‘ಆಫ್ರಿಕನ್ ಜೈಂಟ್ ಹಾರ್ವೆಸ್ಟರ್’ (Messor cephalotes) ಎಂಬ ವಿಶೇಷ ಜಾತಿಯ ಇರುವೆ ಕತೆ ನಿಜಕ್ಕೂ ದಂಗುಬಡಿಸುತ್ತದೆ. ಈ ರಾಣಿ ಇರುವೆಯ ಬೆಲೆ ಅಂತಾರಾಷ್ಟ್ರೀಯ ಬ್ಲ್ಯಾಕ್ ಮಾರ್ಕೆಟ್‌ಗಳಲ್ಲಿ ಬರೋಬ್ಬರಿ ₹21,000 ದಿಂದ ₹25,000ದವರೆಗೂ ಇದೆ. ಆನೆ ದಂತ ಮತ್ತು ಚಿರತೆ ಚರ್ಮದ ಕಳ್ಳಸಾಗಣೆಯಷ್ಟೇ ಲಾಭದಾಯಕವಾದ ʼಬಯೋ-ಪೈರಸಿʼ (ಜೈವಿಕ ಕಳ್ಳತನ) ಒಂದು ದಂಧೆಯಾಗಿ ಮಾರ್ಪಟ್ಟಿರುವುದು ಆತಂಕಕಾರಿಯಾಗಿದೆ.
ಮನೆಯ ಮೂಲೆಗಳಲ್ಲಿ, ರಸ್ತೆ ಬದಿಗಳಲ್ಲಿ, ಹೊಲ-ಗದ್ದೆಗಳಲ್ಲಿ, ತಂಪು ನೆಲದಲ್ಲಿ, ಅಥವಾ ಮರ-ಗಿಡಗಳಲ್ಲಿ ಹರಿದಾಡುವ ಇರುವೆಗಳ ಕುರಿತು ನಮಗೆ ಯಾವತ್ತೂ ಅಚ್ಚರಿ ಎನಿಸುವುದಿಲ್ಲ. ಬಣ್ಣ ಗಾತ್ರದ ವ್ಯತ್ಯಾಸ ಹೊರತುಪಡಿಸಿ. ಆದರೆ, ಆಫ್ರಿಕಾದ ಕೀನ್ಯಾದಲ್ಲಿ ಕಂಡುಬರುವ ‘ಆಫ್ರಿಕನ್ ಜೈಂಟ್ ಹಾರ್ವೆಸ್ಟರ್’ (Messor cephalotes) ಎಂಬ ವಿಶೇಷ ಜಾತಿಯ ಇರುವೆ ಕತೆ ನಿಜಕ್ಕೂ ದಂಗುಬಡಿಸುತ್ತದೆ. ಈ ರಾಣಿ ಇರುವೆಯ ಬೆಲೆ ಅಂತಾರಾಷ್ಟ್ರೀಯ ಬ್ಲ್ಯಾಕ್ ಮಾರ್ಕೆಟ್‌ಗಳಲ್ಲಿ ಬರೋಬ್ಬರಿ ₹21,000 ದಿಂದ ₹25,000ಗಳವರೆಗೂ ಇದೆ. ಬೆಲೆ ಕೇಳಿ ಅತಿಶಯೋಕ್ತಿ ಎನಿಸಿದರೂ, ಇಂದು ಆನೆ ದಂತ ಮತ್ತು ಚಿರತೆ ಚರ್ಮದ ಕಳ್ಳಸಾಗಣೆಯಷ್ಟೇ ಲಾಭದಾಯಕವಾದ ʼಬಯೋ-ಪೈರಸಿʼ (ಜೈವಿಕ ಕಳ್ಳತನ) ದಂಧೆಯಾಗಿ ಮಾರ್ಪಟ್ಟಿರುವುದು ಆತಂಕ ಮೂಡಿಸಿದೆ.
ಕೀನ್ಯಾದ ರಿಫ್ಟ್ ವ್ಯಾಲಿಯ ‘ಗಿಲ್ಗಿಲ್’ ಎಂಬ ಪಟ್ಟಣ ಸದ್ಯ ಜಾಗತಿಕವಾಗಿ ಚರ್ಚೆಯ ಕೇಂದ್ರ ಬಿಂದು. ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಹುತ್ತಗಳಿಂದ ಇರುವೆಗಳ ದಂಡು ಹಾರುತ್ತಾ ಹೊರಬರುತ್ತದೆ. ರೆಕ್ಕೆಗಳಿರುವ ಗಂಡು ಇರುವೆಗಳು ರಾಣಿ ಇರುವೆಗಳೊಂದಿಗೆ ಸೇರಲು ಹುತ್ತಗಳನ್ನು ಬಿಟ್ಟು ಹಾರುತ್ತವೆ. ಆದರೆ, ಈ ನೈಸರ್ಗಿಕ ವಿದ್ಯಮಾನವನ್ನೇ ಬಂಡವಾಳ ಮಾಡಿಕೊಂಡಿರುವ ಒಂದು ದೊಡ್ಡ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲವು ಗಿಲ್ಗಿಲ್ ಪಟ್ಟಣದಲ್ಲಿ ಬೀಡುಬಿಟ್ಟು ತನ್ನ ಕಳ್ಳಕೆಲಸ ಮುಂದುವರೆಸಿದೆ.

ಈ ದಂಧೆ ಅತ್ಯಂತ ರಹಸ್ಯವಾಗಿ ನಡೆಯುತ್ತದಂತೆ. “ವಿದೇಶಿಯರು ಈ ಕೆಂಪು ರಾಣಿ ಇರುವೆಗಳಿಗೆ ದೊಡ್ಡ ಮೊತ್ತದ ಹಣ ನೀಡುತ್ತಾರೆ ಎಂಬ ವಿಷಯ ನನಗೆ ಸ್ನೇಹಿತನ ಮೂಲಕ ತಿಳಿಯಿತು. ನಾವು ಬೆಳಗಿನ ಜಾವ ಹೊಲಗಳಲ್ಲಿ ಹುತ್ತಗಳನ್ನು ಹುಡುಕಿ ಇರುವೆಗಳನ್ನು ಹಿಡಿಯುತ್ತಿದ್ದೆವು. ವಿದೇಶಿಯರು ಎಂದಿಗೂ ನೇರವಾಗಿ ಹೊಲಗಳಲ್ಲಿ ಬರುತ್ತಿರಲಿಲ್ಲ. ಅವರು ಟೌನ್‌ನ ಯಾವುದೋ ಗೆಸ್ಟ್ ಹೌಸ್ ಅಥವಾ ಕಾರಿನಲ್ಲಿ ಕುಳಿತು ನಮಗಾಗಿ ಕಾಯುತ್ತಿದ್ದರು. ನಾವು ಅವರು ನೀಡಿದ ಸಣ್ಣ ಟ್ಯೂಬ್ ಅಥವಾ ಸಿರಿಂಜ್‌ಗಳಲ್ಲಿ ಇರುವೆಗಳನ್ನು ತುಂಬಿ ಅವರಿಗೆ ತಲುಪಿಸುತ್ತಿದ್ದೆವು” ಎಂದು ಮಾಜಿ ಬ್ರೋಕರ್ ಒಬ್ಬ ಇದರ ಕರಾಳ ಮುಖ ಬಿಚ್ಚಿಟ್ಟಿದ್ದಾರೆ ಎಂದು ಬಿಬಿಸಿ ತನ್ನ ವರದಿಯೊಂದರಲ್ಲಿ ಉಲ್ಲೇಖಿಸಿದೆ.
ಕಳೆದ ವರ್ಷ ನೈವಾಶಾ ನಗರದ ಅತಿಥಿ ಗೃಹವೊಂದರಲ್ಲಿ ಸುಮಾರು 5,000 ಜೀವಂತ ರಾಣಿ ಇರುವೆಗಳನ್ನು ಕೀನ್ಯಾ ವೈಲ್ಡ್‌ಲೈಫ್ ಸರ್ವಿಸ್ (KWS) ಅಧಿಕಾರಿಗಳು ಪತ್ತೆಹಚ್ಚಿದಾಗ ಈ ದಂಧೆಯ ಭೀಕರತೆ ಬಯಲಿಗೆ ಬಂತು. ಬೆಲ್ಜಿಯಂ, ವಿಯೆಟ್ನಾಂ ಮತ್ತು ಕೀನ್ಯಾದ ಸಂಶಯಾಸ್ಪದ ವ್ಯಕ್ತಿಗಳು ಟೆಸ್ಟ್ ಟ್ಯೂಬ್ ಮತ್ತು ಸಿರಿಂಜ್‌ಗಳಲ್ಲಿ ತೇವಾಂಶವಿರುವ ಹತ್ತಿಯನ್ನು ಬಳಸಿ ಇರುವೆಗಳನ್ನು ಪ್ಯಾಕ್ ಮಾಡಿದ್ದರು. (ಹೀಗೆ ಮಾಡುವುದರಿಂದ ಇರುವೆಗಳು ಎರಡು ತಿಂಗಳ ಕಾಲ ಬದುಕಬಲ್ಲವು). ಈ ಆರೋಪಿಗಳಿಗೆ $7,700 (ಸುಮಾರು 6.4 ಲಕ್ಷ ರೂ.) ದಂಡ ಅಥವಾ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇತ್ತೀಚೆಗಷ್ಟೇ ನೈರೋಬಿ ವಿಮಾನ ನಿಲ್ದಾಣದಲ್ಲಿ ಚೀನಾ ಪ್ರಜೆಯೊಬ್ಬ 2,000 ಇರುವೆಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ. ಇವುಗಳನ್ನು ಮಕ್ಕಳ ಆಟಿಕೆಗಳು, ಬಟ್ಟೆಗಳ ಪಾರ್ಸೆಲ್, ಸಣ್ಣ ಕ್ಯಾಪ್ಸೂಲ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳ ನಡುವೆ ಬಚ್ಚಿಟ್ಟು ವಿಮಾನದ ಮೂಲಕ ರವಾನಿಸಲಾಗುತ್ತದೆ.
ಈ ಇರುವೆಗಳ ಬೆಲೆ ಇಷ್ಟೊಂದು ಹೆಚ್ಚಿರಲು ಪ್ರಮುಖ ಕಾರಣ ಯುರೋಪ್, ಅಮೆರಿಕ ಮತ್ತು ಚೀನಾದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಬೆಳೆದಿರುವ ʼಆಂಟ್ ಕೀಪಿಂಗ್ʼ (Ant Keeping) ಎಂಬ ವಿಚಿತ್ರ ಹವ್ಯಾಸ. ನಾಯಿ, ಬೆಕ್ಕು ಅಥವಾ ಪಕ್ಷಿಗಳನ್ನು ಸಾಕುವ ಬದಲಿಗೆ, ಇತ್ತೀಚಿನ ವರ್ಷಗಳಲ್ಲಿ ಇರುವೆಗಳನ್ನು ಸಾಕುವ ಕ್ರೇಜ್ ಹೆಚ್ಚಾಗಿದೆ. ಇದಕ್ಕಾಗಿ ಜನರು ತಮ್ಮ ಮನೆಗಳಲ್ಲಿ ʼಫಾರ್ಮಿಕೇರಿಯಂʼ ಎಂಬ ಅತ್ಯಾಧುನಿಕ ಗಾಜಿನ ಪೆಟ್ಟಿಗೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಈ ಪೆಟ್ಟಿಗೆಯ ಒಳಗೆ ಇರುವೆಗಳು ಹೇಗೆ ಗೂಡು ಕಟ್ಟುತ್ತವೆ, ಅವುಗಳ ಶಿಸ್ತುಬದ್ಧ ಜೀವನ ಕ್ರಮ ಹೇಗಿರುತ್ತದೆ, ಕೆಲಸಗಾರ ಇರುವೆಗಳ ಸಂವಹನ ಶೈಲಿ ಹೇಗಿರುತ್ತದೆ ಎಂಬುದನ್ನು ವೀಕ್ಷಿಸುವುದೇ ಇವರಿಗೆ ದೊಡ್ಡ ಮನರಂಜನೆ. ಅನೇಕರು ಇದನ್ನು ಒತ್ತಡ ನಿವಾರಕ ಎಂದು ನಂಬುತ್ತಾರೆ ಕೂಡ. ಇನ್ನು ಕೆಲವರು ಅಪರೂಪದ ಆಫ್ರಿಕನ್ ರಾಣಿ ಇರುವೆ ತಮ್ಮ ಮನೆಯಲ್ಲಿದೆ ಎಂದು ಹೇಳಿಕೊಂಡು ಬೀಗುವುದನ್ನೇ ಒಂದು ದೊಡ್ಡ ʼಸ್ಟೇಟಸ್ ಸಿಂಬಲ್ʼ ಎಂದು ಭಾವಿಸುತ್ತಾರೆ.
ಬ್ರಿಟನ್ ಮೂಲದ ʼಆಂಟ್ಸ್ ಆರ್ ಅಸ್ʼ (Ants R Us) ಎಂಬ ಕಂಪನಿಯು ಈ ಆಫ್ರಿಕನ್ ಹಾರ್ವೆಸ್ಟರ್ ಇರುವೆಗಳನ್ನು ʼಅನೇಕರ ಕನಸಿನ ಪ್ರಭೇದʼ (Dream species) ಎಂದು ಬಣ್ಣಿಸಿದೆ. ಇವು ಗಾತ್ರದಲ್ಲಿ ದೊಡ್ಡದಾಗಿರುತ್ತವೆ (ಸುಮಾರು 25 ಮಿಮೀ), ಆಕರ್ಷಕ ಕೆಂಪು ಬಣ್ಣ ಹೊಂದಿರುತ್ತವೆ ಮತ್ತು ಇವುಗಳು ಬೀಜಗಳನ್ನು ಸಂಗ್ರಹಿಸುವ ಶಿಸ್ತುಬದ್ಧ ರೀತಿ ಇರುವೆ ಪ್ರೇಮಿಗಳನ್ನು ಸೆಳೆಯುತ್ತದೆ. ಇವು ಹೆಚ್ಚು ಆಕ್ರಮಣಕಾರಿಯಲ್ಲದ ಕಾರಣ ಸಾಕುವುದೂ ಸುಲಭ.
ಹಾರ್ವೆಸ್ಟರ್ ಇರುವೆಗಳ ಜೀವನ ಕ್ರಮವೂ ಅತ್ಯಂತ ಕುತೂಹಲಕಾರಿ. ಇವು ಬೇರೆ ಇರುವೆಗಳಂತೆ ಕೀಟಗಳನ್ನು ಭೇಟೆಯಾಡುವುದಕ್ಕಿಂತ ಹೆಚ್ಚಾಗಿ ಕಾಡಿನ ಬೀಜಗಳನ್ನು ಸಂಗ್ರಹಿಸುತ್ತವೆ. ಈ ಇರುವೆಗಳು ಸಂಗ್ರಹಿಸಿದ ಬೀಜಗಳನ್ನು ತಮ್ಮ ಗೂಡಿನ ಒಳಗೆ ವಿಶೇಷ ಕೋಣೆಗಳಲ್ಲಿ ಶೇಖರಿಸಿಟ್ಟು, ಅವುಗಳನ್ನು ಅಗಿದು ತಮ್ಮ ಲಾಲಾರಸದೊಂದಿಗೆ ಬೆರೆಸಿ ʼಆಂಟ್ ಬ್ರೆಡ್ʼ ತಯಾರಿಸುತ್ತವೆ. ಇದೇ ಇಡೀ ವಸಾಹತಿನ ಆಹಾರದ ಮೂಲ. ಈ ಸಾಮ್ರಾಜ್ಯದಲ್ಲಿ ಬೃಹತ್ ತಲೆ ಮತ್ತು ದವಡೆಗಳನ್ನು ಹೊಂದಿರುವ ಸೈನಿಕ ಇರುವೆಗಳು ರಕ್ಷಣೆಯ ಕೆಲಸ ಮಾಡಿದರೆ, ಕೆಲಸಗಾರ ಇರುವೆಗಳು ನಿರಂತರವಾಗಿ ಶ್ರಮಿಸುತ್ತವೆ. ಇಡೀ ವಸಾಹತಿನ ಕೇಂದ್ರಬಿಂದುವಾಗಿರುವ ರಾಣಿ ಇರುವೆ ಸುಮಾರು 15 ರಿಂದ 20 ವರ್ಷಗಳ ಕಾಲ ಬದುಕಬಲ್ಲ ದೀರ್ಘಾಯುಷಿ. ಈ ಕಾರಣಕ್ಕಾಗಿಯೇ ಇರುವೆ ಪ್ರೇಮಿಗಳಲ್ಲಿ ಈ ಪ್ರಭೇದಕ್ಕೆ ಅತೀವ ಬೇಡಿಕೆಯಿದೆ.

ಜೀವವಿಜ್ಞಾನಿ ಡಿನೋ ಮಾರ್ಟಿನ್ಸ್ ಅವರ ಪ್ರಕಾರ, ಈ ಇರುವೆಗಳ ಗೂಡುಗಳು 50 ರಿಂದ 70 ವರ್ಷಗಳವರೆಗೆ ಬದುಕಬಲ್ಲವು! ಅಂದರೆ ರಾಣಿ ಇರುವೆಯೂ ಅಷ್ಟು ಕಾಲ ಬದುಕುತ್ತಾಳೆ. ನೈರೋಬಿಯ ಸಮೀಪವಿರುವ ಕೆಲವು ಹುತ್ತಗಳನ್ನು ತಾವು ಕಳೆದ 40 ವರ್ಷಗಳಿಂದ ಗಮನಿಸುತ್ತಿದ್ದು, ಅವು ಇಂದಿಗೂ ಸಕ್ರಿಯವಾಗಿವೆ ಎಂದು ಅವರು ಹೇಳುತ್ತಾರೆ. ಒಮ್ಮೆ ಹಾರಾಟ ನಡೆಸಿ ಗಂಡು ಇರುವೆಗಳಿಂದ ಗರ್ಭಧರಿಸಿದ ರಾಣಿ ಇರುವೆ, ತನ್ನ ಜೀವಿತಾವಧಿಯುದ್ದಕ್ಕೂ ಮೊಟ್ಟೆ ಇಡುತ್ತಾ ಲಕ್ಷಾಂತರ ಇರುವೆಗಳ ಸಾಮ್ರಾಜ್ಯವನ್ನು ಕಟ್ಟಬಲ್ಲಳು. ಅವಳು ಸತ್ತ ತಕ್ಷಣ ಇಡೀ ವಸಾಹತು ನಾಶವಾಗುತ್ತದೆ. ಈ ದೀರ್ಘಾಯುಷ್ಯವೇ ಇವುಗಳಿಗೆ ಇರುವ ಬೇಡಿಕೆಗೆ ಮುಖ್ಯ ಕಾರಣ ಎನ್ನುತ್ತದೆ ವರದಿ.
ಕೀನ್ಯಾದಲ್ಲಿ ಸುಮಾರು 600 ಬಗೆಯ ಇರುವೆಗಳಿದ್ದು, ಹಾರ್ವೆಸ್ಟರ್ ಇರುವೆಗಳು ಪರಿಸರ ವ್ಯವಸ್ಥೆಯ ʼಎಂಜಿನಿಯರ್ʼಗಳಿದ್ದಂತೆ. ಇವುಗಳು ಬೀಜಗಳನ್ನು ಹರಡುವ ಮೂಲಕ ಹುಲ್ಲುಗಾವಲುಗಳು ಫಲವತ್ತಾಗಿ ಬೆಳೆಯಲು ಸಹಾಯ ಮಾಡುತ್ತವೆ. ಇವುಗಳನ್ನು ಅತಿಯಾಗಿ ಹಿಡಿಯುವುದರಿಂದ ಇಡೀ ಪರಿಸರ ಸಮತೋಲನ ಕಳೆದುಕೊಳ್ಳುತ್ತದೆ. ಮತ್ತೊಂದೆಡೆ, ಸಿಚುವಾನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಝೆಂಗ್‌ಯಾಂಗ್ ವಾಂಗ್ ಅವರ ಪ್ರಕಾರ, ಈ ವಿದೇಶಿ ಇರುವೆಗಳು ಚೀನಾದಂತಹ ದೇಶಗಳಿಗೆ ಸೇರಿದರೆ ಅಲ್ಲಿನ ಕೃಷಿ ವ್ಯವಸ್ಥೆಯನ್ನೇ ನಾಶಪಡಿಸಬಹುದು. ಚೀನಾದಲ್ಲಿ ಧಾನ್ಯಗಳನ್ನೇ ಪ್ರಮುಖವಾಗಿ ಬೆಳೆಯುವುದರಿಂದ, ಈ ʼಸೀಡ್ ಹಾರ್ವೆಸ್ಟರ್ʼ ಇರುವೆಗಳು ಅಲ್ಲಿನ ಆಹಾರ ಭದ್ರತೆಗೆ ದೊಡ್ಡ ಕಂಟಕವಾಗಬಹುದು.
ಒಂದು ಗೂಡಿನಲ್ಲಿ ಕೇವಲ ಒಬ್ಬಳೇ ರಾಣಿ ಇರುವೆ ಇರುವುದರಿಂದ, ಆಕೆಯನ್ನು ಹಿಡಿದು ಸಾಗಿಸಿದ ಕೂಡಲೇ ಇಡೀ ಇರುವೆ ಸಾಮ್ರಾಜ್ಯ ನಾಶವಾಗುತ್ತದೆ. ಇರುವೆಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಮತ್ತು ಬೀಜ ಪ್ರಸರಣದ ಮೂಲಕ ಕಾಡು ಬೆಳೆಯಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಸಂಖ್ಯೆ ಕ್ಷೀಣಿಸಿದರೆ ಸ್ಥಳೀಯ ಕೃಷಿ ಮತ್ತು ಅರಣ್ಯ ನಾಶವಾಗುವ ಭೀತಿ ಇದೆ. ಮಿಗಿಲಾಗಿ, ಈ ವಿದೇಶಿ ಇರುವೆಗಳು ಬೇರೆ ದೇಶದ ಪರಿಸರಕ್ಕೆ ಸೇರಿದಾಗ ಅಲ್ಲಿನ ಸ್ಥಳೀಯ ಕೀಟಗಳನ್ನು ಹತೋಟಿ ಮೀರಿ ಕೊಂದು ಹಾಕಬಹುದು. ಇದನ್ನು ಪರಿಸರ ವಿಜ್ಞಾನದಲ್ಲಿ ‘ಇನ್ವೇಸಿವ್ ಸ್ಪೀಸಿಸ್’ ಎನ್ನಲಾಗುತ್ತದೆ, ಇದು ಆಯಾ ದೇಶದ ಜೀವವೈವಿಧ್ಯಕ್ಕೆ ದೊಡ್ಡ ಕಂಟಕಪ್ರಾಯವಾಗಬಹುದು.
ಪ್ರಸ್ತುತ ಇರುವೆಗಳು ಅಂತಾರಾಷ್ಟ್ರೀಯ ವನ್ಯಜೀವಿ ಒಪ್ಪಂದದ (CITES) ಅಡಿಯಲ್ಲಿ ರಕ್ಷಿಸಲ್ಪಟ್ಟಿಲ್ಲ. ಆದರೆ, ಕೀನ್ಯಾ ಸರ್ಕಾರವು ಈಗ ಎಚ್ಚೆತ್ತುಕೊಂಡಿದ್ದು, ಈ ʼಜೈವಿಕ ಲೂಟಿʼಯನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದೆ. ಮತ್ತೊಂದೆಡೆ, ಪತ್ರಕರ್ತ ಚಾರ್ಲ್ಸ್ ಒನ್ಯಾಂಗೊ-ಒಬೊ ಅವರಂತಹ ತಜ್ಞರು, ಇವುಗಳನ್ನು ಕದ್ದ ವಸ್ತುಗಳಂತೆ ನೋಡುವ ಬದಲು ಸರ್ಕಾರವೇ ಲೈಸೆನ್ಸ್ ನೀಡಿ ʼಇರುವೆ ಕೃಷಿʼ (Ant Farming) ಉತ್ತೇಜಿಸಿದರೆ ಸ್ಥಳೀಯರಿಗೆ ದೊಡ್ಡ ಆದಾಯ ತರಬಹುದು ಎಂದು ವಾದಿಸುತ್ತಿದ್ದಾರೆ.

ಇದನ್ನೂ ಓದಿ: ಸಾವೇ ಇಲ್ಲದ ‘ಜೆಲ್ಲಿಫಿಶ್’ ಎಂಬ ಜೈವಿಕ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು?
ಕೀನ್ಯಾ ಸರ್ಕಾರ ಕಳೆದ ವರ್ಷ ವನ್ಯಜೀವಿ ಆರ್ಥಿಕತೆಯನ್ನು ವಾಣಿಜ್ಯೀಕರಣಗೊಳಿಸುವ ಮಾರ್ಗಸೂಚಿಗಳನ್ನು ಅನುಮೋದಿಸಿದ್ದು, ಭವಿಷ್ಯದಲ್ಲಿ ಗಿಲ್ಗಿಲ್‌ನ ರೈತರು ತಮ್ಮ ಹೊಲಗಳಲ್ಲಿ ಇರುವೆಗಳನ್ನು ಸಾಕುವ ಮೂಲಕ ಶ್ರೀಮಂತರಾಗುವ ಸಾಧ್ಯತೆಯೂ ಇದೆ.
ಒಣ ಶೋಕಿವಾಲಾ ಮನುಷ್ಯನಿಗೆ ಆನೆಯಾದರೂ ಸರಿ, ಇರುವೆಯಾದರೂ ಸರಿ! ಇವನ ವಿಚಿತ್ರ ಹವ್ಯಾಸಗಳು ಮತ್ತು ಹಣದ ದಾಹಕ್ಕೆ ಇಂದು ಭೂಮಿಯ ಅತ್ಯಂತ ಸಣ್ಣ ಜೀವಿಗಳೂ ಬಲಿಯಾಗುತ್ತಿರುವುದು ಅತ್ಯಂತ ವಿಷಾದನೀಯ. ʼಇರುವೆ ಕೃಷಿʼಯಂತಹ ವಾಣಿಜ್ಯೀಕರಣದ ಆಲೋಚನೆಗಳು ಒಂದು ವರ್ಗಕ್ಕೆ ಲಾಭದಾಯಕವಾಗಿ ಎನಿಸಿದರೂ ಜಾಗತಿಕ ಜೀವವೈವಿಧ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಪ್ರಕೃತಿಯ ಸರಪಳಿಯಲ್ಲಿ ಪ್ರತಿ ಸಣ್ಣ ಜೀವಿಯೂ ಒಂದು ಮುಖ್ಯ ಕೊಂಡಿ ಎಂಬುದನ್ನು ಅರಿತು, ಇಂತಹ ಅಕ್ರಮ ʼಜೈವಿಕ ಲೂಟಿʼಗೆ ಜಾಗತಿಕ ಮಟ್ಟದಲ್ಲಿ ಕಡಿವಾಣ ಬೀಳಬೇಕಿದೆ.




