ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?

Date:

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು ತಮಗೆ ಬೇಕಾದಂತೆ ಬದಲಾಯಿಸುವ ಕಲೆ ಪೊಲೀಸರಿಗಿದೆ. ಗಡುವನ್ನು ಪೊಲೀಸರು ರಂಗೋಲಿ ಕೆಳಗೆ ತೂರಿ ತಪ್ಪಿಸಿಕೊಳ್ಳುತ್ತಾರೆ.

ಸಂವಿಧಾನದ 22(2) ವಿಧಿ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಹಳೆಯ ಬಿಎನ್ಎಸ್ಎಸ್ / ಸಿಆರ್‌ಪಿಸಿ 57ನೇ ವಿಭಾಗ) ಪ್ರಕಾರ, ಯಾವುದೇ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸಿದಾಗ, ಆತನನ್ನು ಬಂಧಿಸಿದ 24 ಗಂಟೆಗಳ ಒಳಗಾಗಿ ಹತ್ತಿರದ ನ್ಯಾಯಾಧೀಶರ (ಮ್ಯಾಜಿಸ್ಟ್ರೇಟ್) ಮುಂದೆ ಹಾಜರುಪಡಿಸುವುದು ಕಡ್ಡಾಯ. ಪ್ರಕೃತಿ ವಿಕೋಪ ಅಥವಾ ಪ್ರಯಾಣದ ಸಮಯವನ್ನು ಹೊರತುಪಡಿಸಿ, ಈ ಕಾಲಮಿತಿಯನ್ನು ಮೀರಿದರೆ ಆ ಬಂಧನ ಸಂಪೂರ್ಣವಾಗಿ ಅಕ್ರಮ ಮತ್ತು ಕಾನೂನುಬಾಹಿರ ಎನಿಸಿಕೊಳ್ಳುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವಿಳಂಬವಾದರೆ ಬಂಧಿತ ವ್ಯಕ್ತಿಯನ್ನು ತಕ್ಷಣವೇ ಬಿಡುಗಡೆ ಮಾಡುವುದು ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದೆ. ಈ ಕಾಯ್ದೆಯು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಬಲವಾದ ಅಸ್ತ್ರವೆಂದೇ ಪರಿಗಣಿಸಬಹುದು. ಆದರೆ ವಾಸ್ತವದಲ್ಲಿ ಬಂಧಿತರಿಗೆ ತಮ್ಮ ಮೂಲಭೂತ ಹಕ್ಕು ಧಕ್ಕುತ್ತಿದೆಯೇ?

- Advertisement -

ಖಂಡಿತವಾಗಿಯೂ ಇಲ್ಲ. ದೇಶದಲ್ಲಿ ತನಿಖಾ ಸಂಸ್ಥೆಗಳು ಮತ್ತು ಪೋಲಿಸ್ ವ್ಯವಸ್ಥೆಯು ಕಾನೂನಿನ ಈ ಕಟ್ಟುನಿಟ್ಟಿನ ಚೌಕಟ್ಟನ್ನು ದಾಟಿ ಎಂದೋ ಮುಂದೆ ಸಾಗಿದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಕಾನೂನು ಬಳಸಿಕೊಳ್ಳುವ ಅನೇಹ ರಹದಾರಿಗಳನ್ನು ಕಂಡುಕೊಂಡಿವೆ. ಸುಪ್ರೀಂ ಕೋರ್ಟ್ ಅದೆಷ್ಟೇ ಬಾರಿ, ಎಷ್ಟೇ ಬಿಗಿಯಾದ ಆದೇಶಗಳನ್ನು ಹೊರಡಿಸಿದರೂ, ಪೊಲೀಸರು ಮಾತ್ರ ನಿರಂತರವಾಗಿ ‘ರಂಗೋಲಿ ಕೆಳಗೆ ನುಗ್ಗುವ’ ತಂತ್ರಗಳನ್ನು ಅನುಸರಿಸುತ್ತಲೇ ಬಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು ಕೆವಿಎನ್ ಅವರು ವರ್ಗ ನೆಲೆಯ ಹಿನ್ನೆಲೆಯಲ್ಲಿ ನೋಡುತ್ತ ನೀಡುವ ಒಳನೋಟಗಳು ಭಾಷೆ ಮತ್ತು ಸಮಾಜದ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಬೆಳಕಿಂಡಿಯಾಗಿವೆ....

ರಂಗೋಲಿ ಕೆಳಗೆ ತೂರುವ ಪೊಲೀಸರ ತಂತ್ರಗಳು

Advertisements

ಬಂಧಿತರ ಮೂಲಭೂತ ಹಕ್ಕುಗಳನ್ನು ಕಸಿಯಲು ಪೊಲೀಸರು ಬಳಸುವ ಅತ್ಯಂತ ಪ್ರಮುಖ ತಂತ್ರ ಎಂದರೆ ‘ಅಧಿಕೃತ ಬಂಧನ’ದ ಸಮಯವನ್ನು ಮುಂದೂಡುವುದು. ಒಬ್ಬ ವ್ಯಕ್ತಿಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಕರೆತಂದು, ದಿನಗಟ್ಟಲೆ ಠಾಣೆ ಅಥವಾ ಯಾವುದೋ ರಹಸ್ಯ ಸ್ಥಳಗಳಲ್ಲಿ ಪೊಲೀಸರು ಇರಿಸಿಕೊಳ್ಳುತ್ತಾರೆ. ವ್ಯಕ್ತಿಯನ್ನು ಬಂಧಿಸಿದ್ದರೂ, ದಿನಚರಿಯಲ್ಲಿ ಮಾತ್ರ ಆತನ ಅಥವಾ ಆಕೆಯ ಬಂಧನವನ್ನು ದಾಖಲಿಸಲ್ಲ. ವಿಚಾರಣೆ ಮುಗಿದು, ಪ್ರಮುಖ ಸಾಕ್ಷ್ಯ ಅಥವಾ ಮಾಹಿತಿ ದೊರೆತ ನಂತರವಷ್ಟೇ ಅಧಿಕೃತವಾಗಿ ‘ಬಂಧಿಸಲಾಗಿದೆ’ ಎಂದು ದಾಖಲಿಸಿಕೊಳ್ಳುತ್ತಾರೆ. ಅಲ್ಲಿಂದ 24 ಗಂಟೆಗಳ ಸಮಯದ ಲೆಕ್ಕಾಚಾರವನ್ನು ಪ್ರಾರಂಭಿಸಲಾಗುತ್ತದೆ.

ಇದನ್ನೂ ಓದಿ: ಬಂಧನದ ವೇಳೆ ಪೊಲೀಸರು ನಮ್ಮ ಮೊಬೈಲ್ ಕಸಿದುಕೊಂಡು ನಕಲಿ ಸಾಕ್ಷ್ಯ ಅಳವಡಿಸಿರುವ ಸಂಶಯವಿದೆ: ಸಿಜೆಪಿ ನಾಯಕರ ಗಂಭೀರ ಆರೋಪ

ಎರಡನೆಯದಾಗಿ ಪೊಲೀಸರು ಬಳಸುವ ತಂತ್ರ ಪ್ರಯಾಣದ ಸಮಯ. ಕಾನೂನು ಪ್ರಕಾರ ಬಂಧಿಸಿದ ಸ್ಥಳದಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದವರೆಗಿನ ಪ್ರಯಾಣದ ಸಮಯವನ್ನು 24 ಗಂಟೆಯ ಲೆಕ್ಕಾಚಾರದಿಂದ ಹೊರತುಪಡಿಸಬಹುದು. ಇದೂ ಪೊಲೀಸರಿಗೆ ಅಸ್ತ್ರವೇ! ಉದಾಹರಣೆ ಸಹಿತವಾಗಿ ನೋಡುವುದಾದರೆ; ಒಬ್ಬ ವ್ಯಕ್ತಿಯನ್ನು ಬೆಳಿಗ್ಗೆ ಬಂಧಿಸಿದರೂ, “ಆರೋಪಿ ತಲೆಮರೆಸಿಕೊಂಡಿದ್ದ, ಆತನನ್ನು ದೂರದ ಊರಿನಲ್ಲಿ ಅಥವಾ ಗಡಿ ಪ್ರದೇಶದಲ್ಲಿ ಹಿಡಿಯಲಾಯಿತು” ಎಂದು ದಾಖಲೆ ಸೃಷ್ಟಿಸಲಾಗುತ್ತದೆ ಎಂಬ ಆರೋಪಗಳಿವೆ. ಇನ್ನೂ ಹೆಚ್ಚಾಗಿ ‘ನ್ಯಾಯಾಲಯಕ್ಕೆ ಕರೆತರುವ ಹಾದಿಯಲ್ಲಿ ವಾಹನ ಕೆಟ್ಟುಹೋಯಿತು’ ಅಥವಾ ಸಂಚಾರ ದಟ್ಟಣೆ ಉಂಟಾಯಿತು’ ಎಂಬ ಕಾರಣಗಳನ್ನು ತೋರಿಸಿ ಸಮಯವನ್ನು ವಿಸ್ತರಿಸಿಕೊಳ್ಳುವ ಉದಾಹರಣೆಗಳನ್ನು ಕಾನೂನು ನೆರವು ಸೇವಾ ಪ್ರಾಧಿಕಾರದ (DLSA) ವಕೀಲರು ಹಲವು ಬಾರಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಡಿ.ಕೆ. ಬಸು ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ’ ಪ್ರಕರಣದ ಮಾರ್ಗದರ್ಶನ ಸೂತ್ರಗಳ ಪ್ರಕಾರ, ಬಂಧಿತ ವ್ಯಕ್ತಿಯ ವೈದ್ಯಕೀಯ ತಪಾಸಣೆ ಅತ್ಯಗತ್ಯ. ಆದರೆ ಪ್ರಾಯೋಗಿಕವಾಗಿ, ಈ ನಿಯಮವನ್ನೇ ಬಳಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲದಿದ್ದುದು, ಎಕ್ಸ್‌ರೇ ಅಥವಾ ಗಂಭೀರ ಪರೀಕ್ಷೆಗಳ ಅಗತ್ಯವಿದ್ದುದು ಅಥವಾ ಆರೋಪಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಕಾರಣಗಳನ್ನು ನೀಡಿ ಬಂಧನದ ಸಮಯವನ್ನು ಲೀಲಾಜಾಲವಾಗಿ 24 ಗಂಟೆಗಳ ಆಚೆಗೆ ನೂಕಲಾಗುತ್ತದೆ ಎಂಬ ಆರೋಪಗಳೂ ಹಲವು ಬಾರಿ ಕೇಳಿಬಂದಿವೆ.

ಇವೆಲ್ಲವುದಕ್ಕೂ ಮುಖ್ಯವಾಗಿ ವಾರಾಂತ್ಯ ಅಥವಾ ರಜಾದಿನಗಳಲ್ಲಿ ಬಂಧನ ಮಾಡುವುದು ಯಥೇಚ್ಛವಾಗಿ ನಡೆಯುತ್ತಿರುವ ತಂತ್ರ. ವಾರಾಂತ್ಯಗಳು ಅಥವಾ ಸತತ ರಜಾದಿನಗಳಲ್ಲಿ ಬಂಧನ ನಡೆಸಿದಾಗ, ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಡಕುಗಳನ್ನು ಸೃಷ್ಟಿಸಲಾಗುತ್ತದೆ. ರಜಾ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಮನೆಗೆ ಕರೆದೊಯ್ಯುವಾಗ ವಿಳಂಬವಾಯಿತು ಅಥವಾ ಸೂಕ್ತ ಭದ್ರತೆ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ವಿವರಣೆ ನೀಡಲಾಗುತ್ತದೆ ಎಂಬ ಆರೋಪಗಳೂ ಇವೆ. ಸಂಜೆ ಅಥವಾ ರಾತ್ರಿಯ ವೇಳೆ ಬಂಧನ ತೋರಿಸಿ, ಮರುದಿನ ನ್ಯಾಯಾಲಯದ ಕಲಾಪದ ವೇಳೆಗೆ ಸರಿಯಾಗಿ ಹಾಜರುಪಡಿಸುವ ಮೂಲಕ 24 ಗಂಟೆಯ ಅಂಚಿನಲ್ಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.

ಈ ಬಗ್ಗೆ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಬಿ ಟಿ ವೆಂಕಟೇಶ್, “ಇದು ಸರ್ವೇ ಸಾಮಾನ್ಯವಾದ ವಿಷಯ. ಬಹುಪಾಲು ಪೊಲೀಸರು ಆರೋಪಿಯನ್ನು ಬಂಧಿಸಿದ ಮೇಲೆ, ಬಂಧಿಸಿದ್ದೇವೆ ಎಂದು ತೋರಿಸದೆ ದಿನಗಟ್ಟಲೇ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಾಗ 8-10 ತಾಸಿಗಿಂತ ಮುಂಚೆ ಬಂಧಿಸಲಾಗಿದೆ ಎಂದು ಉಲ್ಲೇಖಿಸುತ್ತಾರೆ. ಕೋರ್ಟ್ ದಾಖಲೆಯಲ್ಲಿ ಬಂಧನವಾಗಿ 24 ಗಂಟೆಗಳು ದಾಟಿಲ್ಲ ಎಂದು ಇರುತ್ತದೆ. ಆದರೆ ಬಂಧನವಾಗಿ ಒಂದು ವಾರ ಬೇಕದರೂ ಆಗಿರಬಹುದು. ಇದು ನಮ್ಮ ದೇಶದ ಪರಿಸ್ಥಿತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಬಂಧಿಸಿದವರನ್ನು ಕೂಡಲೇ ಹಾಜರುಪಡಿಸಲಾಗಿದೆಯೇ? ಕಾನೂನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಸರ್ಕಾರಕ್ಕೆ ಯಾವುದೇ ಆಸಕ್ತಿ ಇರುವುದಿಲ್ಲ. ಸಾಮಾನ್ಯವಾಗಿಯೇ ನಾವು ಸರ್ಕಾರ ಕಾನೂನು ಪಾಲಿಸುತ್ತಿಲ್ಲ ಎಂದು ಹೇಳುತ್ತೇವೆ. ಒಬ್ಬ ಭ್ರಷ್ಟ, ಕ್ರಿಮಿನಲ್ ಅಥವಾ ಒಬ್ಬ ಮುಗ್ಧ- ಹೀಗೆ ಯಾರೇ ಆದರೂ ಹೇಳುವುದು ಇದನ್ನೇ. ಆದ್ದರಿಂದ ಕೋರ್ಟ್ ಪೊಲೀಸರ ಮಾತನ್ನು, ಅವರು ನೀಡುವ ದಾಖಲೆಗಳನ್ನು ನಂಬುತ್ತದೆ. ಇದು ಒಂದು ರೀತಿಯಲ್ಲಿ ವಿಷವರ್ತುಲ. ಇವೆಲ್ಲವುದಕ್ಕೂ ಬಲಿಯಾಗುವುದು ಸರಳ ಜೀವಿ. ಯಾವ ರೀತಿ ವ್ಯವಸ್ಥೆ ಹದಗೆಟ್ಟಿದೆ ಎಂಬ ದೃಷ್ಟಿಯಿಂದ ನಾವು ಈ ವಿಚಾರವನ್ನು ನೋಡಬೇಕಾಗುತ್ತದೆ” ಎಂದು ತಿಳಿಸಿದರು.

“ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಹಲವಾರು ಮಂದಿಯ ರಕ್ಷಣೆಗೆ ನಮ್ಮ ತಂಡ ಮುಂದಾಗಿತ್ತು. ಆದರೂ ಕರ್ನಾಟಕದಲ್ಲಿ 52 ದೇಶದ್ರೋಹದ ಪ್ರಕರಣಗಳು ದಾಖಲಾಗಿದ್ದವು. ಇವೆಲ್ಲವೂ ಕೋವಿಡ್ ಬಳಿಕ ನಮ್ಮ ಗಮನಕ್ಕೆ ಬಂದಿದ್ದು. ಬಳ್ಳಾರಿಯಲ್ಲಿ ವಾಟ್ಸಾಪ್ ಮೆಸೇಜ್ ಒಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಹುಡುಗನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆತನ ಅಪ್ಪ-ಅಮ್ಮ ಜಮೀನು ಮಾರಿ ಜಾಮೀನು ಕೊಡಿಸಿದ್ದರು. ಇವೆಲ್ಲವು ನಮಗೆ ತಿಳಿದಿರಲಿಲ್ಲ. ಈ ದೇಶದಲ್ಲಿ ಅನ್ಯಾಯ ಸರ್ವೇಸಾಮಾನ್ಯವಾಗಿದೆ” ಎಂದರು.

“ಗಣಿಗಾರಿಕೆ ವಿರುದ್ಧವಾಗಿ 250 ಸಂಘಟನೆಗಳ ಒಕ್ಕೂಟವನ್ನು ಮಾಡಿ ಹೋರಾಟ ನಡೆಸಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತೆ ಮುನ್ನಿ ಹನ್ಸ್ದಾ ಎಂಬವರು ಜಾರ್ಖಂಡ್‌ನಲ್ಲಿ ಟಾಟಾ ಕಂಪನಿಯ ಗಣಿಗಾರಿಕೆ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಯಥೇಚ್ಛ ಬೆಂಬಲವಿದೆ. ಬುಡಕಟ್ಟು ಸಮುದಾಯವು ಹನ್ಸ್ದಾರನ್ನು ತಮ್ಮ ನಾಯಕಿಯಾಗಿ ಕಾಣುತ್ತದೆ. ಆಕೆಯ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಯಿತು. ಆಕೆ ತನ್ನ ಗಂಡನ ಮೋಟರ್ ಸೈಕಲ್ ಅನ್ನು ಕದ್ದಿದ್ದಾಳೆ ಎಂದು ದೂರು ದಾಖಲಿಸಲಾಗಿದೆ. ಹೀಗೆ ಹೋರಾಟಗಾರರ ವಿರುದ್ಧ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಹನ್ಸ್ದಾ ಜತೆಗಿದ್ದ ಸಾಮಾಜಿಕ ಹೋರಾಟಗಾರ ಆರೆಂಟು ತಿಂಗಳು ಜೈಲಲ್ಲಿದ್ದರು. ಕ್ಷುಲ್ಲಕ ಪ್ರಕರಣಕ್ಕೆ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಬೇಕಾಯಿತು” ಎಂದು ಘಟನೆಯನ್ನು ವಿವರಿಸಿದರು.

ಇದನ್ನೂ ಓದಿ: ಕೊಡಗು | ನಿಷೇಧಿತ ಕೆಂಪು ಪಟಾಕಿ ಮೇಲೆ ಖಾಕಿ ಕೆಂಗಣ್ಣು

“ಈ ದೇಶದಲ್ಲಿ ಪೊಲೀಸರು ಯಾವ ಆರೋಪವನ್ನು ಬೇಕಾದರೂ ಹೊರಿಸಬಹುದು. ನಾವು ಪೊಲೀಸರನ್ನು ಬೈಯುತ್ತೇವೆ. ಆದರೆ ಅದು ತಪ್ಪು. ಪೊಲೀಸರು ಯಾವ ಸರ್ಕಾರವಿರುತ್ತದೆಯೋ ಅದಕ್ಕೆ ಬೇಕಾದಂತೆ ನಡೆದುಕೊಳ್ಳುತ್ತಾರೆ ಅಷ್ಟೆ” ಎಂದು ತಿಳಿಸಿದರು.

ಸಿವಿಲ್ ಲಿಬರ್ಟೀಸ್ ಯೂನಿಯನ್ (PUCL) ನಂತಹ ಮಾನವ ಹಕ್ಕುಗಳ ಸಂಸ್ಥೆಗಳು ವರದಿ ಮಾಡಿರುವಂತೆ, ಅನೇಕ ಸಂದರ್ಭಗಳಲ್ಲಿ ಠಾಣೆಯ ಸಿಸಿಟಿವಿ ಕ್ಯಾಮೆರಾಗಳು “ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ” ಎಂಬ ನೆಪ ನೀಡಲಾಗುತ್ತದೆ. ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ‘ಪರಮ್‌ವೀರ್ ಸಿಂಗ್ ಸೈನಿ’ ಪ್ರಕರಣದ ತೀರ್ಪಿದ್ದರೂ, ಠಾಣೆಯ ಒಳಗಿನ ಅಕ್ರಮ ತಡೆಯನ್ನು ಮುಚ್ಚಿಹಾಕಲು ಕ್ಯಾಮೆರಾ ಬಂದ್ ಮಾಡುವ ಅಥವಾ ದೃಶ್ಯಗಳನ್ನು ಅಳಿಸಿಹಾಕುವ ಘಟನೆಗಳು ವರದಿಯಾಗುತ್ತಲೇ ಇವೆ.

ವಾಸ್ತವದಲ್ಲಿ ಬಂಧನದ 24 ತಾಸಿನ ಗಡುವು ಎಂಬುದು ಕೇವಲ ಒಂದು ತಾಂತ್ರಿಕ ನಿಯಮವಲ್ಲ; ಅದು ಸಂವಿಧಾನವು ಪ್ರಜೆಗಳಿಗೆ ನೀಡಿದ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು. ತನಿಖಾ ಸಂಸ್ಥೆಗಳ ದಬ್ಬಾಳಿಕೆ ಮತ್ತು ಅಕ್ರಮ ಬಂಧನವನ್ನು ತಡೆಯಲು ನ್ಯಾಯಾಂಗ ರೂಪಿಸಿದ ಬಲವಾದ ರಕ್ಷಣಾ ಕವಚವಿದು. ಸುಪ್ರೀಂ ಕೋರ್ಟ್ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ವಿಳಂಬದ ಬಂಧನಗಳನ್ನು ರದ್ದುಗೊಳಿಸುವ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರೂ, ತನಿಖಾ ಹಂತದಲ್ಲಿ ನಡೆಯುವ ಈ ‘ರಂಗೋಲಿ ಕೆಳಗೆ ನುಗ್ಗುವ’ ತಂತ್ರಗಳು ಕಾನೂನಿನ ಆಶಯಕ್ಕೆ ಸವಾಲಾಗಿ ಪರಿಣಮಿಸಿವೆ.

ಈ ಅಕ್ರಮಗಳನ್ನು ತಡೆಯಲು ಕೇವಲ ಕಟ್ಟುನಿಟ್ಟಿನ ಆದೇಶಗಳು ಸಾಲದು; ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಸಿಸಿಟಿವಿ ಕಾರ್ಯನಿರ್ವಹಣೆಯನ್ನು ಡಿಜಿಟಲ್ ಆಗಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಬಂಧನದ ಸಮಯವನ್ನು ವಿದ್ಯುನ್ಮಾನ ವ್ಯವಸ್ಥೆಯಲ್ಲಿ ತಕ್ಷಣವೇ ನಮೂದಿಸುವ ಮತ್ತು ಉಚಿತ ಕಾನೂನು ನೆರವು ವಕೀಲರಿಗೆ ತಕ್ಷಣವೇ ಮಾಹಿತಿ ತಲುಪುವ ಪಾರದರ್ಶಕತೆ ಬರಬೇಕಿದೆ. ಆಗ ಮಾತ್ರ ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶಗಳು ಕಾಗದದ ಮೇಲಷ್ಟೇ ಉಳಿಯದೆ, ಪ್ರತಿಯೊಬ್ಬ ನಾಗರಿಕನ ಹಕ್ಕನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಹಾಗೆಯೇ ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸುವ ಜತೆಗೆ ಈ ಸರ್ಕಾರಗಳನ್ನೂ ಪ್ರಶ್ನಿಸುವುದು ಅತ್ಯವಶ್ಯಕ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಕರವೇ ಆಗ್ರಹ

ರಾಜ್ಯ ಸರ್ಕಾರ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು...

​’ಶಾಲೆಗಳ ಅಭಿವೃದ್ಧಿ ನೆಪದಲ್ಲಿ ಕಾರ್ಪೊರೇಟ್‌ಗಳಿಗೆ ಮಣೆ’: ರಾಜ್ಯ ಸರ್ಕಾರದ ವಿರುದ್ಧ ಎಸ್‌ಐಒ ಆಕ್ರೋಶ

'ಶಾಲಾ ಅಭಿವೃದ್ಧಿ'ಯ ಆಕರ್ಷಕ ನೆಪವೊಡ್ಡಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಖಾಸಗಿ ಕಾರ್ಪೊರೇಟ್...

ಔರಾದ್‌ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಘೂಳೆ, ರವೀಂದ್ರ ರೆಡ್ಡಿ

ಭಾರತೀಯ ಜನತಾ ಪಕ್ಷದ ಔರಾದ(ಬಿ) ಮಂಡಲದ ನೂತನ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಔರಾದ...

ಬಾಗಲಕೋಟೆ | ಕಬ್ಬು ತೂಕ ಮೋಸಕ್ಕೆ ಬ್ರೇಕ್; ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳ ತಪಾಸಣೆ

ಕಬ್ಬು ಅರೆಯುವ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಅನ್ಯಾಯವಾಗದಂತೆ...