ಈ ದಿನ ಸಂಪಾದಕೀಯ | ನೆದರಿಲ್ಲದ ನಾಯಕರ ವಾಕ್ಸಮರ, ಯಾರಿಗೆ ಲಾಭ?

Date:

ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ- ಇಬ್ಬರೂ ಜಾತಿಬಲ, ಹಣಬಲ, ಅಧಿಕಾರದ ಬಲವಿರುವ ನಾಯಕರು. ಇಬ್ಬರೂ ವಾಕ್ಸಮರಕ್ಕಿಳಿದಿದ್ದಾರೆ. ಈ ವಾಕ್ಸಮರದಿಂದ ಯಾವ ಸಾರ್ವಜನಿಕ ಸಮಸ್ಯೆಗೆ ಪರಿಹಾರ ಸಿಗುತ್ತಿದೆ, ಯಾವ ಆರೋಪದ ಸತ್ಯಾಸತ್ಯತೆ ಪರಿಶೀಲನೆಯಾಗುತ್ತಿದೆ, ಜನರ ಹಣ, ಭೂಮಿ, ಹಕ್ಕು ಮತ್ತು ಆಡಳಿತಕ್ಕೆ ಸಂಬಂಧಿಸಿದ ಯಾವ ಪ್ರಶ್ನೆಗೆ ಉತ್ತರ ದೊರೆಯುತ್ತಿದೆ -ಈ ಪ್ರಶ್ನೆಗಳನ್ನು ಜನ ಕೇಳಬೇಕಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಬಿಡದಿ ಟೌನ್‌ಶಿಪ್‌ನಿಂದ ಶುರುವಾದ ಈ ವಾಕ್ಸಮರ, ಈಗ ಸ್ಟಿಂಗ್ ಆಪರೇಷನ್‌ವರೆಗೆ ಬಂದು ನಿಂತಿದೆ. ಸುದ್ದಿ ಮಾಧ್ಯಮಗಳಿಗೆ ಸಮೃದ್ಧ ಸರಕು ಒದಗಿಸುತ್ತಿದೆ. ಒಳ್ಳೆಯದೋ-ಕೆಟ್ಟದೋ, ಬೇಕೋ-ಬೇಡವೋ ಅಂತೂ ಪ್ರಚಾರ ಪಡೆಯುತ್ತಿದೆ. ಅದು ಸಹಜವಾಗಿಯೇ ನಾಡಿನ ಜನತೆಯಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಇದರ ಬಗ್ಗೆ ಇಬ್ಬರು ನಾಯಕರಿಗೂ ನೆದರು ಇಲ್ಲದಂತಾಗಿದೆ.

- Advertisement -

ಈ ಇಬ್ಬರೂ ಬಲಿಷ್ಠ, ಬಲಾಢ್ಯ, ಬಹುಸಂಖ್ಯಾತ ಸಮುದಾಯದಿಂದ ಬಂದ ನಾಯಕರಾಗಿರುವುದರಿಂದ, ಜಾತಿ ಅಹಂಕಾರ ಮತ್ತು ಫ್ಯೂಡಲ್ ಮನಸ್ಥಿತಿ- ಈ ವಾಕ್ಸಮರಕ್ಕೆ ಕಾರಣವಾಗಿದೆ. ಜೊತೆಗೆ ಇಬ್ಬರೂ ನಾಯಕರ ರಾಜಕಾರಣ, ಅಧಿಕಾರ, ಪ್ರಭಾವ-ಪ್ರತಿಷ್ಠೆ, ಆಸ್ತಿ ಸಂಪಾದನೆ, ಅಸೂಯೆ ತಳುಕು ಹಾಕಿಕೊಂಡಿದೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಈ ಇಬ್ಬರು ನಾಯಕರ ನಡುವಿನ ವಾಕ್ಸಮರಕ್ಕೆ ಇತಿಹಾಸವೇ ಇದೆ. ಇದರ ಮೂಲ ಹುಡುಕುತ್ತಾ ಹೋದರೆ, ಜಾತ್ಯತೀತ ಜನತಾದಳದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗೋಚರಿಸುತ್ತಾರೆ. 1985ರಲ್ಲಿ, ದೊಡ್ಡಾಲಹಳ್ಳಿಯ ಕೆಂಪೇಗೌಡರ ಮಗ ಶಿವಕುಮಾರ್, ರಾಜಕಾರಣದಲ್ಲಿ ಆಗಿನ್ನೂ ಚಿಗುರುತ್ತಿದ್ದ ಚಿಕ್ಕನಾಯಕ. ಆದರೆ ಹರದನಹಳ್ಳಿಯ ದೇವೇಗೌಡ ಆ ಕಾಲಕ್ಕೇ, 1978ರಲ್ಲಿಯೇ ಮುಖ್ಯಮಂತ್ರಿಯಾಗುವವರ ಪಟ್ಟಿಯಲ್ಲಿದ್ದ ಪ್ರಭಾವಿ ನಾಯಕ. 1983ರಲ್ಲಿ, ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾದಾಗಲೂ, ಮುಖ್ಯಮಂತ್ರಿಯಾಗಲಿಲ್ಲ. 1985ರಲ್ಲಿ ಆಗಲೇಬೇಕೆಂಬ ಹಠಕ್ಕೆ ಬಿದ್ದ ಗೌಡರು, ಆ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ, ಹೊಳೆನರಸೀಪುರ ಮತ್ತು ಸಾತನೂರು- ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದರು. ಆ ಸಂದರ್ಭದಲ್ಲಿ ಸಾತನೂರಿನಲ್ಲಿ ಎದುರಾಳಿಯಾದವರು ಇದೇ ಡಿ.ಕೆ. ಶಿವಕುಮಾರ್.

ಅಂದು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನೆದುರು ಸೋತ ಶಿವಕುಮಾರ್, ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡರು. ಹಂತ ಹಂತವಾಗಿ ಬೆಳೆದರು. ಪಕ್ಷನಿಷ್ಠೆ ಮೆರೆದರು. ಪಕ್ಷ ಸಂಘಟಿಸಿ, ಬಹುಮತ ಗಳಿಸಿ, ಹೈಕಮಾಂಡನ್ನು ಒಪ್ಪಿಸಿ ಮುಖ್ಯಮಂತ್ರಿಯೂ ಆದರು. ಅದೇ ರೀತಿ ಕುಮಾರಸ್ವಾಮಿಯವರು 1996ರಲ್ಲಿ ಕನಕಪುರದಿಂದ ಗೆದ್ದು ಸಂಸದರಾದರು. 2004ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ರಾಮನಗರದಿಂದ ಗೆದ್ದ ಕುಮಾರಸ್ವಾಮಿಯವರು ಕೂಡ ಮುಖ್ಯಮಂತ್ರಿಯಾದರು. 2018ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. 1994ರಲ್ಲಿ ರಾಮನಗರದಿಂದ ಗೆದ್ದ ದೇವೇಗೌಡರು ಮುಖ್ಯಮಂತ್ರಿಯಾದರು. 1996ರಲ್ಲಿ ಪ್ರಧಾನಮಂತ್ರಿಯೂ ಆದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾಕ್ರೋಚ್‌ಗಳ ಮೇಲೆ ಮೋದಿ ಸರ್ಕಾರದ ಸರ್ವಾಧಿಕಾರ; ಅವನತಿಯ ಮುನ್ಸೂಚನೆಯೇ?

ಏತನ್ಮಧ್ಯೆ 2004ರ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡರ ವಿರುದ್ಧ ಪತ್ರಕರ್ತೆ ತೇಜಸ್ವಿನಿ ಗೌಡರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು ಶಿವಕುಮಾರ್. ಅದಕ್ಕೆ ಪ್ರತಿಯಾಗಿ 2024ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅಳಿಯ ಡಾ. ಮಂಜುನಾಥ್‌ರನ್ನು ಅಭ್ಯರ್ಥಿಯನ್ನಾಗಿಸಿದ ಗೌಡರು, ಡಿಕೆ ಸಹೋದರ ಸುರೇಶ್‌ರನ್ನು ಸೋಲಿಸಿ, ಸೇಡು ತೀರಿಸಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಡಿಕೆ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ವಿರುದ್ಧ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು.

ಹೀಗೆ… ಎರಡು ಕುಟುಂಬಗಳು ಸ್ವಾರ್ಥ ರಾಜಕಾರಣಕ್ಕಿಳಿದು, ಅಧಿಕಾರಕ್ಕಾಗಿ ಹಪಹಪಿಸಿ, ನಾಲ್ಕಾರು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಸಂಪಾದಿಸಿದ ನಂತರ, ಹೊಟ್ಟೆಕಿಚ್ಚಿಗೆ ಬಿದ್ದಿವೆ, ಹೊಟ್ಟೆಯೊಳಗಿನ ಕೊಳಕನ್ನು ಹೊರಹಾಕುತ್ತಿವೆ. ಅದರಲ್ಲೂ, ಡಿ.ಕೆ. ಶಿವಕುಮಾರ್ 2026 ಜೂನ್‌ನಲ್ಲಿ ಮುಖ್ಯಮಂತ್ರಿಯಾಗುತ್ತಿದ್ದಂತೆ, ದೇವೇಗೌಡರ ಕುಟುಂಬ ಅವರ ಬೆನ್ನಿಗೆ ಬಿದ್ದ ಭೂತದಂತೆ ಕಾಡತೊಡಗಿದೆ. ಅದರ ಹಿಂದೆ ದೆಹಲಿಯ ಬಿಜೆಪಿ ನಾಯಕರನ್ನು ಓಲೈಸುವ ತಂತ್ರವಿದೆಯೋ ಅಥವಾ ಶೂದ್ರರ ಸಹಜ ಗುಣ ಕೆಲಸ ಮಾಡುತ್ತಿದೆಯೋ… ಗೊತ್ತಿಲ್ಲ.

ಅದಕ್ಕೆ ತಕ್ಕಂತೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ, ಬಿಡದಿ ಟೌನ್‌ಶಿಪ್‌ಗೆ ಕೈಹಾಕಿ, ರೈತರ ವಿರೋಧ ಕಟ್ಟಿಕೊಂಡರು. ಬಿಡದಿ ಪ್ರಕರಣವನ್ನು ಕೈಗೆತ್ತಿಕೊಂಡ ಕುಮಾರಸ್ವಾಮಿಯವರು- ನೈಸ್, ಕೆಪಿಎಸ್‌ಸಿ, ಎಂಜಿನಿಯರ್‍‌ಗಳ ವರ್ಗಾವಣೆ, ಗುತ್ತಿಗೆದಾರರ ಆರೋಪ, ಸ್ಟಿಂಗ್ ಆಪರೇಷನ್- ಒಂದೊಂದಾಗಿ ಬಾಣ ಬಿಡತೊಡಗಿದರು. ಸದ್ಯಕ್ಕೆ ಸರ್ಕಾರ ಬಿಡದಿ ಟೌನ್‌ಶಿಪ್‌ ಕೈಬಿಟ್ಟಿದೆ. ಕೆಪಿಎಸ್‌ಸಿಗೆ ಇಡಿ ಎಂಟ್ರಿಯಾಗಿ, ತನಿಖೆ ನಡೆಯುತ್ತಿದೆ. ನೈಸ್ ಮತ್ತು ವರ್ಗಾವಣೆ ದಂಧೆಗೆ ಸಿಎಂ ಕಡೆಯಿಂದ ಉತ್ತರ ದೊರೆಯದಾಗಿದೆ. ಇವೆಲ್ಲವುಗಳ ನಡುವೆ ಸ್ಟಿಂಗ್ ಆಪರೇಷನ್- ರಾಜಕಾರಣದ ಹೊಲಸನ್ನು ಹೊರಹಾಕುತ್ತಿದೆ. ನಾಯಕರ ನೈತಿಕತೆಯನ್ನು ಹರಾಜು ಮಾಡುತ್ತಿದೆ.

ರಾಜಕಾರಣದಲ್ಲಿ ಭಿನ್ನಾಭಿಪ್ರಾಯ, ಟೀಕೆ, ಮೂದಲಿಕೆ ಸಹಜ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಆರೋಪವೊಂದೇ ಅಪರಾಧದ ಪುರಾವೆಯಲ್ಲ. ಸ್ಟಿಂಗ್ ಆಪರೇಷನ್, ರಹಸ್ಯ ದಾಖಲೆಗಳು, ಆಡಿಯೊ–ವಿಡಿಯೊಗಳ ಬಗ್ಗೆ ಹೇಳಿಕೆಗಳು ತನಿಖೆ ಮತ್ತು ಪರಿಶೀಲನೆಗೆ ಒಳಪಡಬೇಕು. ಆದರೆ ಆ ಬಗ್ಗೆ ಮುಖ್ಯಮಂತ್ರಿಗಳು ಬಾಯಿಬಿಡುತ್ತಿಲ್ಲ. ತನಿಖೆಗೊಳಪಡಿಸುವ ಮಾತಾಡುತ್ತಿಲ್ಲ. ಅಕಸ್ಮಾತ್, ತನಿಖೆಗೂ ಮುನ್ನವೇ ಸಾರ್ವಜನಿಕರು ಯಾರನ್ನಾದರೂ ತಪ್ಪಿತಸ್ಥರೆಂದು ಪರಿಗಣಿಸುವ ವಾತಾವರಣ ನಿರ್ಮಾಣವಾದರೆ, ನ್ಯಾಯದ ಮೂಲತತ್ವಗಳಿಗೆ ಧಕ್ಕೆಯಾಗಬಹುದು.

ಪ್ರಬಲ ವಿರೋಧ ಪಕ್ಷವು ಸರ್ಕಾರವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಅಗತ್ಯ. ಹಾಗೆಯೇ ಸರ್ಕಾರವು ತನ್ನ ವಿರುದ್ಧದ ಆರೋಪಗಳಿಗೆ ದಾಖಲೆಗಳ ಮೂಲಕ ಉತ್ತರಿಸುವುದು ಅದರ ಹೊಣೆಗಾರಿಕೆ. ಆದರೆ ಆರೋಪಗಳಿಗೆ ಪ್ರತಿಯಾಗಿ ಮತ್ತೊಂದು ಆರೋಪ, ಪ್ರಶ್ನೆಗಳಿಗೆ ಪ್ರತಿಯಾಗಿ ವೈಯಕ್ತಿಕ ವಾಗ್ದಾಳಿ ನಡೆದರೆ- ಗಂಭೀರ ಪ್ರಕರಣಗಳು ರಾಜಕೀಯ ಗದ್ದಲದಲ್ಲಿ ಕಳೆದುಹೋಗಬಹುದು, ಸತ್ಯ ಸಾಯಬಹುದು.

ಹಾಗೆಯೇ ಇಬ್ಬರು ನಾಯಕರ ವಾಗ್ವಾದವು ವೈಯಕ್ತಿಕ ನಿಂದನೆ, ಬೆದರಿಕೆಯ ಭಾಷೆ, ಆಧಾರರಹಿತ ಆರೋಪ ಮತ್ತು ರಾಜಕೀಯ ದ್ವೇಷದ ಪ್ರದರ್ಶನವಾಗಿ ಬದಲಾಗಿದೆ. ಅದರ ಪರಿಣಾಮ ಇಬ್ಬರು ನಾಯಕರ ನಡುವಿನ ಸಂಘರ್ಷಕ್ಕೆ ಮಾತ್ರ ಸೀಮಿತವಾಗುವುದಿಲ್ಲ; ಅದು ರಾಜಕೀಯ ಸಂಸ್ಕೃತಿ, ಸಾರ್ವಜನಿಕ ಸಭ್ಯತೆ, ಆರೋಗ್ಯಕರ ಚರ್ಚೆಗೆ ಕುಂದುಂಟುಮಾಡುತ್ತದೆ. ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ವಿಪರ್ಯಾಸವೆಂದರೆ, ರಾಜ್ಯವನ್ನು ಬರ, ಬೆಲೆ ಏರಿಕೆ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ಕೆಳ ಮಧ್ಯಮವರ್ಗದವರ ಬದುಕು ದುಸ್ತರವಾಗಿದೆ. ಜನರ ಬದುಕಿನ ಬಗ್ಗೆ ಚಿಂತಿಸಬೇಕಾದ ಮುಖ್ಯಮಂತ್ರಿ ಶಿವಕುಮಾರ್; ಆಳುವ ಸರ್ಕಾರದ ಲೋಪದೋಷಗಳನ್ನು ದಾಖಲೆಗಳ ಸಮೇತ ಎತ್ತಿಟ್ಟು ಪ್ರಶ್ನಿಸಬೇಕಾದ ‍ಕುಮಾರಸ್ವಾಮಿ- ವೈಯಕ್ತಿಕ ನಿಂದನೆಗಳಿದು ನಗೆಪಾಟಲಿಗೀಡಾಗುತ್ತಿದ್ದಾರೆ. ತಮಗೆ ತಾವೇ ಬೆತ್ತಲಾಗುತ್ತಿದ್ದಾರೆ.

ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ- ಇಬ್ಬರೂ ಜಾತಿಬಲ, ಹಣಬಲ, ಅಧಿಕಾರದ ಬಲವಿರುವ ನಾಯಕರು. ಇವರನ್ನು ಈ ಮಟ್ಟದ ನಾಯಕರನ್ನಾಗಿ ಬೆಳೆಸಿದ ನಾಡಿನ ಜನ ಕೆಲ ಪ್ರಶ್ನೆಗಳನ್ನಾದರೂ ಕೇಳಲೇಬೇಕಿದೆ. ಈ ವಾಕ್ಸಮರದಿಂದ ಯಾವ ಸಾರ್ವಜನಿಕ ಸಮಸ್ಯೆಗೆ ಪರಿಹಾರ ಸಿಗುತ್ತಿದೆ? ಯಾವ ಆರೋಪದ ಸತ್ಯಾಸತ್ಯತೆ ಪರಿಶೀಲನೆಯಾಗುತ್ತಿದೆ? ಜನರ ಹಣ, ಭೂಮಿ, ಹಕ್ಕು ಮತ್ತು ಆಡಳಿತಕ್ಕೆ ಸಂಬಂಧಿಸಿದ ಯಾವ ಪ್ರಶ್ನೆಗೆ ಉತ್ತರ ದೊರೆಯುತ್ತಿದೆ?

ಈ ಪ್ರಶ್ನೆಗಳಿಗೆ ಉತ್ತರ ದೊರೆಯದಿದ್ದರೆ, ವಾಕ್ಸಮರ ಮುಂದುವರೆದರೆ- ಇಬ್ಬರು ಶೂದ್ರ ನಾಯಕರು ನಾಶವಾಗುವುದರಲ್ಲಿ; ಬಿಜೆಪಿ ಬಲಗೊಳ್ಳುವುದರಲ್ಲಿ ಅನುಮಾನವಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

ಸಿಇಸಿ ವಿರುದ್ಧ ಪ್ರತಿಭಟನೆ: ಜಂತರ್ ಮಂತರ್‌ಗೆ ಮರಳಿದ AISA ಕಾರ್ಯಕರ್ತರು, 150ಕ್ಕೂ ಹೆಚ್ಚು ಮಂದಿ ವಶಕ್ಕೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...