ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

Date:

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ ಬಳಿಕ ಹೂಥಿಗಳ ಸಾಮರ್ಥ್ಯ ಮತ್ತು ಉದ್ದೇಶಗಳ ಬಗ್ಗೆ ಮತ್ತೆ ಜಾಗತಿಕ ಚರ್ಚೆ ಆರಂಭವಾಗಿದೆ.

ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕ ಯುದ್ಧದ ಆಚೆಗೂ ನಾನಾ ಬೆಳವಣಿಗೆಗಳು ನಡೆಯುತ್ತಿವೆ. ಯೆಮನ್‌ನ ಹೂಥಿ ಬಂಡುಕೋರರು ಕೆಂಪು ಸಮುದ್ರದ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದಾರೆ. ಯೆಮನ್ನ ಪ್ರಮುಖ ಬಂದರುಗಳಲ್ಲಿ ಒಂದಾದ ‘ಮೋಖಾ ಬಂದರು’ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಬ್ಯಾಬ್ ಎಲ್-ಮಾಂಡೆಬ್ ಜಲಸಂಧಿಗೆ ಹೊಂದಿಕೊಂಡಿರುವ ಕರಾವಳಿ ಮತ್ತು ದ್ವೀಪಗಳ ಮೇಲಿನ ಅವರ ಹಿಡಿತ ಮತ್ತಷ್ಟು ಬಲಗೊಂಡಿದೆ. ಇದರಿಂದ ಕೆಂಪು ಸಮುದ್ರದ ಮೂಲಕ ಸಾಗುವ ಜಾಗತಿಕ ಹಡಗು ಸಂಚಾರದ ಮೇಲೆ ಭಾರೀ ಪ್ರಭಾವ ಬೀರುತ್ತಿದ್ದಾರೆ.

- Advertisement -

ಇದೇ ಸಮಯದಲ್ಲಿ ಹೂಥಿಗಳು ಸೌದಿ ಅರೇಬಿಯಾದ ಸೈನಿಕ ನೆಲೆಗಳು, ಇಂಧನ ಮೂಲಸೌಕರ್ಯ ಹಾಗೂ ಇತರೆ ಗುರಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದಾರೆ. ಯೆಮನ್‌ನಲ್ಲಿ ಸೌದಿ ಬೆಂಬಲಿತ ಪಡೆಗಳ ವಿರುದ್ಧವೂ ಅವರ ಯುದ್ಧ ತೀವ್ರಗೊಂಡಿದೆ. ಮತ್ತೊಂದೆಡೆ, ಸೌದಿ ಅರೇಬಿಯಾ ಹೂಥಿ ನಿಯಂತ್ರಿತ ಪ್ರದೇಶಗಳ ಮೇಲೆ ವಾಯುದಾಳಿಗಳನ್ನು ನಡೆಸುತ್ತಿದೆ. ಹೀಗಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರಿದ ಯೆಮನ್ ಸಂಘರ್ಷ ಮತ್ತೆ ದೊಡ್ಡ ಪ್ರಾದೇಶಿಕ ಯುದ್ಧದ ಭಾಗವಾಗುವ ಅಪಾಯ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ UPI...

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’ (Retailers Association of India - RAI) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆ ಡಿಜಿಟಲ್ ಆರ್ಥಿಕತೆಯನ್ನು ನುಚ್ಚುನೂರು...

ಆದರೆ, ಈಗ ಹೂಥಿಗಳ ಹೆಸರು ಮತ್ತಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ನಗರವಾದ ಮೆಕ್ಕಾವನ್ನೇ ಹೂಥಿಗಳು ಗುರಿಯಾಗಿಸಿದ್ದಾರೆ ಎಂದು ಸೌದಿ ಅರೇಬಿಯಾ ಆರೋಪಿಸುತ್ತಿದೆ. ಆದರೆ, ಈ ಆರೋಪಗಳಿಗೆ ಯಾವುದೇ ಪುರಾವೆಗಳಲ್ಲವೆಂದು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳು ಹೇಳುತ್ತಿವೆ.

ಸೆಪ್ಟೆಂಬರ್ 16ರಂದು ಸೌದಿ ಅರೇಬಿಯಾ ನೇತೃತ್ವದ ಸೇನಾ ಮೈತ್ರಿಕೂಟ, ಮೆಕ್ಕಾದ ದಕ್ಷಿಣ ಭಾಗದಲ್ಲಿ ಹೂಥಿಗಳಿಗೆ ಸೇರಿದ ಡ್ರೋನ್ ಒಂದನ್ನು ಹೊಡೆದುರುಳಿಸಲಾಗಿದೆ ಎಂದು ಘೋಷಿಸಿತ್ತು. ಆ ಡ್ರೋನ್ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶದತ್ತ ಬರುತ್ತಿತ್ತು ಎಂದು ಸೌದಿ ಹೇಳಿಕೊಂಡಿದೆ. ಮೆಕ್ಕಾದ ಸುರಕ್ಷತೆ ತಮ್ಮ ಪಾಲಿಗೆ ‘ರೆಡ್ ಲೈನ್’ ಎಂದು ಸೌದಿ ಸೇನಾ ವಕ್ತಾರರು ಹೇಳಿಕೊಂಡಿದ್ದಾರೆ.

ಆದರೆ, ಹೂಥಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಮೆಕ್ಕಾವನ್ನಾಗಲಿ, ಇಸ್ಲಾಮಿನ ಯಾವುದೇ ಪವಿತ್ರ ಸ್ಥಳವನ್ನಾಗಲಿ ಗುರಿಯಾಗಿಸಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ, ಡ್ರೋನ್ ನಿಜವಾಗಿಯೂ ಮೆಕ್ಕಾ ನಗರವೇ ಗುರಿಯಾಗಿಸಿಕೊಂಡಿತ್ತೇ, ಬೇರೆ ಸೌದಿ ಸೈನಿಕ ಅಥವಾ ಮೂಲಸೌಕರ್ಯಗಳ ಗುರಿಯತ್ತ ಸಾಗುತ್ತಿತ್ತೇ ಎಂಬುದಕ್ಕೆ ಸ್ವತಂತ್ರವಾದ ಸಾರ್ವಜನಿಕ ಸಾಕ್ಷ್ಯ ಇನ್ನೂ ಲಭ್ಯವಿಲ್ಲ. ಆದ್ದರಿಂದ, ಹೂಥಿಗಳು ಮೆಕ್ಕಾವನ್ನೇ ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ನಿರ್ಧಾರಕ್ಕೆ ಬರಲು ಸಾಧ್ಯವೂ ಇಲ್ಲ.

ಸೆಪ್ಟೆಂಬರ್ 15ರಂದು ಮೆಕ್ಕಾ ಮತ್ತು ಜೆದ್ದಾ ಸೇರಿದಂತೆ ಸೌದಿ ಅರೇಬಿಯಾದ ಹಲವು ಪ್ರದೇಶಗಳಲ್ಲಿ ವಾಯುದಾಳಿಯ ಎಚ್ಚರಿಕೆ ನೀಡಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಯಾವುದೇ ಕ್ಷಿಪಣಿ ಅಥವಾ ಡ್ರೋನ್ ಮೆಕ್ಕಾದೊಳಗೆ ಬಿದ್ದಿರುವುದಾಗಿ ಸೌದಿ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ದಾಳಿಯ ಹೊಣೆ ಹೊತ್ತುಕೊಂಡ ತಕ್ಷಣದ ಹೇಳಿಕೆಗಳೂ ಬಂದಿಲ್ಲ.

ಅಂದಹಾಗೆ, ಇದು ಮೊದಲ ಬಾರಿಗೆ ಎದ್ದಿರುವ ವಿವಾದವೂ ಅಲ್ಲ. 2016ರ ಅಕ್ಟೋಬರ್‌ನಲ್ಲಿ ಯೆಮನ್‌ನಿಂದ ಹಾರಿಸಲಾದ ಹೂಥಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಮೆಕ್ಕಾದಿಂದ ಸುಮಾರು 65 ಕಿ.ಮೀ. ದೂರದಲ್ಲಿ ತಡೆದು ನಾಶಪಡಿಸಿದ್ದೇವೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಹೇಳಿತ್ತು. ಆದರೆ, ಹೂಥಿಗಳು ಕ್ಷಿಪಣಿಯನ್ನು ಹಾರಿಸಿದ್ದನ್ನು ಒಪ್ಪಿಕೊಂಡಿದ್ದರೂ ಅದರ ಗುರಿ ಮೆಕ್ಕಾ ಅಲ್ಲ, ಜೆದ್ದಾದಲ್ಲಿರುವ ಕಿಂಗ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೇಳಿದ್ದರು. ಆಗಲೂ ‘ಮೆಕ್ಕಾವನ್ನು ಗುರಿಯಾಗಿಸಲಾಗಿತ್ತು’ ಎಂದೇ ಸೌದಿ ಆರೋಪಿಸಿತ್ತು. ಆದರೆ, ‘ಜೆದ್ದಾ ವಿಮಾನ ನಿಲ್ದಾಣವೇ ತಮ್ಮ ಗುರಿಯಾಗಿತ್ತು’ ಎಂದು ಹೂಥಿಗಳು ಹೇಳಿದ್ದರು. ಸೌದಿಯ ಆರೋಪವನ್ನು ನಿರಾಕರಿಸಿದ್ದರು.

ಹೂಥಿಗಳು ಯಾರು?

ಹೂಥಿಗಳ ಕಥೆ ಆರಂಭವಾಗುವುದು ಯೆಮನ್‌ನ ಉತ್ತರ ಭಾಗದಿಂದ. ಯೆಮನ್ ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೂ, ಅದರ ಉತ್ತರದ ಎತ್ತರ ಪ್ರದೇಶಗಳಲ್ಲಿ ‘ಜೈದಿ’ ಅಥವಾ ‘ಝೈದಿ’ ಶಿಯಾ ಸಮುದಾಯಕ್ಕೆ ದೀರ್ಘ ಇತಿಹಾಸವಿದೆ. ಹೂಥಿ ಚಳವಳಿಯ ಸಾಮಾಜಿಕ ಮತ್ತು ಧಾರ್ಮಿಕ ಬೇರುಗಳು ಇದೇ ಸಮುದಾಯದಲ್ಲಿವೆ.

1990ರ ದಶಕದ ಕೊನೆಯ ಭಾಗದಲ್ಲಿ ಉತ್ತರ ಯೆಮನ್‌ನಲ್ಲಿ ಜೈದಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಯಾಗಿ ಸಂಘಟನೆಯೊಂದು ರೂಪುಗೊಳ್ಳತೊಡಗಿತು. ಹುಸೈನ್ ಬದ್ರುದ್ದೀನ್ ಅಲ್-ಹೂಥಿ ಅದರ ಪ್ರಮುಖ ನಾಯಕನಾಗಿ ಹೊರಹೊಮ್ಮಿದರು. ಅವರ ಹೆಸರಿನಿಂದಲೇ ನಂತರ ಸಂಘಟನೆಯನ್ನು ‘ಹೂಥಿಗಳು’ ಎಂದು ಕರೆಯಲಾಯಿತು. ಸಂಘಟನೆಯ ಅಧಿಕೃತ ಹೆಸರು ‘ಅನ್ಸಾರ್ ಅಲ್ಲಾ’ – ಅಂದರೆ ‘ದೇವರ ಬೆಂಬಲಿಗರು’.

ಆರಂಭದಲ್ಲಿ ಇದು ಕೇವಲ ಸಶಸ್ತ್ರ ಸೇನೆಯಾಗಿರಲಿಲ್ಲ. ಜೈದಿ ಸಮುದಾಯದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸ್ಥಾನಮಾನ ಕುಗ್ಗುತ್ತಿದೆ ಎಂಬ ಅಸಮಾಧಾನ ಈ ಸಂಘಟನೆಯ ಹುಟ್ಟಿಗೆ ಕಾರಣವಾಗಿತ್ತು. ಆನಂತರದಲ್ಲಿ, ಯೆಮನ್ನ ಕೇಂದ್ರ ಸರ್ಕಾರದ ನೀತಿಗಳು, ಭ್ರಷ್ಟಾಚಾರ, ಸೌದಿ ಧಾರ್ಮಿಕ ಪ್ರಭಾವ ಹಾಗೂ ಅಮೆರಿಕದ ಮಧ್ಯಪ್ರಾಚ್ಯ ನೀತಿಗಳ ವಿರುದ್ಧವೂ ಈ ಸಂಘಟನೆ ಧ್ವನಿ ಎತ್ತಿತು.

ಕ್ರಮೇಣ ಸರ್ಕಾರ ಮತ್ತು ಚಳವಳಿಯ ನಡುವಿನ ಸಂಘರ್ಷ ಸಶಸ್ತ್ರ ಹೋರಾಟವಾಗಿ ಬದಲಾಯಿತು. 2004ರಿಂದ ಯೆಮನ್ ಸರ್ಕಾರ ಮತ್ತು ಹೂಥಿಗಳ ನಡುವೆ ಹಲವು ಸುತ್ತಿನ ಯುದ್ಧಗಳು ನಡೆದವು. ಸಂಘಟನೆಯ ನೇತಾರ ಹುಸೈನ್ ಅಲ್-ಹೂಥಿ ಅವರು 2004ರಲ್ಲಿ ಯೆಮನ್ ಸೇನೆಯ ಕಾರ್ಯಾಚರಣೆಯಲ್ಲಿ ಮೃತಪಟ್ಟರೂ ಚಳವಳಿ ನಿಲ್ಲಲಿಲ್ಲ. ಅವರ ಸಹೋದರ ಅಬ್ದುಲ್ ಮಲಿಕ್ ಅಲ್-ಹೂಥಿ ಅವರು ಸಂಘಟನೆಯ ಪ್ರಮುಖ ನಾಯಕನಾಗಿ ಹೊರಹೊಮ್ಮಿದರು. ಇಂದಿಗೂ ಅಬ್ದುಲ್ ಮಲಿಕ್ ಅಲ್-ಹೂಥಿಯೇ ಸಂಘಟನೆಯ ಅತ್ಯಂತ ಪ್ರಭಾವಿ ನಾಯಕನಾಗಿದ್ದಾರೆ.

2014ರಲ್ಲಿ ಸನಾ ವಶ: ಬಂಡುಕೋರರಿಂದ ಆಡಳಿತ ಶಕ್ತಿಯವರೆಗೆ

2011ರ ‘ಅರಬ್ ಸ್ಪ್ರಿಂಗ್’ ಯೆಮನ್‌ನ ರಾಜಕೀಯ ವ್ಯವಸ್ಥೆಯನ್ನು ತೀವ್ರವಾಗಿ ಅಸ್ಥಿರಗೊಳಿಸಿತು. ದೀರ್ಘಕಾಲ ಅಧ್ಯಕ್ಷರಾಗಿದ್ದ ಅಲಿ ಅಬ್ದುಲ್ಲಾ ಸಲೇಹ್ ಅಧಿಕಾರ ಕಳೆದುಕೊಂಡ ನಂತರ ಅಬ್ದ್ ರಬ್ಬು ಮನ್ಸೂರ್ ಹಾದಿ ನೇತೃತ್ವದಲ್ಲಿ ರಾಜಕೀಯ ಪರಿವರ್ತನೆಯ ಪ್ರಯತ್ನಗಳು ನಡೆದವು.

ಆದರೆ ದುರ್ಬಲ ಕೇಂದ್ರ ಸರ್ಕಾರ, ಆಂತರಿಕ ರಾಜಕೀಯ ಸಂಘರ್ಷ ಮತ್ತು ಆರ್ಥಿಕ ಬಿಕ್ಕಟ್ಟನ್ನು ಹೂಥಿಗಳು ತಮ್ಮ ಪರವಾಗಿ ಬಳಸಿಕೊಂಡರು. 2014ರಲ್ಲಿ ಅವರು ರಾಜಧಾನಿ ಸನಾವನ್ನು ವಶಪಡಿಸಿಕೊಂಡರು. ಇದರಿಂದ ಗಲ್ಫ್ ರಾಷ್ಟ್ರಗಳ ಬೆಂಬಲದೊಂದಿಗೆ ನಡೆಯುತ್ತಿದ್ದ ರಾಜಕೀಯ ಪರಿವರ್ತನೆ ಕುಸಿಯಿತು. ಆಗ ಅಧಿಕಾರ ಕಳೆದುಕೊಂಡ ಯೆಮನ್ ಅಧ್ಯಕ್ಷ ಹಾದಿ, ದೇಶಬಿಟ್ಟು ಹೊರಹೋಗಬೇಕಾಯಿತು.

ಇದಕ್ಕೆ ಪ್ರತಿಕ್ರಿಯೆಯಾಗಿ 2015ರಲ್ಲಿ ಸೌದಿ ಅರೇಬಿಯಾ ನೇತೃತ್ವದ ಅರಬ್ ಮೈತ್ರಿಕೂಟ ಯೆಮನ್‌ನಲ್ಲಿ ದೊಡ್ಡ ಮಟ್ಟದ ಸೈನಿಕ ಹಸ್ತಕ್ಷೇಪ ಆರಂಭಿಸಿತು. ಹೂಥಿಗಳನ್ನು ಹಿಮ್ಮೆಟ್ಟಿಸಿ ಹಾದಿ ಸರ್ಕಾರವನ್ನು ಮರುಸ್ಥಾಪಿಸುವುದು ಸೌದಿ ಅರೇಬಿಯಾದ ಉದ್ದೇಶವಾಗಿತ್ತು.

ಆದರೆ, ವರ್ಷಗಳ ವಾಯುದಾಳಿ ಮತ್ತು ಯುದ್ಧದ ನಂತರವೂ ಹೂಥಿಗಳನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಹೂಥಿಗಳು ಮತ್ತಷ್ಟು ಸಂಘಟಿತ ಸೈನಿಕ ಶಕ್ತಿಯಾಗಿ ಬೆಳೆದರು.

ಪರಿಣಾಮವಾಗಿ, ಹೂಥಿಗಳನ್ನು ಇಂದಿಗೂ ಹಿಮ್ಮೆಟ್ಟಲು ಸಾಧ್ಯವಾಗಿಲ್ಲ. ಯೆಮನ್‌ನ ರಾಜಧಾನಿ ಸನಾ ಇಂದಿಗೂ ಹೂತಿಗಳ ಆಡಳಿತದಲ್ಲಿಯೇ ಇದೆ. ಆದರೆ, ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಯೆಮನ್ ಸರ್ಕಾರವು ದಕ್ಷಿಣದ ಏಡನ್ ಅನ್ನು ತಾತ್ಕಾಲಿಕ ರಾಜಧಾನಿಯಾಗಿ ಬಳಸುತ್ತಿದೆ.

2022ರಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನವಿರಾಮ ಜಾರಿಯಾಗಿ ದೊಡ್ಡ ಪ್ರಮಾಣದ ಸಂಘರ್ಷ ಕಡಿಮೆಯಾಗಿತ್ತು. ಆದರೆ, ಅದು ಶಾಶ್ವತ ರಾಜಕೀಯ ಒಪ್ಪಂದವಾಗಿ ರೂಪುಗೊಳ್ಳಲಿಲ್ಲ. 2026ರಲ್ಲಿ ಮತ್ತೆ ಹಲವು ಯುದ್ಧರಂಗಗಳಲ್ಲಿ ಸಂಘರ್ಷ ತೀವ್ರಗೊಂಡಿದೆ.

ಇರಾನ್‌ನ ‘ಪ್ರತಿರೋಧ ಅಕ್ಷ’ದಲ್ಲಿ ಹೂಥಿಗಳ ಪಾತ್ರ

ಹೂಥಿಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಇರಾನ್ ರೂಪಿಸಿಕೊಂಡಿರುವ ಪ್ರಾದೇಶಿಕ ಮೈತ್ರಿ ಜಾಲವನ್ನೂ ಅರ್ಥಮಾಡಿಕೊಳ್ಳಬೇಕು.

ಇರಾನ್ ಬೆಂಬಲಿಸುವ ಹಲವು ಸಶಸ್ತ್ರ ಮತ್ತು ರಾಜಕೀಯ ಸಂಘಟನೆಗಳನ್ನು ಸಾಮಾನ್ಯವಾಗಿ ‘Axis of Resistance’ (ಪ್ರತಿರೋಧ ಅಕ್ಷ) ಎಂದು ಕರೆಯಲಾಗುತ್ತದೆ. ಲೆಬನಾನ್‌ನ ಹಿಜ್ಬುಲ್ಲಾ, ಪ್ಯಾಲೆಸ್ತೀನ್‌ನ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್, ಇರಾಕ್‌ನ ಕೆಲವು ಶಿಯಾ ಸಶಸ್ತ್ರ ಸಂಘಟನೆಗಳು ಹಾಗೂ ಯೆಮನ್‌ನ ಹೂಥಿಗಳು ಈ ವಿಶಾಲ ಜಾಲದ ಭಾಗವಾಗಿದ್ದಾರೆ.

ಹೂಥಿಗಳಿಗೆ ಇರಾನ್ ಸೈನಿಕ ತಂತ್ರಜ್ಞಾನ, ಕ್ಷಿಪಣಿ ಹಾಗೂ ಡ್ರೋನ್ ಪರಿಣತಿ, ತರಬೇತಿ ಮತ್ತು ಇತರೆ ನೆರವು ನೀಡುತ್ತಿದೆ. ಇರಾನ್ ಮತ್ತು ಹಿಜ್ಬುಲ್ಲಾದ ತರಬೇತಿಗಳು ಹೂಥಿಗಳನ್ನು ಹೆಚ್ಚು ಸಂಘಟಿತ ಸೈನಿಕ ಶಕ್ತಿಯಾಗಿ ರೂಪಿಸಲು ಪ್ರಮುಖ ಪಾತ್ರ ವಹಿಸಿವೆ. ಆದಾಗ್ಯೂ, ಇರಾನ್ ಶಸ್ತ್ರಾಸ್ತ್ರ ನಿರ್ಬಂಧ ಉಲ್ಲಂಘಿಸಿ ಹೂಥಿಗಳಿಗೆ ಶಸ್ತ್ರಾಸ್ತ್ರ ನೀಡುತ್ತಿದೆ ಎಂಬ ವಿಶ್ವಸಂಸ್ಥೆಯ ಆರೋಪಗಳನ್ನು ಇರಾನ್ ಕಡಾಖಂಡಿತವಾಗಿ ನಿರಾಕರಿಸುತ್ತಲೇ ಬಂದಿದೆ.

ಹಮಾಸ್, ಹಿಜ್ಬುಲ್ಲಾ ದುರ್ಬಲವಾದರೂ ಹೂಥಿಗಳು ಪ್ರಬಲವಾಗಿದ್ದು ಹೇಗೆ?

ಪ್ಯಾಲೆಸ್ತೀನ್‌ನ ವಿಮೋಚನೆಗಾಗಿ ಹೋರಾಡುತ್ತಿರುವ ಹಮಾಸ್, 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆದಿತು. ಆ ಬಳಿಕ, ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಲಾರಂಭಿಸಿತು. ಹೂಥಿಗಳು ಪ್ಯಾಲೆಸ್ತೀನಿಯರ ಬೆಂಬಲಕ್ಕೆ ನಿಂತಿರುವುದಾಗಿ ಘೋಷಿಸಿ ಇಸ್ರೇಲ್ ಕಡೆಗೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹಾರಿಸಲು ಆರಂಭಿಸಿದರು. ಅದೇ ಸಮಯದಲ್ಲಿ ಕೆಂಪು ಸಮುದ್ರದ ವಾಣಿಜ್ಯ ಹಡಗುಗಳ ಮೇಲೂ ದಾಳಿ ನಡೆಸಿದರು.

ಕಳೆದ ಮೂರು ವರ್ಷಗಳಲ್ಲಿ, ಲೆಬನಾನ್‌ನ ಹಿಜ್ಬುಲ್ಲಾ ಮತ್ತು ಹಮಾಸ್‌ನ ನಾಯಕತ್ವ ಹಾಗೂ ಸೈನಿಕ ವ್ಯವಸ್ಥೆಗೆ ಇಸ್ರೇಲ್ ಭಾರೀ ಹೊಡೆತ ನೀಡಿದೆ. ಈ ಸಮಯದಲ್ಲಿ, ಇರಾನ್‌ನ ಅರಬ್ ಮಿತ್ರರಲ್ಲಿ ಹೂಥಿಗಳ ಶಕ್ತಿಯು ಮಹತ್ವ ಪಡೆದುಕೊಂಡಿದೆ. ಅಬ್ದುಲ್ ಮಲಿಕ್ ಅಲ್-ಹೂಥಿ ಈಗ ಇರಾನ್‌ನ ಅತ್ಯಂತ ಪ್ರಮುಖ ಮತ್ತು ಉಳಿದುಕೊಂಡಿರುವ ಅರಬ್ ಮಿತ್ರರಲ್ಲಿ ಒಬ್ಬನಾಗಿ ಹೊರಹೊಮ್ಮಿದ್ದಾನೆ.

ಕೆಂಪು ಸಮುದ್ರದ ಮೇಲೆ ಹೂಥಿಗಳ ಹಿಡಿತ – ಜಗತ್ತಿನ ಆತಂಕ

ಯೆಮನ್‌ನ ಭೌಗೋಳಿಕ ಸ್ಥಾನವೇ ಹೂಥಿಗಳಿಗೆ ಅಸಾಧಾರಣ ಪ್ರಭಾವ ನೀಡುತ್ತದೆ. ಯೆಮನ್‌ನ ಪಶ್ಚಿಮ ಕರಾವಳಿಯ ಕೆಳಭಾಗದಲ್ಲಿರುವ ಬ್ಯಾಬ್ ಎಲ್-ಮಾಂಡೆಬ್ ಜಲಸಂಧಿ ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರಕ್ಕೆ ಸಂಪರ್ಕಿಸುತ್ತದೆ.

ಇದು ಸಾಮಾನ್ಯ ಸಮುದ್ರ ಮಾರ್ಗವಲ್ಲ. ಏಷ್ಯಾ ಮತ್ತು ಯೂರೋಪ್ ನಡುವಿನ ಬಹುತೇಕ ಹಡಗುಗಳು ಇಲ್ಲಿಂದ ಕೆಂಪು ಸಮುದ್ರಕ್ಕೆ ಪ್ರವೇಶಿಸಿ, ನಂತರ ಸೂಯೆಝ್ ಕಾಲುವೆ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಸಾಗುತ್ತವೆ.

ಅಮೆರಿಕದ ಇಂಧನ ಮಾಹಿತಿ ಸಂಸ್ಥೆ (EIA) ಪ್ರಕಾರ, 2023ರ ಮೊದಲಾರ್ಧದಲ್ಲಿ ಜಾಗತಿಕ ಸಮುದ್ರ ಮಾರ್ಗದ ತೈಲ ವ್ಯಾಪಾರದ ಸುಮಾರು 12% ಮತ್ತು LNG ವ್ಯಾಪಾರದ ಸುಮಾರು 8% ಬ್ಯಾಬ್ ಎಲ್-ಮಾಂಡೆಬ್ ಮೂಲಕ ಸಾಗುತ್ತಿತ್ತು. 2023ರ ಕೊನೆಯ ಭಾಗದಲ್ಲಿ ಹೂಥಿಗಳು ವಾಣಿಜ್ಯ ಹಡಗುಗಳ ಮೇಲೆ ದಾಳಿ ಆರಂಭಿಸಿದ ನಂತರ ದೊಡ್ಡ ಹಡಗು ಕಂಪನಿಗಳು ಈ ಮಾರ್ಗವನ್ನು ತಪ್ಪಿಸಲು ಆರಂಭಿಸಿದವು. ಪರಿಣಾಮ, ಆ ಸಂದರ್ಭದಲ್ಲಿ, ಸೂಯೆಝ್ ಕಾಲುವೆಯ ಮೂಲಕ ನಡೆಯುತ್ತಿದ್ದ ವಾರದ ಹಡಗು ಸಂಚಾರ ಸುಮಾರು 42% ಕುಸಿದಿತ್ತು.

ಈ ಲೇಖನ ಓದಿದ್ದೀರಾ?: ಬಾಹ್ಯಾಕಾಶದಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಹಡಗುಗಳು ಕೆಂಪು ಸಮುದ್ರವನ್ನು ತಪ್ಪಿಸಿದರೆ ಅವು ಆಫ್ರಿಕಾದ ದಕ್ಷಿಣ ತುದಿಯ ‘ಕೇಪ್ ಆಫ್ ಗುಡ್ ಹೋಪ್’ ಸುತ್ತಿಕೊಂಡು ಯೂರೋಪ್ ತಲುಪಬೇಕಾಗುತ್ತದೆ. ಇದರಿಂದ ಸಾವಿರಾರು ನಾಟಿಕಲ್ ಮೈಲುಗಳ ಹೆಚ್ಚುವರಿ ಪ್ರಯಾಣ, ಹೆಚ್ಚುವರಿ ಇಂಧನ ವೆಚ್ಚ, ವಿಮಾ ಪ್ರೀಮಿಯಂ ಹಾಗೂ ಸರಕು ತಲುಪುವಲ್ಲಿ ಹಲವು ದಿನಗಳ ವಿಳಂಬ ಉಂಟಾಗುತ್ತದೆ.

UNCTAD ಅಂದಾಜಿನ ಪ್ರಕಾರ, ಏಷ್ಯಾ-ಯೂರೋಪ್ ಮಾರ್ಗವನ್ನು ಆಫ್ರಿಕಾ ಸುತ್ತುವಂತೆ ಬದಲಿಸಿದರೆ ಪ್ರಯಾಣಗಳಿಗೆ ಸುಮಾರು 12 ದಿನಗಳಷ್ಟು ಹೆಚ್ಚುವರಿ ಸಮಯ ಬೇಕಾಗುತ್ತದೆ.

2026ರಲ್ಲಿ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿ?

2023ರ ಸಂಕಷ್ಟದ ವೇಳೆ ಪ್ರಮುಖ ಸಮಸ್ಯೆ ಬ್ಯಾಬ್ ಎಲ್-ಮಾಂಡೆಬ್ ಮತ್ತು ಕೆಂಪು ಸಮುದ್ರವಾಗಿತ್ತು. ಆದರೆ, 2026ರಲ್ಲಿ ಅದಕ್ಕೆ ಇನ್ನೊಂದು ಅತಿದೊಡ್ಡ ಸಮಸ್ಯೆ ಸೇರಿಕೊಂಡಿದೆ. ಅದು; ಹಾರ್ಮುಜ್ ಜಲಸಂಧಿ.

2026ರ ಸೆಪ್ಟೆಂಬರ್ ವೇಳೆಗೆ ಇರಾನ್-ಅಮೆರಿಕ ಸಂಘರ್ಷದಿಂದ ಹಾರ್ಮುಜ್ ಮೂಲಕ ಸಾಗುವ ಹಡಗು ಸಂಚಾರ ತೀವ್ರವಾಗಿ ಕುಸಿದಿದೆ. ಇದೇ ಸಂದರ್ಭದಲ್ಲಿ ಹೂಥಿಗಳು ಯೆಮನ್‌ನ ಕೆಂಪು ಸಮುದ್ರದ ಕರಾವಳಿಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸಿರುವುದರಿಂದ ಬ್ಯಾಬ್ ಎಲ್-ಮಾಂಡೆಬ್ ಮೇಲೂ ಒತ್ತಡ ಹೆಚ್ಚಾಗಿದೆ.

ಅಂದರೆ, ಪರ್ಷಿಯನ್ ಕೊಲ್ಲಿಯಿಂದ ಹೊರಬರುವ ಹಾರ್ಮುಜ್ ಮಾರ್ಗ ಮತ್ತು ಕೆಂಪು ಸಮುದ್ರಕ್ಕೆ ಪ್ರವೇಶಿಸುವ ಬ್ಯಾಬ್ ಎಲ್-ಮಾಂಡೆಬ್—ಜಗತ್ತಿನ ಇಂಧನ ಮತ್ತು ಸರಕು ಸಾಗಣೆಯ ಎರಡು ಅತ್ಯಂತ ಪ್ರಮುಖ ‘ಚೋಕ್ ಪಾಯಿಂಟ್‌ಗಳು’ ಒಂದೇ ಸಮಯದಲ್ಲಿ ಅಸ್ಥಿರವಾಗಿದ್ದು, ಜಾಗತಿಕ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿದೆ.

ಭಾರತದ ಮೇಲಿನ ಪರಿಣಾಮ

ಇರಾನ್-ಅಮೆರಿಕ ಸಂಘ‍ರ್ಷ ಮತ್ತು ಇಸ್ರೇಲ್-ಸೌದಿ-ಹೂತಿಗಳ ನಡುವಿನ ತಿಕ್ಕಾಟವು ಭಾರತದ ಪಾಲಿಗೂ ಸಮಸ್ಯೆಯನ್ನು ಹುಟ್ಟುಹಾಕಿದೆ. ಭಾರತ ಮತ್ತು ಯೂರೋಪ್ ನಡುವಿನ ಸರಕು ವ್ಯಾಪಾರದ ಸುಮಾರು 80% ವಹಿವಾಟು ಸಾಮಾನ್ಯವಾಗಿ ಕೆಂಪು ಸಮುದ್ರದ ಮಾರ್ಗವನ್ನು ಬಳಸುತ್ತದೆ. 2023-24ರ ಕೆಂಪು ಸಮುದ್ರ ಸಂಕಷ್ಟದ ವೇಳೆ ಹಲವು ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಮಾರ್ಗಕ್ಕೆ ತಿರುಗಿದಾಗ ಭಾರತದಿಂದ ಯೂರೋಪ್‌ಗೆ ಸಾಗುವ ಹಗಡು ಪ್ರಯಾಣಗಳಿಗೆ ಸುಮಾರು 4,000ರಿಂದ 6,000 ನಾಟಿಕಲ್ ಮೈಲು ಹೆಚ್ಚುವರಿ ದೂರ ಮತ್ತು 14ರಿಂದ 20 ದಿನಗಳ ಹೆಚ್ಚುವರಿ ಸಮಯ ಬೇಕಾಯಿತು.

ಇದರಿಂದ ಕಂಟೈನರ್ ವೆಚ್ಚ, ಇಂಧನ ವೆಚ್ಚ ಹಾಗೂ ಯುದ್ಧ ಅಪಾಯ ವಿಮೆ ಹೆಚ್ಚಾಯಿತು. ಜೊತೆಗೆ, ಕಡಿಮೆ ಲಾಭಾಂಶ ಇರುವ ಬಟ್ಟೆ-ಜವಳಿ, ಚರ್ಮ, ಕೃಷಿ ಉತ್ಪನ್ನಗಳು, ಸಮುದ್ರ ಆಹಾರ, ರಾಸಾಯನಿಕಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ಪನ್ನಗಳೂ ದುಬಾರಿಯಾದವು.

ಇದರ ಜೊತೆಗೆ ಹಾರ್ಮುಜ್ ಜಲಸಂಧಿಯ ಅಸ್ಥಿರತೆ ಭಾರತದ ಇಂಧನ ಭದ್ರತೆಯ ಮೇಲೂ ಪರಿಣಾಮ ಬೀರಿದೆ. ಒಂದೆಡೆ ಇಂಧನ ಆಮದು ಮಾರ್ಗ, ಮತ್ತೊಂದೆಡೆ ಯೂರೋಪ್‌ಗೆ ರಫ್ತು ಮಾರ್ಗ—ಎರಡೂ ಒಂದೇ ಸಮಯದಲ್ಲಿ ಜಾಗತಿಕ ಬಿಕ್ಕಟ್ಟು ಸೃಷ್ಟಿಸಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ UPI ವರೆಗೆ ಮೋದಿ ಸರ್ಕಾರದ ಎಡವಟ್ಟುಗಳು

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’...

ದವಡೆ ಜಜ್ಜಿಸಿಕೊಂಡ ಆಪರೇಷನ್ ಎಪಿಕ್ ಫ್ಯೂರಿ: ಇರಾನ್ ಕಾಳಗದಲ್ಲಿ ಅಮೆರಿಕಕ್ಕೆ ಆದ ನಷ್ಟಗಳೇನೇನು?

ಬೃಹತ್ ಮೊತ್ತದ ಬಜೆಟ್, ದುಬಾರಿ ಬೆಲೆಯ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ...

ಅಪೌಷ್ಟಿಕತೆಯ ನೆರಳಲ್ಲಿ ಕಲ್ಯಾಣ ಕರ್ನಾಟಕ; ರಾಯಚೂರಿನ ಶೇ. 49.5 ಮಕ್ಕಳಲ್ಲಿ ಪೋಷಕಾಂಶದ ಕೊರತೆ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS 2023–24) ಕಲ್ಯಾಣ ಕರ್ನಾಟಕ...

ಬೆಂಗಳೂರು | ಪತ್ನಿ ಮೇಲೆ ಆಸಿಡ್ ಸುರಿದು, ಮಚ್ಚಿನಿಂದ ಹಲ್ಲೆಗೈದ ವಿಕೃತ ಪತಿ

ನಡುರಸ್ತೆಯಲ್ಲೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹೃದಯವಿದ್ರಾವಕ...