ಈ ಸಮಾಜದಲ್ಲಿನ ಅನ್ಯಾಯದ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಬ್ರಾಹ್ಮಣ ಸ್ಥಾನಮಾನದ ವಿರುದ್ಧ ನಿಲ್ಲಲು ಜ್ಯೋತಿಬಾ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಈ ಮೂಲಕ ತಮ್ಮನ್ನು ʼತಾವು ದೇವರ ಸಂದೇಶವಾಹಕರು ಮತ್ತು ಸರ್ವಶಕ್ತನಿಗೆ ಸಂಪರ್ಕಿಸುವ ಮಾಧ್ಯಮʼವೆಂದು ಹೇಳಿಕೊಳ್ಳುವ ಬ್ರಾಹ್ಮಣರಿಗೆ ಸವಾಲು ಹಾಕಿದರು.
ಇಂದು ಜ್ಯೋತಿಬಾ ಫುಲೆ ಜನ್ಮದಿನ. ಇವರು 1827ರ ಏಪ್ರಿಲ್ 11ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಮಹಾನ್ ಸಾಮಾಜಿಕ ಸುಧಾರಕ, ಜಾತಿ ವ್ಯವಸ್ಥೆಯ ವಿರೋಧಿ, ಮಹಿಳಾ ಶಿಕ್ಷಣದ ಪ್ರವರ್ತಕ ಮತ್ತು ದಲಿತ-ಶೂದ್ರ ಸಮುದಾಯಗಳ ಹಕ್ಕುಗಳಿಗಾಗಿ ಜೀವನವನ್ನೇ ಅರ್ಪಿಸಿದ ಅವರ ಬದುಕು ಮತ್ತು ಕಾರ್ಯಸಾಧನೆಗಳು ಭಾರತೀಯ ಸಮಾಜದಲ್ಲಿ ಒಂದು ಕ್ರಾಂತಿಯಾಗಿದೆ. 19ನೇ ಶತಮಾನದಲ್ಲಿ ಬ್ರಾಹ್ಮಣೀಯ ಪ್ರಭುತ್ವ, ಜಾತಿ ತಾರತಮ್ಯ ಮತ್ತು ಮಹಿಳಾ ಅಸಮಾನತೆಯ ವಿರುದ್ಧ ಹೋರಾಡಿದ ಅವರು ʼಮಹಾತ್ಮಾ ಫುಲೆʼ ಎಂಬ ಬಿರುದನ್ನು ಪಡೆದರು. ಅವರ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಶಿಕ್ಷಣವನ್ನು ನೀಡುವುದರೊಂದಿಗೆ ಮಹಿಳಾ ಶಿಕ್ಷಣಕ್ಕೆ ಮೊದಲ ಮುನ್ನುಡಿ ಬರೆದರು. ಅಲ್ಲದೆ ಸತ್ಯಶೋಧಕ ಸಮಾಜದ ಮೂಲಕ ಸಮಾನತೆಯ ಸಂದೇಶವನ್ನು ಹರಡಿದರು.
ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಶೂದ್ರರು ಮತ್ತು ದಲಿತರು ಅನುಭವಿಸುವ ತಾರತಮ್ಯವನ್ನು ಫುಲೆ ಖಂಡಿಸಿದರು. ಅವರು ಭಾರತದಲ್ಲಿ ಒಂದು ಚಳವಳಿಯನ್ನು ಮುನ್ನಡೆಸಿದರು. ಇದು ʼಯಾರೂ ಮೇಲ್ಜಾತಿಯ ಬ್ರಾಹ್ಮಣರಿಗೆ ಅಧೀನರಾಗಿರುವುದಿಲ್ಲʼ ಎಂಬ ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಲು ಕರೆ ನೀಡಿತು. ಫುಲೆಯವರು ರೈತರ ಶೋಷಣೆಯ ವಿರುದ್ಧವೂ, ಮಹಿಳೆಯರ ಹಕ್ಕುಗಳಿಗಾಗಿಯೂ ಹೋರಾಡಿದರು. ಸಾಮಾಜಿಕ ಬದಲಾವಣೆಯನ್ನು ತರಲು ಶಿಕ್ಷಣ ಅತ್ಯಗತ್ಯ ಎಂದು ನಂಬಿದ್ದ ಅವರು ಮಹಿಳೆಯರಿಗೆ ಮತ್ತು ಮತ್ತು ತಳಸಮುದಾಯಗಳ ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಿದರು.
ಆರಂಭಿಕ ಜೀವನ
ಜ್ಯೋತಿರಾವ್ ಗೋವಿಂದರಾವ್ ಫುಲೆ ಅವರು ಈಗ ಪಶ್ಚಿಮ ಮಹಾರಾಷ್ಟ್ರ ರಾಜ್ಯ ಎಂದು ಕರೆಯಲ್ಪಡುವ ಸತಾರಾ ಜಿಲ್ಲೆಯ ಕಟಗುಂ ಗ್ರಾಮದ ಮಾಲಿ(ಹೂವು ಬೆಳೆಯುವ ಶೂದ್ರ ಸಮುದಾಯ) ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗೋವಿಂದರಾವ್ ಮತ್ತು ತಾಯಿ ಚಿಮ್ನಾಬಾಯಿ. ತಾಯಿಯವರು ಒಂದು ವರ್ಷದೊಳಗೆ ನಿಧನರಾದರು. ಅವರ ಕುಟುಂಬದಲ್ಲಿ ಹಣ್ಣು, ತರಕಾರಿ ಬೆಳೆಯುವ ಕೃಷಿಕರಾಗಿ ಕೆಲಸ ಮಾಡಲಾಗುತ್ತಿತ್ತು. ಅವರು ಪುಣೆಗೆ ಸ್ಥಳಾಂತರಗೊಂಡ ಬಳಿಕ ಹೂವು ವ್ಯಾಪಾರ ಮಾಡುತ್ತಿದ್ದರು. ಹಾಗಾಗಿಯೇ ಇವರಿಗೆ ʼಫುಲೆʼ(ಹೂವು) ಎಂಬ ಹೆಸರು ಬಂದಿದೆ.
ಮಾಲಿ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ, ಉನ್ನತ ಶಿಕ್ಷಣವನ್ನು ಪಡೆಯುವುದು ಅಸಾಮಾನ್ಯವಾಗಿತ್ತು. ಫುಲೆಯವರು ಬಾಲ್ಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಓದು-ಬರೆಯುವುದು ಮತ್ತು ಅಂಕಿಅಂಶಗಳನ್ನು ಚನ್ನಾಗಿ ಕಲಿತಿದ್ದರು. ಆದರೆ ಮಾಲಿ ಕುಟುಂಬಗಳ ಇತರ ಅನೇಕ ಮಕ್ಕಳಂತೆ, ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಅಧ್ಯಯನವನ್ನು ನಿಲ್ಲಿಸಿ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಫುಲೆಯವರ ನೆರೆಹೊರೆಯವರಲ್ಲಿ ಒಬ್ಬರು ತಮ್ಮ ಮಗನನ್ನು ಶಾಲೆಗೆ ಕಳುಹಿಸಲು ಅವರ ತಂದೆಯನ್ನು ಮನವೊಲಿಸಲು ಸಹಾಯ ಮಾಡಿದರು. 1840ರ ದಶಕದಲ್ಲಿ ಫುಲೆ ಪುಣೆಯಲ್ಲಿ ಸ್ಕಾಟಿಷ್ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿದ್ದ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದರು. 1847ರಲ್ಲಿ ಇಂಗ್ಲಿಷ್ ಶಿಕ್ಷಣ ಪೂರ್ಣಗೊಳಿಸಿದರು. ಈ ಶಿಕ್ಷಣವು ಅವರ ಜೀವನವನ್ನು ಬದಲಾಯಿಸಿತು. ಅಲ್ಲಿ ಕಲಿತ ಐತಿಹಾಸಿಕ ಚಳವಳಿಗಳು ಮತ್ತು ಚಿಂತಕರಿಂದ ಸ್ಫೂರ್ತಿ ಪಡೆದರು. ಥಾಮಸ್ ಪೇನ್‌ನ Rights of Man ಪುಸ್ತಕ ಸೇರಿದಂತೆ ಅಮೆರಿಕದಲ್ಲಿ ಸ್ವಾತಂತ್ರ್ಯ ಮತ್ತು ಗುಲಾಮಗಿರಿಯ ವಿರುದ್ಧದ ಚಳವಳಿಗಳು, ಬುದ್ಧ ಮತ್ತು ಅತೀಂದ್ರಿಯ, ಕವಿ ಕಬೀರ್ ಅವರ ಕೃತಿಗಳು ಮತ್ತು ಬೋಧನೆಗಳಿಂದ ಪ್ರಭಾವಕ್ಕೊಳಗಾದರು.
ಶಿಕ್ಷಣದ ಮೂಲಕ ಸಮಾನತೆ
1848ರಲ್ಲಿ, ಮೇಲ್ಜಾತಿಯ ಬ್ರಾಹ್ಮಣ ಕುಟುಂಬದ ಸ್ನೇಹಿತನ ಮದುವೆಗೆ ಫುಲೆ ಅವರನ್ನು ಆಹ್ವಾನಿಸಲಾಯಿತು. ವರನ ಸಂಬಂಧಿಕರು ಫುಲೆಯವರನ್ನು ಅವರ ಜಾತಿಯ ಕಾರಣಕ್ಕಾಗಿ ಅಪಹಾಸ್ಯ ಮಾಡಿದರು. ಇದರಿಂದಾಗಿ ಅವರು ಸಮಾರಂಭವನ್ನು ತೊರೆಯಬೇಕಾಯಿತು. ಈ ಘಟನೆಯು ಜಾತಿ ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ಕ್ರೋಧವನ್ನು ಹುಟ್ಟಿಸಿದ್ದಲ್ಲದೆ ಹೋರಾಟಕ್ಕೆ ಧುಮುಕಲು ಪ್ರೇರಣೆಯಾಯಿತು.
ಫುಲೆಯವರು ತಮ್ಮ 13ನೇ ವಯಸ್ಸಿನಲ್ಲೇ ಮಾಲಿ ಸಮುದಾಯದ ಹುಡುಗಿ ಸಾವಿತ್ರಿಬಾಯಿಯನ್ನು ಮದುವೆಯಾದರು. ತಮ್ಮ ಪತ್ನಿಗೆ ಓದು-ಬರೆಯುವುದನ್ನು ಕಲಿಸಿದರು. ಇದೇ ವೇಳೆ ಅಂದರೆ 1848ರಲ್ಲಿ ಅಹ್ಮದ್ ನಗರದಲ್ಲಿ ಮಿಸನರಿಗಳು ನಡೆಸುತ್ತಿದ್ದ ಮಹಿಳಾ ಶಾಲೆಯನ್ನು ಸಂದರ್ಶಿಸಿದ ನಂತರ ಪುಣೆಯ ಭಿಡೇವಾಡದಲ್ಲಿ ತಳಸಮುದಾಯಗಳ ಹೆಣ್ಣುಮಕ್ಕಳಿಗಾಗಿ ಒಂದು ಪ್ರವರ್ತಕ ಶಾಲೆಯನ್ನು ತೆರೆದರು. ಭಾರತದಲ್ಲಿ ಯಾವುದೇ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಅತ್ಯಂತ ವಿರಳವಾಗಿದ್ದ ಕಾಲದಲ್ಲಿ ಮೊದಲ ಸ್ಥಳೀಯ ಮಹಿಳಾ ಶಾಲೆಯನ್ನು ಆರಂಭಿಸಿದರು. ಸಾವಿತ್ರಿಬಾಯಿ ಅದರ ಮೊದಲ ಶಿಕ್ಷಕಿಯಾದರು. ಸಮಾಜದ ಮೇಲ್ವರ್ಗಗಳು ಇದನ್ನು ತೀವ್ರವಾಗಿ ವಿರೋಧಿಸಿದವು; ಕುಟುಂಬ ಮತ್ತು ಸಮುದಾಯದಿಂದ ಬಹಿಷ್ಕಾರವೂ ಆಯಿತು. ಆದರೆ ಉಸ್ಮಾನ್ ಶೇಖ್ ಮತ್ತು ಫಾತಿಮಾ ಶೇಖ್ ಅವರು ಆಶ್ರಯ ನೀಡಿದರು.
ಮುಂದಿನ ಕೆಲವು ವರ್ಷಗಳಲ್ಲಿ ಅಂದೆರೆ 1852ರಲ್ಲಿ ಬಾಲಕಿಯರಿಗೆ, ಕೆಳಜಾತಿಯ ಜನರಿಗೆ, ವಿಶೇಷವಾಗಿ ಮಹಾರರು ಮತ್ತು ಮಾಂಗ್ ಸಮುದಾಯಗಳಿಗಾಗಿ ಶಾಲೆಯನ್ನು ತೆರೆದರು. 1852ರಿಂದ 1858ರವರೆಗೆ ಸುಮಾರು 273 ಮಂದಿ ಬಾಲಕಿಯರು ಶಿಕ್ಷಣ ಪಡೆದರು. 1854ರಲ್ಲಿ ವಿಧವೆಯರಿಗೆ ಆಶ್ರಯಸದನ ತೆರೆದರು. ಹೆಣ್ಣು ಶಿಶು ಹತ್ಯೆ ತಡೆಯಲು ನವಜಾತ ಶಿಶುಗಳನ್ನು ಸಾಕಬಹುದಾದ ಶಿಶುಭವನ ತೆರೆದರು. ಸಮಾಜದ ಕೆಳವರ್ಗದ ಜನರ ವಿರುದ್ಧ ತಾರತಮ್ಯ ತೊಡೆದುಹಾಕಲು ತಮ್ಮ ಮನೆಯನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿದ್ದೇ ಅಲ್ಲದೆ ತಮ್ಮ ಬಾವಿಯಿಂದ ನೀರು ಸೇದುವ ಅವಕಾಶವನ್ನು ಮುಕ್ತವಾಗಿ ಎಲ್ಲರಿಗೂ ನೀಡಿದರು. ಫುಲೆಯವರು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಸಾಂಪ್ರದಾಯಿಕ ಬ್ರಾಹ್ಮಣರಿಂದ ಗಮನಾರ್ಹ ವಿರೋಧವನ್ನು ಎದುರಿಸಿದರು. ಸಾಮಾಜಿಕ ಸ್ಥಾನಮಾನಕ್ಕೆ ಅಡ್ಡಿಪಡಿಸಿದರೆಂಬ ದೂಷಣೆಗೆ ಒಳಗಾದರು. ಅದೇನೇ ಇದ್ದರೂ, ಫುಲೆ ಮತ್ತು ಅವರ ಪತ್ನಿ ಸಾಮಾಜಿಕ ಆರ್ಥಿಕ ಮತ್ತು ಲಿಂಗ ಸಮಾನತೆಯ ಕಡೆಗೆ ಹೆಜ್ಜೆಯಿಟ್ಟರು.
ಫುಲೆ ಬಾಲ್ಯ ವಿವಾಹವನ್ನು ವಿರೋಧಿಸಿದರು; ವಿಧವೆಯರು ಮರುಮದುವೆಯಾಗುವ ಹಕ್ಕನ್ನು ಬೆಂಬಲಿಸಿದರು. ಇದನ್ನು ವಿಶೇಷವಾಗಿ ಮೇಲ್ಜಾತಿಯ ಹಿಂದೂಗಳು ತಿರಸ್ಕರಿಸಿದರು. ಆದರೂ ಗರ್ಭಿಣಿಯರಾಗುವ ವಿಧವೆಯರಿಗೆ, ವಿಶೇಷವಾಗಿ ಬ್ರಾಹ್ಮಣ ವಿಧವಾ ಗರ್ಭಿಣಿಯರು ಮತ್ತು ಅವರ ಮಕ್ಕಳಿಗಾಗಿ ಅನಾಥಾಶ್ರಮವನ್ನು ತೆರೆದರು. ನಂತರ ಫುಲೆ ದಂಪತಿ ಈ ಮಕ್ಕಳಲ್ಲಿಯೇ ಒಂದು ಮಗುವನ್ನು ದತ್ತು ಪಡೆದರು.
ಸತ್ಯಶೋಧಕ ಸಮಾಜ ಸ್ಥಾಪನೆ
ಸ್ವಾತಂತ್ರ್ಯ, ಸಮಾನತೆ, ಸೋದರತೆ, ಮಾನವ ಘನತೆ, ಆರ್ಥಿಕ ನ್ಯಾಯದ ಆಧಾರದ ಮೇಲೆ ಹೊಸ ಸಮಾಜ ಕಟ್ಟಬಯಸುವುದಾದರೆ ಶೋಷಣೆ ಮತ್ತು ಅಸಮಾನತೆಯೇ ಮೂಲತತ್ವವಾದ ಹಳೆಯ ವ್ಯವಸ್ಥೆಯನ್ನು ಛಿದ್ರಗೊಳಿಸಲೇಬೇಕೆನ್ನುವುದು ಜ್ಯೋತಿಬಾ ಅವರ ಅಭಿಮತವಾಗಿತ್ತು.
ಹಾಗಾಗಿ, 1873ರಲ್ಲಿ ಫುಲೆ ಅವರು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು, ಶೂದ್ರರು ಮತ್ತು ಇತರ ಕೆಳಜಾತಿಯ ಜನರನ್ನು ಒಗ್ಗೂಡಿಸಿ ಉನ್ನತೀಕರಿಸಲು ಹಾಗೂ ಜಾತಿ ವ್ಯವಸ್ಥೆಯಿಂದ ಉಂಟಾದ ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ಹಿಮ್ಮೆಟ್ಟಿಸಲು ಸತ್ಯಶೋಧಕ ಸಮಾಜ ಎಂಬ ಸುಧಾರಣಾ ಸಮಾಜವನ್ನು ಸ್ಥಾಪಿಸಿದರು. ಇದು ಶಿಕ್ಷಣವನ್ನು ಉತ್ತೇಜಿಸುವ, ಸಾಮಾಜಿಕ ಹಕ್ಕುಗಳು, ನ್ಯಾಯ ಮತ್ತು ರಾಜಕೀಯ ಪ್ರವೇಶವನ್ನು ಹೆಚ್ಚಿಸುವ ಸುಧಾರಣಾವಾದಿ ಸಮಾಜವಾಗಿತ್ತು.
ಅಲ್ಲದೆ, ಮಹಾರಾಷ್ಟ್ರದ ದಲಿತರು, ಶೂದ್ರರು ಮತ್ತು ಮಹಿಳೆಯರನ್ನು ಮೇಲಕ್ಕೆತ್ತಿ ಅವರ ಅಭಿವೃದ್ಧಿಗೆ ಬೆಂಬಲ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು. ಜ್ಯೋತಿಬಾ ಫುಲೆ ಅವರ ಪತ್ನಿ ಸಾವಿತ್ರಿಬಾಯಿ ಅವರು ಮಹಿಳಾ ವಿಭಾಗದ ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ಈ ಸಮಾಜದಲ್ಲಿನ ಅನ್ಯಾಯದ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಬ್ರಾಹ್ಮಣ ಸ್ಥಾನಮಾನದ ವಿರುದ್ಧ ನಿಲ್ಲಲು ಜ್ಯೋತಿಬಾ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ತಮ್ಮನ್ನು ʼತಾವು ದೇವರ ಸಂದೇಶವಾಹಕರು ಮತ್ತು ಸರ್ವಶಕ್ತನಿಗೆ ಸಂಪರ್ಕಿಸುವ ಮಾಧ್ಯಮʼವೆಂದು ಹೇಳಿಕೊಳ್ಳುವ ಬ್ರಾಹ್ಮಣರಿಗೆ ಸವಾಲು ಹಾಕಿದರು.
ಈ ಸಮಾಜವು ಶಿಕ್ಷಣದ ಮಹತ್ವವನ್ನು ಒತ್ತಿಹೇಳುವುದರ ಜತೆಗೆ ಬ್ರಾಹ್ಮಣ ಪುರೋಹಿತರಿಲ್ಲದೆ ಮದುವೆಗಳನ್ನು ನಡೆಸಲು ಜನರನ್ನು ಪ್ರೋತ್ಸಾಹಿಸಿತು. ಸಾಮಾಜಿಕ ವರ್ಗವನ್ನು ಲೆಕ್ಕಿಸದೆ ಯಾರಾದರೂ ಸತ್ಯಶೋಧಕ ಸಮಾಜಕ್ಕೆ ಸೇರಲು ಸ್ವಾಗತವಿದೆ ಎಂದು ಫುಲೆ ಸ್ಪಷ್ಟಪಡಿಸಿದರು. ಆರ್ಯ ಸಮಾಜವು ಆರ್ಯೇತರರನ್ನು ನಿಗ್ರಹಿಸಲು ಮತ್ತು ವಂಚಿಸಲು ಪ್ರಯತ್ನಿಸುತ್ತದೆ ಎಂದು ಖಂಡಿಸಿದ ಅವರು, ಈ ಸಮಾಜದ ಮೂಲಕ ವೈದಿಕ ಸಂಸ್ಕೃತಿ, ಉಪನಿಷತ್ತು ಮತ್ತು ಆರ್ಯ ಸಮಾಜದ ಪ್ರಾಬಲ್ಯವನ್ನು ತಿರಸ್ಕರಿಸಿದರು.
ಫುಲೆಯವರ ಮರಣ ನಂತರ ಮರಾಠಾ ದೊರೆ ಶಾಹು ಮಹಾರಾಜ್ ಅವರು ಸತ್ಯಶೋಧಕ ಚಳವಳಿಯನ್ನು ಮುಂದುವರೆಸಿದರು. ನಂತರ, ಭೌರಾವ್ ಪಾಟೀಲ್ ಮತ್ತು ನಾನಾ ಪಾಟೀಲ್, ಕೇಶವರಾವ್ ಜೇಧೆ, ಮಾಧವರಾವ್ ಬಾಗಲ್ ಮತ್ತು ಖಂಡೇರಾವ್ ಬಾಗಲ್ ಅವರಂತಹ ಇತರ ಮರಾಠಾ ನಾಯಕರು ಈ ʼಸತ್ಯಶೋಧಕ ಸಮಾಜʼ ಚಳವಳಿಯನ್ನು ಜೀವಂತವಾಗಿಟ್ಟರು.
ʼಗುಲಾಮಗಿರಿʼ ಕೃತಿಯ ತಿರುಳು
ಫುಲೆಯವರು ತಮ್ಮ ವಿಚಾರಗಳನ್ನು ಪ್ರಚಾರ ಮಾಡಲು, ಪುಸ್ತಕಗಳು, ಪ್ರಬಂಧಗಳು, ಕವಿತೆಗಳು ಮತ್ತು ನಾಟಕಗಳನ್ನು ಬರೆದರು. ಅವರ ಅತ್ಯಂತ ಪ್ರಸಿದ್ಧವಾದ ʼಗುಲಾಮಗಿರಿʼ ಕೃತಿ 1873ರಲ್ಲಿ ಪ್ರಕಟವಾಯಿತು. ಈ ಕೃತಿಯನ್ನು ಅಮೆರಿಕದ ನೀಗ್ರೋ ಗುಲಾಮಗಿರಿ ನಿರ್ಮೂಲನೆಗಾಗಿ ಹೋರಾಡುತ್ತಿದ್ದವರಿಗೆ ಅರ್ಪಿಸಿದ್ದಾರೆ. ಅಲ್ಲದೆ ಈ ಕೃತಿಯಲ್ಲಿ ದೇಶದ ಶೂದ್ರರು ಮತ್ತು ಅತಿಶೂದ್ರರು ಅನುಭವಿಸುತ್ತಿದ್ದ ‘ಗುಲಾಮಗಿರಿ’ ಬ್ರಿಟಿಷ್ ಆಡಳಿತದ ಅಡಿಯಲ್ಲಿಯೂ ಬ್ರಾಹ್ಮಣ್ಯದ ಮುಸುಕಿನಲ್ಲಿ ಮುಂದುವರೆಯುತ್ತಿದೆ ಎಂಬುದನ್ನು ತೋರಿಸಿದ್ದಾರೆ.
ಕೃತಿಯು 16 ಭಾಗಗಳ ಪ್ರಬಂಧ ಮತ್ತು ನಾಲ್ಕು ಕಾವ್ಯ ರಚನೆಗಳ ರೂಪದಲ್ಲಿದೆ. ಇದು ಜ್ಯೋತಿಬಾ ಮತ್ತು ಧೊಂಡಿಬಾ ಎಂಬ ಪಾತ್ರಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಬರೆಯಲಾಗಿದೆ. ಇಲ್ಲಿ ಫುಲೆ ಅವರು ಹಿಂದೂ ಪುರಾಣಗಳು, ಮನುಸ್ಮೃತಿ ಮತ್ತು ಬ್ರಾಹ್ಮಣಿಕ ಧರ್ಮಗ್ರಂಥಗಳನ್ನು ವಿಮರ್ಶಿಸುತ್ತಾರೆ. “ಬ್ರಾಹ್ಮಣರು ‘ಆರ್ಯ’ ವಿದೇಶೀಯರು; ಶೂದ್ರರು(ಕೃಷಿಕರು, ಬಲಿರಾಜನ ವಂಶಜರು) ಸ್ಥಳೀಯ ಮೂಲನಿವಾಸಿಗಳುʼ ಎಂದು ವಿತರ್ಕಿಸುತ್ತಾರೆ. ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಶೂದ್ರರನ್ನು ಶೋಷಿಸುವುದನ್ನು ‘ಆರ್ಯ ಬ್ರಾಹ್ಮಣರ ಕುತಂತ್ರ’ ಎಂದು ವಿವರಿಸುತ್ತಾರೆ.
ಕೃತಿಯ ಮುಖ್ಯ ವಿಚಾರಗಳು
ʼಬ್ರಹ್ಮನ ಮುಖದಿಂದ ಬ್ರಾಹ್ಮಣರು, ಪಾದದಿಂದ ಶೂದ್ರರು ಜನಿಸಿದರುʼ ಎಂಬ ಮನುಸ್ಮೃತಿಯ ಕಲ್ಪನೆಯನ್ನು ಫುಲೆ ತಿರಸ್ಕರಿಸುತ್ತಾರೆ. ಇದು ಬ್ರಾಹ್ಮಣರ ಆಧಿಪತ್ಯವನ್ನು ನಿರಂತರಗೊಳಿಸುವ ಕುತಂತ್ರ ಎಂದು ವಾದಿಸುತ್ತ ಜಾತಿ ವ್ಯವಸ್ಥೆಯನ್ನು ವಿಮರ್ಶಿಸುತ್ತಾರೆ.
“ಅಜ್ಞಾನವೇ ಶೂದ್ರರ ದುಃಖಕ್ಕೆ ಮೂಲ ಕಾರಣ. ‘ವಿದ್ಯೆ ಹೀನನಿಗೆ ಮತಿಯಿಲ್ಲ; ಮತಿಯಿಲ್ಲದೆ ನೀತಿಯಿಲ್ಲ; ನೀತಿಯಿಲ್ಲದೆ ಗತಿಯಿಲ್ಲ; ಗತಿಯಿಲ್ಲದೆ ಹಣವಿಲ್ಲ; ಹಣವಿಲ್ಲದೆ ಶೂದ್ರ ಕೀಳಾದ; ಇಷ್ಟೆಲ್ಲ ಅನರ್ಥವನ್ನು ಅವಿದ್ಯೆ ಒಂದೇ ಉಂಟುಮಾಡಿದೆ’ ಹಾಗಾಗಿ ಶೂದ್ರರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಬಿಡುಗಡೆಗೊಳಿಸಬೇಕು” ಎಂಬುದನ್ನು ತಳಸಮುದಾಯಗಳಿಗೆ ತಿಳಿಸಿಕೊಡುವತ್ತ ಆಸಕ್ತಿ ವಹಿಸಿ, ಶಿಕ್ಷಣದ ಮಹತ್ವವನ್ನು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ’ಯಷ್ಟೇ ಅಲ್ಲ; RBIಗೆ ಅಡಿಪಾಯ ಹಾಕಿದ ಆರ್ಥಿಕತೆಯ ಬಲಭೀಮ
“ಧಾರ್ಮಿಕ ಆಚರಣೆಗಳು, ಪುರಾಣಗಳು, ವೈದಿಕ ಕರ್ಮಕಾಂಡಗಳು ಬ್ರಾಹ್ಮಣರ ಆರ್ಥಿಕ ಲಾಭಕ್ಕಾಗಿ ರಚಿತವಾಗಿವೆ. ಕೃಷಿಕರಿಂದ, ಜನ್ಮದಿಂದ, ಸಾವಿನವರೆಗೆ ಲೂಟಿ ನಡೆಯುತ್ತದೆ” ಬ್ರಾಹ್ಮಣ್ಯದ ಶೋಷಣೆ ಕುರಿತು ಪ್ರತಿಪಾದಿಸಿದ್ದಾರೆ.
“ಬ್ರಿಟಿಷರು ಬಂದು ಶೂದ್ರರನ್ನು ಭೌತಿಕ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದರು. ಆದರೆ ಬ್ರಾಹ್ಮಣರ ಆಧಿಪತ್ಯ ಇನ್ನೂ ಮುಂದುವರೆದಿದೆ” ಎಂದು ಎಚ್ಚರಿಸುತ್ತಾರೆ. ಜಾತಿ ಶೋಷಣೆಯೊಂದಿಗೆ ಮಹಿಳಾ ಶೋಷಣೆಯನ್ನೂ ಖಂಡಿಸುತ್ತಿದ್ದ ಅವರು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು. ಸಾವಿತ್ರಿಬಾಯಿ ಫುಲೆಯೊಂದಿಗೆ ಅವರು ಸ್ಥಾಪಿಸಿದ ಶಾಲೆಗಳೇ ಇದಕ್ಕೆ ಸಾಕ್ಷಿ.
ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೇವಲ ಒಂದು ಪುಸ್ತಕವಲ್ಲ; ಅದು ಮನಸ್ಸಿನ ಗುಲಾಮಗಿರಿಯಿಂದ ಬಿಡುಗಡೆಗೊಳಿಸುವ ಆಯುಧ. ಇಂದು ಅವರ ಜಯಂತಿಯಂದು ನಾವು ಅವರ ಜೀವನ ಮತ್ತು ಕೃತಿಗಳನ್ನು ನೆನೆಯುವುದು ಮಾತ್ರವಲ್ಲ, ಅವರ ಸಂದೇಶವನ್ನು ಅನುಸರಿಸುವುದು ನಮ್ಮ ಕರ್ತವ್ಯ. ಶಿಕ್ಷಣ, ಸಮಾನತೆ ಮತ್ತು ಸತ್ಯಶೋಧನೆಯ ಮೂಲಕ ಸಮಾಜವನ್ನು ಪುನರ್ನಿರ್ಮಾಣ ಮಾಡುವುದೇ ಅವರ ನಿಜವಾದ ಸ್ಮರಣೆ.




