ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ 24 ಗಂಟೆಯೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬರಗಾಲ ಎದುರಿಸಲು ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಸೇರಿ ಒಟ್ಟು ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣ ಟ್ಯಾಂಕರ್, ಬಾಡಿಗೆ ಬೋರ್‌ವೆಲ್ ಅಥವಾ ಹೊಸ ಕೊಳವೆಬಾವಿಗಳ ಮೂಲಕ ನೀರು ಪೂರೈಸಬೇಕು. ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕುರಿತು ವರದಿ ಆಗದಂತೆ ನೋಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದ ಸಚಿವರು, ಮುಂಗಾರು ಮಳೆ ವೈಫಲ್ಯದಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ರೈತರಿಗೆ ಪ್ರತಿದಿನ ಏಳು ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಬೇಕು. ಲೈನ್‌ಮನ್‌ಗಳನ್ನು ಸುರಕ್ಷತಾ ಕ್ರಮವಿಲ್ಲದೆ ವಿದ್ಯುತ್ ಕಂಬ ಹತ್ತಿಸಬಾರದು. ಬಾಗಿದ ಕಂಬಗಳು ಹಾಗೂ ಜೋತುಬಿದ್ದ ತಂತಿಗಳನ್ನು ತಕ್ಷಣ ಸರಿಪಡಿಸಬೇಕು. ವಿದ್ಯುತ್ ಅವಘಡಗಳಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಬೀದರ ಬ್ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳು, ಆಸ್ಪತ್ರೆ ನಿರ್ವಹಣೆ, ಸ್ವಚ್ಛತೆ ಹಾಗೂ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಬರದಿಂದ ಹೆಸರು, ಉದ್ದು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಸಂಕಷ್ಟದಲ್ಲಿರುವ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ತ್ವರಿತವಾಗಿ ದೊರೆಯಬೇಕು. ರೈತರಿಗೆ ಬೆಳೆ ವಿಮೆ ಪರಿಹಾರವನ್ನು ತಕ್ಷಣ ಜಮೆ ಮಾಡಬೇಕು. ಪರಿಹಾರ ನೀಡುವಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ವಿಮಾ ಕಂಪನಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರ ಹಿತಾಸಕ್ತಿ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ರೈತರು, ಗ್ರಾಮೀಣ ಜನರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಳಂಬವಿಲ್ಲದೆ ಪರಿಹಾರ ಕಲ್ಪಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಜಿಲ್ಲಾ ಕೆಡಿಪಿ ಸಭೆಯ ಗಮನಕ್ಕೆ ತಂದರು.
ಕಬ್ಬು ಬೆಂಕಿ ಅವಘಡದಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದು, ಅಪಾಯಕಾರಿ ವಿದ್ಯುತ್ ತಂತಿಗಳ ದುರಸ್ತಿ, ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಅನುದಾನ ಬಿಡುಗಡೆ ಹಾಗೂ ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸಬೇಕು. ಬೀದರ್ ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನ ಬಳಸಿ, ಬಾಕಿ ಇರುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಸೂಚಿಸಿದರು.
ರಾಜಗೀರ ಗ್ರಾಮದಲ್ಲಿ ಅಪಘಾತದಿಂದ ಮೃತಪಟ್ಟವರ ಏಳು ಕುಟುಂಬಗಳಿಗೆ ಹಾಗೂ ಮಾಂಜಾ ದಾರದಿಂದ ಮೃತಪಟ್ಟ ಬಂಬುಳಗಿ ಗ್ರಾಮದ ವ್ಯಕ್ತಿಯ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಬೇಕು. ಕೇವಲ ಅನುದಾನ ಬಿಡುಗಡೆ ಮಾಡಿದರೆ ಸಾಲದು, ಅದು ಸಮರ್ಪಕವಾಗಿ ಬಳಕೆಯಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಪ್ರಯೋಜನ ತಲುಪಬೇಕು. ಅಧಿಕಾರಿಗಳು ವಿಳಂಬ ಮಾಡದೆ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಮಾತನಾಡಿ, “ಬಿಎಸ್ಎಸ್‌ಕೆ ಪುನರಾರಂಭ, ಹುಮನಾಬಾದ್‌ನ ರಾಸಾಯನಿಕ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಹಾಗೂ ಆರೋಗ್ಯ ಸಮಸ್ಯೆ, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಮತ್ತೆ ಟೆಂಡರ್ ನೀಡುತ್ತಿರುವುದು, ಪಿಜಿಆರ್ ಕಂಪನಿಯ ಬಾಯ್ಲರ್ ಸ್ಫೋಟ ಪ್ರಕರಣ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳಲ್ಲಿನ ಅಕ್ರಮಗಳ ಕುರಿತು ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ಸಚಿವರು, ರಾಸಾಯನಿಕ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು, ಪಿಜಿಆರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಗುತ್ತಿಗೆದಾರರ ಬಿಲ್ ಪಾವತಿ ತಡೆಹಿಡಿಯಲು ಸೂಚಿಸಿದರು. ಜೆಜೆಎಂ ಕಾಮಗಾರಿಗಳ ಅಕ್ರಮದ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದರು. ಬಿಎಸ್ಎಸ್‌ಕೆ ಪುನರಾರಂಭಕ್ಕೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಂಸದ ಸಾಗರ ಖಂಡ್ರೆ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿಗಳ ಸೇತುವೆಗಳ ಬಳಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಮನ್ನಾಖೇಳಿಯಲ್ಲಿ ಸ್ಥಳೀಯ ಸಂಸ್ಥೆಯಿಂದ ನಿರ್ಮಿಸಲಾದ ಅಂಗಡಿಗಳ ಹಂಚಿಕೆಯಲ್ಲಿ ಲೋಪಗಳಾಗಿವೆ ಎಂದು ಪ್ರಸ್ತಾಪಿಸಿದರು. ಕಮಲನಗರ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ಚೊಂಡಿಮುಖೇಡ ಗ್ರಾಮಕ್ಕೆ ತಾಲ್ಲೂಕು ಕೇಂದ್ರದಿಂದ ಬಸ್ ಸೌಕರ್ಯ ಕಲ್ಪಿಸಬೇಕೆಂದು ತಿಳಿಸಿದರು. ಅದಕ್ಕೆ ಸಚಿವರು, ಸಹಾಯಕ ಆಯುಕ್ತ, ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು” ಎಂದು ಸೂಚಿಸಿದರು.
ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಅವರು ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಅಭಾವ, ಪೈಪ್‌ಲೈನ್ ಸೋರಿಕೆ ಹಾಗೂ ಬೀದಿದೀಪಗಳ ಕೊರತೆಯ ಕುರಿತು ಪ್ರಸ್ತಾಪಿಸಿದರು. ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯನ್ನು ಸೂಕ್ತ ಸಂಸ್ಥೆಗೆ ವಹಿಸಿ, ಅಗತ್ಯವಿರುವ ಕಡೆ ಬೀದಿದೀಪ ಅಳವಡಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಔರಾದ (ಬಾ) ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಮಾತನಾಡಿ, “ಔರಾದ್ ಪಟ್ಟಣ ಸೇರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ₹560 ಕೋಟಿ ವೆಚ್ಚದ 36 ಕೆರೆ ತುಂಬಿಸುವ ಯೋಜನೆ ಹಾಗೂ ₹84 ಕೋಟಿ ವೆಚ್ಚದ ಕಾರಂಜಾ ಜಲಾಶಯದ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ತೆಗಂಪುರ ಕೆರೆಯಿಂದ ಔರಾದ್ ಪಟ್ಟಣಕ್ಕೆ ನೀರು ಸರಬರಾಜಿಗೆ ಒಂದು ಕೋಟಿ ಅನುದಾನ ಕಲ್ಪಿಸಬೇಕು” ಎಂದರು.

ಜಲಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ, ವಿದ್ಯುತ್, ಬಸ್ ಸೌಕರ್ಯ, ಗ್ರಾಮೀಣ ರಸ್ತೆ ಹಾಗೂ ಆರೋಗ್ಯ ಸೇವೆಗಳಲ್ಲಿನ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಜನರಿಗೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಡಿ., ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್ | ಕೆ.ವಿ.ನಾರಾಯಣ ಅಗಲಿಕೆಯಿಂದ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮೌನ




