ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವ ತಮ್ಮ ಯೋಜಿತ ಪ್ರವಾಸದ ಕುರಿತು ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ತೀವ್ರ ತಿರುಗೇಟು ನೀಡಿದ್ದಾರೆ. ಇದರ ನಡುವೆಯೇ ತಮ್ಮ ಬಹುಚರ್ಚಿತ ‘ಪಿಡಿಎ’ ಸೂತ್ರಕ್ಕೆ ಹೊಸ ವ್ಯಾಖ್ಯಾನ ನೀಡುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಸೆಂಬರ್ 12ರಂದು ತಮ್ಮ ಕುಟುಂಬ ಸಮೇತ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ನಿರ್ಧರಿಸಿರುವ ಅಖಿಲೇಶ್ ಯಾದವ್ ಅವರ ನಡೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಇದು ಚುನಾವಣಾ ಗಿಮಿಕ್ ಮತ್ತು ತುಷ್ಟೀಕರಣದ ರಾಜಕೀಯ” ಎಂದು ಟೀಕಿಸಿದ್ದರು.
ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರುಪಯೋಗ: ಎಸ್‌ಐಟಿಯಿಂದ ದೇವಾಲಯದಲ್ಲಿ ಹಲವು ಮಂದಿಯ ವಿಚಾರಣೆ
ಇದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್, “ದೇವರು ಎಲ್ಲರಿಗೂ ಸೇರಿದವನು. ನಾವು ಈ ಹಿಂದೆಯೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೆವು, ಮುಂದೆಯೂ ಭೇಟಿ ನೀಡುತ್ತೇವೆ. ಕೇದಾರೇಶ್ವರ, ಮಥುರಾ ಮತ್ತು ಬೃಂದಾವನಕ್ಕೂ ನಾವು ಹೋಗುತ್ತೇವೆ. ಹೀಗಿರುವಾಗ ನಮ್ಮ ಭೇಟಿಯ ಬಗ್ಗೆ ಬಿಜೆಪಿಗೆ ಯಾಕಿಷ್ಟೊಂದು ಆತಂಕ?” ಎಂದು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಎಸ್‌ಪಿ ರಾಜಕೀಯ ಸಮೀಕರಣದಲ್ಲಿ ಪಿಡಿಎ ಎಂದರೆ ‘ಪಿಛ್ಡಾ (ಹಿಂದುಳಿದ), ದಲಿತ, ಅಲ್ಪಸಂಖ್ಯಾತ’ (Pichhda, Dalit, Alpsankhyak) ಎಂಬ ಅರ್ಥವಿದೆ. ಆದರೆ ಅಯೋಧ್ಯೆ ಪ್ರವಾಸದ ವಿಷಯದಲ್ಲಿ ಬಿಜೆಪಿಯ ವಾಗ್ದಾಳಿಗೆ ಕೌಂಟರ್ ನೀಡಿದ ಅಖಿಲೇಶ್, “ಪಿಡಿಎ ಎಂದರೆ ‘ಪೆಹ್ಲೆ ದರ್ಶನ, ಫಿರ್ ಆಶೀರ್ವಾದ’ (ಮೊದಲು ದರ್ಶನ, ಆಮೇಲೆ ಆಶೀರ್ವಾದ)” ಎಂದು ಹೊಸ ವ್ಯಾಖ್ಯಾನ ನೀಡಿದರು. ಅಲ್ಲದೆ ತಮ್ಮ ಕುಟುಂಬದಲ್ಲಿ ಈಗಾಗಲೇ ‘ಶಿವ’ ಮತ್ತು ‘ರಾಮ್ ಗೋಪಾಲ್’ ಇದ್ದು, ದೇವರ ಆಶೀರ್ವಾದ ತಮ್ಮ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಮತ್ತೊಂದೆಡೆ, ಅಖಿಲೇಶ್ ಅವರ ಅಯೋಧ್ಯೆ ಭೇಟಿಯ ನಿರ್ಧಾರವನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮಾತನಾಡಿ, “ಎಸ್‌ಪಿ ಆಡಳಿತಾವಧಿಯಲ್ಲಿ ಗೂಂಡಾಗಳು ಮತ್ತು ಮಾಫಿಯಾಗಳಿಗೆ ಆಶ್ರಯ ನೀಡಿದವರು ಇಂದು ‘ರಾಮ್ ರಾಮ್’ ಎನ್ನುತ್ತಿದ್ದಾರೆ. ಎಸ್‌ಪಿ ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಪಂಕಜ್ ಚೌಧರಿ ಹಾಗೂ ಇತರ ಬಿಜೆಪಿ ನಾಯಕರು, “ರಾಮಭಕ್ತರ ಮೇಲೆ ಗುಂಡು ಹಾರಿಸಿದ ಇತಿಹಾಸವಿರುವ ಸಮಾಜವಾದಿ ಪಾರ್ಟಿ ನಾಯಕರು ಅಯೋಧ್ಯೆಯ ಗರ್ಭಗುಡಿಗೆ ಕಾಲಿಡುವ ಮುನ್ನ ಕರಸೇವಕರ ಬಳಿ ಹಾಗೂ ರಾಮಭಕ್ತರ ಬಳಿ ಕ್ಷಮಾಪಣೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬೆಳವಣಿಗೆ ನಡೆದಿದ್ದು, ಅಯೋಧ್ಯೆ ಭೇಟಿ ಹಾಗೂ ಹಿಂದುತ್ವ ಮತ್ತು ಧಾರ್ಮಿಕ ಚೌಕಟ್ಟಿನ ಸುತ್ತ ಎಸ್‌ಪಿ ಮತ್ತು ಬಿಜೆಪಿ ನಡುವೆ ವಾಗ್ ಯುದ್ಧ ತೀವ್ರಗೊಂಡಿದೆ.




