ಸಮಾನತೆಯ ಪ್ರತಿಪಾದಕರು, ಮೌಢ್ಯ ವಿರೋಧಿಗಳನ್ನು ಕಂಡರೆ ಕೊಂದು ಬಿಡುವುದು ಬಲಪಂಥೀಯ ಹಿಂದುತ್ವವಾದಿಗಳ ಕ್ರೌರ್ಯಕ್ಕೆ ಸಾಕ್ಷಿ. ಅಂದು ಬಸವಣ್ಣ, ಗಾಂಧಿ. ಇಂದು ಪಾನ್ಸರೆ, ಕಲಬುರ್ಗಿ, ಗೌರಿ. ಇದು ಬಲಪಂಥೀಯ ಉಗ್ರವಾದಿಗಳ ಜೀವ ವಿರೋಧಿ ಕೃತ್ಯಕ್ಕೆ ಉದಾಹರಣೆಗಳಷ್ಟೇ. ಭಾರತದ ಇತಿಹಾಸದುದ್ದಕ್ಕೂ ಇಂತಹ ಪರಂಪರೆ ಮುಂದುವರಿದಿದೆ. ಭಿನ್ನ ಸಿದ್ಧಾಂತದವರನ್ನು ಈ ದೇಶದ ಪ್ರಧಾನಿಗಳೇ ನಗರ ನಕ್ಸಲರು, ದಿಮಾಗಿ ನಕ್ಸಲರು, ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಇನ್ನು ಅವರ ಅನುಯಾಯಿಗಳಿಗೆ ಧೈರ್ಯ ಬರದೇ ಇರುತ್ತದೆಯೇ?
ರವಿ ಹಂಜ್ ಎಂಬ ಅನಿವಾಸಿ ಕನ್ನಡಿಗ ವಿಶ್ವವಾಣಿ ಪತ್ರಿಕೆಯಲ್ಲಿ ಬರೆದ ಅಂಕಣಗಳ ಸಂಗ್ರಹ ಕೃತಿ “ಬಸವ ಮಂಟಪ : ವೀರಶೈವ ಲಿಂಗಾಯತ ಸತ್ಯದರ್ಶನ” ಬಿಡುಗಡೆಯಾಗಿ ಐದೇ ದಿನಕ್ಕೆ, ನಿನ್ನೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಪ್ರಕಟಿಸಿದೆ. ಈ ಅಂಕಣ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾದಾಗಲೇ ವಿವಾದ ಸೃಷ್ಟಿಯಾಗಿತ್ತು. ಹಲವು ಬಸವಾನುಯಾಯಿಗಳು ಖಂಡಿಸಿದ್ದರು. ಈ ಪುಸ್ತಕ ಪ್ರಕಟಣೆಗೆ ಕೆಲವು ಮಠಾಧೀಶರೂ ವಿರೋಧ ವ್ಯಕ್ತಪಡಿಸಿದ್ದರು ಎಂದು ಸ್ವತಃ ಈ ಪುಸ್ತಕದ ಪ್ರಕಾಶಕ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆಯ ಭಾಷಣದಲ್ಲಿ ಹೇಳಿದ್ದರು. ಪುಸ್ತಕ ಬಿಡುಗಡೆಯ ನಂತರ ಅದೇ ಪತ್ರಿಕೆಯ ಯುಟ್ಯೂಬ್ಗೆ ನೀಡಿದ ಸಂದರ್ಶನದಲ್ಲಿ ರವಿ ಹಂಜ್ ಅವರು ಬಸವಣ್ಣನ ವಚನಗಳಲ್ಲಿ ವಿರೋಧಾಭಾಸಗಳಿವೆ. ಅವರ ಜೀವನ ಮತ್ತು ಕೃತಿಯಲ್ಲಿ ಭಿನ್ನತೆಯಿದೆ ಎಂದು ಹೇಳುತ್ತಾ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಸಾಲುಗಳ ಉದಾಹರಣೆ ಕೊಡುತ್ತಾರೆ. ಕಳಬೇಡ ಎಂದು ಹೇಳುತ್ತಾ ತಾವೇ ಬಿಜ್ಜಳನ ಭಂಡಾರ ಕಳವು ಮಾಡಿದ್ದಾರೆ, ಕೊಲಬೇಡ ಎಂದು ಹೇಳಿದ್ದಾರೆ; ಆದರೆ ಬಸವಣ್ಣನೇ ಬಿಜ್ಜಳನ ಕೊಲೆ ಮಾಡಿಸಿದ್ದಾರೆ ಎಂದು ಹೇಳಿರುವುದು ವಿವಾದ ಮಾತ್ರವಲ್ಲ ಬಸವಪ್ರೇಮಿಗಳಿಗೆ, ಬಸವಾನುಯಾಯಿಗಳಿಗೆ ತೀವ್ರ ಆಘಾತ ಉಂಟು ಮಾಡಿದೆ.
ಇಡೀ ರಾಜ್ಯದಲ್ಲಿ ಈ ಪುಸ್ತಕದ ನಿಷೇಧಕ್ಕೆ ಒತ್ತಡ ಬಂದಿತ್ತು. ಲೇಖಕ ಮತ್ತು ಪ್ರಕಾಶಕ ಇಬ್ಬರ ವಿರುದ್ಧವೂ ಒಂದಕ್ಕಿಂತ ಹೆಚ್ಚು ಎಫ್ಐಆರ್ ದಾಖಲಾಗಿವೆ. ಈ ಬೆಳವಣಿಗೆ ನಡೆಯುತ್ತಿದ್ದಂತೆ ನಿನ್ನೆ ಇಬ್ಬರೂ ದೇಶ ಬಿಟ್ಟಿದ್ದಾರೆ. ರವಿ ಹಂಜ್ ಅಮೆರಿಕಕ್ಕೆ ತೆರಳಿದ್ದರೆ, ವಿಶ್ವೇಶ್ವರ ಭಟ್ಟ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವುದಾಗಿ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಕಠಿಣ ಕ್ರಮ ಜರುಗಿಸುವ ಬಗ್ಗೆ ಸರ್ಕಾರವನ್ನು ಲಿಂಗಾಯತ ಸಚಿವರುಗಳಾದ ಈಶ್ವರ ಖಂಡ್ರೆ, ಎಂ ಬಿ ಪಾಟೀಲ್, ಶರಣ ಪ್ರಕಾಶ ಪಾಟೀಲ್ ಮುಂತಾದವರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಕಾನೂನು ಕ್ರಮ ಜರುಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಾಗಾಂಧಿ, ನೆಹರೂ ಕುಟುಂಬದ ವಿರುದ್ಧ ಸುಳ್ಳು ನಿರೂಪಣೆಗಳನ್ನು ಹೆಣೆಯುವ ಮತ್ತು ಈ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರ ಚಾರಿತ್ರ್ಯಹರಣ ಮಾಡುವುದನ್ನು ಯಾವ ಕಾರಣಕ್ಕೂ ಮನ್ನಿಸಬಾರದು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ನೆಹರೂ ಗಾಂಧಿ ಕುಟುಂಬದ ವಿರುದ್ಧ ನಿರಂತರವಾಗಿ ಸುಳ್ಳು ಹಬ್ಬಿಸುವ, ಸೋನಿಯಾ ಗಾಂಧಿ ಅವರ ಬಗ್ಗೆ ಮಾನಹಾನಿಕರ ಬರಹಗಳನ್ನು ಪ್ರಕಟಿಸುವುದನ್ನು ನಿರ್ಲಕ್ಷಿಸಲಾಯಿತು. ಇತ್ತೀಚೆಗೆ ಸೋನಿಯಾ ಗಾಂಧಿಯವರ ಆತ್ಮಕತೆ ಬಿಡುಗಡೆಯಾದ ನಂತರ ಅವರ ತೇಜೋವಧೆ ಹೆಚ್ಚಾಗಿದೆ. ಬಲಪಂಥೀಯ ಮನಸ್ಥಿತಿ ಬಹಳ ಭೀಕರವಾಗಿದೆ. ವಿರುದ್ಧ ಸಿದ್ಧಾಂತಿಗಳ ಬಗೆಗಿನ ಸತ್ಯವನ್ನು ಅರಗಿಸಿಕೊಳ್ಳಲಾಗದೇ ನಿಂದಿಸುವ ಪ್ರವೃತ್ತಿ ಮಿತಿ ಮೀರಿದೆ.
ಬಲಪಂಥೀಯರು ಈಗ ನೇರವಾಗಿ ಗಾಂಧಿ, ಬಸವಣ್ಣ, ಅಂಬೇಡ್ಕರ್ ಹೇಳಿಕೆಗಳನ್ನು ತಿರುಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಡ್ಡಂಡ ಕಾರ್ಯಪ್ಪ ಎಂಬ ಆರೆಸ್ಸೆಸ್ ವ್ಯಕ್ತಿ ʼಟಿಪ್ಪುವಿನ ನಿಜ ಕನಸುಗಳುʼ ಎಂಬ ನಾಟಕ ಬರೆದು, ಪ್ರದರ್ಶನ ಮಾಡಿಸಿ ಟಿಪ್ಪು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದ. ಇತ್ತೀಚೆಗೆ ʼಗಾಂಧಿ ಹತ್ಯೆಯ ಸತ್ಯʼ ಎಂಬ ನಾಟಕ ಬರೆದು ಗೋಡ್ಸೆಯನ್ನು ವೈಭವೀಕರಿಸಿ ನಾಟಕ ಪ್ರದರ್ಶಿಸುತ್ತಿದ್ದಾಗ ಆತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಎರಚಿದ ಘಟನೆ ನಡೆಯಿತು. ಸದಾ ನೆಹರೂ ಕುಟುಂಬ, ಸೋನಿಯಾ- ರಾಹುಲ್ ಗಾಂಧಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಬಲಪಂಥೀಯರ ಸೋಷಿಯಲ್ ಮೀಡಿಯಾದಲ್ಲಿ ಕುಖ್ಯಾತ ಈ ಕಾರ್ಯಪ್ಪ. ಸೋನಿಯಾ ಗಾಂಧಿಯವರ ಆತ್ಮಕತೆಯಲ್ಲೂ ತಮ್ಮ ಅಪಪ್ರಚಾರಕ್ಕೆ ಕಂಟೆಂಟ್ ಹುಡುಕುತ್ತಿದ್ದಾರೆ. ಆಕೆಯ ಮೇಲೆ ಇನ್ನಷ್ಟು ಮಾತಿನ ಪ್ರಹಾರ ನಡೆಯುತ್ತಿದೆ.
ಸಮಾನತೆಯ ಪ್ರತಿಪಾದಕರು, ಮೌಢ್ಯ ವಿರೋಧಿಗಳನ್ನು ಕಂಡರೆ ಕೊಂದು ಬಿಡುವುದು ಬಲಪಂಥೀಯ ಹಿಂದುತ್ವವಾದಿಗಳ ಕ್ರೌರ್ಯಕ್ಕೆ ಸಾಕ್ಷಿ. ಅಂದು ಬಸವಣ್ಣ, ಗಾಂಧಿ. ಇಂದು ಪಾನ್ಸರೆ, ಕಲಬುರ್ಗಿ, ಗೌರಿ. ಇದು ಬಲಪಂಥೀಯ ಉಗ್ರವಾದಿಗಳ ಜೀವ ವಿರೋಧಿ ಕೃತ್ಯಕ್ಕೆ ಉದಾಹರಣೆಗಳಷ್ಟೇ. ಭಾರತದ ಇತಿಹಾಸದುದ್ದಕ್ಕೂ ಇಂತಹ ಪರಂಪರೆ ಮುಂದುವರಿದಿದೆ. ಭಿನ್ನ ಸಿದ್ಧಾಂತದವರನ್ನು ಈ ದೇಶದ ಪ್ರಧಾನಿಗಳೇ ನಗರ ನಕ್ಸಲರು, ದಿಮಾಗಿ ನಕ್ಸಲರು, ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಇನ್ನು ಅವರ ಅನುಯಾಯಿಗಳಾದವರಿಗೆ ಹತ್ಯೆ ನಿಂದನೆಗಳ ಕೆಟ್ಟ ಧೈರ್ಯ ಬರದೇ ಇರುತ್ತದೆಯೇ? ಗೌರಿ ಲಂಕೇಶ್ ಹಂತಕರ ವಿಚಾರಣೆಯ ಸಮಯದಲ್ಲಿ ಅವರ ಮುಂದಿನ ಟಾರ್ಗೆಟ್ ಯಾರಿದ್ದರು ಎಂಬ ವಿಷಯವೂ ಬಯಲಾಗಿತ್ತು. ಬಹುತೇಕ ಕರ್ನಾಟಕದ ಪ್ರಗತಿಪರರು ಅವರ ಹಿಟ್ ಲಿಸ್ಟ್ನಲ್ಲಿದ್ದರು. ಬಿಜೆಪಿ ವಿರೋಧಿಗಳು, ಹುಸಿ ಹಿಂದುತ್ವದ ವಿರೋಧಿಗಳನ್ನು ಇಲ್ಲವಾಗಿಸುವ ಸುಪಾರಿ ಕೊಟ್ಟವರು ಬಲಪಂಥೀಯ ಸನಾತನ ಸಂಸ್ಥೆ ಎಂಬ ಭಯಾನಕ ಸತ್ಯ ಹೊರಬಿದ್ದಿತ್ತು. ಕರ್ನಾಟಕ ಪೊಲೀಸರು ಕೊಲೆಗಾರರ ತಂಡವನ್ನು ಹೆಡೆಮುರಿ ಕಟ್ಟದಿದ್ದರೆ ಇನ್ನಷ್ಟು ಸಮಾಜಮುಖಿ ಜೀವಗಳು ಬಲಿಯಾಗುತ್ತಿದ್ದವು.
ಒಂದು ಕಡೆ ವಿರುದ್ಧ ಸಿದ್ಧಾಂತದವರ ಜೀವ ತೆಗೆಯುವುದು, ಇನ್ನೊಂದು ಕಡೆ ಇತಿಹಾಸವನ್ನು ತಿರುಚುವುದು, ಮಹಾ ಚೇತನಗಳ ಚಾರಿತ್ರ್ಯಹರಣ ಮಾಡುವ ಮೂಲಕ ಅವರ ಕೃತಿ-ಸಂದೇಶಗಳನ್ನು ನಗಣ್ಯಗೊಳಿಸುವ ಷಡ್ಯಂತ್ರ ನಿರಂತರವಾಗಿ ನಡೆಯುತ್ತಿದೆ.
ಬಸವಣ್ಣ ಮತ್ತು ವಚನಕಾರರ ಉದ್ದೇಶವನ್ನು ಮರೆ ಮಾಚುವ, ವಚನಗಳನ್ನು ತಿರುಚುವ ಕುಕೃತ್ಯಕ್ಕೆ ವೈದಿಕರ ಕುತಂತ್ರ ಕಾರಣ ಎಂಬ ಆರೋಪ ಸುಳ್ಳಲ್ಲ. ಕಳೆದ ವರ್ಷ ಅಂತಹದೊಂದು ಪುಸ್ತಕವನ್ನು ಕೆಲವು ಸನಾತನ ಧರ್ಮದ ಬೆಂಬಲಿಗರು ಹೊರ ತಂದಿದ್ದರು. ತಿರುಚಿದ ವಚನಗಳ ʼವಚನ ದರ್ಶನʼ ಎಂಬ ಪುಸ್ತಕ ವಿವಾದಕ್ಕೆ ಕಾರಣವಾಗಿತ್ತು. ಈ ಪುಸ್ತಕ ಬಿಡುಗಡೆಯಲ್ಲಿ ಆರೆಸ್ಸೆಸ್ನವರು ನೇರವಾಗಿ ಭಾಗಿಯಾಗಿದ್ದರು. ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ವಿವಾದಿತ ಕನೇರಿ ಸ್ವಾಮಿ ಬಸವಾನುಯಾಯಿಗಳ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದರು. ಲಿಂಗಾಯತರಲ್ಲೇ ಕೆಲವರು ವೈದಿಕ ಪರಂಪರೆ, ಆಚರಣೆಯ ಅನುಯಾಯಿಗಳಿದ್ದಾರೆ. ಅಂಥವರನ್ನು ಬಳಸಿಕೊಂಡು ವೈದಿಕರು ಬಸವಣ್ಣ ಮತ್ತು ಇತರ ವಚನಕಾರರಿಗೆ ಅಪಚಾರ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಆ ಆರೋಪಕ್ಕೆ ಪೂರಕವೆಂಬಂತೆ ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿ ಪತ್ರಿಕೆ ರವಿ ಹಂಜ್ ಎಂಬಾತನಿಂದ ಅಂಕಣ ಬರೆಸಿ ನಿರಂತರವಾಗಿ ಬಸವಾನುಯಾಯಿಗಳನ್ನು ನೋಯಿಸಿದೆ. ಪ್ರತಿ ಅಂಕಣ ಬರಹದಲ್ಲೂ ಲಿಂಗಾಯತರನ್ನು ನಿಂದಿಸಲಾಗಿದೆ. ತೇಜೋವಧೆ ಮಾಡಲಾಗಿದೆ. ಸಮುದಾಯದ ಪ್ರಬಲ ವಿರೋಧವಿದ್ದರೂ ಹಠಕ್ಕೆ ಬಿದ್ದು ಪುಸ್ತಕ ಪ್ರಕಟಿಸಲಾಗಿದೆ. ಈಗ ವಿವಾದ ತಾರಕಕ್ಕೇರುವ ಲಕ್ಷಣ ಕಂಡುಬಂದಾಗ ಅದಕ್ಕೆ ಕಾರಣರಾದ ಇಬ್ಬರೂ ವಿದೇಶಕ್ಕೆ ಪಲಾಯನಗೈದಿದ್ದಾರೆ. ಇಂತಹ ಅಪಸವ್ಯಗಳನ್ನು ಸಮುದಾಯಗಳು, ಸಮಾಜ, ಸರ್ಕಾರ ಹೆಚ್ಚು ದಿನ ಸಹಿಸಿಕೊಳ್ಳುವುದು ಕೂಡ ಅಕ್ಷಮ್ಯ. ಸಮಾಜಕ್ಕೆ ಸದಾ ಕಾಲ ಪ್ರೇರಣೆಯಾಗುವಂತಹ ವ್ಯಕ್ತಿತ್ವಗಳಿಗೆ ಮಸಿ ಬಳಿಯುವ ದುಷ್ಟರಿಗೆ ಆಯಾ ಕಾಲದಲ್ಲಿಯೇ ಕಾನೂನಿನ ಪಾಠ ಕಲಿಸಬೇಕಿದೆ. ಹೀಗೇ ಬಿಟ್ಟರೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇ ಸುಳ್ಳು ಎಂದು ಹೇಳುವ ಮಟ್ಟಿಗೆ ಕೃತಿಗಳನ್ನು ರಚಿಸಿ ನಿಜ ಇತಿಹಾಸಕ್ಕೆ ಸಮಾಧಿ ಕಟ್ಟುವ ಕೆಲಸ ನಡೆದರೂ ಅಚ್ಚರಿಯಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸೋ ಇಚ್ಛೆ ಇತಿಹಾಸ ತಿರುಚುವುದು, ವೈಯಕ್ತಿಕ ನಿಂದನೆ, ಸುಳ್ಳು ಸೃಷ್ಟಿಸುವುವವರ ವಿರುದ್ಧ ಶೂನ್ಯ ಸಹನೆ ತೋರುವುದನ್ನು ಎಲ್ಲ ಸರ್ಕಾರಗಳು ಕಲಿಯಬೇಕಿದೆ. ಬಸವಣ್ಣನವರನ್ನು ಅವಮಾನಿಸುವ ಕೃತಿ ಪ್ರಕಟಿಸಿದ ವಿಶ್ವೇಶ್ವರ ಭಟ್ ಸಿದ್ದರಾಮಯ್ಯನವರೊಂದಿಗೆ ಆಪ್ತವಾಗಿರುವ ವ್ಯಕ್ತಿ. ಈ ಕಾರಣಕ್ಕೆ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಾಗಬಾರದು. ಇತಿಹಾಸ ತಿರುಚುವ ಎಲ್ಲರಿಗೂ ಪಾಠವಾಗುವ ರೀತಿಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕರ್ನಾಟಕದಲ್ಲಿ ಅಧಿಕಾರ ನಡೆಸಿರುವುದು ಕಾಂಗ್ರೆಸ್ ಪಕ್ಷ. ಅದರ ನಾಯಕ ರಾಹುಲ್ ಗಾಂಧಿ ಜಾತ್ಯತೀತವಾದವನ್ನು ಎತ್ತಿ ಹಿಡಿದು, ಕೋಮುವಾದವನ್ನು ದಂಡಿಸಬೇಕೆಂದು ಪ್ರತಿಪಾದಿಸುತ್ತ ಬಂದಿರುವವರು. ಈ ಸಂಗತಿಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷ ಮನನ ಮಾಡಿಕೊಳ್ಳಬೇಕು. ಪೊಲೀಸ್ ವ್ಯವಸ್ಥೆ ಕೇಸರೀಕರಣವಾಗಿಲ್ಲ ಎಂಬುದನ್ನು ರುಜುವಾತು ಮಾಡಿ ತೋರಿಸಬೇಕು.



