ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಯುದ್ಧಕ್ಕೆ ವಿರಾಮ ಹಾಡುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಆಗಮಿಸಿರುವ ಇರಾನ್ ನಿಯೋಗವು ಭಾವುಕ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ ಮಕ್ಕಳ ಭಾವಚಿತ್ರಗಳು, ಅವರ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು ಮತ್ತು ಗುಲಾಬಿ ಹೂವುಗಳನ್ನು ವಿಮಾನದ ಸೀಟುಗಳಲ್ಲಿ ಇಡುವ ಮೂಲಕ ಇರಾನ್ ತನ್ನ ಶೋಕ ಮತ್ತು ಆಕ್ರೋಶವನ್ನು ಜಗತ್ತಿನೆದುರು ತೆರೆದಿಟ್ಟಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ. ಗಾಲಿಬಾಫ್ ಅವರು ಈ ವಿಮಾನದ ದೃಶ್ಯಗಳನ್ನು ಹಂಚಿಕೊಂಡಿದ್ದು, “ಈ ಮಕ್ಕಳ ಭಾವಚಿತ್ರಗಳು ಮತ್ತು ಬ್ಯಾಗ್‌ಗಳು ನನ್ನ ವಿಮಾನದ ಸಹಚರರು” ಎಂದು ತಿಳಿಸಿದ್ದಾರೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧದ ಮೊದಲ ದಿನವೇ ಮಿನಾಬ್‌ನಲ್ಲಿರುವ ‘ಶಜರೆಹ್ ತಯ್ಯೆಬೆಹ್’ ಶಾಲೆಯ ಮೇಲೆ ಭಾರಿ ವಾಯುದಾಳಿ ನಡೆದಿತ್ತು. ಈ ದಾಳಿಯಲ್ಲಿ 175ಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ತೆಹ್ರಾನ್ ಆರೋಪಿಸಿದೆ. ಈ ಘಟನೆಯ ನಂತರ ಇರಾನ್‌ನಾದ್ಯಂತ ಮಕ್ಕಳ ಶವಪೆಟ್ಟಿಗೆಗಳ ಮೇಲೆ ರಾಷ್ಟ್ರಧ್ವಜ ಹೊದಿಸಿ ಭಾವಪೂರ್ಣ ವಿದಾಯ ಹೇಳಲಾಗಿತ್ತು.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಶಾಲೆಯ ಮೇಲಿನ ಈ ಕ್ರೂರ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಕಡೆಗೇ ತಿರುಗಿಸಿದ್ದಾರೆ. “ಇದನ್ನು ಇರಾನ್ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಅವರ ಶಸ್ತ್ರಾಸ್ತ್ರಗಳಿಗೆ ನಿಖರ ಗುರಿ ಇಲ್ಲ. ಹೀಗೆ ಗುರಿ ತಪ್ಪಿ ಈ ಅನಾಹುತ ನಡೆದಿದೆ,” ಎಂದು ಏರ್ ಫೋರ್ಸ್ ಒನ್ ವಿಮಾನದಲ್ಲಿ ಟ್ರಂಪ್ ಪತ್ರಕರ್ತರಿಗೆ ತಿಳಿಸಿದ್ದಾರೆ. ಇನ್ನೊಂದೆಡೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವಕ್ತಾರೆ ರವೀನಾ ಶಮ್ದಾಸನಿ ಅವರು, “ಯಾರು ಈ ದಾಳಿ ಮಾಡಿದ್ದಾರೋ ಅವರೇ ಇದರ ತನಿಖೆ ನಡೆಸಬೇಕು,” ಎಂದು ಜಿನೇವಾದಲ್ಲಿ ಆಗ್ರಹಿಸಿದ್ದಾರೆ.
ಜಗತ್ತಿನ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುತ್ತಿರುವ ಈ ಯುದ್ಧಕ್ಕೆ ಅಂತ್ಯ ಹಾಡಲು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಯುದ್ಧ ವಿರಾಮ ಘೋಷಿಸಲಾಗಿದೆ. ಅದರ ಭಾಗವಾಗಿ ಎಂ.ಬಿ. ಗಾಲಿಬಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ನೇತೃತ್ವದ ನಿಯೋಗ ಶನಿವಾರ ಮುಂಜಾನೆ ಇಸ್ಲಾಮಾಬಾದ್ ತಲುಪಿದೆ. ಇರಾನ್ ನಿಯೋಗದ ಬೆನ್ನಲ್ಲೇ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಕೂಡ ಇಸ್ಲಾಮಾಬಾದ್‌ಗೆ ಆಗಮಿಸಿದ್ದು, ಮಾತುಕತೆಗಳು ನಡೆಯುತ್ತಿವೆ.




