ರೈತರು ಆಕ್ರೋಶಗೊಳ್ಳಲು, ಬೀದಿಗೆ ಇಳಿದು ಪ್ರತಿಭಟಿಸಲು ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯೊಂದೇ ಕಾರಣವಲ್ಲ. ಬರ, ಬೆಳೆ ನಾಶ, ಬೆಲೆ ಏರಿಕೆ, ಸಾಲ, ವಲಸೆ, ಉದ್ಯೋಗ ಸಿಗದಿರುವುದು ಎಲ್ಲವೂ ತಳಕು ಹಾಕಿಕೊಂಡಿದೆ. ಇವುಗಳಿಗೆ ಪರಿಹಾರ ಸೂಚಿಸಿ ಜನರು ನೆಮ್ಮದಿಯಾಗಿ ಬದುಕುವ ವಾತಾವರಣ ನಿರ್ಮಿಸಬೇಕಾದ ಸರ್ಕಾರಗಳು, ಸಬೂಬುಗಳ ಮೊರೆ ಹೋಗಿವೆ. ಕಾಲಹರಣಕ್ಕೆ ಜೋತುಬಿದ್ದಿವೆ. ದೂರುವ ತಂತ್ರಕ್ಕೆ ತಲೆಬಾಗಿ ತಲೆ ತಪ್ಪಿಸಿಕೊಳ್ಳುತ್ತಿವೆ.
ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿತ್ತೂರು ಕರ್ನಾಟಕದ ಆರು ಜಿಲ್ಲೆಯ ರೈತರು ಬೇಸಾಯ ಬಿಟ್ಟು ಬೀದಿಗೆ ಇಳಿದಿದ್ದಾರೆ. ರಸ್ತೆ, ರೈಲು ತಡೆದು ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ‘ಬೇಡಿಕೆ ಈಡೇರುವವರೆಗೆ ಇಲ್ಲಿಂದ ಕದಲುವುದಿಲ್ಲ’ ಎಂಬ ಎಚ್ಚರಿಕೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳಿಗೆ ರವಾನಿಸಿದ್ದಾರೆ.
ರೈತರು ಆಕ್ರೋಶಗೊಳ್ಳಲು, ಬೀದಿಗೆ ಇಳಿದು ಪ್ರತಿಭಟಿಸಲು ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯೊಂದೇ ಕಾರಣವಲ್ಲ. ಬರ, ಬೆಳೆ ನಾಶ, ಬೆಲೆ ಏರಿಕೆ, ಸಾಲ, ವಲಸೆ, ಉದ್ಯೋಗ ಸಿಗದಿರುವುದು ಎಲ್ಲವೂ ತಳಕು ಹಾಕಿಕೊಂಡಿದೆ. ಇವುಗಳಿಗೆ ಪರಿಹಾರ ಸೂಚಿಸಿ ಜನರು ನೆಮ್ಮದಿಯಾಗಿ ಬದುಕುವ ವಾತಾವರಣ ನಿರ್ಮಿಸಬೇಕಾದ ಸರ್ಕಾರಗಳು, ಸಬೂಬುಗಳ ಮೊರೆ ಹೋಗಿವೆ. ಕಾಲಹರಣಕ್ಕೆ ಜೋತುಬಿದ್ದಿವೆ. ದೂರುವ ತಂತ್ರಕ್ಕೆ ತಲೆಬಾಗಿ ತಲೆ ತಪ್ಪಿಸಿಕೊಳ್ಳುತ್ತಿವೆ.
ಆ ತಪ್ಪಿಸಿಕೊಳ್ಳುವ ತಂತ್ರದ ಭಾಗವಾಗಿಯೇ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರಾದ ಪ್ರಲ್ಹಾದ್ ಜೋಶಿಯವರು, ಸದ್ಯದಲ್ಲಿಯೇ ರೈತ ಪ್ರತಿನಿಧಿಗಳನ್ನು ದೆಹಲಿ ಕರೆಸಿಕೊಳ್ಳಲಾಗುವುದು ಎಂದು ಎದೆಯುಬ್ಬಿಸಿ ಹೇಳಿದರು. ಅದು ಕೇಂದ್ರ ಸರ್ಕಾರದ ಸ್ಪಂದನೆ, ರೈತ ಕಾಳಜಿಯಂತೆ ಕಂಡು, ಕೃಷಿಕರ ಕಷ್ಟ ಪರಿಹಾರವಾಗುವುದರಲ್ಲಿ ಅನುಮಾನವಿಲ್ಲ ಎಂಬ ಆಶಯ ಎಲ್ಲರದಾಗಿತ್ತು.
ಸಚಿವರು ಹೇಳಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ 54 ಮಂದಿ ರೈತ ಪ್ರತಿನಿಧಿಗಳು ದೆಹಲಿಗೆ ಹೋಗಿದ್ದೂ ಆಯಿತು. ಅ. 12ರಂದು ಕೃಷಿ ಮತ್ತು ಆಹಾರ ಸಚಿವ ನೇತೃತ್ವದಲ್ಲಿ ಮೂರು ಗಂಟೆಯ ಸಭೆಯೂ ಜರುಗಿತು. ಆದರೆ ಆ ಸಭೆಯ ಫಲಿತಾಂಶ- ಸರ್ಕಾರ ಒಂದು ತಿಂಗಳು ಸಮಯ ಕೇಳಿತ್ತು. ಬೆಲೆ ಹೆಚ್ಚಳದ ನಿರ್ಧಾರ ಹೊರಬರದೆ, ತಿಂಗಳ ಸಮಯ ಕೇಳಿದ್ದು ರೈತರ ಅಸಮಾಧಾನಕ್ಕೆ ಕಾರಣವಾಯಿತು. ‘ಸಮಸ್ಯೆ ಬಗೆಹರಿಸುವುದಾಗಿ ಹೇಳಿ ದೆಹಲಿಗೆ ಕರೆಸಿಕೊಂಡ ಪ್ರಲ್ಹಾದ್ ಜೋಶಿ ರೈತರನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶಗೊಂಡ ರೈತರು, ಬೀದಿಗಿಳಿಯುವ ನಿರ್ಧಾರ ಕೈಗೊಂಡರು.
ಇದನ್ನು ಓದಿದ್ದೀರಾ?: ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?
ಅ. 13ರಿಂದ ಉತ್ತರ ಕರ್ನಾಟಕ ಭಾಗದ ರೈತರು ಬೀದಿಗಿಳಿಯುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ, ಅಕ್ಟೋಬರ್ 14ರಂದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಉನ್ನತ ಮಟ್ಟದ ಸಮಿತಿ- ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿಗಳು, ರೈತ ಸಂಘಟನೆಗಳು, ಸಕ್ಕರೆ ಕಾರ್ಖಾನೆಗಳು ಹಾಗೂ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸುವುದಾಗಿ ಘೋಷಿಸಿದೆ.
ಉನ್ನತ ಮಟ್ಟದ ಜಂಟಿ ಸಮಿತಿ ರಚನೆ ಘೋಷಣೆ ಬೆಲೆ ಹೆಚ್ಚಳಕ್ಕೆ ಪರಿಹಾರವಲ್ಲ. ಕೃಷಿಕರ ಕಷ್ಟಗಳು ನೀಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಿತಿಯು ಯಾವಾಗ ವರದಿ ನೀಡುತ್ತದೆ, ಅದರ ಶಿಫಾರಸುಗಳನ್ನು ಸರ್ಕಾರ ಯಾವಾಗ ಒಪ್ಪಿಕೊಳ್ಳುತ್ತದೆ ಮತ್ತು ರೈತರಿಗೆ ಯಾವಾಗ ಹೆಚ್ಚುವರಿ ಹಣ ಸಿಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.
ಸರ್ಕಾರಗಳು ಕಾಲಕಾಲಕ್ಕೆ ರೈತರ ಆಕ್ರೋಶವನ್ನು ತಣ್ಣಗಾಗಿಸಲು ಸಮಿತಿ ರಚನೆಯಂತಹ ವಂಚನೆಯ ಮಾರ್ಗಗಳನ್ನು ಅಸ್ತ್ರಗಳನ್ನಾಗಿಸಿಕೊಳ್ಳುವುದು, ಅವುಗಳ ಮರೆಯಲ್ಲಿ ಮತ್ತಷ್ಟು ದಿನದೂಡುವುದು ನಡೆದೇ ಇದೆ. ಇಂತಹ ಮೋಸದಾಟಗಳಿಗೆ ರೈತರು ಬಲಿಯಾಗುತ್ತ ಬಂದಿರುವುದೂ ಇದೆ.
ಇಷ್ಟಾದರೂ ಕರ್ನಾಟಕದ ಕೃಷಿಕರು ಇವತ್ತಿಗೂ ಕಬ್ಬು ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆ ಎಂದೇ ಭ್ರಮಿಸಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಮತ್ತು ಕಲಬುರಗಿ ಹಾಗೂ ದಕ್ಷಿಣ ಕರ್ನಾಟಕದ ಮಂಡ್ಯ ಭಾಗದ ರೈತರು, ಸುಮಾರು 5.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬನ್ನು ಬೆಳೆಯುತ್ತಿದ್ದಾರೆ. ಕಬ್ಬಿನ ಉತ್ಪಾದನೆ 2023–24ರಲ್ಲಿ 4.181 ಕೋಟಿ ಟನ್ ಇದ್ದದ್ದು, 2024–25ರಲ್ಲಿ 4.806 ಕೋಟಿ ಟನ್ಗೆ ಏರಿದೆ. ಕಬ್ಬಿನ ಉತ್ಪಾದನೆಗೆ ತಕ್ಕಂತೆ, 89 ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿವೆ. ಅವುಗಳಿಂದ ವಾರ್ಷಿಕ 4.806 ಕೋಟಿ ಟನ್ ಸಕ್ಕರೆ ಉತ್ಪಾದಿಸಲಾಗುತ್ತದೆ. ಆ ಮೂಲಕ ಗ್ರಾಮೀಣ ಉದ್ಯೋಗ, ದೇಶದ ಆರ್ಥಿಕತೆ ವೃದ್ಧಿಸಿದೆ.
ಕಬ್ಬಿನಿಂದ ದೇಶದ ಆರ್ಥಿಕತೆ ಬಲಗೊಳ್ಳುತ್ತಿದ್ದರೂ ಕಬ್ಬು ಬೆಳೆಯುವ ರೈತರ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಗದ್ದೆ ಹದಮಾಡುವುದು, ಕಬ್ಬಿನ ನಾಟಿ, ಕೂಲಿ, ಗೊಬ್ಬರ, ಔಷಧಿ, ನೀರು, ಸಾಗಣೆ ಮತ್ತು ಸಾಲದ ಬಡ್ಡಿ ಎಲ್ಲ ಸೇರಿ ರೈತರ ಶ್ರಮಕ್ಕೆ ಬೆಲೆಯೇ ಇಲ್ಲವಾಗಿದೆ. ಟನ್ ಕಬ್ಬಿಗೆ ಈಗ ಸಿಗುತ್ತಿರುವ ರೂ. 3,300 ಯಾವುದಕ್ಕೂ ಸಾಲದಾಗಿದೆ. ಇದರ ಜೊತೆಗೆ, ಕಬ್ಬಿನ ಇಳುವರಿ ಇಳಿಕೆಯಾಗುವುದು ಹಾಗೂ ಸಕಾಲದಲ್ಲಿ ಕಾರ್ಖಾನೆಗಳಿಂದ ಹಣ ಪಾವತಿಯಾಗದಿರುವುದು, ರೈತರನ್ನು ಸಂಕಷ್ಟದ ಸುಳಿಗೆ ನೂಕುತ್ತಿವೆ.
ಆ ನಿಟ್ಟಿನಲ್ಲಿ ಪ್ರತಿ ಟನ್ಗೆ ಕನಿಷ್ಠ 5,500 ಬೆಲೆ ಸೇರಿದಂತೆ ಹೆಚ್ಚಿನ ದರಕ್ಕೆ ಬೇಡಿಕೆ ಇಟ್ಟು ಪ್ರತಿಭಟನೆಗಿಳಿದಿರುವ ರೈತರ ಬೇಡಿಕೆ ನ್ಯಾಯಯುತವೇ ಆಗಿದೆ. ಒಂದು ಟನ್ ಕಬ್ಬಿನಿಂದ ರೈತರಿಗೆ 3,300 ಸಿಕ್ಕರೆ, ಇದರ ನಾಲ್ಕು ಪಟ್ಟು ಲಾಭ ಕಾರ್ಖಾನೆ ಮಾಲೀಕರಿಗೆ ಸಿಗುತ್ತದೆ. ಈಗ ಕಾರ್ಖಾನೆಗಳಿಗೆ ಸಕ್ಕರೆಯಿಂದ ಬರುವ ಲಾಭವೇ ಅಧಿಕವಾಗಿದೆ. ಇದಲ್ಲದೆ ಮೊಲಾಸಿಸ್, ಎಥೆನಾಲ್ ಮತ್ತು ವಿದ್ಯುತ್ ಉತ್ಪಾದನೆಯಿಂದಲೂ ಮಾಲೀಕರಿಗೆ ಲಾಭವಿದೆ.
ಆದರೆ, ಕಬ್ಬು ಬೆಳೆಗಾರರಿಗೆ ಇವತ್ತಿನವರೆಗೂ ಕಾರ್ಖಾನೆ ಮಾಲೀಕರು ಕಬ್ಬಿನ ಇಳುವಳಿ, ಸಕ್ಕರೆ ಉತ್ಪಾದನೆಯ ಲೆಕ್ಕದಲ್ಲಷ್ಟೇ ಬೆಲೆ ನಿಗದಿಗೊಳಿಸುತ್ತಿದ್ದಾರೆಯೇ ಹೊರತು, ಎಥೆನಾಲ್, ಮೊಲಾಸಿಸ್ ಮತ್ತು ವಿದ್ಯುತ್ ಉತ್ಪಾದನೆಯ ಲೆಕ್ಕವನ್ನೂ ಕೊಡುತ್ತಿಲ್ಲ, ಅದರ ಲಾಭಾಂಶವನ್ನೂ ಹಂಚುತ್ತಿಲ್ಲ.
ಸಕ್ಕರೆ ಕಾರ್ಖಾನೆಗಳ ಅಧಿಕೃತ ಮಾಹಿತಿ ಪ್ರಕಾರವೇ, ಕಳೆದವರ್ಷ ಮೊಲಾಸಿಸ್ ಉತ್ಪಾದನೆಯೊಂದರಿಂದಲೇ 36 ಸಾವಿರ ಕೋಟಿ ವಹಿವಾಟು ಆಗಿದೆ. ಅದರಲ್ಲಿ ಸುಮಾರು 9 ಸಾವಿರ ಕೋಟಿ ಜಿಎಸ್ಟಿ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹೋಗಿದೆ. ರಾಜ್ಯ ಸರ್ಕಾರವೂ ಅಲ್ಪಸ್ವಲ್ಪ ಪಡೆದಿದೆ. ಜೊತೆಗೆ ಲಾಭ ಪಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಬಹುಪಾಲು ರಾಜಕಾರಣಿಗಳೇ ಆಗಿದ್ದಾರೆ. ಬಿಜೆಪಿಯ ಮುರುಗೇಶ್ ನಿರಾಣಿ ಒಡೆತನದಲ್ಲಿ 18, ಕಾಂಗ್ರೆಸ್ಸಿನ ಸಚಿವ ಸತೀಶ್ ಜಾರಕಿಹೊಳಿ ಮಾಲೀಕತ್ವದಲ್ಲಿ 8, ಶಾಮನೂರು ಶಿವಶಂಕರಪ್ಪನವರ 3, ಲಕ್ಷ್ಮೀ ಹೆಬ್ಬಾಳ್ಕರ್ ಅವರ 2, ಪ್ರಭಾಕರ ಕೋರೆಯವರ 2, ಲಕ್ಷ್ಮಣ ಸವದಿಯವರ 2… ಹೀಗೆ ಎಲ್ಲ ಪಕ್ಷದವರೂ ಇದ್ದಾರೆ. ಎಲ್ಲರೂ ಒಂದಾಗಿದ್ದಾರೆ.
ಇದನ್ನು ಓದಿದ್ದೀರಾ?: ನೆದರಿಲ್ಲದ ನಾಯಕರ ವಾಕ್ಸಮರ, ಯಾರಿಗೆ ಲಾಭ?
ಕಬ್ಬು ಬೆಳೆಗಾರರಿಂದ ಆಯ್ಕೆಯಾಗುವ ಈ ರಾಜಕೀಯ ನಾಯಕರು ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅಧಿಕಾರದ ಸ್ಥಾನವನ್ನು ಅಲಂಕರಿಸಿದ ಮೇಲೆ ರೈತರನ್ನು ಮರೆಯುತ್ತಾರೆ. ಕೃಷಿಕರ ಕೂಗು ಜೋರಾದಾಗ, ಕಾನೂನು-ಕಾಯ್ದೆಗಳ ಸಬೂಬು ಹೇಳುತ್ತಾರೆ. ಅಸಲಿಗೆ ಕಬ್ಬಿನ ಕನಿಷ್ಠ ನ್ಯಾಯಸಮ್ಮತ ಬೆಲೆ(FRP) ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಹಾಗೆಯೇ ಎಷ್ಟು ಬೆಲೆ ಸಿಗಬೇಕು(SAP) ಎಂಬುದರಲ್ಲಿ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಪಾತ್ರವೂ ಇದೆ.
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳು ಹಾಗೂ ರಾಜ್ಯಗಳ ಸಮಾಲೋಚನೆಯ ಆಧಾರದಲ್ಲಿ ಕೇಂದ್ರ ಸರ್ಕಾರ FRP ನಿಗದಿಪಡಿಸುತ್ತದೆ. ಈ ದರಕ್ಕಿಂತ ಕಡಿಮೆ ಬೆಲೆ ನೀಡಿ ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸುವಂತಿಲ್ಲ. ಆದರೆ ಕೇಂದ್ರ, ರಾಜ್ಯ ಮತ್ತು ಕಾರ್ಖಾನೆ ಮಾಲೀಕರು ಒಮ್ಮತಕ್ಕೆ ಬರುತ್ತಿಲ್ಲ. ಕಬ್ಬು ಬೆಳೆಗಾರರಿಗೆ ನ್ಯಾಮಸಮ್ಮತ ಬೆಲೆ ಸಿಗುತ್ತಿಲ್ಲ. ಇದು ಕಬ್ಬು ಬೆಳೆಗಾರರ ಸಮಸ್ಯೆ ಮಾತ್ರವಲ್ಲ, ಅಧಿಕಾರಸ್ಥರು ಮತ್ತು ಕಾರ್ಖಾನೆ ಮಾಲೀಕರೆಂಬ ದುಷ್ಟರ ವಿರುದ್ಧ ಕೃಷಿಕರು ಒಂದಾಗದೆ ನ್ಯಾಯ ಸಿಗುವುದಿಲ್ಲ.




