ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್ ಭವಿಷ್ಯಕ್ಕೆ ಕಾದಿರುವ ಸವಾಲುಗಳೇನು? ಈ ಹಗರಣದ ಹೂರಣವೇನು?
ಜಾಗತಿಕವಾಗಿ ಅತ್ಯಂತ ಮೌಲ್ಯಯುತ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಕ್ಕೆ ಅಗತ್ಯವಿರುವ ಶಕ್ತಿಶಾಲಿ ಚಿಪ್‌ಗಳನ್ನು ತಯಾರಿಸುವ ಅಮೆರಿಕದ ದೈತ್ಯ ಸಂಸ್ಥೆ ಎನ್‌ವಿಡಿಯಾ (Nvidia). ಪ್ರಸ್ತುತ ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಎನ್‌ವಿಡಿಯಾ ಪ್ರಸ್ತುತ ಅಭೂತಪೂರ್ವ ಆಂತರಿಕ ಮತ್ತು ರಾಜಕೀಯ ಚಂಡಮಾರುತಕ್ಕೆ ಸಿಲುಕಿದೆ. ಕಂಪನಿಯ ಸಹ-ಸಂಸ್ಥಾಪಕ ಮತ್ತು ಪ್ರಭಾವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೇನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನದ ವೈಫಲ್ಯ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಆರೋಪಗಳು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.
ಕೃತಕ ಬುದ್ಧಿಮತ್ತೆಯ ಕ್ರಾಂತಿಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಸಂಸ್ಥೆಯೊಂದರ ಮುಖ್ಯಸ್ಥರೇ ಈ ರೀತಿ ವಿವಾದ ಸುಳಿಯಲ್ಲಿ ಸಿಲುಕಿರುವುದು, ಜಾಗತಿಕ ಷೇರು ಮಾರುಕಟ್ಟೆಗಳು ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳ ಡಿಜಿಟಲ್ ಮೂಲಸೌಕರ್ಯ ಯೋಜನೆಗಳ ಮೇಲೆಯೂ ಕಪ್ಪು ನೆರಳು ಚೆಲ್ಲಿದೆ. ವಿಶೇಷವಾಗಿ, ಚೀನಾದೊಂದಿಗೆ ಅಮೆರಿಕ ಹೊಂದಿರುವ ತಂತ್ರಜ್ಞಾನ ಸಮರ ಮತ್ತು ತಂತ್ರಜ್ಞಾನ ಸೋರಿಕೆಯ ಭೀತಿಯ ನಡುವೆ ಈ ವಿದ್ಯಮಾನಗಳು ತೀವ್ರ ಸ್ವರೂಪ ಪಡೆದುಕೊಂಡಿವೆ.
ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣ: ಆರೋಪಿಗಳ ವಿರುದ್ಧ 3,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಚೀನಿ ಚಾರಣ ಆರೋಪ, ವಿವಾಹೇತರ ಸಂಬಂಧ
ಈ ಗಂಭೀರ ಬಿಕ್ಕಟ್ಟಿನ ಮೂಲವು ಸಿಂಗಾಪುರ ಮೂಲದ ‘ಮೆಗಾಸೀಡ್’ ಎಂಬ ಕಂಪನಿಯ ಚೀನಿ ಮೂಲದ ಉನ್ನತ ಅಧಿಕಾರಿಯಾದ ಆಲಿಸ್ ಹುವಾಂಗ್ ಮತ್ತು ಜೇನ್ಸನ್ ಹುವಾಂಗ್ ನಡುವಿನ ನಿಕಟ ಸಂಬಂಧದಿಂದ ಪ್ರಾರಂಭವಾಯಿತು. ದ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದ ಪ್ರಕಾರ, ಆಲಿಸ್ ಹುವಾಂಗ್ ಚೀನಾದ ಭದ್ರತಾ ಸಚಿವಾಲಯದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಗೂಢಚಾರಿ ಎಂದು ಅಮೆರಿಕದ ತನಿಖಾ ಸಂಸ್ಥೆಗಳು ಶಂಕಿಸಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಜೇನ್ಸನ್ ಹುವಾಂಗ್ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಪತ್ರ ಬರೆದು ತಮ್ಮ ವಿವಾಹೇತರ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.
ಅಮೆರಿಕವು ಚೀನಾಗೆ ಅತ್ಯಾಧುನಿಕ ಎಐ ಚಿಪ್‌ಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ. ಆದರೆ, ಆಲಿಸ್ ಹುವಾಂಗ್ ಪ್ರತಿನಿಧಿಸುತ್ತಿದ್ದ ಕಂಪನಿಯು ಸಿಂಗಾಪುರ ಮತ್ತು ಮಲೇಷ್ಯಾ ಮಾರ್ಗವಾಗಿ ಸುಮಾರು $2 ಶತಕೋಟಿಗಿಂತಲೂ ಹೆಚ್ಚಿನ ಮೌಲ್ಯದ ಅತ್ಯಾಧುನಿಕ ಎನ್‌ವಿಡಿಯಾ ಚಿಪ್‌ಗಳನ್ನು ಖರೀದಿಸಿ ಚೀನಾಗೆ ತಲುಪಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯವಾಗಿ ಎಫ್‌ಬಿಐ ತನಿಖೆ ನಡೆಸುತ್ತಿರುವುದನ್ನು ಖಚಿತಪಡಿಸಿದ್ದು, ಅಮೆರಿಕದ ಹೌಸ್ ಕಮಿಟಿಗಳು ಮತ್ತು ಸಿಐಎ ಉನ್ನತ ಮಟ್ಟದ ಮುಚ್ಚಿದ ಬಾಗಿಲಿನ ಸಭೆಗಳನ್ನು ನಡೆಸಿವೆ.
ಈ ಹಗರಣವು ವರದಿಯಾಗುತ್ತಿದ್ದಂತೆಯೇ ಎನ್‌ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ಶತಕೋಟಿ ಡಾಲರ್‌ಗಳಷ್ಟು ಬೃಹತ್ ಕುಸಿತ ಕಂಡುಬಂದಿದ್ದು, ಹೂಡಿಕೆದಾರರು ಗಲಿಬಿಲಿಗೊಂಡಿದ್ದಾರೆ. ಕಂಪನಿಯ ಆಡಳಿತ ಮಂಡಳಿಯು ಸ್ವತಂತ್ರ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ.
ಆದರೆ ಭಾರತದ ಚಿಪ್ ಆಮದಿನ ಮೇಲೆ ಬೀರುವ ಪರಿಣಾಮಗಳೇನು?
ಈ ಆತಂಕಕಾರಿ ಬೆಳವಣಿಗೆ ಬಳಿಕ ಸದ್ಯ ಉದ್ಭವಿಸಿರುವ ಪ್ರಶ್ನೆ “ಭಾರತಕ್ಕೆ ಅಗತ್ಯವಿರುವ ಎಐ ಚಿಪ್ ಹಾಗೂ ಪ್ರೊಸೆಸರ್‌ಗಳ ಪೂರೈಕೆಗೆ ಧಕ್ಕೆಯಾಗುವುದೇ?” ಎಂಬುದು. ದೇಶದ ಪ್ರಮುಖ ಟೆಕ್ ದೈತ್ಯ ಸಂಸ್ಥೆಗಳು, ಡೇಟಾ ಸೆಂಟರ್‌ಗಳು ಮತ್ತು ಉದಯೋನ್ಮುಖ ಎಐ ಸ್ಟಾರ್ಟ್‌ಅಪ್‌ಗಳು ತಮ್ಮ ಸರ್ವರ್‌ಗಳಿಗಾಗಿ ಎನ್‌ವಿಡಿಯಾದ ‘H100’ ಹಾಗೂ ‘GH200’ ಸೂಪರ್‌ಚಿಪ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿವೆ. ಎನ್‌ವಿಡಿಯಾ ಆಡಳಿತ ಮಂಡಳಿಯಲ್ಲಿನ ತನಿಖೆ ಮತ್ತು ಸಿಇಒ ಮೇಲಿನ ಒತ್ತಡದಿಂದಾಗಿ ಜಾಗತಿಕ ಪೂರೈಕೆ ಪ್ರಕ್ರಿಯೆಯಲ್ಲಿ ಮಂದಗತಿ ಉಂಟಾದರೆ, ಭಾರತೀಯ ಕಂಪನಿಗಳಿಗೆ ಚಿಪ್ ಸಿಗುವುದು ತಡವಾಗಬಹುದು.
ಇದನ್ನೂ ಓದಿ: ವೈರಲ್ ಆದ ಆಡಿಯೋ ನಕಲಿ – ‘ಎಐ’ ಸೃಷ್ಟಿತ; ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ: ಝಮೀರ್ ಅಹ್ಮದ್
ಇನ್ನೊಂದೆಡೆ ಈ ತಂತ್ರಜ್ಞಾನ ಸೋರಿಕೆ ಹಗರಣದಿಂದಾಗಿ ಅಮೆರಿಕ ಸರ್ಕಾರವು ಜಾಗತಿಕ ಮಟ್ಟದಲ್ಲಿ ಜಿಪಿಯು ಮತ್ತು ಪ್ರೊಸೆಸರ್ ರಫ್ತು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಯಿದೆ. ಅಮೆರಿಕವು ಮಿತ್ರ ರಾಷ್ಟ್ರಗಳಿಗೆ ಆದ್ಯತೆ ನೀಡಿದರೂ, ಪ್ರತಿಯೊಂದು ರಫ್ತು ಪರವಾನಗಿಗೂ ಹೆಚ್ಚುವರಿ ಭದ್ರತಾ ತಪಾಸಣೆಗಳನ್ನು ಕಡ್ಡಾಯಗೊಳಿಸಿದರೆ ಭಾರತೀಯ ಕಂಪನಿಗಳಿಗೆ ತಾಂತ್ರಿಕ ಪ್ರಕ್ರಿಯೆಗಳು ಸಂಕೀರ್ಣವಾಗಲಿವೆ.
ಕೇಂದ್ರ ಸರ್ಕಾರವು ಭಾರತದಲ್ಲೇ ಬೃಹತ್ ಎಐ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಸಾವಿರಾರು ಜಿಪಿಯುಗಳನ್ನು ಆಮದು ಮಾಡಿಕೊಳ್ಳಲು ಯೋಜಿಸಿದೆ. ಎನ್‌ವಿಡಿಯಾ ಕಂಪನಿಯ ಉನ್ನತ ಹಂತದಲ್ಲಿನ ಅಸ್ಥಿರತೆಯು ಈ ಆಮದು ಒಪ್ಪಂದಗಳ ಸಮಯಾವಧಿಯ ಮೇಲೆ ಪ್ರಭಾವ ಬೀರಬಹುದು.
ಮೋತಿಲಾಲ್ ಓಸ್ವಾಲ್, ಆಕ್ಸಿಸ್ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್‌ನಂತಹ ದೇಶದ ಪ್ರಮುಖ ಮ್ಯೂಚುವಲ್ ಫಂಡ್‌ಗಳು ಎನ್‌ವಿಡಿಯಾದಲ್ಲಿ ಹೂಡಿಕೆ ಹೊಂದಿದ್ದು, ಈ ಕುಸಿತದಿಂದ ಭಾರತೀಯ ಹೂಡಿಕೆದಾರರ ಮೇಲೆಯೂ ಅಲ್ಪಮಟ್ಟದ ಪ್ರಭಾವ ಬೀರಿದೆ. ಆದಾಗ್ಯೂ, ಜಾಗತಿಕ ಹೂಡಿಕೆದಾರರು ಎನ್‌ವಿಡಿಯಾದಿಂದ ಹೊರಬಂದು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಿದರೆ, ಭಾರತೀಯ ಷೇರು ಮಾರುಕಟ್ಟೆಗೆ ದೀರ್ಘಾವಧಿಯಲ್ಲಿ ವಿದೇಶಿ ಬಂಡವಾಳ ಹರಿದುಬರುವ ಸಾಧ್ಯತೆಯೂ ಇದೆ.
ಹೀಗೆ ಎನ್‌ವಿಡಿಯಾ ಮತ್ತು ಜೇನ್ಸನ್ ಹುವಾಂಗ್ ಸುತ್ತ ಹೆಣೆದುಕೊಂಡಿರುವ ಈ ಸಿಐಎ-ಎಫ್‌ಬಿಐ ತನಿಖೆ ಹಾಗೂ ರಾಜಕೀಯ ಗೂಢಚರ್ಯೆಯ ಹಗರಣವು ಜಾಗತಿಕ ತಂತ್ರಜ್ಞಾನ ಕ್ಷೇತ್ರವು ಎಷ್ಟು ಸೂಕ್ಷ್ಮವಾಗಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಒಂದೇ ಕಂಪನಿ ಅಥವಾ ವ್ಯಕ್ತಿಯ ಮೇಲೆ ಜಾಗತಿಕ ಎಐ ರಂಗದ ಭವಿಷ್ಯ ನಿಂತಿರುವುದು ಅಪಾಯಕಾರಿ ಎಂಬುದನ್ನು ಈ ಘಟನೆ ಇಡೀ ವಿಶ್ವಕ್ಕೆ ಸ್ಪಷ್ಟಪಡಿಸಿದೆ.
ಭಾರತದ ಮಟ್ಟಿಗೆ ಹೇಳುವುದಾದರೆ, ಈ ಬಿಕ್ಕಟ್ಟು ಅಲ್ಪಾವಧಿಯಲ್ಲಿ ಚಿಪ್ ಆಮದು ಮತ್ತು ಪೂರೈಕೆ ಪ್ರಕ್ರಿಯೆಯಲ್ಲಿ ಕೆಲ ಅಡೆತಡೆಗಳನ್ನು ಉಂಟುಮಾಡಬಹುದಾದರೂ, ದೀರ್ಘಾವಧಿಯಲ್ಲಿ ಇದು ಭಾರತಕ್ಕೆ ಕಣ್ಣು ತೆರೆಸುವ ಘಟನೆಯಾಗಬೇಕು. ‘ಸೆಮಿಕಂಡಕ್ಟರ್ ಮಿಷನ್’ ಮೂಲಕ ದೇಶದಲ್ಲೇ ಚಿಪ್ ತಯಾರಿಕೆ ಮತ್ತುಸ ವಿನ್ಯಾಸ ಕ್ಷೇತ್ರವನ್ನು ಸ್ವಾವಲಂಬಿಗೊಳಿಸುವುದು ಎಷ್ಟು ತುರ್ತು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ‘ಮೇಕ್ ಇನ್ ಇಂಡಿಯಾ’ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಇಂದಿಗೂ ವಿಶೇಶಗಳ ಮೇಲೆಯೇ ಅವಲಂಬನೆಯಾಗಿದೆ. ವಿದೇಶಿ ಸರಪಳಿಯ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಿ, ದೇಶೀಯವಾಗಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರೆ ಮಾತ್ರ ಇಂತಹ ಬಿಕ್ಕಟ್ಟುಗಳಿಂದ ಕೊಂಚ ಸುಧಾರಿಸಿಕೊಳ್ಳಲು ಸಾಧ್ಯವಾಗುವುದು.




