ಬೆಂಗಳೂರಿನ ಜಿಕೆವಿಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ 2026ರ ಕೃಷಿ ಮೇಳಕ್ಕೆ ಚಾಲನೆ ದೊರೆಯಿತು. ಬರ ನಿರ್ವಹಣಾ ತಂತ್ರಜ್ಞಾನಗಳು, ಹವಾಮಾನ ವೈಪರಿತ್ಯಗಳನ್ನು ತಡೆದುಕೊಳ್ಳಬಲ್ಲ ಕೃಷಿ ಪದ್ಧತಿಗಳು ಹಾಗೂ ಬರ ನಿರೋಧಕ ಸಿರಿಧಾನ್ಯಗಳ ಪರಿಕಲ್ಪನೆಯು ಈ ಬಾರಿಯ ಕೃಷಿ ಮೇಳದ ವಿಶೇಷವಾಗಿದೆ.

ಮೇಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ದೇಸಿ ರಾಸುಗಳ ಪ್ರದರ್ಶನ ಬಂದಿರುವವರ ಗಮನ ಸೆಳೆಯಿತು. ವಿವಿಧ ದೇಸಿ ತಳಿಗಳಾದ ಮಲೆನಾಡು ಗಿಡ್ಡ, ಗಿರ್, ಹಳ್ಳಿಕಾರ್ ರಾಸುಗಳು ಬಂದಿರುವ ಜನರ ಗಮನ ಸೆಳೆಯುತ್ತಿತ್ತು. ಅಲ್ಲಿದ್ದ ಬಂಡೂರು ಕುರಿ ತಳಿಯು ಮುಖ್ಯವಾಗಿ ಮಕ್ಕಳ ಗಮನ ಸೆಳೆಯುತ್ತಿದ್ದದು ವಿಶೇಷವಾಗಿತ್ತು.
ನಂತರ ಸಣ್ಣ ಹಿಡುವಳಿದಾರರಿಗೆ ಅಗತ್ಯವಾದ ತಂತ್ರಜ್ಞಾನ ಮಳಿಗೆಗಳು, ಟ್ರ್ಯಾಕ್ಟರ್, ಆಧುನಿಕ ತಂತ್ರಜ್ಞಾನದ ಉಪಕರಣವಾದ ಡ್ರೋನ್, ಸಾವಾಯವ ಗೊಬ್ಬರ, ಕ್ರಿಮಿನಾಶಕ ಔಷಧಿಗಳು, ಜಲ ನಿರ್ವಹಣಾ ತಂತ್ರಗಳ ಪ್ರಾತ್ಯಕ್ಷಿಕೆಗಳು, ಆಫ್ರಿಕಾ ಮೂಲದ ಕಡಿಮೆ ನೀರಿನಲ್ಲಿ ಬೆಳೆಯುವ ಮೇವು, ಅಜೋಲಾ ಕೃಷಿ ಪ್ರಾತ್ಯಕ್ಷಿಕೆಗಳು ನೆರೆದಿದ್ದ ಜನರ ಗಮನ ಸೆಳೆದವು.
ಗಜೇಂದ್ರ ಗಡದಿಂದ ಬಂದಿದ್ದ ಯುವ ರೈತ ದೇವರಾಜ್ ಅವರು ಈದಿನದೊಂದಿಗೆ ಮಾತನಾಡುತ್ತಾ, ಬರದ ಸಂದರ್ಭದಲ್ಲಿ ಇಂತಹ ಕೃಷಿ ಮೇಳಗಳಿಂದ ರೈತರಿಗೆ ಅನುಕೂಲವಾಗುತ್ತದೆ. ದೂರದ ಊರಿನಿಂದ ಬೆಂಗಳೂರಿಗೆ ಬರುವ ಬದಲು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಮ್ಮ ಊರಿನಲ್ಲೇ ನಮ್ಮ ಬದುಕು ಕಟ್ಟಿಕೊಳ್ಳಬಹುದು ಎಂದರು. ಸಾರ್ವಜನಿಕರೊಬ್ಬರು ಮಾತನಾಡಿ, ಇಂದಿ ಆಧುನಿಕ ಯುಗದಲ್ಲಿ ಕೃಷಿಯು ಕಾಣೆಯಾಗುತ್ತಿದೆ. ನಾವು ಮೂಲತಃ ಕೃಷಿಕರಾಗಿದ್ದು ಈಗ ನಮ್ಮ ಜಮೀನುಗಳು ಇದ್ದ ಸ್ಥಳಗಳೆಲ್ಲಾ ನಗರ ಪ್ರದೇಶವಾಗಿಬಿಟ್ಟಿದೆ. ಅದನ್ನು ನೆನಪಿಸಿಕೊಳ್ಳುವುದಕ್ಕಾಗಿ ಕೃಷಿ ಮೇಳಕ್ಕೆ ಬಂದಿದ್ದಾಗಿ ಹೇಳಿದರು. ಎಷ್ಟೇ ಆಧುನಿಕತೆ, ತಂತ್ರಜ್ಞಾನ ಬಂದರೂ ನಾವೆಲ್ಲರೂ ತಿನ್ನಬೇಕಾಗಿದ್ದು ಅನ್ನವನ್ನೇ ಹೊರತು ತಂತ್ರಜ್ಞಾನವನ್ನಲ್ಲ, ಆದುದರಿಂದ ಕೃಷಿ ಉಳಿಯಬೇಕು, ಅದರಿಂದಲೇ ನಮ್ಮ ಭೂಮಿ ಉಳಿಯಲು ಸಾಧ್ಯ ಎಂದು ಕೃಷಿಯ ಮಹತ್ವವನ್ನು ತಿಳಿಸಿದರು.



ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರೈತರೊಬ್ಬರು ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೃಷಿ ಮೇಳ ತುಂಬಾ ನಿರಸವಾಗಿದೆ. ಕೃಷಿ ಮೇಳಗಳನ್ನು ಮಾಡುವ ಉದ್ದೇಶವೇ ರೈತರಿಗೆ ಹೊಸ ಮಾಹಿತಿ, ಆದುನಿಕ ತಂತ್ರಜ್ಞಾನದ ಪರಿಚಯ ಮಾಡಿಸುವುದೇ ಹೊರತು ಪಿಕ್ನಿಕ್ ಸ್ಪಾಟ್ ಮಾಡಬಾರದು. ಬರದ ಪರಿಸ್ಥಿತಿಯಲ್ಲಿ ರೈತರಿಗೆ ಅವಶ್ಯವಿರುವ ಮಾಹಿತಿಗಳ ಕೊರತೆ ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಮೇಳದಲ್ಲಿ ಈ ಬಾರಿ ಜನರ ಕೊರತೆಯೂ ಎದ್ದು ಕಾಣಿಸುತ್ತಿತ್ತು, ಕಳೆದ ಬಾರಿಯಷ್ಟು ಮಳಿಗೆಗಳೂ ಇರಲಿಲ್ಲ, ಪ್ರಾತ್ಯಕ್ಷಿಕೆಗಳೂ ಕಡಿಮೆ ಇದ್ದದ್ದು ಕಂಡುಬಂದಿತು. ಬರದ ಕಾರಣದಿಂದ ಈ ಬಾರಿಯ ಕೃಷಿ ಮೇಳವನ್ನು ಸರಳವಾಗಿ ನಡೆಸುತ್ತಿರುವುದಾಗಿ ಮಾತುಗಳು ಕೇಳಿ ಬಂದರೂ ಕೂಡ, ರೈತರಿಗೆ ಮಾಹಿತಿಯನ್ನು ಕೊಡಲು ಸರಳ, ಆಡಂಬರ ಎನ್ನುವುದು ಬರುವುದಿಲ್ಲ ಎಂಬ ಟೀಕೆಯೂ ಕೇಳಿಬಂದಿತು.


