ದುಡಿಮೆ ಅರಸಿ ಹೋಗಿದ್ದ ಕೊಪ್ಪಳದ ಕುಟುವೊಂದು ಪ್ರಕೃತಿ ವಿಕೋಪಕ್ಕೆ ಪ್ರಾಣ ತೆತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಬಡ ಕುಟುಂಬವೊಂದು ಸಮಾಧಿಯಾಗಿದೆ. ತಾವು ವಾಸವಿದ್ದ ಶೆಡ್ ಮೇಲೆ ಗುಡ್ಡ ಕುಸಿತ ಉಂಟಾದ ಪರಿಣಾಮ ಗಂಡ-ಹೆಂಡತಿ ಮತ್ತು ಮಗು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ಕಾರ್ಮಿಕ ಮಲ್ಲಿಕಾರ್ಜುನ ಮತ್ತು ನಾಗವೇಣಿ ದಂಪತಿ ತಮ್ಮೊಟ್ಟಿಗೆ 3 ವರ್ಷದ ಮಗುವನ್ನು ಕಟ್ಟಿಕೊಂಡು ದುಡಿಯಲು ವಲಸೆ ಹೋಗಿದ್ದರು. ಮೊಹರಂ ಹಬ್ಬಕ್ಕೆ ಊರಿಗೆ ಬಂದಿದ್ದ ಕುಟುಂಬ, 4 ದಿನಗಳ ಹಿಂದಷ್ಟೇ ಖುಷಿ ಖುಷಿಯಾಗಿ ಶಿವಮೊಗ್ಗಕ್ಕೆ ತೆರಳಿತ್ತು. ಆದರೆ ವಿಧಿ ಅವರ ಬಾಳಲ್ಲಿ ಅಟ್ಟಹಾಸ ಮೆರೆದಿದೆ. ಮಧ್ಯರಾತ್ರಿ ಮಲಗಿದ್ದಾಗ ಏಕಾಏಕಿ ಗುಡ್ಡದ ಮೇಲಿಂದ ಜಾರಿಬಂದ ಮಣ್ಣು, ಶೆಡ್ ಮೇಲೆ ಬಿದ್ದಿದೆ. ಪರಿಣಾಮ ಶೆಡ್‌ನಲ್ಲಿ ಮಲಗಿದ್ದ ಕುಟುಂಬ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಪೊಲೀಸರು ವ್ಯಕ್ತಿಗೆ ಮನಸೋ ಇಚ್ಛೆ ಹೊಡೆದು ಕೊಂದ ಆರೋಪ: ಲಾಕಪ್ ಡೆತ್ ಪ್ರಕರಣ ದಾಖಲು
ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸುಮಾರು 10 ಗಂಟೆಗಳ ಕಾಲ ಸತತವಾಗಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇತ್ತ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಏನೇ ಆಗಲಿ, ಹೊಟ್ಟೆ ಪಾಡಿಗಾಗಿ 4 ದಿನಗಳ ಹಿಂದೆ ಕೊಪ್ಪಳದಿಂದ ತೀರ್ಥಹಳ್ಳಿಗೆ ಬಂದಿದ್ದ ಕುಟುಂಬ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ಘನಘೋರ. ದಂಪತಿಯ ಇಬ್ಬರು ಹೆಣ್ಣು ಮಕ್ಕಳು ಈಗ ಅನಾಥರಾಗಿದ್ದು, ಈ ಘಟನೆ ಪ್ರತಿಯೊಬ್ಬರ ಮನ ಕಲಕುವಂತಿದೆ.





