ಜಿಲ್ಲೆಯ ರೈತರಿಗೆ ವಿತರಿಸಲಾಗುವ ಬಿತ್ತನೆ ಬೀಜಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಕೇವಲ ಉತ್ತಮ ಮೊಳಕೆ ಬರುವ ಗುಣಮಟ್ಟದ ಬೀಜಗಳನ್ನು ಮಾತ್ರ ವಿತರಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗುರುವಾರ ಬೀದರ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕೃಷಿ ಸಮಾಜ ಜಿಲ್ಲಾ ಘಟಕ ಬೀದರ ಜಿಲ್ಲೆಯ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರೈತ ಸಂಪರ್ಕ ಕೇಂದ್ರಗಳಿಗೆ ಬರುವ ಬಿತ್ತನೆ ಬೀಜಗಳನ್ನು ಮೊದಲಿಗೆ ಸ್ಯಾಂಪಲ್ ಡ್ರಾ ಮಾಡಿ ಪರೀಕ್ಷಿಸಬೇಕು. ಉತ್ತಮವಾಗಿ ಮೊಳಕೆ ಬರುವ ಬೀಜಗಳನ್ನು ಮಾತ್ರ ರೈತರಿಗೆ ನೀಡಬೇಕು. ಗುಣಮಟ್ಟವಿಲ್ಲದ ಅಥವಾ ಕಳಪೆ ಎಂದು ಕಂಡುಬರುವ ಬಿತ್ತನೆ ಬೀಜಗಳನ್ನು ತಕ್ಷಣವೇ ವಾಪಸ್ ಕಳುಹಿಸಬೇಕು. ಬೀಜ ವಿತರಣೆ ಸಮಯದಲ್ಲಿ ರೈತರಿಗೆ ಯಾವದೇ ರೀತಿಯ ತೊಂದರೆ ಅಥವಾ ಗೊಂದಲ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ತಿಳಿಸಿದರು.
ಬೀದರ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ʼಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹ ಪ್ರಕ್ರಿಯೆ ಶುರುವಾಗಿದೆ. ರೈತರು ಅವಸರದಿಂದ ಬಿತ್ತನೆ ಮಾಡಬಾರದು. ಕನಿಷ್ಠ 60 ರಿಂದ 70 ಮಿ.ಮೀ ಮಳೆಯಾಗಿ ಮಣ್ಣಿನಲ್ಲಿ ತೇವಾಂಶ ಹದವಾಗಿದ್ದಾಗ ಮಾತ್ರ ಬಿತ್ತನೆ ಮಾಡಬೇಕು. ಅಧಿಕೃತ ರೈತ ಸಂಪರ್ಕ ಕೇಂದ್ರಗಳಿಂದಲೇ ಬೀಜ ಮತ್ತು ರಸಗೊಬ್ಬರ ಖರೀದಿಸಿ ರಸೀದಿ ಪಡೆದುಕೊಳ್ಳಬೇಕುʼ ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ ಲಭ್ಯವಿದೆ. ರೈತರು ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಗೊಬ್ಬರ ಖರೀದಿಸಿ ಮನೆಯಲ್ಲಿ ಸಂಗ್ರಹಿಸಿಡುವ ಅಗತ್ಯವಿಲ್ಲ. ಎಫ್ಐಡಿ ಇರುವ ರೈತರು ಮಾತ್ರ ಯುರಿಯಾ ಗೊಬ್ಬರ ಖರೀದಿ ಮಾಡಬಹುದು. ರೈತರು ಮಾತ್ರ ಬಿತ್ತನೆಯ ಹಂತಕ್ಕೆ ಅನುಗುಣವಾಗಿ ಗೊಬ್ಬರ ಪಡೆಯಬೇಕು. ಡಿಎಪಿ ಗೊಬ್ಬರದ ಬದಲಿಗೆ ಲಭ್ಯವಿರುವ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸುವಂತೆ ತಾಂತ್ರಿಕ ಸಲಹೆ ನೀಡಲಾಗುತ್ತಿದೆʼ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರಿಗಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಮೇ 31ರಿಂದ ಜೂನ್ 2ರ ನಡುವೆ ಮಳೆಯಾಗುವ ಸಾಧ್ಯತೆಯಿದ್ದು, ಜೂನ್ 8ರ ಸುಮಾರಿಗೆ ಜಿಲ್ಲೆಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ : ಬೀದರ್ ನಗರದಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ
ಸಭೆಯಲ್ಲಿ ಪ್ರಮುಖರಾದ ಗೋವಿಂದ ರೆಡ್ಡಿ ವಿಠಲರೆಡ್ಡಿ, ಸಂಗಮೇಶ ಬಸವರಾಜ ವಾಲೆ, ವಿಶ್ವನಾಥ ಮಾಣಿಕರಾವ ಮಾಲಿ ಪಾಟೀಲ್, ಬಾಬುರೆಡ್ಡಿ ವಿಠಲರೆಡ್ಡಿ, ಸಂತೋಷ ರಾಜಕುಮಾರ ಹಜಾರಿ, ವಿಠಲಸಿಂಗ ದೌಲತ ಸಿಂಗ್, ರಮೇಶ ವೆಂಕಟರಾವ ಪಾಟೀಲ್, ಗೀರಿಶ ಮಾಧವರಾವ ಪಾಟೀಲ್, ಪ್ರಭುರಾವ ಭೀಮರಾವ, ಬಸವರಾಜ ವಿಶ್ವನಾಥ ಪಾಟೀಲ್, ಶಿವಕುಮಾರ ಸಕೃನಿ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




