ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಪೊಲೀಸ್ ಇಲಾಖೆಯ ಅಧಿಸೂಚನೆಯನ್ನು ಆಧರಿಸಿ, ಕೆಇಎ ದಿನಾಂಕ 05.06.2026ರಂದು ಪ್ರಕಟಿಸಿದ್ದಂತೆ, ಈ ಪರೀಕ್ಷೆಯನ್ನು ಆಗಸ್ಟ್ 2, 2026ರಂದು ಮಧ್ಯಾಹ್ನ 2.30ರಿಂದ 4 ಗಂಟೆಯವರೆಗೆ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಕೆಲವು ಅಭ್ಯರ್ಥಿಗಳು ಮಧ್ಯಾಹ್ನದ ಪರೀಕ್ಷಾ ಕೇಂದ್ರಗಳು ಬೆಳಿಗ್ಗೆಯ ಕೇಂದ್ರಗಳಿಂದ ದೂರವಿರುವುದರಿಂದ ಪರೀಕ್ಷೆ ಮುಗಿಸಿ ಮಧ್ಯಾಹ್ನದ ಕೇಂದ್ರಕ್ಕೆ ತಲುಪಲು ಕಷ್ಟವಾಗುತ್ತದೆ ಎಂದು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.
ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಈಗ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣವನ್ನು ಒಳಗೊಂಡ ಸಾಮಾನ್ಯ ಅಧ್ಯಯನ ವಿಷಯಗಳ ಪರೀಕ್ಷೆಯು ಆಗಸ್ಟ್ 2, 2026ರಂದು ಸಂಜೆ 4 ರಿಂದ 5.30ರವರೆಗೆ ನಡೆಯಲಿದೆ.
ದಿನಾಂಕ 05.06.2026ರ ಅಧಿಸೂಚನೆಯಲ್ಲಿ ತಿಳಿಸಲಾದ ಇತರೆ ನಿಯಮಗಳು ಹಾಗೂ ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.




