ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

Date:

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು ಬಂದರಿನ ಆಧುನೀಕರಣ, ಕಡಲತೀರಗಳ ಮೂಲಸೌಕರ್ಯ ವೃದ್ಧಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂಬ ಭರವಸೆ ಸ್ಥಳೀಯರಲ್ಲಿದೆ.

ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳಿಗೆ ಹೊಸ ಸ್ಪರ್ಶ ನೀಡುವ ಉದ್ದೇಶದಿಂದ ಸೆಪ್ಟೆಂಬರ್ 18ರಂದು ಮಂಗಳೂರು ನಗರದ ಪಡೀಲ್‌ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಕರಾವಳಿ ವ್ಯಾಪ್ತಿಯಲ್ಲಿ ಇಷ್ಟೊಂದು ಬೃಹತ್ ಮಟ್ಟದ ರಾಜ್ಯ ಸಂಪುಟ ಸಭೆ ಆಯೋಜನೆಯಾಗುತ್ತಿರುವುದು ಇದೇ ಮೊದಲು. ಆದ್ದರಿಂದ ಈ ಭಾಗದ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

- Advertisement -

ವಿಶೇಷ ಸಚಿವ ಸಂಪುಟವು ಕರಾವಳಿ ಕರ್ನಾಟಕದ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ಮತ್ತು ಈ ಭಾಗದ ಮೂಲಸೌಕರ್ಯ, ಬಂದರು, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ನೂತನ ಚೈತನ್ಯ ತುಂಬುವ ನಿರೀಕ್ಷೆಗಳು ಸ್ಥಳೀಯರದ್ದಾಗಿದೆ. ರಾವಳಿಯ ಜನಪ್ರಿಯ ತುಳು ಭಾಷೆಗೆ ರಾಜ್ಯದ ‘ಎರಡನೇ ಅಧಿಕೃತ ಭಾಷೆ’ಯ ಮಾನ್ಯತೆ ನೀಡುವ ಮಹತ್ವದ ಪ್ರಸ್ತಾವನೆಯೊಂದಿಗೆ ಇಲ್ಲಿನ ಸ್ಥಳೀಯರ ಉದ್ಯೋಗ, ಕಾರ್ಮಿಕರ ಪ್ರಶ್ನೆಗಳೂ ಇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ಇದನ್ನೂ ಓದಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ | ಆ.16ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Advertisements

ಯುವಜನರ ನಿರೀಕ್ಷೆಗಳ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ಅವರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, “ದಕ್ಷಿಣ ಕನ್ನಡ ಜಿಲ್ಲೆಯ ಸಚಿವ ಸಂಪುಟ ಸಭೆಯಾದರೆ ಸಾಲದು, ಈ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಮಗ್ರ ಚಿತ್ರಣ ಸಚಿವರಲ್ಲಿ ಇರಬೇಕು, ಆ ಸಭೆಯಲ್ಲೂ ವ್ಯಕ್ತವಾಗಬೇಕು. ಜಿಲ್ಲೆಯ ಯುವಜನರ ಬಹುಮುಖ್ಯ ಪ್ರಶ್ನೆ ಉದ್ಯೋಗ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಸದ್ಯ ಇಲ್ಲಿರುವ ಕೈಗಾರಿಕೆಗಳು ಎಲ್ಲವೂ ಪರಿಸರ ಮಾಲಿನ್ಯವನ್ನು ಮಾಡುವಂತದ್ದೇ ಹೊರತು ಉದ್ಯೋಗ ಸೃಷ್ಟಿಸಲ್ಲ. ಸೃಷ್ಟಿಯಾದ ಕೆಲವು ಉದ್ಯೋಗದಲ್ಲೂ ಭದ್ರತೆಯಿಲ್ಲ. ಎಲ್ಲವೂ ಗುತ್ತಿಗೆ ಆಧಾರದ ಉದ್ಯೋಗವಾಗಿದೆ. ಉತ್ತಮ ಉದ್ಯೋಗ ಸೃಷ್ಟಿಗಾಗಿ ಜಿಲ್ಲೆಯಲ್ಲಿ ಐಟಿ-ಬಿಟಿ, ಉದ್ಯೋಗ ಸೃಷ್ಟಿಸುವ ಸಂಸ್ಥೆಗಳನ್ನು ನಿರ್ಮಿಸಬೇಕು, ಪರಿಸರಕ್ಕೆ ಪೂರಕವಾದ ಕಂಪನಿ, ಕೈಗಾರಿಕೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕು” ಎಂದು ಆಗ್ರಹಿಸಿದರು.

santhosh 4
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್

ಹಾಗೆಯೇ, “ಇಲ್ಲಿನ ಬಹುತೇಕ ಯುವಜನರು ಉದ್ಯೋಗ ಹರಸಿಕೊಂಡು ಅರಬ್ ದೇಶಗಳಿಗೆ, ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುವಂತಹ ಪರಿಸ್ಥಿತಿಯಿದೆ. ಅದನ್ನು ತಪ್ಪಿಸಬೇಕಾದರೆ ಇಲ್ಲೇ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು” ಎಂದು ಒತ್ತಾಯಿಸಿದರು.

“ಈಗ ಪ್ರವಾಸೋದ್ಯಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಪ್ರವಾಸೋದ್ಯಮ ಕೇವಲ ಆಗರ್ಭ ಶ್ರೀಮಂತ ಹೂಡಿಕೆಗೆ ಸೀಮಿತವಾಗಬಾರದು. ಬದಲಾಗಿ ಪ್ರವಾಸೋದ್ಯಮ ಸಂಬಂಧಿತ ಅಭಿವೃದ್ಧಿಯಿಂದ ಸ್ಥಳೀಯ ಯುವಜನರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಅಲ್ಲಿಯೂ ಭದ್ರತೆಯ ಖಾಯಂ ಉದ್ಯೋಗವನ್ನು ಸೃಷ್ಟಿಸಬೇಕು. ಮತ್ತದೇ ಹಳೆ ಶೈಲಿಯ ಜೀತದ ಪದ್ಧತಿಯಂತೆ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಇಲ್ಲಿಗೆ ಕರೆತಂದು ಅವರನ್ನು ಜೀತದ ಮಾದರಿಯಲ್ಲಿ ದುಡಿಸಬಾರದು. ಸ್ಥಳೀಯರಿಗೆ ಆದ್ಯತೆ ನೀಡಬೇಕು” ಎಂದರು.

“ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಮೆವೇಗದಲ್ಲಿ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ, ಶೀಘ್ರವಾಗಿ ಪ್ರಾರಂಭಿಸಬೇಕು. ಹೃದ್ರೋಗ, ಕ್ಯಾನ್ಸರ್ ಸಂಬಂಧಿಸಿ ದಕ್ಷಿಣ ಕನ್ನಡದ ಜಿಲ್ಲೆಯ ಜನರು ಖಾಸಗಿ ಆಸ್ಪತ್ರೆಗೆ ಅವಲಂಬನೆಯಾಗಬೇಕಿದೆ. ಇಂತಹ ದುಬಾರಿ ಚಿಕಿತ್ಸೆಯನ್ನು ಸುಲಭವಾಗಿ ಸಿಗುವ ನಿಟ್ಟಿನಲ್ಲಿ ಸರ್ಕಾರದ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ನಿಮಾನ್ಸ್ ಮಾನಸಿಕ ಚಿಕಿತ್ಸೆ ಆಸ್ಪತ್ರೆಯನ್ನು ಇಲ್ಲಿ ಪ್ರಾರಂಭಿಸಲು ಸಾಧ್ಯವಾಗಬೇಕು” ಎಂದು ಆಗ್ರಹಿಸಿದರು.

“ಹಾಗೆಯೇ ಆದಿವಾಸಿ, ಅಲೆಮಾರಿ ಸಮುದಾಯ, ಕೊರಗ ಸಮುದಾಯ, ದಲಿತರ ಪ್ರಶ್ನೆಯಿದೆ. ಇವೆಲ್ಲವೂ ಒಟ್ಟಾಗಿ ಜನಸಾಮಾನ್ಯರ ಬದುಕಿನ ಪ್ರಶ್ನೆ, ಕಾರ್ಮಿಕರ ಉದ್ಯೋಗ, ಕೂಲಿ ಪ್ರಶ್ನೆ ಈ ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕು. ಬರೀ ಕಂಬಲ ಪಿಲಿನಲಿಕೆ ಪ್ರಶ್ನೆಯಷ್ಟೇ ಚರ್ಚೆಯಾದರೆ ಸಾಲದು” ಎಂದರು.

ಮಂಗಳೂರು ಮುಖ್ಯವಾಗಿ ಮೀನುಗಾರಿಕೆ ವಲಯ ಈ ವಲಯದ ಬೇಡಿಕೆಯ ಬಗ್ಗೆ ಈ ದಿನ. ಕಾಮ್‌ಗೆ ಪ್ರತಿಕ್ರಿಯಿಸಿದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಮಂಗಳೂರು ಕಾರ್ಯದರ್ಶಿ ತೈಯೂಬ್ ಬೆಂಗ್ರೆ, “ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು. ನಾಡದೋಣಿ, ಸಾಂಪ್ರದಾಯಿಕ ಬೋಟುಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು. ಮಂಗಳೂರು ಅಳಿವೆ ಬಾಗಿಲಿನಲ್ಲಿ ಬೋಟುಗಳು ಸಮುದ್ರಕ್ಕೆ ತೆರಳುವಾಗ ಹಾಗೂ ಮರಳುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿವೆ. ಅಳಿವೆ ಬಾಗಿಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ” ಎಂದು ಹೇಳಿದರು.

thiyoob
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಮಂಗಳೂರು ಕಾರ್ಯದರ್ಶಿ ತೈಯೂಬ್ ಬೆಂಗ್ರೆ

“ಅಳಿವೆ ಬಾಗಿಲು ಹಾಗೂ ಸಮುದ್ರ ಪ್ರವೇಶ ಪ್ರದೇಶದಲ್ಲಿ ಅಪಘಾತದ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಕರಾವಳಿ ಕಾವಲು ಪಡೆಯ ಬೋಟ್‌ಗಳು ಮತ್ತು ಸಿಬ್ಬಂದಿಗೆ ಅಳಿವೆ ಬಾಗಿಲಿನ ಸಮೀಪ ಸೂಕ್ತ ತಂಗುದಾಣ ಹಾಗೂ ಕಾರ್ಯಾಚರಣಾ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕುವ ಮೀನುಗಾರರಿಗೆ ತ್ವರಿತವಾಗಿ ರಕ್ಷಣಾ ನೆರವು ಒದಗಿಸಲು ಸಾಧ್ಯವಾಗಲಿದೆ. ಮೀನುಗಾರರ ಬಹುಕಾಲದ ಬೇಡಿಕೆಯಾದ ಸೀ ಆ್ಯಂಬುಲೆನ್ಸ್ ಸೇವೆಯನ್ನು ಮಂಗಳೂರಿನಲ್ಲಿ ತಕ್ಷಣ ಕಾರ್ಯಗತಗೊಳಿಸಬೇಕು. ಮೀನುಗಾರರು ಸಮುದ್ರದಲ್ಲಿ ಅಪಘಾತ ಅಥವಾ ತುರ್ತು ಪರಿಸ್ಥಿತಿಗೆ ಒಳಗಾದಾಗ ತ್ವರಿತ ವೈದ್ಯಕೀಯ ನೆರವು ದೊರೆಯುವಂತೆ ಈ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ವರ್ಷದಿಂದ ವರ್ಷಕ್ಕೆ ಬೋಟುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಅನುಗುಣವಾಗಿ ಬೋಟುಗಳ ನಿಲುಗಡೆ, ಪಾರ್ಕಿಂಗ್, ಡೀಸೆಲ್ ತುಂಬಿಸುವುದು, ಮಂಜುಗಡ್ಡೆ ಮತ್ತು ನೀರು ತುಂಬಿಸುವುದು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ವಿಸ್ತರಿಸಬೇಕು. ವಿಶೇಷವಾಗಿ ಮಹಿಳಾ ಮೀನು ಕಾರ್ಮಿಕರಿಗೆ ಸುರಕ್ಷಿತ ಮತ್ತು ಭದ್ರ ವಾತಾವರಣ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಎಲ್ಲಾ ವರ್ಗದ ಮೀನು ಕಾರ್ಮಿಕರಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದರು.

“ಮೀನುಗಾರಿಕೆ ಧಕ್ಕೆಯಲ್ಲಿ ಜಾಗದ ಕೊರತೆಯಿಂದ ಬೋಟುಗಳನ್ನು ನಿಲ್ಲಿಸುವುದು ಹಾಗೂ ಇತರ ಮೀನುಗಾರಿಕಾ ಚಟುವಟಿಕೆಗಳನ್ನು ನಡೆಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗ್ರೆ ಭಾಗದಲ್ಲಿ ಮೀನುಗಾರಿಕೆ ಧಕ್ಕೆಯನ್ನು ವಿಸ್ತರಿಸಲು ಸರ್ಕಾರ ಸಮಗ್ರ ಯೋಜನೆ ರೂಪಿಸಬೇಕು. ಕಸಬಾ ಬೆಂಗ್ರೆಯಲ್ಲಿ ನದಿ ಮೀನುಗಾರರಿಗೆ ಪ್ರತ್ಯೇಕ ಧಕ್ಕೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ, ಮೀನುಗಾರರು ಮತ್ತು ಮೀನುಗಾರಿಕೆ ಕ್ಷೇತ್ರದ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಮೀನುಗಾರರ ಕಲ್ಯಾಣ ಮಂಡಳಿ ರಚಿಸಿ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು. ಸಚಿವ ಸಂಪುಟ ಸಭೆಯಲ್ಲಿ ಮೀನುಗಾರರ ಸಮಸ್ಯೆಗಳಿಗೆ ಆದ್ಯತೆ ನೀಡಲಿ” ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಮೆಟ್ರೋ ವಿಸ್ತರಣೆ, ಕನಕಪುರದಲ್ಲಿ ವೈದ್ಯಕೀಯ ಕಾಲೇಜಿಗೆ ಜಮೀನು; ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳು

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಂಘಟನೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮುಖಂಡ ಸುನೀಲ್ ಕುಮಾರ್ ಬಜಾಲ್, “ಪ್ರಧಾನವಿರುವುದು ಕನಿಷ್ಠ ಕೂಲಿ ಪ್ರಶ್ನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೇ 22ರಂದು ಸರ್ಕಾರವೇ ಕನಿಷ್ಠ ಕೂಲಿಯನ್ನು ಘೋಷಿಸಿದೆ. ಆದರೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಆ ನಿರ್ಧಾರವನ್ನು ತಡೆಹಿಡಿದು ಮರುಪರಿಶೀಲನೆಗೆ ಆದೇಶಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಮಾಲಕರ ಒತ್ತಡ. ಈ ಒತ್ತಡಕ್ಕೆ ಒಳಗಾದ ಸರ್ಕಾರ ಈಗ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಅದರಲ್ಲಿ ನಮ್ಮ ಜಿಲ್ಲೆಯ ಯು ಟಿ ಖಾದರ್ ಅವರೂ ಇದ್ದಾರೆ” ಎಂದು ಈ ಮರುಪರಿಶೀಲನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

sunil 3
ಕಾರ್ಮಿಕ ಸಂಘಟನೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮುಖಂಡ ಸುನೀಲ್ ಕುಮಾರ್ ಬಜಾಲ್

“ಯಾವುದೇ ಕಾರಣಕ್ಕೂ ಮರುಪರಿಶೀಲನೆ ಮಾಡಬಾರದು. ಈ ಹಿಂದಿನ ನಿರ್ಧಾರವನ್ನು ಯಥಾವತ್ತಾಗಿ ಜಾರಿಗೆ ತರಬೇಕು” ಎಂದು ಆಗ್ರಹಿಸಿರುವ ಸುನಿಲ್ ಕುಮಾರ್ ಬಜಾಲ್ ಅವರು, “ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಕಾರ್ಮಿಕರಿಗೆ ಅನುಕೂಲವಾಗಲಿದೆ. ಯಾಕೆಂದರೆ ನಮ್ಮ ಜಿಲ್ಲೆಯಲ್ಲಿ ಅಸಂಘಟಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ. ಈ ಕನಿಷ್ಠ ಕೂಲಿ ಹಲವು ಮಂದಿ ಸಹಾಯವಾಗಲಿದೆ” ಎಂದರು.

“ಮತ್ತೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಮಹಿಳೆಯರು ಬೀಡಿ ಉದ್ಯೋಗದಲ್ಲಿದ್ದಾರೆ. ಬೀಡಿ, ತೋಟಗಾರಿಕೆ ಸೇರಿದಂತೆ 19 ವಿಭಾಗದ ಕಾರ್ಮಿಕರನ್ನು ಕನಿಷ್ಠ ಕೂಲಿಯಿಂದ ಹೊರಗಿಡಲಾಗಿದೆ. ಅವರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ಸೇರಿಸಬೇಕು. ಇದರಿಂದಾಗಿ ನಮ್ಮ ಜಿಲ್ಲೆಯ ಕಾರ್ಮಿಕರಿಗೆ ಅನುಕೂಲವಾಗಲಿದೆ. ಆರೋಗ್ಯ ಕ್ಷೇತ್ರ ಬೆಳವಣಿಗೆಯಾದರೆ ನಮ್ಮ ಕಾರ್ಮಿಕರಿಗೆ ಅನುಕೂಲವಾಗಲಿದೆ. ಈ ಜಿಲ್ಲೆಯ ಜನರ ಜೀವನಮಟ್ಟ ಅಭಿವೃದ್ದಿ ನಿಟ್ಟಿನಲ್ಲಿ ಚರ್ಚೆ ನಡೆಯಬೇಕು” ಎಂದು ಆಗ್ರಹಿಸಿದರು.

“ಅದೇ ರೀತಿ ನಮ್ಮ ಕ್ಷೇತ್ರದ ಕಡಲನ್ನು ಮುಂದಿಟ್ಟು ಪ್ರವಾಸೋದ್ಯಮ ಬೆಳವಣಿಗೆ ಬಗ್ಗೆ ಮಾತನಾಡುತ್ತಾರೆ. ಪ್ರವಾಸೋದ್ಯಮ ನೆಪದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ದಕ್ಷಿಣ ಕನ್ನಡಕ್ಕೆ ಹೂಡಿಕೆ ಮಾಡಲಾಗಿದೆ. ಆದರೆ ಉದ್ಯೋಗ ಸೃಷ್ಟಿಯಾಗಿದೆಯೇ? ಯಾವುದೇ ಹೂಡಿಕೆಯನ್ನು ಉದ್ಯೋಗ ಸೃಷ್ಟಿಯಾಗಬೇಕು. ಉದಾಹರಣೆಗೆ ಮಂಗಳೂರಿನಲ್ಲಿ ಎಂಟು ಕಾರ್ಪೋರೇಷನ್ ವಾರ್ಡ್‌ಗಳಲ್ಲಿ ಏರಿಯಾ ಬೇಸ್ಡ್ ಡೆವಲಪ್‌ಮೆಂಟ್ (ಎಬಿಡಿ) ಆಧಾರದಲ್ಲಿ ಸ್ಮಾರ್ಟ್ ಸಿಟಿ ಹೆಸರಲ್ಲಿ 2,000 ಕೋಟಿ ರೂಪಾಯಿ ಬಂದಿದೆ. ಈ ಹಣ ಈಗಾಗಲೇ ಖರ್ಚಾಗಿದೆ. ಆದರೆ ಯಾವುದಕ್ಕೆ ವ್ಯಯಿಸಲಾಗಿದೆ. ಇದು ಯಾರ ಅಭಿವೃದ್ಧಿ” ಎಂದು ಪ್ರಶ್ನಿಸಿದರು.

ಇನ್ನು ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ಮಹಿಳಾ ಮುಖಂಡೆ ಭಾರತಿ ಬೋಳಾರ್, “ದಕ್ಷಿಣ ಕನ್ನಡದಲ್ಲಿ ಬೀಡಿ ಕಾರ್ಮಿಕ ಮಹಿಳೆಯರು ಅಧಿಕವಾಗಿದ್ದಾರೆ. ಬೀಡಿ ಕಟ್ಟುವ ಮಹಿಳೆಯರು ಸಾಮಾನ್ಯವಾಗಿಯೇ ಬಡತನ ರೇಖೆಗಿಂತ ಕೆಳ ಮಟ್ಟದವರು. ಅವರಿಗೆ ಸರ್ಕಾರ ಕನಿಷ್ಠ ಕೂಲಿ ನೀಡಬೇಕು. ಸದ್ಯ ಬೀಡಿ ಕಾರ್ಮಿಕರಿಗೆ ನೀಡುವ ಕೂಲಿ ಅತಿ ಕಡಿಮೆ. ಈ ಮಹಿಳೆಯರ ಆರೋಗ್ಯದ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸದ್ಯ ಬೀಡಿ ಉದ್ಯಮ ನಿಷ್ಕ್ರೀಯವಾಗುತ್ತಿದೆ. ಹೀಗಿರುವಾಗ ಸರ್ಕಾರ ಈ ಮಹಿಳೆಯರಿಗೆ ಮರು ಉದ್ಯೋಗ ಸೃಷ್ಟಿಸಿ, ತರಬೇತಿ ನೀಡಬೇಕು” ಎಂದು ಆಗ್ರಹಿಸಿದರು.

bharathi
ಮಹಿಳಾ ಮುಖಂಡೆ ಭಾರತಿ ಬೋಳಾರ್

ಹಾಗೆಯೇ, “ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ತಾಂತ್ರಿಕ ತೊಡಕುಗಳಿಲ್ಲದೆ ಪ್ರತಿಯೊಬ್ಬ ಅರ್ಹ ಮಹಿಳೆಗೂ ಸುಲಭವಾಗಿ ತಲುಪುವಂತೆ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಹಿಳೆಯರ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ ಯುವತಿಯರಿಗೆ ಉನ್ನತ ಶಿಕ್ಷಣ ಉಚಿತವಾಗಿ ದೊರೆಯುವಂತಾಗಲು ಸೂಕ್ತ ಯೋಜನೆ ತರಬೇಕು” ಎಂದು ಒತ್ತಾಯಿಸಿದರು.

“ಕರಾವಳಿ ಭಾಗದ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ವಿಶೇಷ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮತ್ತು ಸ್ಥಳೀಯ ಮೀನುಗಾರಿಕೆ, ಗೃಹ ಉದ್ಯಮಗಳು ಹಾಗೂ ಕರಕುಶಲ ಉತ್ಪನ್ನಗಳಿಗೆ ಬಡ್ಡಿರಹಿತ ಸಾಲ ಅಥವಾ ವಿಶೇಷ ಆರ್ಥಿಕ ಪ್ರೋತ್ಸಾಹಕ ಧನ ಘೋಷಣೆಯಾಗಲಿ. ಕಡಲತೀರ ಮತ್ತು ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಅಗತ್ಯವಿರುವ ಆಧುನಿಕ ಕೋಲ್ಡ್ ಸ್ಟೋರೇಜ್ ಸೌಲಭ್ಯ, ಸುಸಜ್ಜಿತ ವಿಶ್ರಾಂತಿ ಕೊಠಡಿಗಳು ಮತ್ತು ಮಾರುಕಟ್ಟೆ ಶೇಡ್‌ಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಸಿಗಲಿ” ಎಂದು ಆಗ್ರಹಿಸಿದರು.

ಇನ್ನು ರೈತ ವರ್ಗದ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಹಿರಿಯ ಮುಖಂಡ ಕೆ. ಯಾದವ ಶೆಟ್ಟಿ, “ಕರಾವಳಿಯಲ್ಲಿ ತೆಂಗು, ಅಡಿಕೆ ಬಹಳ ಮುಖ್ಯವಾದ ಬೆಳೆ. ಆದರೆ ಬೇರೆ ಜಿಲ್ಲೆಯಂತೆ ಇಲ್ಲಿ ಈ ಕೃಷಿ ಆಧಾರಿತ ಕಾರ್ಖಾನೆಗಳು ಕಡಿಮೆ. ಉದಾಹರಣಗೆ ಕಬ್ಬು ಬೆಳೆಗಾರರು ಇರುವಲ್ಲಿ ಸಕ್ಕರೆ ಕಾರ್ಖಾನೆಗಳು ಇರುತ್ತದೆ. ಅದು ಬೆಳಗಾರರಿಗೆ ಆದಾಯಕ್ಕೆ ಪೂರಕವಾಗಲಿದೆ. ಅದರಂತೆ ಇಲ್ಲಿಯೂ ತೆಂಗು, ಅಡಿಕೆ ಬೆಳೆಗಾರರಿಗೆ ಆದಾಯ ಪಡೆಯಲು ಪೂರಕವಾಗುವ ಕಾರ್ಖಾನೆಗಳು ಇಲ್ಲಿ ಹೆಚ್ಚಾಗಬೇಕು” ಎಂದು ಆಗ್ರಹಿಸಿದರು.

yadav 1
ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಹಿರಿಯ ಮುಖಂಡ ಕೆ. ಯಾದವ ಶೆಟ್ಟಿ

“ಬಹಳ ಮುಖ್ಯವಾಗಿ ಕೃಷಿಕರಿಗೆ ಭೂಮಿಯೇ ಎಲ್ಲ. ಭೂಮಿ ಇದ್ದರೆ ಮಾತ್ರ ಕೃಷಿ ಸಾಧ್ಯ. ರಾಜ್ಯದಲ್ಲಿ ಅತಿ ಹೆಚ್ಚು ಭೂಸುಧಾರಣೆಯಾದ ಜಿಲ್ಲೆ ದಕ್ಷಿಣ ಕನ್ನಡ. ಅದಾದ ಬಳಿಕ ಉಡುಪಿ. ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಫಾರ್ಮ್ ನಂಬರ್ 51 (ಬಗರ್ ಹುಕುಂ – ಸಾಗುವಳಿ ಚೀಟಿ ಒಪ್ಪಂದ), ಫಾರ್ಮ್ ನಂಬರ್ 52 (ಭೂ ಪರಿವರ್ತನೆ – Land Conversion) ಅಡಿ ಅರ್ಜಿ ಸಲ್ಲಿಸಲಾಗಿದೆ. ಅದಾದ ಬಳಿಕ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಕೃಷಿ ಭೂಮಿಯನ್ನು ಸಕ್ರಮಗೊಳಿಸಲು ನಮೂನೆ 57 ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳು ಹಾಗೆಯೇ ಇದೆ. ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ. ಶೀಘ್ರವೇ ಭೂಮಿಯ ಇತ್ಯರ್ಥವಾಗಬೇಕು” ಎಂದು ಒತ್ತಾಯಿಸಿದರು.

“ಹಾಗೆಯೇ ಕೃಷಿಕರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗಬೇಕು. ಅತಿ ಶ್ರೀಮಂತರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಕ್ಕರೆ, ಕೃಷಿಕರಿಗೆ ಹೆಚ್ಚು ಬಡ್ಡಿಗೆ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿದೆ. ಇದು ಯಾವ ನ್ಯಾಯ? ಈ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಹಳದಿ ರೋಗ, ಇತರೆ ರೋಗಗಳು ಕೃಷಿಗೆ ಬಂದಾಗ ನ್ಯಾಯಬದ್ಧವಾಗಿ ಪರಿಹಾರ ನೀಡಬೇಕು” ಎಂದರು.

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು ಬಂದರಿನ ಆಧುನೀಕರಣ, ಕಡಲತೀರಗಳ ಮೂಲಸೌಕರ್ಯ ವೃದ್ಧಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂಬ ಭರವಸೆ ಸ್ಥಳೀಯರಲ್ಲಿದೆ. ಇದರ ಜತೆಗೆ, ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ ನೀಡುವುದು ಕರಾವಳಿಗರ ಸಾಂಸ್ಕೃತಿಕ ಅಸ್ಮಿತೆಯ ಪ್ರಶ್ನೆಯಾಗಿದ್ದು, ಈ ಸಭೆಯಲ್ಲಿ ಆ ಕುರಿತು ಧನಾತ್ಮಕ ನಿರ್ಧಾರ ಹೊರಬಿದ್ದರೆ ಅದು ಪ್ರಾದೇಶಿಕ ರಂಗಕ್ಕೆ ನೀಡುವ ಬಹುದೊಡ್ಡ ಗೌರವವಾಗಲಿದೆ.

ಅಷ್ಟೇ ಅಲ್ಲದೆ, ಮೀನುಗಾರರ ಹಿತರಕ್ಷಣೆ, ಡೀಸೆಲ್ ಸಬ್ಸಿಡಿ ಹೆಚ್ಚಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ಹಾಗೂ ಹಣಕಾಸಿನ ನೆರವು ನೀಡುವ ಪ್ರಸ್ತಾವನೆಗಳಿಗೂ ಅಂತಿಮ ಮೊಹರು ಬೀಳುವ ನಿರೀಕ್ಷೆಯಿದೆ. ಸ್ಥಳೀಯ ಯುವಕರಿಗೆ ಕೈಗಾರಿಕೆಗಳು ಮತ್ತು ಹೊಸ ಯೋಜನೆಗಳಲ್ಲಿ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಸೂಕ್ತ ನೀತಿ ನಿರೂಪಣೆಯಾಗಬೇಕಿದೆ. ಪಡೀಲ್‌ನ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಈ ಅಭೂತಪೂರ್ವ ಸಭೆಯು ಕರಾವಳಿ ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಚಿತ್ರಣವನ್ನೇ ಬದಲಾಯಿಸುವ ಹೊಸ ಮುನ್ನುಡಿಗೆ ನಾಂದಿ ಹಾಡಲಿ ಎಂಬುದು ಪ್ರತಿಯೊಬ್ಬ ನಾಗರಿಕನ ಹಾರೈಕೆಯಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ ಮದ್ಯದಂಗಡಿ ಕೊಲೆ ಪ್ರಕರಣದ ಆರೋಪಿ ಬಂಧನ

ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಬಳಿಯ ಮದ್ಯ ಮಾರಾಟ ಮಳಿಗೆಯಲ್ಲಿ ಸೆ.5ರಂದು ನಡೆದ...

ಗ್ರೌಂಡ್ ರಿಪೋರ್ಟ್ | ಮೆರವಣಿಗೆಯ ದಾರಿಯಿಂದ ರಾಜಕೀಯದ ದಾರಿಗೆ: ಟಿ. ನರಸೀಪುರದಲ್ಲಿ ಸಹಬಾಳ್ವೆಯ ಪ್ರಶ್ನೆ

2023ರ ವೇಣುಗೋಪಾಲ ನಾಯಕ್ ಹತ್ಯೆಯಿಂದ 2026ರ ಗಣೇಶೋತ್ಸವ ವಿವಾದದವರೆಗೆ; ಪೊಲೀಸ್ ಎಚ್ಚರಿಕೆ,...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ...

ಬರಗಾಲದಿಂದ ನಾಡಿಗೆ ಮುಕ್ತಿ ಸಿಗಲಿ: ಗಾಣಗಾಪುರ ದತ್ತಾತ್ರೇಯನ ಮೊರೆ ಹೋದ ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಜನತೆಗೆ ಶೀಘ್ರವೇ ಮುಕ್ತಿ ಸಿಗಲಿ ಹಾಗೂ...