ಬೀದರ್ ನಗರದಲ್ಲಿರುವ ಐತಿಹಾಸಿಕ ಕರೇಜ್ ಜಲವ್ಯವಸ್ಥೆಯನ್ನು ಸಂರಕ್ಷಿಸಿ, ಅಂತರ್ಜಲ ಮರುಪೂರಣ ಹಾಗೂ ನಗರದಲ್ಲಿ ನೀರಿನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಮುಂದಾಗಬೇಕು ಎಂದು ಟೀಮ್ ಯುವಾ ಸಹ ಸಂಸ್ಥಾಪಕ ವಿನಯಕುಮಾರ್ ಮಾಳಗೆ ಮನವಿ ಮಾಡಿದ್ದಾರೆ.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ವಿನೋದ್ ವೈಜಿನಾಥ ಅಪ್ಪೆ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಸಂದರ್ಭದಲ್ಲಿ ನೌಬಾದ್- ಅಲಿಯಾಬಾದ್ ಕರೇಜ್ ಜಲಮಾರ್ಗದ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಚರ್ಚಿಸಿದರು.
“ಕರೇಜ್‌ನ ಐತಿಹಾಸಿಕ ಮಹತ್ವ, ಪ್ರಸ್ತುತ ಸ್ಥಿತಿ, ಜಲಸಂಗ್ರಹಣೆ, ಅಂತರ್ಜಲ ಮರುಪೂರಣ ಹಾಗೂ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಯ ಸಾಧ್ಯತೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ವಿಷಯವನ್ನು ಆಸಕ್ತಿಯಿಂದ ಆಲಿಸಿದ ಅಧ್ಯಕ್ಷ ವಿನೋದ್ ಅಪ್ಪೆ, ಕರೇಜ್ ವ್ಯವಸ್ಥೆಯ ಮೂಲಕ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದರು.

ಬಹಮನಿ ಕಾಲದಲ್ಲಿ ರೂಪುಗೊಂಡ ಬೀದರಿನ ಕರೇಜ್ ಜಲವ್ಯವಸ್ಥೆಯು ನೆಲದಡಿಯ ಜಲಮಾರ್ಗಗಳ ಮೂಲಕ ನೀರನ್ನು ಸಂಗ್ರಹಿಸಿ ಹರಿಸುವ ಸಾಂಪ್ರದಾಯಿಕ ಜಲತಂತ್ರಜ್ಞಾನದ ವಿಶಿಷ್ಟ ಉದಾಹರಣೆಯಾಗಿದೆ. ನೌಬಾದ್ ಕರೇಜ್ ಹಾಗೂ ಅದರ ಜಲಾನಯನ ಪ್ರದೇಶವು ಐತಿಹಾಸಿಕ ಮಹತ್ವದ ಜತೆಗೆ ಅಂತರ್ಜಲ ಮರುಪೂರಣದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ವಿನಯ ಮಾಳಗೆ ಹೇಳಿದರು.
ನಗರೀಕರಣ, ಭೂಬಳಕೆಯಲ್ಲಿನ ಬದಲಾವಣೆ, ಅತಿಕ್ರಮಣ ಹಾಗೂ ಜಲಮಾರ್ಗಗಳಿಗೆ ಎದುರಾಗಿರುವ ಅಡೆತಡೆಗಳು ಇಂತಹ ಪಾರಂಪರಿಕ ಜಲವ್ಯವಸ್ಥೆಗಳ ಸಂರಕ್ಷಣೆಗೆ ಸವಾಲಾಗಿವೆ. ಹೀಗಾಗಿ ಕರೇಜ್ ಅಭಿವೃದ್ಧಿಯನ್ನು ಕೇವಲ ಸೌಂದರ್ಯೀಕರಣ ಅಥವಾ ಪ್ರವಾಸೋದ್ಯಮಕ್ಕೆ ಸೀಮಿತಗೊಳಿಸದೆ, ವೈಜ್ಞಾನಿಕ ಅಧ್ಯಯನ, ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಪೂರಣ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಕರೇಜ್‌ನ ಮೂಲ ರಚನೆಗೆ ಧಕ್ಕೆಯಾಗದಂತೆ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವುದು, ನೀರಿನ ಹರಿವಿಗೆ ಇರುವ ಅಡೆತಡೆಗಳನ್ನು ಗುರುತಿಸುವುದು ಹಾಗೂ ಜಲಾನಯನ ಪ್ರದೇಶವನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬುಡಾ ಅಧ್ಯಕ್ಷ, ಸದಸ್ಯರು, ಆಯುಕ್ತರು ಹಾಗೂ ನಗರ ಮತ್ತು ಪಟ್ಟಣ ಯೋಜನಾ ಇಲಾಖೆಯ ಅಧಿಕಾರಿಗಳೊಂದಿಗೆ ಕರೇಜ್ ಪ್ರದೇಶಕ್ಕೆ ಜಂಟಿ ಸ್ಥಳ ಪರಿಶೀಲನೆ ನಡೆಸುವ ಬಗ್ಗೆಯೂ ಚರ್ಚಿಸಲಾಯಿತು.

ಬೀದರ ನಗರದ ಕೆರೆಗಳು, ಕಲ್ಯಾಣಿಗಳು, ಬಾವಿಗಳು ಹಾಗೂ ಕರೇಜ್ ಜಲಮಾರ್ಗಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡುವುದರಿಂದ ನಗರದ ಜಲಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬಹುದು. ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ನೌಬಾದ್–ಅಲಿಯಾಬಾದ್ ಕರೇಜ್ ಅಭಿವೃದ್ಧಿಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕು ಎಂದು ಮಾಳಗೆ ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ʼಯುವ ಸೌರಭʼ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭೆ ಅನಾವರಣ
ಸಭೆಯಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಿನೋದಕುಮಾರ್ ಬಂದಗೆ, ಮೊಹಮ್ಮದ್ ಸಮೀ ಹಾಗೂ ಆಯುಕ್ತ ಪ್ರಮೋದ್ ಪಟೇಲ್ ಉಪಸ್ಥಿತರಿದ್ದರು.




