ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಮತ್ತು ನಾಯಕಿ ನಿಶಾ ಕುಮಾರಿ ಭಗತ್ (38) ಶುಕ್ರವಾರ ಫೇಸ್‌ಬುಕ್‌ನಲ್ಲಿ ಲೈವ್ ಬಂದು, ತಮಗಾಗುತ್ತಿದ್ದ ಕಿರುಕುಳ, ಬೆದರಿಕೆಗಳ ಬಗ್ಗೆ ಗಂಭೀರ ಆರೋಪ ಮಾಡಿದ ಕೆಲವೇ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಶಾ ಭಗತ್ ಅವರು ತಮ್ಮ ಸಾವಿಗೂ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್ ಬಂದು ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಭೂ ಮಾಫಿಯಾಗಳ ಬೆದರಿಕೆ ಬಗ್ಗೆ ಕಣ್ಣೀರಿಡುತ್ತಾ ವಿಷಯ ಹಂಚಿಕೊಂಡಿದ್ದರು. ಅಲ್ಲದೆ, ಲೈವ್ ವಿಡಿಯೋದಲ್ಲಿ ಜಾರ್ಖಂಡ್ ಸರ್ಕಾರ, ಸ್ಥಳೀಯ ಪಿಥೋರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ, ಕೆಲವು ವ್ಯಕ್ತಿಗಳ ನಿರ್ಲಕ್ಷ್ಯ ಮತ್ತು ಕಿರುಕುಳವೇ ತಮ್ಮ ಈ ನಿರ್ಧಾರಕ್ಕೆ ಕಾರಣ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು.
ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ತೀವ್ರಗೊಂಡ ಯುವ ಪ್ರತಿಭಟನೆ; ಇಕ್ಕಟ್ಟಿನಲ್ಲಿ ಜೆಎಂಎಂ-ಕಾಂಗ್ರೆಸ್!
ವೈರಲ್ ವೀಡಿಯೊ ಹೊರಬಿದ್ದ ತಕ್ಷಣವೇ ಕುಟುಂಬಸ್ಥರು ಮತ್ತು ಬೆಂಬಲಿಗರು ಅವರನ್ನು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಘಟನೆ ಜಾರ್ಖಂಡ್‌ನ ರಾಜಕೀಯ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿರೋಧ ಪಕ್ಷದ ನಾಯಕರು ಮತ್ತು ಕೇಂದ್ರ ಸಚಿವರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಹೋರಾಟಗಾರರಿಗೆ ಮತ್ತು ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಸರ್ಕಾರ, ಪೊಲೀಸ್ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿಶಾ ಭಗತ್ ಅವರ ಫೇಸ್‌ಬುಕ್ ಲೈವ್ ವೀಡಿಯೊ ಹಾಗೂ ಅವರು ಕರೆ ಮಾಡಿದ್ದರೆನ್ನಲಾದ ವಿವರಗಳನ್ನು ಆಧಾರವಾಗಿಟ್ಟುಕೊಂಡು ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




