ಬಾಗಲಕೋಟೆ ಹಾಗೂ ದಾವಣಗೆರೆ ವಿಧಾನಸಭೆ ಕ್ಷೇತ್ರಗಳಲ್ಲಿ ಹಿರಿಯ ಶಾಸಕರ ಅಗಲಿಕೆಯಿಂದ ಆಕಸ್ಮಿಕವಾಗಿ ಉಪಚುನಾವಣೆ ಎದುರಾಗಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಥಾನಗಳೇ ಇದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಬಾಗಲಕೋಟೆ ನಗರದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಉಮೇದುವಾರಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “2028ಕ್ಕೆ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈ ಉಪಚುನಾವಣೆಗಳು ದಿಕ್ಸೂಚಿಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಕ್ಸೂಚಿ ಎಂದಿರುವುದು ರಾಜಕೀಯ ಹೇಳಿಕೆಯಷ್ಟೇ. ಶಾಸಕರ ಅನಿರೀಕ್ಷಿತ ನಿಧನದಿಂದ ಆಕಸ್ಮಿಕ ತೆರವಾದ ಎರಡು ಶಾಸಕ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮುಂದಿನ ಚುನಾವಣಾ ದಿಕ್ಸೂಚಿ ಎನ್ನಲಾಗದು” ಎಂದರು.
“ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸು ಹಾಗೂ ಸರ್ಕಾರದ ಸಾಧನೆ ಆಕಸ್ಮಿಕವಾಗಿ ಎದುರಾಗಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್ ವೈ ಮೇಟಿ ಅವರ ನಿಧನದಿಂದಾಗಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಉಮೇಶ್ ಅವರ ಗೆಲುವಿಗೆ ನಾವೆಲ್ಲ ಐಕ್ಯತೆಯಿಂದ ಪ್ರಯತ್ನ ಮಾಡಲಿದ್ದು, ಸರ್ಕಾರದ ಸಾಧನೆ ನಮ್ಮ ಅಭ್ಯರ್ಥಿ ಗೆಲುವಿಗೆ ರಹದಾರಿ ಆಗಲಿದೆ” ಎಂದರು.
“ಟಿಕೆಟ್ ಹಂಚಿಕೆ ಗೊಂದಲವಲ್ಲ, ಟಿಕೆಟ್ ಒಂದೇ ಇದ್ದು, ಹಲವು ಆಕಾಂಕ್ಷಿಗಳಿರುತ್ತಾರೆ. ಮೇಟಿ ಕುಟುಂಬದ ಒಬ್ಬರಿಗೆ ಕೊಡುವಂತೆ ಕಾರ್ಯಕರ್ತರು ಹಾಗೂ ಜನಾಭಿಪ್ರಾಯದಂತೆ ಪಕ್ಷ ಮೇಟಿ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಅವರಿಗೆ ಅವರ ತಂದೆ ಎಚ್ ವೈ ಮೇಟಿ ಅವರು ಶಾಸಕರಾಗಿ ಮಾಡಿರುವ ಉತ್ತಮ ಕೆಲಸಗಳು ಗೆಲುವಿಗೆ ನೆರವಾಗಲಿವೆ” ಎಂದು ಹೇಳಿದರು.
“ಬಿಜೆಪಿಯಲ್ಲಿ ಅನಂತಕುಮಾರ ಹೆಗಡೆ ಅವರ ಕುಟುಂಬಕ್ಕೆ ಟಿಕೆಟ್ ತಪ್ಪಿಸಲಾಗಿತ್ತು, ನಮ್ಮಲ್ಲಿ ಹಾಗೇ ಆಗಿಲ್ಲವಲ್ಲ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂಬುದೇ ಇತ್ತು. ಟಿಕೆಟ್ ನೀಡಿದ್ದೇವೆ” ಎಂದರು.
“ಪಂಕಾ ಮಸೀದಿ ಗಲಾಟೆ ಇಟ್ಟುಕೊಂಡು ಬಿಜೆಪಿ ಚುನಾವಣೆ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದು, ಇದೆಲ್ಲ ಕ್ಷಣಿಕ. ಎಚ್ ವೈ ಮೇಟಿ ಬಂದ ಬಳಿಕ ಬಾಗಲಕೋಟೆಯಲ್ಲಿ ಸಾಮರಸ್ಯ ಮೂಡಿದ್ದು, ಬಿಜೆಪಿ ರಾಜಕೀಯ ಇಲ್ಲಿ ನಡೆಯಲ್ಲ, ಬದಲಾಗಿ ನಾವು ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ದಾವಣಗೆರೆ | ಸಮರ್ಥ್ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು
“ಶಿಗ್ಗಾಂವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಿಎಂ ಆಗಿದ್ದವರ ಪುತ್ರನನ್ನೇ ಸೋಲಿಸಿ ನಾವು ಗೆದ್ದಿದ್ದೇವೆ. ಹೀಗಾಗಿ ಈಗ ಎದುರಾಗಿರುವ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿಜಯ ಸಾಧಿಸುವುದು ಖಚಿತ” ಎಂದರು.




