೆಂಗಾಗಬೇಡ! ಇಂತೊಟ್ಟು ಅವನ ಎಂಡರು, ಪುಳ್ಳೆಗಳು ಕೂಡ ಸಸಾರ ನೋಡಿ, ಅದು ಆತುನ್ನ ನಮಿಲಿ ಹಾಕಿಬುಡ್ತು. ಲಾಸ್ಟ್ ಲಾಸ್ಟ್ಕ ಮಿಷಿನ್ ಮನೆನಾಗ ಒಂದೇ ಇತ್ತು. ‘ತಿನ್ನೇವಾ, ಲೇದಾ?’ ಅಂತ ಒಂದೂ ಕೇಳ್ತೀರಲಿಲ್ಲ. ಲಾಸ್ಟ್ ಪರಿಶೆ ಬುಧಾರು ಆಯ್ತು. ಬೇಸ್ತುವಾರ ಓಬಟ್ಟಿ ಗೌಡುನು ಹೋಗ್ಬಿಟ್ಟ. ನೋಡ್ಕಂಡಿದ್ದು ಸನಿವಾರ. ಆಯ್ತವಾರ ಮಣ್ಣು…”
* * *
ಪೆಪ್ಸಿಕಾ ಕುಪ್ಪಮ್ಮನು ಪೈಸಾ ವದ್ದು ಅಂದ್ಲು.
* * *
ಮುಂದ್ಲಕಿತ ಸುದ್ದುಗುಂಟೆ ಪಾಳ್ಯದ ಪರಿಶೆಕಾ ಓಯ್ತೀನೋ ಇಲ್ವೋ ಕಾಣೆ!
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ