ಈ ದಿನ ಸಂಪಾದಕೀಯ | ವರ್ತಮಾನದ ಕೃಷಿ ಬಿಕ್ಕಟ್ಟು ಮತ್ತು ಎಂ ಎಸ್ ಸ್ವಾಮಿನಾಥನ್ ಸೃಷ್ಟಿಸಿದ ಚರಿತ್ರೆ

Date:

ಎಂ ಎಸ್ ಸ್ವಾಮಿನಾಥನ್ ಅಸ್ತಂಗತರಾಗಿದ್ದಾರೆ. ಅವರು ಭಾರತದ ವ್ಯವಸಾಯ ರಂಗದಲ್ಲಿ ಕ್ರಾಂತಿಕಾರದ ಬದಲಾವಣೆಗಳನ್ನು ತಂದವರು; ದೇಶದ ಕೃಷಿ ಕ್ಷೇತ್ರದ ಚರಿತ್ರೆ ಮತ್ತು ಭವಿಷ್ಯದ ನಡುವಿನ ಕೊಂಡಿಯಂತಿದ್ದವರು ಅವರು. ಕೃಷಿಯಲ್ಲಿ ಘಟಿಸಬೇಕಾದ ಮಹತ್ವದ ಬದಲಾವಣೆಗಳ ದಿಕ್ಸೂಚಿಯಾಗಿದ್ದರು. ತಮ್ಮ ಬದುಕಿನುದ್ದಕ್ಕೂ ರೈತನ ನೆಮ್ಮದಿಯನ್ನು ಕನಸಿದ ಅವರು ವ್ಯವಸಾಯ ರಂಗ ಅತ್ಯಂತ ಸಂಕ್ಷೋಭೆಯ ಘಟ್ಟದಲ್ಲಿರುವಾಗಲೇ ನಿರ್ಗಮಿಸಿದ್ದಾರೆ.

ಅದು 1960ರ ದಶಕ; ಬಂಗಾಳದಲ್ಲಿ ಭೀಕರ ಬರಗಾಲವಿದ್ದ ಕಾಲ. ಆಗ ತಿನ್ನಲು ಅನ್ನವಿಲ್ಲದೇ ಲಕ್ಷಾಂತರ ಮಂದಿ ಸತ್ತರು. ನಂತರದಲ್ಲೂ ದೇಶ ನಿರಂತರ ಬರಗಾಲಗಳನ್ನು ಕಾಣತೊಡಗಿತು. ಯಾವ ದೇಶದ ಸಹಾಯ ಸಹಕಾರವೂ ಭಾರತವನ್ನು ಬದುಕಿಸಲಾಗದು ಎನ್ನುವಂಥ ವಾತಾವರಣ. ದೇಶವು ಕ್ಷಾಮ ಮತ್ತು ಆಹಾರ ಉತ್ಪಾದನೆಯ ಕೊರತೆಯನ್ನು ಎದುರಿಸುತ್ತಿದ್ದ ಕಡು ಕಷ್ಟದ ಕಾಲ. ಅಂತ ಸಂದರ್ಭದಲ್ಲಿ ತಮಿಳುನಾಡು ಮೂಲದ ಕೃಷಿ ವಿಜ್ಞಾನಿ ಮತ್ತು ತಳಿ ತಜ್ಞ ಮೊಂಕೊಂಬು ಸಾಂಬಶಿವನ್ ಸ್ವಾಮಿನಾಥನ್, ಕೃಷಿ ಕ್ಷೇತ್ರದಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದರು. 1960 ಮತ್ತು 1970 ರ ದಶಕದಲ್ಲಿ ಅವರ ಪ್ರಯೋಗಗಳು ಕೃಷಿಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದವು. ಆಧುನಿಕ ವೈಜ್ಞಾನಿಕ ತಂತ್ರಗಳನ್ನು ಕೃಷಿಯಲ್ಲಿ ಅಳವಡಿಸಬೇಕು ಎನ್ನುವುದು ಅವರ ನಿಲುವು. ಗೋಧಿ ಮತ್ತು ಭತ್ತದ ಅಧಿಕ ಇಳುವರಿಯ ತಳಿಗಳನ್ನು ಪರಿಚಯಿಸಿದವರು ಸ್ವಾಮಿನಾಥನ್. ಅದು ಭಾರತದ ಆಹಾರ ಧಾನ್ಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿತು. 1964ರಿಂದ 1968ರ ನಡುವಿನ ಕೇವಲ ನಾಲ್ಕು ವರ್ಷಗಳಲ್ಲಿ ಹಿಂದಿನ ನೂರಾರು ವರ್ಷಗಳಲ್ಲಿ ಬೆಳೆಯಲು ಸಾಧ್ಯವಾಗದಿದ್ದಷ್ಟು ಗೋಧಿಯನ್ನು ಬೆಳೆದರು. ಅದರಿಂದ ರೈತರ ಆದಾಯ ಹೆಚ್ಚಾಗಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ರೈತನೂ ಪಾತ್ರ ವಹಿಸುವಂತಾಯಿತು. ಆಗ ಸ್ವಾಮಿನಾಥನ್ ಪ್ರತಿಪಾದಿಸಿದ ಹಸಿರು ಕ್ರಾಂತಿಗೆ ಪರಿಸರವಾದಿಗಳಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು.

- Advertisement -

ಹಸಿರು ಕ್ರಾಂತಿಗೆ ನಾಂದಿ ಹಾಡುವಾಗ ಸ್ವಾಮಿನಾಥನ್ ಅವರ ಮನಸ್ಸಿನಲ್ಲಿದ್ದದ್ದು, ಇಳುವರಿ ಹೆಚ್ಚಿಸುವ ಮೂಲಕ ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸಬೇಕು, ದೇಶದ ಆಹಾರ ಕೊರತೆ ನೀಗಬೇಕು ಎನ್ನುವುದು ಮಾತ್ರ. ಆದರೆ, ಹಸಿರು ಕ್ರಾಂತಿಯ ಅನಪೇಕ್ಷಿತ ಪರಿಣಾಮವಾಗಿ ರೈತ ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಬೇಕಾಗಿ ಬಂತು. ರೈತರ ಉತ್ಪಾದನೆಯ ಜೊತೆಗೆ ಆತನ ಸಂಕಟಗಳೂ ಹೆಚ್ಚಾದವು. ಸರ್ಕಾರಗಳ ನೀತಿಗಳಿಂದ ಉತ್ಪಾದನಾ ವೆಚ್ಚ ವಿಪರೀತ ಏರಿತು. ಇದೆಲ್ಲವನ್ನೂ ಸ್ವಾಮಿನಾಥನ್ ಗಮನಿಸುತ್ತಲೇ ಇದ್ದರು. 2004ರಲ್ಲಿ ಭಾರತದ ಕೃಷಿ ಬಿಕ್ಕಟ್ಟಿನ ಬಗ್ಗೆ ಅಧ್ಯಯನ ಮಾಡಲು ಆಗಿನ ಯುಪಿಎ ಸರ್ಕಾರ, ಎಂ ಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಿತು. ಆ ಸಮಿತಿಯು ಐದು ವರದಿಗಳನ್ನು ತಯಾರಿಸಿತು. ಭಾರತದ ಕೃಷಿ ಬಿಕ್ಕಟ್ಟಿನ ಬೈಬಲ್‌ನಂತಿರುವ ವರದಿಯು ಕೃಷಿ ಆರ್ಥಿಕತೆಯನ್ನು ಅವಲೋಕಿಸುತ್ತದೆ ಮತ್ತು ಪರಿಸರ ಹಾಗೂ ನೀತಿ ಆಧಾರಿತ-ಕೃಷಿ ಬಿಕ್ಕಟ್ಟಿನ ಎರಡೂ ಕಾರಣಗಳು ಮತ್ತು ಪರಿಣಾಮಗಳನ್ನು ಚರ್ಚಿಸುತ್ತದೆ. ಅಪೂರ್ಣ ಭೂಸುಧಾರಣೆಯ ಕಾರ್ಯಸೂಚಿ, ನೀರಿನ ಗುಣಮಟ್ಟ ಮತ್ತು ಪ್ರಮಾಣ, ತಂತ್ರಜ್ಞಾನದ ಲಭ್ಯತೆಯ ಕೊರತೆ, ಕೃಷಿ ಕ್ಷೇತ್ರದಲ್ಲಿ ಹೂಡಿಕೆಯ ಕೊರತೆ- ಇಂಥ ಹಲವು ಮುಖ್ಯ ಅಂಶಗಳನ್ನು ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಮುಖ್ಯವಾಗಿ, ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಅಧಿಕವಾಗಿರಬೇಕು ಎಂದು ವರದಿ ಶಿಫಾರಸು ಮಾಡಿತ್ತು. ಸರ್ಕಾರಗಳು ಸಾಲ ಮನ್ನಾ ಮಾಡುವುದಕ್ಕಿಂತ ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚು ಕನಿಷ್ಠ ಬೆಂಬಲ ಬೆಲೆಯನ್ನು ನೀಡುವುದಕ್ಕೆ ಆ ಹಣ ಬಳಸಿ ಎಂದು ಸ್ವಾಮಿನಾಥನ್ ಸಲಹೆ ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಆದರೆ, ಸ್ವಾಮಿನಾಥನ್ ಆಯೋಗವನ್ನು ರಚಿಸಿದ್ದ ಕಾಂಗ್ರೆಸ್ ಸರ್ಕಾರವಾಗಲಿ, ನಂತರ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಾಗಲಿ, ವರದಿ ಜಾರಿಗೆ ಮನಸ್ಸು ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕೆನ್ನುವ ವಿಚಾರ ಪ್ರತಿ ಚುನಾವಣೆಯಲ್ಲಿಯೂ ಸದ್ದು ಮಾಡುತ್ತದೆ. ಸ್ವಾಮಿನಾಥನ್ ವರದಿ ಜಾರಿ ಮಾಡಿ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿ 2014ರಲ್ಲಿ ನರೇಂದ್ರ ಮೋದಿ ಅಧಿಕಾರ ಹಿಡಿದರು. ಅಧಿಕಾರ ದೊರತ ಒಂದೇ ತಿಂಗಳಲ್ಲಿ ವರದಿ ಜಾರಿ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದರು. ಈ ಮೂಲಕ ಮೋದಿ ಸರ್ಕಾರ ರೈತರಿಗೆ ಘೋರ ಅನ್ಯಾಯವೆಸಗಿತು. ಎಂಎಸ್‌ಪಿ ವಿಚಾರದಲ್ಲಿಯೂ ಮೋದಿ ಸರ್ಕಾರ ರೈತರಿಗೆ ದ್ರೋಹವೆಸಗಿದೆ. ಕನಿಷ್ಠ ಬೆಂಬಲ ಬೆಲೆಯ ಕಾನೂನುಬದ್ಧ ಖಾತರಿಗಾಗಿ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಆದರೂ ಕೇಂದ್ರವು ಎಂಎಸ್‌ಪಿಗೆ ಕಾನೂನು ಖಾತರಿ ನೀಡಿಲ್ಲ.

ಎಂ ಎಸ್ ಸ್ವಾಮಿನಾಥನ್, ಹಸಿರು ಕ್ರಾಂತಿಯ ನಂತರ ನಿರಂತರ ಹಸಿರು ಕ್ರಾಂತಿಗೆ ಕರೆ ನೀಡಿದ್ದರು. ಪರಿಸರಕ್ಕೆ ಹಾನಿಯಾಗದಂತೆ ಕೃಷಿ ಉತ್ಪಾದನೆ ಹೆಚ್ಚಿಸುವ ಮಾರ್ಗ ಅದು ಎಂದು ಅವರು ನಂಬಿದ್ದರು. ಕುಲಾಂತರಿ ತಳಿಗಳ ಬಗ್ಗೆ ರೈತರನ್ನು ಮತ್ತು ಸರ್ಕಾರವನ್ನು ಎಚ್ಚರಿಸಿದ್ದರು. ಭಾರತದಲ್ಲಿ ಜಿಇ ಬಿಟಿ-ಹತ್ತಿ ವಿಫಲವಾಗಿದೆ, ಇದು ಸುಸ್ಥಿರ ಕೃಷಿ ತಂತ್ರಜ್ಞಾನವಾಗಿ ವಿಫಲವಾಗಿದೆ ಮತ್ತು ಮುಖ್ಯವಾಗಿ ಬಡವರು, ಸಣ್ಣ ಮತ್ತು ಅತಿ ಸಣ್ಣ ರೈತರಾದ ಹತ್ತಿ ರೈತರ ಜೀವನೋಪಾಯದ ಭದ್ರತೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಅದಕ್ಕಾಗಿ ಮೋದಿ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಸ್ವಾಮಿನಾಥನ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.   

ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ ಎನ್ನುವುದು ಅವರ ಪ್ರಸಿದ್ಧ ಹೇಳಿಕೆ. ಆಹಾರವನ್ನು ಆಮದು ಮಾಡಿಕೊಳ್ಳುವುದು ನಿರುದ್ಯೋಗವನ್ನು ಆಮದು ಮಾಡಿಕೊಳ್ಳುವುದಕ್ಕೆ ಸಮನಾಗಿದೆ ಎಂದಿದ್ದ ಅವರು, ತಂತ್ರಜ್ಞಾನ, ಸಾರ್ವಜನಿಕ ನೀತಿ ಮತ್ತು ಸಾಮಾಜಿಕ ಕ್ರಿಯೆಗಳ ನಡುವೆ ಹೊಂದಾಣಿಕೆ ಇದ್ದರೆ, ಹಸಿವು ಮತ್ತು ಆಹಾರ ಧಾನ್ಯಗಳ ಅಭಾವವನ್ನು ಹೋಗಲಾಡಿಸಬಹುದು ಎಂದು ನಂಬಿದ್ದರು. ಅದನ್ನು ತಮ್ಮ ಕ್ರಿಯೆಗಳ ಮೂಲಕ ಸಾಧಿಸಿ ತೋರಿಸಿದ್ದರು.  

ನ್ಯಾಷನಲ್ ಕಿಸಾನ್ ಕಮಿಷನ್ ಸ್ಥಾಪನೆಗೆ ಮುಂದಾಗಿದ್ದ ಖ್ಯಾತ ಪತ್ರಕರ್ತ ಪಿ ಸಾಯಿನಾಥ್, ತಮ್ಮ ಸಂಘಟನೆಯು ಸ್ವಾಮಿನಾಥನ್ ಆಯೋಗದ ಮುಂದುವರಿದ ಭಾಗ ಎಂದಿದ್ದರು. ಸ್ವಾಮಿನಾಥನ್ ಆಯೋಗದ ವರದಿ ಪರಿಪೂರ್ಣ ಅಲ್ಲ, ನಿಜ. ಆದರೆ, ದೇಶದ ಕೃಷಿ ಕ್ಷೇತ್ರದ ಬಿಕ್ಕಟ್ಟು ಶಮನಕ್ಕೆ ಸದ್ಯ ಅದೊಂದೇ ಮದ್ದು ಎಂದು ಸ್ಪಷ್ಟವಾಗಿ ನುಡಿದಿದ್ದರು.  

ಎಂ ಎಸ್ ಸ್ವಾಮಿನಾಥನ್, ತಮ್ಮ ಸಾಧನೆಯಿಂದ ಭಾರತದ ಹಸಿರು ಕ್ರಾಂತಿಯ ಪಿತಾಮಹ ಎನ್ನಿಸಿಕೊಂಡರು. ಜಾಗತಿಕ ಮಟ್ಟದಲ್ಲಿಯೂ ಕೃಷಿ ಮತ್ತು ಪರಿಸರದ ವಿಚಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು ಸ್ವಾಮಿನಾಥನ್. ಜಾಗತಿಕ ಹಸಿರು ಕ್ರಾಂತಿಯ ನಾಯಕ ನಾರ್ಮನ್ ಬೋರ್ಲಾಗ್, ಸ್ವಾಮಿನಾಥನ್ ಇಲ್ಲದೇ ಏಷ್ಯಾದಲ್ಲಿ ಹಸಿರು ಕ್ರಾಂತಿಯೇ ಇಲ್ಲ ಎಂದಿದ್ದರು. ಟೈಮ್ ನಿಯತಕಾಲಿಕವು 20ನೇ ಶತಮಾನದ 20 ಅತ್ಯಂತ ಪ್ರಭಾವಶಾಲಿ ಏಷ್ಯನ್ನರಲ್ಲಿ ಒಬ್ಬರೆಂದು ಸ್ವಾಮಿನಾಥನ್ ಅವರನ್ನು ಹೆಸರಿಸಿತ್ತು. ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ ಕಾಣಿಸಿಕೊಂಡ ಮೂವರು ಭಾರತೀಯರಲ್ಲಿ ಅವರೂ ಒಬ್ಬರಾಗಿದ್ದರು. ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ ಎಂದು ಕರೆಸಿಕೊಂಡಿದ್ದ ಸ್ವಾಮಿನಾಥನ್, ಕೊನೆ ಉಸಿರಿನವರೆಗೆ ರೈತರ ಹಿತ ಹಾಗೂ ಸಮಾಜದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರ ಏಳಿಗೆಗೆ ಬದ್ಧರಾಗಿದ್ದರು. ರೈತರ ಮಕ್ಕಳು ಕೃಷಿಯಿಂದ ದೂರ ಸರಿಯಬಾರದು ಎನ್ನುವುದು ಅವರ ಆಸೆಯಾಗಿತ್ತು. ಅದನ್ನು ಆಗು ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ಅದು ಆ ಮಹಾನ್ ಕೃಷಿ ತಜ್ಞನಿಗೆ ಸರ್ಕಾರಗಳು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನೆದರಿಲ್ಲದ ನಾಯಕರ ವಾಕ್ಸಮರ, ಯಾರಿಗೆ ಲಾಭ?

ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ- ಇಬ್ಬರೂ ಜಾತಿಬಲ, ಹಣಬಲ, ಅಧಿಕಾರದ...

ಈ ದಿನ ಸಂಪಾದಕೀಯ | ಕಾಕ್ರೋಚ್‌ಗಳ ಮೇಲೆ ಮೋದಿ ಸರ್ಕಾರದ ಸರ್ವಾಧಿಕಾರ; ಅವನತಿಯ ಮುನ್ಸೂಚನೆಯೇ?

ಸಂವಿಧಾನದ 19ನೇ ವಿಧಿಯು ದೇಶದ ಜನರಿಗೆ ಶಾಂತಿಯುತವಾಗಿ ಸಭೆ ಸೇರುವ ಮತ್ತು...

ಈ ದಿನ ಸಂಪಾದಕೀಯ | ರಾಜಧಾನಿ ದೆಹಲಿಗೆ ದಿಗ್ಬಂಧನ- ಸಹಸ್ರಾರು ಯುವಜನರ ಬಂಧನ, ಇದೇನು ತುರ್ತುಪರಿಸ್ಥಿತಿಯೇ?

ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ...

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...