ನೋಯ್ಡಾದಲ್ಲಿ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಾದ್ಯಂತ ನಡೆಯುತ್ತಿರುವ ಶ್ರಮಿಕರ ‘ಅಂತಿಮ ಆಕ್ರಂದನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾರ್ಮಿಕರು ಮಾಸಿಕ 20,000 ರೂ. ಕೇಳುತ್ತಿರುವುದು ಅವರ ದುರಾಸೆಯಲ್ಲ, ಅದು ಅವರ ‘ಹಕ್ಕು’ ಎಂದು ಸಮರ್ಥಿಸಿದ್ದಾರೆ.
ಕಾರ್ಮಿಕರ ದಿನನಿತ್ಯದ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ರಾಹುಲ್ ಗಾಂಧಿ, “ನೋಯ್ಡಾದಲ್ಲಿ ಒಬ್ಬ ಕಾರ್ಮಿಕ ತಿಂಗಳಿಗೆ ಕೇವಲ 12,000 ರೂ. ದುಡಿಯುತ್ತಾನೆ. ಅದರಲ್ಲಿ 4,000 ದಿಂದ 7,000 ರೂ. ಹಣ ಕೇವಲ ಮನೆ ಬಾಡಿಗೆಗೇ ಹೋಗುತ್ತದೆ. ವರ್ಷಕ್ಕೆ ಇವರ ಸಂಬಳದಲ್ಲಿ 300 ರೂ. ಹೆಚ್ಚಾದರೆ, ಮನೆ ಮಾಲೀಕರು 500 ರೂ. ಬಾಡಿಗೆ ಹೆಚ್ಚಿಸುತ್ತಾರೆ” ಎಂದು ಕಾರ್ಮಿಕರ ಅಸಹಾಯಕತೆಯನ್ನು ವಿವರಿಸಿದರು.
”ಮಹಿಳಾ ಕಾರ್ಮಿಕರು ಗ್ಯಾಸ್ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ 5,000 ರೂ. ಕೊಟ್ಟು ಸಿಲಿಂಡರ್ ಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇದುವೇ ಕೇಂದ್ರ ಸರ್ಕಾರ ಹೇಳುತ್ತಿರುವ ‘ವಿಕಸಿತ ಭಾರತ’ದ ಅಸಲಿ ಸತ್ಯ” ಎಂದು ಲೇವಡಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಜಗತ್ತಿನಲ್ಲಿ ನಡೆಯುತ್ತಿರುವ ಆರ್ಥಿಕ ಸಮಸ್ಯೆಗಳು, ಅಮೆರಿಕದ ಟ್ಯಾರಿಫ್ ಯುದ್ಧ ಹಾಗೂ ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮಗಳು ಮೋದಿ ಅವರ ಆಪ್ತ ಉದ್ಯಮಿಗಳ ಮೇಲೆ ಬೀಳುತ್ತಿಲ್ಲ. ಬದಲಾಗಿ, ದಿನಗೂಲಿ ನಂಬಿ ಬದುಕುವ ಬಡ ಕಾರ್ಮಿಕರ ಮೇಲೆ ಬೀಳುತ್ತಿದೆ. ಅಲ್ಲದೆ, ಕಾರ್ಮಿಕರ ಕೆಲಸದ ಸಮಯವನ್ನು 12 ಗಂಟೆಗಳಿಗೆ ಹೆಚ್ಚಿಸುವ 4 ಹೊಸ ‘ಕಾರ್ಮಿಕ ಕಾನೂನು’ಗಳನ್ನು ಯಾವುದೇ ಚರ್ಚೆಯಿಲ್ಲದೆ ಜಾರಿಗೆ ತಂದಿರುವುದಕ್ಕೂ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲ್ಲದ ಪ್ರತಿಭಟನೆ, 300 ಜನರ ಬಂಧನ
ಕಾರ್ಮಿಕರು ಮಂಗಳವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಸೋಮವಾರವಷ್ಟೇ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಕಲ್ಲುತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿದ್ದವು. ಈ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು 300ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.




