ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ವಂಚಿತ ಜನಾಂಗದ ಮಹಿಳೆಯೊಬ್ಬರು ಅತ್ಯುನ್ನತ ಸ್ಥಾನಕ್ಕೇರುವುದು ಸಾಮಾನ್ಯ ವಿಷಯವಲ್ಲ. ಒಂದೊಮ್ಮೆ ದೈನಂದಿನ ಊಟಕ್ಕಾಗಿ ಸರ್ಕಾರದ ಆಹಾರ ಕೂಪನ್‌ಗಳನ್ನು ಆಶ್ರಯಿಸಿ, ಏಕಾಂಗಿಯಾಗಿ ಮಗಳನ್ನು ಸಲಹುತ್ತಿದ್ದ ಮಹಿಳೆಯೊಬ್ಬರು ಇಂದು ಅಮೆರಿಕದ ರಾಜ್ಯವೊಂದರ ಅತ್ಯುನ್ನತ ಆಡಳಿತ ಸ್ಥಾನವನ್ನು ಅಲಂಕರಿಸಿದ್ದಾರೆ. ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಗ್ರೆಗ್ ಹುಲ್ ವಿರುದ್ಧ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಡೆಬ್ ಹಾಲಂಡ್ (Deb Haaland) ಅವರು ಅಮೆರಿಕದ ಪ್ರಥಮ ‘ನೇಟಿವ್ ಅಮೆರಿಕನ್ ಮಹಿಳಾ ಗವರ್ನರ್’ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಡೆಬ್ ಹಾಲಾಂಡ್ ಅವರ ಆರಂಭಿಕ ಬದುಕು ತೀವ್ರ ಕಷ್ಟ ಮತ್ತು ಸಂಕಷ್ಟಗಳಿಂದ ಕೂಡಿದ್ದು, ಅವರ ಈ ಸಾಧನೆಯ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ. 1960ರಲ್ಲಿ ಸೈನಿಕ ಕುಟುಂಬದಲ್ಲಿ ಜನಿಸಿದ ಹಾಲಂಡ್ (ಲಗುನಾ ಪುಯೆಬ್ಲೋ ಬುಡಕಟ್ಟು ಜನಾಂಗಕ್ಕೆ ಸೇರಿದವರು), ಬಾಲ್ಯದಲ್ಲಿ ಕುಟುಂಬದ ಸ್ಥಳಾಂತರದ ಕಾರಣ 13 ಸಾರ್ವಜನಿಕ ಶಾಲೆಗಳಲ್ಲಿ ವ್ಯಾಸಂಗ ಮಾಡಿದರು. ತಮ್ಮ ಮಗಳನ್ನು ಏಕಾಂಗಿಯಾಗಿ ಬೆಳೆಸುವ ಸವಾಲನ್ನು ಎದುರಿಸಿದ ಅವರು, ಬದುಕಿನ ನಿರ್ವಹಣೆಗೆ ಸರ್ಕಾರದ ಆಹಾರ ಕೂಪನ್‌ಗಳ ಮೇಲೆ ಆಶ್ರಯಿಸಬೇಕಾಯಿತು.
ಇದನ್ನೂ ಓದಿ: $1,400 ಬೆಲೆಯ ಗುಲಾಮನ ಮರಿಮೊಮ್ಮಗಳು ಈಗ ಗವರ್ನರ್: ಅಮೆರಿಕದಲ್ಲಿ ಇತಿಹಾಸ ಬರೆದ ಕೀಷಾ ಲ್ಯಾನ್ಸ್ ಬಾಟಮ್ಸ್
ದೈನಂದಿನ ವೆಚ್ಚಗಳನ್ನು ಸರಿದೂಗಿಸಲು ಕೆಟರಿಂಗ್ ಕೆಲಸ ಮಾಡುವುದರ ಜೊತೆಗೆ, ‘ಪ್ಯುಯೆಬ್ಲೋ ಸಾಲ್ಸಾ’ ಎಂಬ ಸಣ್ಣ ಉದ್ಯಮವನ್ನು ನಡೆಸಿ ಸ್ವಾವಲಂಬನೆಗೆ ಯತ್ನಿಸಿದರು. ಕಷ್ಟದ ನಡುವೆಯೂ ಶೈಕ್ಷಣಿಕ ಪಯಣ ಮುಂದುವರಿಸಿ, ತಮ್ಮ 34ನೇ ವಯಸ್ಸಿನಲ್ಲಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದಿಂದ ಪದವಿ ಮತ್ತು ನಂತರ ಕಾನೂನು ಪದವಿ (J.D.) ಪಡೆದರು.
ಅಮೆರಿಕ ರಾಜಕೀಯ ಇತಿಹಾಸದಲ್ಲಿ ಮೂರು ಪ್ರಮುಖ ಮೈಲಿಗಲ್ಲುಗಳು
ತಮ್ಮ 65ರ ಹರೆಯದ ನಂತರ ಸಕ್ರಿಯ ರಾಜಕೀಯ ಪ್ರವೇಶಿಸಿದ ಡೆಬ್ ಹಾಲಂಡ್, ಅಮೆರಿಕನ್ ರಾಜಕೀಯ ಚರಿತ್ರೆಯಲ್ಲಿ ಮೂರು ಬಾರಿ ಅಳಿಸಲಾಗದ ಇತಿಹಾಸ ನಿರ್ಮಿಸಿದ್ದಾರೆ. 2018ರಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಅಮೆರಿಕನ್ ಕಾಂಗ್ರೆಸ್‌ಗೆ (ಯು.ಎಸ್. ಜನಪ್ರತಿನಿಧಿ ಸಭೆ) ಆಯ್ಕೆಯಾಗುವ ಮೂಲಕ ಸಂಸತ್ ಪ್ರವೇಶಿಸಿದ ಪ್ರಥಮ ಇಬ್ಬರು ನೇಟಿವ್ ಅಮೆರಿಕನ್ ಮಹಿಳೆಯರಲ್ಲಿ ಒಬ್ಬರಾದರು.
2021ರಲ್ಲಿ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತಾವಧಿಯಲ್ಲಿ ಯುಎಸ್ ಆಂತರಿಕ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡು, ಯುಎಸ್ ಕ್ಯಾಬಿನೆಟ್ ದರ್ಜೆಯ ಸಚಿವೆಯಾದ ಪ್ರಥಮ ನೇಟಿವ್ ಅಮೆರಿಕನ್ ಎಂಬ ಕೀರ್ತಿಗೆ ಭಾಜನರಾದರು. 2026ರಲ್ಲಿ ನ್ಯೂ ಮೆಕ್ಸಿಕೋ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಗೆದ್ದು, ಅಮೆರಿಕದ ರಾಜ್ಯವೊಂದರ ಗವರ್ನರ್ ಆದ ಪ್ರಥಮ ನೇಟಿವ್ ಅಮೆರಿಕನ್ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮಾಡಿದರು.
ನ್ಯೂ ಮೆಕ್ಸಿಕೋ ರಾಜ್ಯದಲ್ಲಿ ಡೆಬ್ ಹಾಲಂಡ್ ಅವರ ಈ ಐತಿಹಾಸಿಕ ಗೆಲುವಿಗೆ ಆಳವಾದ ಸಾಮಾಜಿಕ ಮತ್ತು ಚಾರಿತ್ರಿಕ ಪ್ರಾಮುಖ್ಯತೆಯಿದೆ. 1948ರವರೆಗೆ ನ್ಯೂ ಮೆಕ್ಸಿಕೋ ರಾಜ್ಯವು ಮೂಲ ಅಮೆರಿಕನ್ನರಿಗೆ ಮತದಾನದ ಹಕ್ಕನ್ನೇ ನೀಡುತ್ತಿರಲಿಲ್ಲ. ದ್ವಿತೀಯ ಮಹಾಯುದ್ಧದ ಯೋಧ ಮತ್ತು ಪ್ಯುಯೆಬ್ಲೋ ಸಮುದಾಯದ ಮುಖಂಡ ಮಿಗುಯೆಲ್ ಟ್ರುಹಿಲೊ (Miguel Trujillo) ನಡೆಸಿದ ಸುದೀರ್ಘ ಐನ್ ಹೋರಾಟದ ಫಲವಾಗಿ ಮೂಲ ಜನಾಂಗಕ್ಕೆ ಮತದಾನದ ಹಕ್ಕು ದೊರೆಯಿತು. ಮತದಾನದ ಹಕ್ಕು ದೊರೆತ 78 ವರ್ಷಗಳ ನಂತರ, ಅದೇ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಅದೇ ರಾಜ್ಯದ ಅತ್ಯುನ್ನತ ಆಡಳಿತ ಹುದ್ದೆಗೆ (ಗವರ್ನರ್) ಏರಿರುವುದು ಅಮೆರಿಕದ ಪ್ರಜಾಪ್ರಭುತ್ವದ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ.
ಒಂದು ಕಾಲದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ, ದಿನನಿತ್ಯದ ಆಹಾರಕ್ಕಾಗಿ ಹೆಣಗಾಡುತ್ತಿದ್ದ ಮಹಿಳೆಯೊಬ್ಬರು ಇಂದು ಇಡೀ ರಾಜ್ಯದ ನಾಯಕಿಯಾಗಿ ಆಡಳಿತ ಚುಕ್ಕಾಣಿ ಹಿಡಿದಿರುವುದು ಅಮೆರಿಕನ್ ಪ್ರಜಾಪ್ರಭುತ್ವದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಡೆಬ್ ಹಾಲಂಡ್ ಅವರ ಈ ಅಭೂತಪೂರ್ವ ಗೆಲುವು ಕೇವಲ ವ್ಯಕ್ತಿಯೊಬ್ಬರ ಜಯವಲ್ಲ, ಬದಲಿಗೆ ಶತಮಾನಗಳಿಂದ ತಾರತಮ್ಯ ಎದುರಿಸಿದ ಸಮುದಾಯವೊಂದಕ್ಕೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ. ಅವರ ಶ್ರಮ, ಆತ್ಮವಿಶ್ವಾಸ ಮತ್ತು ಅಚಲ ನಿರ್ಧಾರದ ಪಯಣವು ಜಗತ್ತಿನಾದ್ಯಂತ ಸವಾಲುಗಳನ್ನು ಎದುರಿಸುತ್ತಿರುವ ಕೋಟ್ಯಂತರ ಜನರಿಗೆ ಸದಾ ಸ್ಪೂರ್ತಿಯಾಗಿ ಉಳಿಯಲಿದೆ.




