ಕನ್ನಡ ನಾಡು, ನುಡಿ ಮೇಲೆ ಸದಾ ಅಭಿಮಾನ ಇರಬೇಕು ಎಂದು ಕರವೇ ಜಿಲ್ಲಾದ್ಯಕ್ಷ ಮಂಜುನಾಥ ನಾಲವಾರಕರ್ ಹೇಳಿದರು.
ನಗರದ ಕಲಾ ಮಂಡಳದಲ್ಲಿ ಕರವೇ(ಶಿವರಾಮೇಗೌಡ ಬಣ) ಸಂಘಟನೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನ್ನಡದ ರಾಜ್ಯೋತ್ಸವ ಹಾಗೂ ಕನ್ನಡಿಗರ ರತ್ನ ಪ್ರಶಸ್ತಿ ಮತ್ತು ಮಕ್ಕಳ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಪ್ರಾಚೀನ ಭಾಷೆ. ಕನ್ನಡ ನಮ್ಮ ಉಸಿರಾಗಬೇಕು. ನಮ್ಮ ಭಾವನೆಯನ್ನು ಸಮರ್ಪಕ ರೀತಿಯಲ್ಲಿ ವ್ಯಕ್ತಪಡಿಸಲು ಮಾತೃಭಾಷೆಯಿಂದ ಸಾಧ್ಯ’ ಎಂದರು.
ಕನ್ನಡ ಹೃದಯದ ಭಾಷೆಯಾಗಬೇಕು, ಕರ್ನಾಟಕ ಏಕೀಕರಣಕ್ಕಾಗಿ ಆಲೂರು ವೆಂಕಟರಾವ್, ಡೆಪ್ಯುಟಿ ಚನ್ನಬಸಪ್ಪ, ಗುದ್ಲೆಪ್ಪ ಹಳ್ಳಿಕೇರಿ ಸೇರಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ ಎಂದು ಅವರು ಹೇಳಿದರು. ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ರಾಜ್ಯದ ಕನ್ನಡ ಪರ ವಿವಿಧ ಸಂಘಟನೆಗಳ ಹೋರಾಟದ ಪ್ರತಿಫಲವೇ ಕನ್ನಡ ಉಳಿವಿಗೆ ಕಾರಣವಾಗಿದೆ. ಕನ್ನಡಕ್ಕಾಗಿ ನಿರಂತರ ಹೋರಾಟ ಮಾಡುವವರನ್ನು ಸ್ಮರಿಸುವ ಕೆಲಸ ಆಗಬೇಕು. ಅಂತವರಿಗೆ ರಾಜ್ಯ ಸರ್ಕಾರ ಗೌರವಿಸಿ ಪ್ರಶಸ್ತಿ ಪುರಸ್ಕಾರ ನೀಡಬೇಕು ಎಂದು ಅವರು ತಿಳಿಸಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಲಬುರಗಿ ರತ್ನ ಪ್ರಶಸ್ತಿ ನೀಡಿ ವಿತರಿಸಲಾಯಿತು.
ವೇದಿಕೆ ಮೇಲೆ ಉದ್ಯಮಿದಾರ ಅಭಿಶೇಕ ಬಾಲಾಜಿ, ಕರಾಟೆಪಟು ಮನೋಹರ ಬೀರನೂರ,ಕನ್ನಡಪರ ಹೋರಾಟಗಾರ ಸಚೀನ ಫರಹತಬಾದ,ಕರವೇ ಜಿಲ್ಲಾ ಗೌರವಾದ್ಯಕ್ಷ ರವಿ ವಾಲಿ,ರಾಜು ಮಾಳಾ,ಶರಣು ಹೊಸಮನಿ, ಅಮೃತ ಡಿಗ್ಗಿ ಸೇರಿದಂತೆ ಇತರರು ಇದ್ದರು.


