ಬಾಗಲಕೋಟೆಯಲ್ಲಿ ಲಿಂಗಾಯತ ಮತಗಳ ಪ್ರಬಲತೆ, ಕುರುಬ ಸಮುದಾಯದ ಸಾಂದ್ರತೆ ಮತ್ತು ಸ್ಥಳೀಯ ಕುಟುಂಬಗಳ ಪ್ರಭಾವವು ರಾಜಕೀಯ ನಾಯಕರಿಗೆ 'ಸುರಕ್ಷಿತ' ಆಶ್ರಯ ನೀಡುತ್ತವೆ. ಇಲ್ಲಿ ಗೆದ್ದರೆ ರಾಜ್ಯ ಮಟ್ಟದ ರಾಜಕೀಯಕ್ಕೆ ಏಣಿ; ಸೋತರೆ ಮುಂದಿನ ಪಯಣಕ್ಕೆ ಬಲ ನೀಡುತ್ತದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಏಪ್ರಿಲ್ 9ರಂದು ನಡೆಯುವ ಉಪಚುನಾವಣೆ ಕೇವಲ ಒಂದು ಸೀಟಿನ ಗೆಲುವು-ಸೋಲು ಮಾತ್ರವಲ್ಲ. ಇದು ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಒಂದು ಅಪರೂಪದ ಅಧ್ಯಾಯ. ಈ ಜಿಲ್ಲೆಯ ನೆಲ ಐವರು ಮುಖ್ಯಮಂತ್ರಿಗಳ ರಾಜಕೀಯ ಬದುಕಿನ ಹಣೆಬರೆಹವನ್ನೇ ಬರೆದಿದೆ.
ಒಂದು ಕಾಲದಲ್ಲಿ ಸುರಕ್ಷಿತ ಕ್ಷೇತ್ರವಾಗಿ, ಮತ್ತೊಂದು ಬಾರಿ ರಾಜಕೀಯ ಪುನರುಜ್ಜೀವನಕ್ಕೆ ವೇದಿಕೆಯಾಗಿ, ಬಾಗಲಕೋಟೆ ಜಿಲ್ಲೆಯ ಮತದಾರರು ಐವರು ಮುಖ್ಯಮಂತ್ರಿಗಳ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಈಗ ಹುಲ್ಲಪ್ಪ ಮೇಟಿ ಅವರ ನಿಧನದಿಂದ ಖಾಲಿಯಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆ ಇತಿಹಾಸ ಮತ್ತೊಮ್ಮೆ ಪುನರಾವರ್ತನೆಯಾಗುತ್ತಿದೆ.
ಬಾಗಲಕೋಟೆ: ಐವರು ಸಿಎಂಗಳ ರಾಜಕೀಯ ಗುರುಕ್ಷೇತ್ರ
ಉತ್ತರ ಕರ್ನಾಟಕದಲ್ಲಿ ಬಾಗಲಕೋಟೆ ಜಿಲ್ಲೆಗೆ ಮಾತ್ರ ಐವರು ಮುಖ್ಯಮಂತ್ರಿಗಳ ರಾಜಕೀಯ ಜೀವನದಲ್ಲಿ ಪ್ರಮುಖ ಪಾತ್ರವಿದೆ. ಇದು ಕೇವಲ ಆಕಸ್ಮಿಕವಲ್ಲ, ಜಿಲ್ಲೆಯ ಲಿಂಗಾಯತ-ಕುರುಬ-ಇತರ ಸಮುದಾಯಗಳ ಸಮತೋಲನ, ರಾಜಕೀಯ ಕುಟುಂಬಗಳ ಪ್ರಭಾವ ಮತ್ತು ಮತದಾರರ ಬುದ್ಧಿವಂತಿಕೆಯ ಫಲಿತಾಂಶ.
1962ರ ಉಪಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಅವರು ಬಾಗಲಕೋಟೆಯಿಂದ ಸ್ಪರ್ಧಿಸಿ ಗೆದ್ದು, ತಮ್ಮ ರಾಜಕೀಯ ಬದುಕಿಗೆ ಹೊಸ ಜೀವ ತುಂಬಿಕೊಂಡಿದ್ದರು. ತಮ್ಮ ಸ್ವಂತ ಜಿಲ್ಲೆಯಾದ ಬಳ್ಳಾರಿಯಲ್ಲಿ ವಿರೋಧಿಗಳಿಂದ ಪ್ರಬಲ ಸವಾಲು ಎದುರಿಸುತ್ತಿದ್ದ ಅವರಿಗೆ ಬಾಗಲಕೋಟೆ ಮತದಾರರು ರಕ್ಷಾ ಕವಚವಾದರು. ಅವರು ಮುಖ್ಯಮಂತ್ರಿಯಾಗಿ ಕರ್ನಾಟಕದ ರಾಜಕೀಯವನ್ನೇ ಬದಲಾಯಿಸಿದರು.
ಬಾಗಲಕೋಟೆಗೆ ನಿಜಲಿಂಗಪ್ಪನವರ ಪ್ರಮುಖ ಕೊಡುಗೆಗಳು:
ಎಸ್. ನಿಜಲಿಂಗಪ್ಪನವರು ಬಾಗಲಕೋಟೆ ಜಿಲ್ಲೆಯ, ಅದರಲ್ಲೂ ವಿಶೇಷವಾಗಿ ನವನಗರದ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ತುಂಗಭದ್ರಾ ಅಣೆಕಟ್ಟಿನ ಯೋಜನೆಗಳನ್ನು ತ್ವರಿತಗೊಳಿಸಿ ಬಾಗಲಕೋಟೆ ಭಾಗದ ಭೂಮಿಗೆ ನೀರುಣಿಸಲು, ಕೃಷಿಕರ ಬಾಳು ಬೆಳಗಲು ಕಾರಣರಾದರು.
- ನವನಗರ ನಿರ್ಮಾಣ: ಕೃಷ್ಣಾ ನದಿ ಪ್ರವಾಹದಿಂದ ಹಳೆಯ ಬಾಗಲಕೋಟೆ ನಗರ ಸಂಕಷ್ಟಕ್ಕೀಡಾಗಿದ್ದಾಗ, ಉನ್ನತ ಮಟ್ಟದಲ್ಲಿ ಯೋಜನೆ ರೂಪಿಸಿ ಆಧುನಿಕ ಸೌಲಭ್ಯಗಳ ನವನಗರವನ್ನು ನಿರ್ಮಿಸಲು ತಳಪಾಯ ಹಾಕಿದರು.
- ನೀರಾವರಿ ಯೋಜನೆಗಳು: ಬಾಗಲಕೋಟೆ ಜಿಲ್ಲೆಯ ಕೃಷಿಭೂಮಿಗೆ ನೀರು ಒದಗಿಸಲು ತುಂಗಭದ್ರಾ ಮೇಲ್ದಂಡೆ ಯೋಜನೆ ಮತ್ತು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು.
- ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳು: ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ನೀಡಿದರು. ಇದರಲ್ಲಿ ಎಸ್‌ಎನ್ ಮೆಡಿಕಲ್ ಕಾಲೇಜು ಪ್ರಮುಖವಾಗಿದೆ.
- ಸಾರಿಗೆ ಮತ್ತು ಮೂಲಸೌಕರ್ಯ: ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ(ವಿಜಯಪುರ) ಮತ್ತು ಬಾಗಲಕೋಟೆ ನಡುವಿನ ಸಂಪರ್ಕ ವೃದ್ಧಿಸಲು ರಸ್ತೆ ಮೂಲಸೌಕರ್ಯ ಅಭಿವೃದ್ಧಿಪಡಿಸಿದರು.
ಅವರ ಆಡಳಿತದ ಅವಧಿಯಲ್ಲಿ ಬಾಗಲಕೋಟೆ ಒಂದು ಪ್ರಮುಖ ಕೃಷಿ ಮತ್ತು ವ್ಯಾಪಾರ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಅಡಿಪಾಯ ಹಾಕಲಾಯಿತು.
ಇನ್ನುಬಿ.ಡಿ. ಜತ್ತಿಯವರು 1958ರಲ್ಲಿ ಜಮಖಂಡಿಯಿಂದ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದರು. ಸಚಿವರಾದರು. ಬಾಗಲಕೋಟೆ ಜಿಲ್ಲೆಯ ಭಾಗವಾದ ಜಮಖಂಡಿ ಅವರ ರಾಜಕೀಯ ಪಯಣಕ್ಕೆ ಮೊದಲ ಹೆಜ್ಜೆಯಾಯಿತು. ನಂತರ ಅವರು ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದರು.
1962ರಲ್ಲಿ ಮಹಾಚುನಾವಣೆ ನಡೆಯಿತು. ಅದರಲ್ಲಿ ಬಿ.ಡಿ ಜತ್ತಿಯವರು ಮತ್ತೆ ಜಮಖಂಡಿ ಮತಕ್ಷೇತ್ರದಿಂದ ಮೈಸೂರು ರಾಜ್ಯ ವಿಧಾನಸಭೆಗೆ ಆರಿಸಿ ಬಂದರು. ಎಸ್. ನಿಜಲಿಂಗಪ್ಪನವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಿಂದ ಚುನಾವಣೆಗೆ ನಿಂತು ಸೋತರು. ಆದರೆ ಕಾಂಗ್ರೆಸ ಪಕ್ಷಕ್ಕೆ ಬಹುಮತ ದೊರಕಿತು. ಕಾಂಗ್ರೆಸ್ ಪಕ್ಷದ ಶಾಸಕರ ಸಭೆಯಲ್ಲಿ ಜತ್ತಿಯವರ ಸ್ನೇಹಿತರಾದ ಎಸ್.ಆರ್ ಕಂಠಿಯವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಜತ್ತಿಯವರು ಶಾಸಕರಾಗಿದ್ದುಕೊಂಡೇ ತಮ್ಮ ಮತಕ್ಷೇತ್ರದ ಜಮಖಂಡಿಯಲ್ಲಿ ಕಾಲೇಜನ್ನು ತೆರೆಯುವ ಬಗ್ಗೆ ಶ್ರಮಿಸಿದರು.
ಮುಖ್ಯಮಂತ್ರಿಯಾದ ನಂತರ, ಜತ್ತಿಯವರು ಹಲವಾರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದರು. ಅಕ್ಟೋಬರ್ 1968ರಿಂದ ನವೆಂಬರ್ 1972ರವರೆಗೆ, ಅವರು ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದರು.
ನವೆಂಬರ್ 1972ರಲ್ಲಿ, ಜತ್ತಿ ಅವರನ್ನು ಒರಿಸ್ಸಾದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. 1973ರ ಮಾರ್ಚ್‌ನಲ್ಲಿ ಒರಿಸ್ಸಾ ರಾಜ್ಯ ಸರ್ಕಾರ ರಾಜೀನಾಮೆ ನೀಡಿತು. ಹೊಸ ಸರ್ಕಾರ ರಚಿಸಲು ಸಾಕಷ್ಟು ಬೆಂಬಲವಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿಕೊಂಡರೂ ಕೂಡ ಜತ್ತಿಯವರು ವಿಧಾನಸಭೆ ಅಧಿವೇಶನವನ್ನು ಮೊಟಕುಗೊಳಿಸಲು ನಿರ್ಧರಿಸಿದರು. ನಂತರ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಇದು ಮಾರ್ಚ್ 1974ರವರೆಗೆ ನಡೆಯಿತು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಜತ್ತಿಯವರು 1974ರ ಆಗಸ್ಟ್‌ನಲ್ಲಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಅವರು ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆದ್ದರು. ಆಗಸ್ಟ್ 31ರಂದು ಭಾರತದ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು 1977ರ ಫೆಬ್ರವರಿ 11ರಂದು ನಿಧನರಾದಾಗ, ಅದೇ ದಿನ ಜತ್ತಿಯವರು ಭಾರತದ ಹಂಗಾಮಿ ರಾಷ್ಟ್ರಪತಿಯಾದರು. 1977ರ ಚುನಾವಣೆಯಲ್ಲಿ ಆಡಳಿತ ಪಕ್ಷ ಸೋತ ನಂತರ, ಜತ್ತಿಯವರು ನಿರ್ಗಮಿತ ಪ್ರಧಾನಿಯನ್ನು ತಾತ್ಕಾಲಿಕ ನಾಯಕರಾಗಿ ಮುಂದುವರಿಯುವಂತೆ ಕೇಳಿಕೊಂಡರು. ಅವರು 1977ರ ಮಾರ್ಚ್ 21 ಭಾರತದಲ್ಲಿ ‘ತುರ್ತು ಪರಿಸ್ಥಿತಿ’ ಅವಧಿಯನ್ನು ಸಹ ಕೊನೆಗೊಳಿಸಿದರು. ನಂತರ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾದಾಗ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಏಪ್ರಿಲ್ 1977ರಲ್ಲಿ, ಹೊಸ ಸರ್ಕಾರವು ಹಿಂದಿನ ಪಕ್ಷದ ಆಳ್ವಿಕೆಯಲ್ಲಿದ್ದ ಹಲವಾರು ರಾಜ್ಯಗಳಲ್ಲಿನ ಸರ್ಕಾರಗಳನ್ನು ವಜಾಗೊಳಿಸಲು ಸೂಚಿಸಿತು. ಜತ್ತಿಯವರು ಒಂದು ದಿನ ಕಾಲಾವಕಾಶ ಪಡೆದು ನಂತರ ಒಪ್ಪಿಕೊಂಡರು. ಅವರು ಒಂಬತ್ತು ರಾಜ್ಯಗಳಲ್ಲಿನ ಸರ್ಕಾರಗಳನ್ನು ವಜಾಗೊಳಿಸಿದರು. ಜತ್ತಿ ಅವರ ನಂತರ 1977ರ ಜುಲೈ 25ರಂದು ನೀಲಂ ಸಂಜೀವ ರೆಡ್ಡಿ ಅವರು ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು.
ಎಸ್ ಆರ್ ಕಂಠಿಯವರು 1956ರಿಂದ 1962ರವರೆಗೆ ಕರ್ನಾಟಕ ವಿಧಾನಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿದರು. 1962ರಲ್ಲಿ ಹುನಗುಂದದಿಂದ ಗೆದ್ದು ಮುಖ್ಯಮಂತ್ರಿಯಾದರು. ಕಂಠಿಯವರು 1962ರಲ್ಲಿ 92 ದಿನಗಳ ಅಲ್ಪಾವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಆಡಳಿತ ಕಾಲವು ಕೆಲವು ತಿಂಗಳುಗಳಷ್ಟೇ ಆದರೂ, ಬಾಗಲಕೋಟೆ ಜಿಲ್ಲೆಯ ಹುನಗುಂದದ ಮತದಾರರು ಅವರ ಹಣೆಬರೆಹ ಬದಲು ಮಾಡಿದರು.
ಆಗಿನ ಮುಂಬಯಿ ಸರ್ಕಾರ ಹಾಗೂ ಶಾಸಕಾಂಗ, ಹಿಂದುಳಿದವರ ಶಿಕ್ಷಣ, ಕೃಷಿ ಹಾಗೂ ಸಮಾಜ ಕಲ್ಯಾಣ, ಇತ್ಯಾದಿ ಪ್ರಮುಖ ಇಲಾಖೆಗಳಲ್ಲಿ ಹೊಸ ಹೊಸ ಸುಧಾರಣೆಗಳನ್ನು ತರುವಲ್ಲಿ ವೈಶಿಷ್ಟ್ಯ ಪೂರ್ಣವಾದ ಕಾಯ್ದೆ ಕಾನೂನು ರೂಪಿಸುವಲ್ಲಿ ದೇಶದಲ್ಲಿಯೇ ಮಹತ್ವದ ಸ್ಥಾನ ಗಳಿಸಿಕೊಂಡಿತ್ತು. ಆ ಒಂದು ಅಪೂರ್ವ ವಾತಾವರಣದ ಸಂಪೂರ್ಣ ಲಾಭವನ್ನು ಕಂಠಿಯವರು ಪಡೆದರು. ಸ್ವತಃ ಕಾನೂನು ಪದವೀಧರರಾದುದರಿಂದ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸುವುದು ಅವರಿಗೆ ಕಷ್ಟವಾಗಲಿಲ್ಲ. ವಿಧಾನಸಭೆಯ ನಡವಳಿಗಳನ್ನು ನೋಡಿಕೊಳ್ಳುವುದರಲ್ಲಿ ಬಹಳ ಬಿಗಿ ಎಂದು ಹೆಸರು ಪಡೆದು ತುಂಬ ಯಶಸ್ವಿಯಾಗಿ ತಮ್ಮ ಕಾರ್ಯ ನಿರ್ವಹಿಸಿ ಅಲ್ಲಿಯ ರೀತಿ ನೀತಿಗಳಿಗೆ, ಪರಂಪರೆಗೆ ತಮ್ಮ ಕಾಣಿಕೆಯನ್ನೂ ನೀಡುವಲ್ಲಿ ಸಫಲರಾದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇವರು 1991ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಅವರ ಗೆಲುವು ನಿಶ್ಚಿತವೆಂದೇ ಭಾವಿಸಲಾಗಿತ್ತು. ಆದರೆ, 1990ರ ದಶಕದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ಅವರು ಅನಿರೀಕ್ಷಿತವಾಗಿ ಹೆಗಡೆಯವರನ್ನು ಸೋಲಿಸಿ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬೃಹತ್ ಜಯ ದಾಖಲಿಸಿದ್ದರು. ಸಿದ್ದು ನ್ಯಾಮಗೌಡ ಅವರಿಂದ ಸೋತರೂ, ಜಿಲ್ಲೆಯ ರಾಜಕೀಯ ಅನುಭವ ಅವರ ರಾಷ್ಟ್ರೀಯ ಮಟ್ಟದ ಪಯಣಕ್ಕೆ ಸಂಪರ್ಕ ಸೇತುವೆಯಾಯಿತು. ನಂತರ ರಾಜ್ಯಸಭೆ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು.
ರಾಮಕೃಷ್ಣ ಹೆಗಡೆಯವರು 1983 ಮತ್ತು 1988ರ ನಡುವೆ ಮೂರು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಜಾರಿ ಮಾಡಲು ಹೊರಟ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಗಡೆಯವರ ಮಾದರಿಯೇ ಪ್ರೇರಣೆಯಾಗಿತ್ತು
ಪ್ರಸ್ತುತ ಸಿಎಂ ಸಿದ್ದರಾಮಯ್ಯ ಅವರು 2018ರಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಸ್ಪರ್ಧಿಸಿ ಗೆದ್ದು ರಾಜಕೀಯ ಪುನರುಜ್ಜೀವನ ಪಡೆದರು. ರಾಜ್ಯದ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಿದರು. ಮೈಸೂರು ಜಿಲ್ಲೆಯಲ್ಲಿ ವಿರೋಧ ಎದುರಿಸುತ್ತಿದ್ದ ಅವರಿಗೆ ಬಾಗಲಕೋಟೆ ಜಿಲ್ಲೆಯ ಕುರುಬ ಸಮುದಾಯದ ಬೆಂಬಲವು ದೊಡ್ಡ ಆಧಾರವಾಯಿತು.
ಸಿದ್ದರಾಮಯ್ಯನವರು 2023ರಂದು ಕೋಲಾರ ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೆ ಬಾದಾಮಿ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ, ಆಪ್ತರಿಗೆ, ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದು ಮನವೊಲಿಕೆಗೆ ಮುಂದಾಗಿದ್ದರು. ಈ ವೇಳೆ, “ಸಿದ್ದರಾಮಯ್ಯನವರು ಬಾದಾಮಿ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಸುಮಾರು 3 ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದರು. ರಸ್ತೆ, ಕುಡಿಯುವ ನೀರು, ನೀರಾವರಿ ಹಾಗೂ ಏತ ನೀರಾವರಿ ಯೋಜನೆ ಸೇರಿದಂತೆ ಐತಿಹಾಸಿಕ ಸ್ಥಳದ ಅಭಿವೃದ್ಧಿಗಾಗಿಯೂ ಕೆಲ ಯೋಜನೆಗಳನ್ನು ತರುವುದಕ್ಕಾಗಿ ಸರ್ಕಾರದ ಮುಖ್ಯಮಂತ್ರಿ ಹಾಗೂ ಆಯಾ ಇಲಾಖೆಯ ಸಚಿವರ ಮೇಲೆ ಒತ್ತಡ ತಂದು ಕೆಲಸ ಮಾಡಿಸಿದ್ದರು. ಹೀಗಾಗಿ ಈ ಭಾರಿಯು ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ಜಯ ಗಳಿಸಿದರೆ, ಮುಂದೆ ಮುಖ್ಯಮಂತ್ರಿಯಾಗುತ್ತಾರೆ. ಆಗ ಇಡೀ ಕ್ಷೇತ್ರದ ಚಿತ್ರಣವೇ ಬದಲಾವಣೆಯಾಗುತ್ತದೆ” ಎಂದು ಅಭಿಮಾನಿಗಳು ಹಾಗೂ ಆಪ್ತರು ಹೆಚ್ಚು ಆಸೆ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯನವರು ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದು, ಈ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಈ ಐವರ ರಾಜಕೀಯ ಪಯಣದಲ್ಲಿ ಬಾಗಲಕೋಟೆ ಜಿಲ್ಲೆಯು ಕೇವಲ ಒಂದು ಕ್ಷೇತ್ರವಲ್ಲ, ಅದು ‘ರಾಜಕೀಯ ಗುರುಕ್ಷೇತ್ರ’. ಇಲ್ಲಿನ ಮತದಾರರು ನಾಯಕರ ಹಣೆಬರೆಹ ಬರೆದಿದ್ದಾರೆ. ಇಲ್ಲಿ ಕುಟುಂಬ ರಾಜಕಾರಣ, ಸಮುದಾಯ ಸಮೀಕರಣ ಮತ್ತು ಮತದಾರರ ಬುದ್ಧಿಮತ್ತೆ ಒಟ್ಟಾಗಿ ಕೆಲಸ ಮಾಡುತ್ತವೆ. ಈಗಿನ ಉಪಚುನಾವಣೆಯಲ್ಲಿ ಈ ಇತಿಹಾಸ ಮತ್ತೊಮ್ಮೆ ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆಯ ನೆಲ ರಾಜಕೀಯದಲ್ಲಿ ಯಾವಾಗಲೂ ‘ಅಚ್ಚರಿ’ಗಳನ್ನು ಸೃಷ್ಟಿಸುತ್ತದೆ!
ಈಗಿನ ಉಪಚುನಾವಣೆ: ಕುಟುಂಬ ರಾಜಕೀಯದ ಹೊಸ ಅಧ್ಯಾಯ
ಹುಲ್ಲಪ್ಪ ಮೇಟಿ(ಎಚ್ ವೈ ಮೇಟಿ) ಅವರ ನಿಧನದಿಂದ ಖಾಲಿಯಾದ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅವರ ಪುತ್ರ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ಸ್ಪರ್ಧಿಸಿದ್ದಾರೆ. 1989ರಿಂದ ಈ ಕ್ಷೇತ್ರವು ಮೇಟಿ, ಸರನಾಯಕ, ನಿರಾಣಿ, ಚರಂತಿಮಠ, ಪುಜಾರಿ ಕುಟುಂಬಗಳ ನಡುವಿನ ಪೈಪೋಟಿಯಾಗಿದೆ. 2023ರಲ್ಲಿ ಹುಲ್ಲಪ್ಪ ಮೇಟಿ ತಮ್ಮ ಸಹೋದರಿ ಗಂಡ ಮಲ್ಲಿಕಾರ್ಜುನ ಚರಂತಿಮಠ ಅವರ ವಿರುದ್ಧ ಗೆದ್ದಿದ್ದರು.
ಕಾಂಗ್ರೆಸ್‌ಗೆ ಇದು ‘ಅನುಕಂಪ’ ಮತ್ತು ‘ಕುರುಬ ಸಮುದಾಯ’ದ ಮತಗಳನ್ನು ಉಳಿಸಿಕೊಳ್ಳುವ ಪ್ರಶ್ನೆ. ಹಾಗೆಯೇ ಬಿಜೆಪಿಗೆ ‘ಉತ್ತರ ಕರ್ನಾಟಕದಲ್ಲಿ ಪುನರಾಗಮನ’ದ ಅವಕಾಶ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರಂತಹ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಇದು ಕೇವಲ ಉಪಚುನಾವಣೆಯಲ್ಲ, 2028ರ ವಿಧಾನಸಭಾ ಚುನಾವಣೆಗೆ ‘ದಿಕ್ಸೂಚಿ’ ಎಂದು ಬಿಜೆಪಿ ಹೇಳುತ್ತಿದೆ.
ಬಾಗಲಕೋಟೆ ಏಕೆ ರಾಜಕೀಯ ಗುರುತ್ವಾಕರ್ಷಣೆಯ ಕೇಂದ್ರ?
ಬಾಗಲಕೋಟೆಯಲ್ಲಿ ಲಿಂಗಾಯತ ಮತಗಳ ಪ್ರಬಲತೆ, ಕುರುಬ ಸಮುದಾಯದ ಸಾಂದ್ರತೆ ಮತ್ತು ಸ್ಥಳೀಯ ಕುಟುಂಬಗಳ ಪ್ರಭಾವವು ರಾಜಕೀಯ ನಾಯಕರಿಗೆ ‘ಸುರಕ್ಷಿತ’ ಆಶ್ರಯ ನೀಡುತ್ತವೆ. ಇಲ್ಲಿ ಗೆದ್ದರೆ ರಾಜ್ಯ ಮಟ್ಟದ ರಾಜಕೀಯಕ್ಕೆ ಏಣಿ ದೊರೆಯುತ್ತದೆ. ಸೋತರೂ, ಅನುಭವವು ಮುಂದಿನ ಪಯಣಕ್ಕೆ ಬಲ ನೀಡುತ್ತದೆ. ಇದೇ ಕಾರಣಕ್ಕೆ ಐವರು ಮುಖ್ಯಮಂತ್ರಿಗಳ ಹಣೆಬರೆಹ ಇಲ್ಲಿ ಬರೆಯಲ್ಪಟ್ಟಿತು.
ಇದನ್ನೂ ಓದಿದ್ದೀರಾ? ಬಾಗಲಕೋಟೆ ಉಪಚುನಾವಣೆ: ಮಾ.30ರಿಂದ ಸಿದ್ದರಾಮಯ್ಯ ಐದು ದಿನ ಪ್ರಚಾರ
ಬಾಗಲಕೋಟೆ ಉಪಚುನಾವಣೆಯ ಫಲಿತಾಂಶವು ಕರ್ನಾಟಕ ರಾಜಕೀಯದ ಮುಂದಿನ ದಶಕದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ. ಬಾಗಲಕೋಟೆಯ ಮತದಾರರು ಇನ್ನೊಮ್ಮೆ ಇತಿಹಾಸ ಬರೆಯುತ್ತಾರೆಯೇ? ಅಥವಾ ಹೊಸ ಅಧ್ಯಾಯವನ್ನು ತೆರೆಯುತ್ತಾರೆಯೇ? ಎಂಬುದು ಮತಪೆಟ್ಟಿಗೆಗಳನ್ನು ತೆರೆದಾಗ ತಿಳಿಯುತ್ತದೆ. ಆದರೆ ಒಂದು ವಿಷಯ ಸ್ಪಷ್ಟ: ಬಾಗಲಕೋಟೆ ಜಿಲ್ಲೆಯು ಕರ್ನಾಟಕ ರಾಜಕೀಯದಲ್ಲಿ ‘ಕಿಂಗ್ ಮೇಕರ್’ ಪಾತ್ರವನ್ನು ಮುಂದುವರೆಸುತ್ತದೆ.




