ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸೇರಿದಂತೆ ಪರೀಕ್ಷಾ ಅಕ್ರಮ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ದೆಹಲಿಯ ವಿಶೇಷ ನ್ಯಾಯಾಧೀಶೆ ಅನು ಗ್ರೋವರ್ ಬಲಿಗಾ ಅವರನ್ನು ಹಠಾತ್ ವರ್ಗಾವಣೆ ಮಾಡಲಾಗಿದೆ. ಬಲಿಗಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಾಯ್ದೆಯಡಿ ಸ್ಥಾಪಿಸಲಾದ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಿಸಲಾಗಿದೆ.
ಬಲಿಗಾ ಅವರೊಂದಿಗೆ ವಿಕಾಸ್ ಧುಲ್, ಪ್ರಶಾಂತ್ ಶರ್ಮಾ, ಪುಲಸ್ತ್ಯ ಪ್ರಮಾಚಲಾ, ಕಿರಣ್ ಬನ್ಸಾಲ್ ಹಾಗೂ ಅಮಿತ್ ಬನ್ಸಾಲ್ ಅವರನ್ನೂ ಎನ್‌ಐಎ ವಿಶೇಷ ನ್ಯಾಯಾಲಯಗಳಿಗೆ ನಿಯೋಜಿಸಲಾಗಿದೆ.
ದೆಹಲಿ ಹೈಕೋರ್ಟ್ ಹೊರಡಿಸಿರುವ ಆಡಳಿತಾತ್ಮಕ ಆದೇಶದಂತೆ ಈ ವರ್ಗಾವಣೆ ಮಾಡಲಾಗಿದೆ. ಇತ್ತೀಚೆಗಷ್ಟೇ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯವನ್ನು ರಚಿಸಲಾಗಿತ್ತು. ಈ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಅನು ಗ್ರೋವರ್ ಬಲಿಗಾ ಅವರು ಜುಲೈ 25ರಂದು ಮಾತ್ರವೇ ನೇಮಕವಾಗಿದ್ದರು. ಆದರೆ, ಕೇವಲ ಒಂದೇ ವಾರದ ಅಂತರದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದೀಗ, ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾಗಿ ಅಜಯ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸೇರಿದಂತೆ ಪರೀಕ್ಷಾ ಅಕ್ರಮಗಳ ಪ್ರಕರಣಗಳನ್ನು ಗುಪ್ತಾ ಅವರೇ ವಿಚಾರಣೆ ನಡೆಸುತ್ತಿದ್ದರು ಎನ್ನಲಾಗಿದೆ.
ಮೇ 12ರಂದು ನಡೆದಿದ್ದ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಪಡಿಸಿತ್ತು. ಬಳಿಕ ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿತ್ತು. ಈ ನಡುವೆ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದು, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಬಳಿಕ, ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ದೆಹಲಿ ಹೈಕೋರ್ಟ್ ಜುಲೈ 23ರಂದು ವಿಶೇಷ ನ್ಯಾಯಾಲಯ ಸ್ಥಾಪಿಸಿತ್ತು.
ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ 13 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಎಲ್ಲ ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮೊದಲ ವಿಚಾರಣೆ ಜುಲೈ 27ರಂದು ನಡೆದಿತ್ತು. ಆರೋಪಿಗಳ ಪರ ವಕೀಲರ ಮನವಿ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಸಿಬಿಐ ಆರೋಪಪಟ್ಟಿ ಮತ್ತು ಇಬ್ಬರು ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಮಾಡಲಾಗಿತ್ತು.
ಇದೇ ಹೊತ್ತಿನಲ್ಲಿ, ವಿಶೇಷ ನ್ಯಾಯಾಧೀಶರ ವರ್ಗಾವಣೆ ನಡೆದಿದೆ. ಈ ಹಠಾತ್ ವರ್ಗಾವಣೆ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿದ್ದರೂ, ದೇಶದ ಅತ್ಯಂತ ಮಹತ್ವದ ಪರೀಕ್ಷಾ ಅಕ್ರಮ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ನಡೆದಿರುವುದರಿಂದ ಸಾರ್ವಜನಿಕ ವಲಯದಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.



