ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟು ತೈಲದ ಬೆಲೆಗಳು ಬ್ಯಾರೆಲ್ಗೆ $110 ದಾಟಿರುವ ಈ ಸಂದರ್ಭವು ಜಾಗತಿಕ ಇಂಧನ ರಾಜಕೀಯದ ತೀವ್ರತೆ ಮತ್ತು ಅಸ್ಥಿರತೆಯನ್ನು ಬಹಿರಂಗಪಡಿಸುತ್ತದೆ. ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಸಮುದ್ರದಲ್ಲೇ ಸಿಲುಕಿರುವ ನಿರ್ಬಂಧಿತ ರಷ್ಯಾದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಬಗ್ಗೆ ಅಮೆರಿಕದ ಆಸಕ್ತಿ, ಅಂತರಾಷ್ಟ್ರೀಯ ರಾಜಕೀಯದಲ್ಲಿ ತತ್ವಗಳಿಗಿಂತ ಅವಶ್ಯಕತೆಗಳು ಹೇಗೆ ಮೇಲುಗೈ ಸಾಧಿಸುತ್ತವೆ ಎಂಬುದನ್ನು ತೋರಿಸುತ್ತದೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನತೆ, ಜಾಗತಿಕ ಇಂಧನ ಸರಬರಾಜಿನ ಸಮತೋಲನವನ್ನು ಬದಲಾಯಿಸುವ ಸಾಧ್ಯತೆಯನ್ನು ಸೂಚಿಸುತ್ತಿದ್ದು, ಕೇವಲ ಒಂದು ವಾರದ ಅವಧಿಯಲ್ಲೇ ರಾಜಕೀಯ ಹಾಗೂ ಆರ್ಥಿಕ ಸಮೀಕರಣಗಳು ಹೇಗೆ ತಿರುಗಿಬಿಡುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.
ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಜೋಡಿಸುವ ಹಾರ್ಮುಜ್ ಜಲಸಂಧಿಯ ನೀಲಿ ನೀರು ಜಾಗತಿಕ ಆರ್ಥಿಕತೆಯ ಜೀವನಾಡಿಯಾಗಿದೆ. ಇದೊಂದು ತೀರಾ ಕಿರಿದಾದ ಸಮುದ್ರ ಮಾರ್ಗ. ಕೆಲವು ಕಡೆ ಕೇವಲ 33 ಕಿ.ಮೀ ಅಗಲವಿದೆ. ಪ್ರಪಂಚದ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗದಷ್ಟು ತೈಲವು ಈ ಕಿರಿದಾದ ಮಾರ್ಗದ ಮೂಲಕ ಸಾಗುತ್ತದೆ. ಫೆಬ್ರವರಿ 28, 2026 ರಂದು ಇರಾನಿನ ಮೇಲೆ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ದಾಳಿ ನಡೆಸಿದ ನಂತರ, ಇರಾನ್ ಈ ಜಲಸಂಧಿಯ ಮೂಲಕ ಹಡಗುಗಳು ಸಂಚರಿಸದಂತೆ ತಡೆದಿದೆ. ಇದು ಇಂಧನ ಮಾರುಕಟ್ಟೆಯಲ್ಲಿ ತಲ್ಲಣವನ್ನುಂಟುಮಾಡಿದೆ. ಬೆಲೆಗಳು ಏರತೊಡಗಿವೆ.
ವಿಶ್ವದ ಒಟ್ಟು ಇಂಧನ ಪೂರೈಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ತೈಲ ಮತ್ತು ನೈಸರ್ಗಿಕ ಅನಿಲದ್ದೇ ಆಗಿದೆ (ಉಳಿದ ಭಾಗ ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಇಂಧನಗಳಿಂದ ಬರುತ್ತದೆ). ಇವು ಟ್ರಕ್ಗಳಿಂದ ಹಿಡಿದು ವಿಮಾನಗಳವರೆಗೆ ಎಲ್ಲಾ ವಾಹನಗಳೂ ಇದೇ ಇಂಧನವನ್ನು ಬಳಸುವುದು. ವಿದ್ಯುತ್ ಮತ್ತು ಅಡುಗೆ ಅನಿಲವನ್ನು ತಯಾರಿಸುವುದಕ್ಕೂ ಈ ಇಂಧನ ಬೇಕು. ಹಾಗೆಯೇ ಕೈಗಾರಿಕೆಗಳಿಗೆ ಇವು ಕಚ್ಚಾ ವಸ್ತುಗಳನ್ನು ಒದಗಿಸುತ್ತವೆ.
ಪರ್ಶಿಯನ್ ಗಲ್ಫ್ ಸುತ್ತಾ ಇರುವ ಪಶ್ಚಿಮ ಏಷ್ಯಾದ ದೇಶಗಳಾದ ಸೌದಿ ಅರೇಬಿಯಾ, ಯುಎಇ ಮತ್ತು ಇರಾನ್ ಇತ್ಯಾದಿ ಪಶ್ಚಿಮ ವಿಷಿಯಾದ ದೇಶಗಳು ವಿಶ್ವದಲ್ಲೇ ಅತಿ ಹೆಚ್ಚು ತೈಲ ಮತ್ತು ಅನಿಲವನ್ನು ಉತ್ಪಾದಿಸುವ ದೇಶಗಳು. ಹಾಗೆಯೇ ಅತಿ ಹೆಚ್ಚು ಇಂಧನ ಬಳಸುವ ಭಾರತ, ಚೀನಾ ಮತ್ತು ಜಪಾನ್ನಂತಹ ದೇಶಗಳು ಪೂರ್ವ ಹಾಗೂ ದಕ್ಷಿಣ ಏಷಿಯಾದಲ್ಲಿವೆ. ಆದರೆ ಈ ವಿಷ್ಯಾದ ದೇಶಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆಗೆ ಇಂಧನವನ್ನು ಒದಗಿಸುವುದಕ್ಕೆ ಬೇಕಾದ ತೈಲ ಸಂಗ್ರಹ ಇಲ್ಲ. ಹಾಗಾಗಿ ಅವು ಕಚ್ಚಾ ಹಾಗೂ ನೈಸರ್ಗಿಕ ಅನಿಲಕ್ಕೆ ಪಶ್ಚಿಮ ಏಷಿಯವನ್ನು ಅವಲಂಬಿಸಿವೆ. ಅವು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗಿ ಬರುವುದು.
ಅಮೆರಿಕ ಮತ್ತು ಪಶ್ಚಿಮ ಏಷ್ಯಾ
ತೈಲ ಸಂಪನ್ಮೂಲಗಳು ಕೆಲವೇ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಶಕ್ತಿಗಳ ನಡುವಿನ ಪೈಪೋಟಿಗೆ ಪ್ರಮುಖ ಕಾರಣ. ಅಮೆರಿಕ, ರಷ್ಯಾ, ವೆನೆಜುವೆಲಾ ಮತ್ತು ಕೆನಡಾ ಕೆಲವೇ ದೇಶಗಳಲ್ಲಿ ತೈಲ ಮತ್ತು ನೈಸರ್ಗಿಕ ಅನಿಲದ ಬೃಹತ್ ಸಂಗ್ರಹವಿದೆ.

ಅಮೆರಿಕವು ಇಂಧನ ಭೂರಾಜಕೀಯದಲ್ಲಿ ಪ್ರಧಾನ ಶಕ್ತಿಯಾಗಿದೆ. ಅದು ತೈಲ ಉತ್ಪಾದನೆ ಮತ್ತು ಬಳಕೆ ಎರಡರಲ್ಲೂ ಅಮೆರಿಕವು ಇಂಧನ ಭೂರಾಜಕೀಯದಲ್ಲಿ ಪ್ರಧಾನ ಮುಂದಿದೆ. ಅಮೆರಿಕದ ಒಬ್ಬ ವ್ಯಕ್ತಿ ಬಳಸುವ ಇಂಧನವು ಒಬ್ಬ ಭಾರತೀಯನಿಗಿಂತ 10 ಪಟ್ಟು ಮತ್ತು ಚೀನಾದ ವ್ಯಕ್ತಿಗಿಂತ 2.4 ಪಟ್ಟು ಹೆಚ್ಚಿದೆ. ಈ ಇಂಧನದ ಹಸಿವೇ ಅಮೆರಿಕದ ಅಂತರಾಷ್ಟ್ರೀಯ ನೀತಿಗಳಿಗೆ ಮುಖ್ಯ ಕಾರಣ.
1950ರವರೆಗೆ, ಪಶ್ಚಿಮ ಏಷ್ಯಾದ ತೈಲದ ಮೇಲಿನ ನಿಯಂತ್ರಣವು ಅಮೆರಿಕ ಮತ್ತು ಯುರೋಪಿನ ದೊಡ್ಡ ಕಂಪನಿಗಳ ಕೈಯಲ್ಲಿತ್ತು. ನಂತರದಲ್ಲಿ ಆಯಾ ದೇಶಗಳ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ತೈಲ ಕಂಪನಿಗಳು ತೈಲದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡವು. 1970ರ ದಶಕದಲ್ಲಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾದವು; ಈ ಸಮಯದಲ್ಲಿ ‘ಒಪೆಕ್’ಸಂಸ್ಥೆಯಲ್ಲಿ ಅರಬ್ ರಾಷ್ಟ್ರಗಳು ಹೆಚ್ಚಿನ ಪ್ರಭಾವ ಬೀರಲು ಪ್ರಾರಂಭಿಸಿದವು.
ಇದಕ್ಕೆ ಅಮೆರಿಕವು ಎರಡು ರೀತಿಯಲ್ಲಿ ಪ್ರತಿಕ್ರಿಯಿಸಿತು. 2000ರ ದಶಕದ ಮಧ್ಯಭಾಗದಿಂದ ಅಮೆರಿಕವು ಹೆಚ್ಚೆಚ್ಚು ಶೆಲ್ ಆಯಿಲ್ ತೆಗೆಯುವ ಮೂಲಕ ದೇಶದೊಳಗಿನ ತೈಲ ಉತ್ಪಾದನೆಯನ್ನು ಹೆಚ್ಚಿಸಿತು. ಕ್ರಮೇಣ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಯಿತು.
ಎರಡನೆಯದಾಗಿ, ತನ್ನ ಹಿತಾಸಕ್ತಿಗೆ ಅನುಕೂಲವಾಗುವಂತೆ ಬೇರೆ ದೇಶಗಳಲ್ಲಿ ಹಸ್ತಕ್ಷೇಪ ಮಾಡತೊಡಗಿತು. ಇದರಲ್ಲಿ ಗಲ್ಫ್ ಯುದ್ಧ (1990-91), ಇರಾಕ್ ಯುದ್ಧ (2003-11). ಇತ್ತೀಚಿನ ವೆನೆಜುವೆಲಾದ ಮೇಲಿನ ಕ್ರಮಗಳು (2026), ಮತ್ತು ಪ್ರಸ್ತುತ ನಡೆಯುತ್ತಿರುವ ಇರಾನ್ ವಿರುದ್ಧದ ಯುಎಸ್-ಇಸ್ರೇಲ್ ಯುದ್ಧಗಳು ಸೇರಿವೆ.
ಪ್ರಸ್ತುತ ಉತ್ಪಾದನಾ ಮಟ್ಟವು ಸಾಧಾರಣವಾಗಿದೆ. ವಿಶ್ವದ ಒಟ್ಟು ಪ್ರಮಾಣಿತ ತೈಲ ನಿಧಿಯ 39% ಪಾಲನ್ನು ವೆನೆಜುವೆಲಾ ಮತ್ತು ಇರಾನ್ ಒಟ್ಟಾಗಿ ಹೊಂದಿವೆ. ಮುಂದಿನ ದಿನಗಳಲ್ಲಿ ಈ ದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ತೈಲ ಸಿಗುತ್ತದೆ ಅನ್ನುವ ಕಾರಣಕ್ಕಾಗಿ ಇವು ಇಂದು ಮುಖ್ಯ ದೇಶಗಳಾಗಿವೆ. ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಲಾಭದ ಅಂದಾಜಿನಲ್ಲಿ ಇವುಗಳ ಪಾತ್ರ ಮಹತ್ವದ್ದು.
ಆದರೆ, ಹಾರ್ಮುಜ್ ಜಲಸಂಧಿ ಸ್ಥಗಿತವಾಗಿರುವುದರಿಂದ, ಕನಿಷ್ಠ ಅಲ್ಪಾವಧಿಗಾದರೂ ಟ್ರಂಪ್ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಮತ್ತು ಈ ಇಂಧನ ಬಿಕ್ಕಟ್ಟಿನಿಂದ ಅನಿರೀಕ್ಷಿತವಾಗಿ ರಷ್ಯಾ ಲಾಭಮಾಡಿಕೊಳ್ಳುತ್ತಿದೆ. 2022ರ ರಷ್ಯಾ-ಉಕ್ರೇನ್ ಯುದ್ಧದ ನಂತರ, ರಷ್ಯಾ ಪಾಶ್ಚಿಮಾತ್ಯ ದೇಶಗಳಲ್ಲಿ ಬಹಿಷ್ಕಾರಕ್ಕೆ ಒಳಗಾಗಿತ್ತು ವಿಶೇಷವಾಗಿ ಯುರೋಪ್ ಅದಕ್ಕೆ ಬಹಿಷ್ಕಾರ ಹಾಕಿತ್ತು. ಮತ್ತು ವ್ಯಾಪಾರ ನಿರ್ಬಂಧಗಳಿಂದಾಗಿ ದೀರ್ಘಕಾಲದವರೆಗೆ ಅದರ ತೈಲ ವ್ಯವಹಾರಕ್ಕೆ ತೊಂದರೆಯಾಗಿತ್ತು.
ಆದರೆ ಇದ್ದಕ್ಕಿದ್ದಂತೆ. ಪಶ್ಚಿಮ ಏಷ್ಯಾದ ತೈಲ ಉತ್ಪಾದನಾ ಸಾಮರ್ಥ್ಯವು ಕುಸಿಯುತ್ತಿದ್ದಂತೆ. ಇಂಧನ ಬೆಲೆಗಳನ್ನು ಸ್ಥಿರಗೊಳಿಸಲು ರಷ್ಯಾದ ತೈಲ ಅನಿವಾರ್ಯವಾಗಿದೆ. ಪಶ್ಚಿಮ ಏಷ್ಯಾವನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದಲ್ಲಿ ತೈಲದ ದಾಸ್ತಾನು ಇರುವುದು ರಷ್ಯಾದಲ್ಲಿ ಮಾತ್ರ.
ರಷ್ಯಾದ ತೈಲ ಮತ್ತು ಭಾರತ
ತೈಲ ಮಾರುಕಟ್ಟೆಗಳು ಪರಸ್ಪರ ಬಲವಾಗಿ ತೆಕ್ಕೆ ಹಾಕಿಕೊಂಡಿರುತ್ತವೆ. ಮಾರುಕಟ್ಟೆಯ ಯಾವುದೋ ಮೂಲೆಯಲ್ಲಿ ಸೃಷ್ಟಿಯಾಗುವ ಒಂದು ಸಣ್ಣ ಅಲೆ ದೊಡ್ಡ ಬಿರುಗಾಳಿಯಾಗಿ ಬಿಡಬಹುದು. ಭಾರತವು ಕಚ್ಚಾ ತೈಲದ ವಿಶ್ವದ ಎರಡನೇ ಅತಿದೊಡ್ಡ ಆಮದುದಾರ ಮತ್ತು ಮೂರನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಪೂರೈಕೆಯಲ್ಲಿ ತೊಂದರೆಯಾದರೆ ಭಾರತದಲ್ಲಿ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಯಾಗುತ್ತದೆ. ಅಷ್ಟೇ ಅಲ್ಲ, ತೈಲ ಮಾರುಕಟ್ಟೆಯಲ್ಲಿ ಭಾರತದ ಕ್ರಮಗಳು ಜಾಗತಿಕ ತೈಲ ಬೆಲೆಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ.

ಯುರೋಪಿಯನ್ ರಾಷ್ಟ್ರಗಳಲ್ಲಿ ಮಿತವಾದ ಆಂತರಿಕ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಿವೆ. ಅವು ತಮ್ಮ ಶೀತಲ ಚಳಿಗಾಲವನ್ನು ಎದುರಿಸಲು ಮುಖ್ಯವಾಗಿ ಇಂಧನ ಆಮದನ್ನೇ, ಅದರಲ್ಲೂ ವಿಶೇಷವಾಗಿ ರಷ್ಯಾದ ತೈಲವನ್ನು ಅವಲಂಬಿಸಿದ್ದವು. ಆದರೆ 2022ರಿಂದ ರಷ್ಯಾದ ಉತ್ಪನ್ನಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದರಿಂದ, ಯುರೋಪ್ ಈಗ ಮುಖ್ಯವಾಗಿ ಪಶ್ಚಿಮ ಏಷ್ಯಾವನ್ನು ಆಶ್ರಯಿಸಬೇಕಾಗಿ ಬಂತು.
ಈ ಸಂದರ್ಭದಲ್ಲಿ, ಭಾರತವು ರಷ್ಯಾದ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಪ್ರಾರಂಭಿಸಿತು. ಭಾರತದ ಒಟ್ಟು ತೈಲ ಖರೀದಿಯಲ್ಲಿ ರಷ್ಯಾದ ಪಾಲು ಗಮನಾರ್ಹವಾಗಿ ಹೆಚ್ಚಾಯಿತು-ಅಂದರೆ 2021ರಲ್ಲಿ ಇದ್ದ 2.5% ರಿಂದ 2023ರ ವೇಳೆಗೆ 39.0% ಕ್ಕೆ ಏರಿತು. ಕಚ್ಚಾ ತೈಲವನ್ನು ಸಂಸ್ಕರಣಾಗಾರಗಳಲ್ಲಿ (refineries) ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಮತ್ತು ಪೆಟ್ರೋಕೆಮಿಕಲ್ಸ್ಗಳಂತಹ ವಿವಿಧ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ, ಕಚ್ಚಾ ತೈಲದ ಆಮದಿನ ಮೇಲೆ ಅವಲಂಬಿತವಾಗಿದ್ದರೂ, ಚೀನಾ ಮತ್ತು ಭಾರತವು ಬೃಹತ್ ಸಂಸ್ಕರಣಾ ಸಾಮರ್ಥ್ಯವನ್ನು ನಿರ್ಮಿಸಿವೆ ಮತ್ತು ತಮ್ಮ ಸಂಸ್ಕರಿಸಿದ ತೈಲ ಉತ್ಪನ್ನಗಳ ಒಂದು ಭಾಗವನ್ನು ರಫ್ತು ಮಾಡುತ್ತವೆ. ಕೆಲವು ಭಾರತೀಯ ಸಂಸ್ಕರಣಾಗಾರಗಳು ರಿಯಾಯಿತಿ ದರದ ಕಚ್ಚಾ ತೈಲದಿಂದ ತಯಾರಿಸಿದ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಭಾರಿ ಲಾಭ ಗಳಿಸಿವೆ.

ಪಾಶ್ಚಿಮಾತ್ಯ ನಾಯಕರು ಮೇಲ್ನೋಟಕ್ಕೆ ವಿರೋಧ ವ್ಯಕ್ತಪಡಿಸಿದರೂ, 2022ರಿಂದ ಭಾರತದ ಬೇಡಿಕೆಯು ಭಾಗಶಃ ನಿರ್ಬಂಧಿತ ರಷ್ಯಾದ ತೈಲದ ಕಡೆಗೆ ತಿರುಗಿದ್ದರಿಂದ ತೈಲ ಬೆಲೆಗಳಲ್ಲಿ ಉಂಟಾದ ಸ್ಥಿರತೆಯನ್ನು ಅವರು ಮೌನವಾಗಿ ಸ್ವಾಗತಿಸಿದರು.
ಇಂದು, ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದು ಮತ್ತು ತೈಲ ಬೆಲೆಗಳು ಬ್ಯಾರೆಲ್ಗೆ $110 ದಾಟಿರುವುದರಿಂದ, ಮಾರುಕಟ್ಟೆಯನ್ನು ಶಾಂತಗೊಳಿಸಲು ಸಮುದ್ರದಲ್ಲೇ ಉಳಿದುಹೋಗಿರುವ ನಿರ್ಬಂಧಿತ ರಷ್ಯಾದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದನ್ನು ನೋಡಲು ಅಮೆರಿಕ ಹಪಹಪಿಸುತ್ತಿದೆ.
ಅಂತರಾಷ್ಟ್ರೀಯ ರಾಜಕೀಯದಲ್ಲಿ ಒಂದು ವಾರ ಎಂಬುದು ನಿಜಕ್ಕೂ ಸುದೀರ್ಘ ಸಮಯವಾಗಬಲ್ಲದು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಂತೆ, ಜಾಗತಿಕ ಇಂಧನ ವ್ಯವಸ್ಥೆಯು ಹೊಸ ರೂಪ ಪಡೆಯಬಹುದು.

(ಲೇಖಕರು: ಜಯನ್ ಜೋಸ್ ಥಾಮಸ್, ಅರ್ಥಶಾಸ್ತ್ರದ ಪ್ರಾಧ್ಯಾಪಕರು, ಐಐಟಿ ದೆಹಲಿ)
Originaly published in The Hindu.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




