ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆತಂಕ ಹಾಗೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುದ್ಧವನ್ನು ಮುಕ್ತಾಯಗೊಳಿಸುವ ಭರದಲ್ಲಿ ಅಮೆರಿಕ ಕೊನೆಯ ನಿಮಿಷದಲ್ಲಿ ಇರಾನ್‌ಗೆ ಯಾವುದಾದರೂ ರಿಯಾಯಿತಿಗಳನ್ನು ಬಿಟ್ಟುಕೊಡಬಹುದು ಎಂದು ಇಸ್ರೇಲ್ ಆತಂಕ ವ್ಯಕ್ತಪಡಿಸಿದೆ.
ಈ ಮಾತುಕತೆಯ ಸದ್ಯದ ಸ್ಥಿತಿಯನ್ನು ಹಾಗೂ ಒಪ್ಪಂದದ ರೂಪುರೇಷೆಗಳನ್ನು ಅರಿಯಲು ನೆತನ್ಯಾಹು ಅವರು ಟ್ರಂಪ್ ಆಡಳಿತದ ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚಿಸುತ್ತಿದ್ದಾರೆ ಎಂದು ‘ಸಿಎನ್‌ಎನ್’ ವರದಿ ಮಾಡಿದೆ.
ಮುಖ್ಯವಾಗಿ, ಇರಾನ್ ಮೇಲಿರುವ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಸಡಿಲಗೊಳಿಸಬಹುದು ಎಂಬ ತೀವ್ರ ಭಯ ಇಸ್ರೇಲ್‌ಗಿದೆ. ಹೀಗಾಗಿ, ಇರಾನ್‌ನ ಪ್ರಾಕ್ಸಿ ಪಡೆಗಳ ಜಾಲ ಮತ್ತು ಅದರ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲೇಬೇಕು ಎಂದು ಇಸ್ರೇಲ್ ಪಟ್ಟುಹಿಡಿದಿದೆ. ಕೇವಲ ಒಪ್ಪಂದ ಮಾಡಿಕೊಳ್ಳುವ ಉದ್ದೇಶದಿಂದ ಇರಾನ್ ಎದುರು ಅಮೆರಿಕ ಮಂಡಿಯೂರಬಾರದು ಹಾಗೂ ಯಾವುದೇ ಕಾರಣಕ್ಕೂ ಇಸ್ರೇಲ್ ಭದ್ರತೆಗೆ ಧಕ್ಕೆ ತರುವಂತಹ ಷರತ್ತುಗಳಿಗೆ ಒಪ್ಪಬಾರದು ಎಂಬ ನಿಲುವನ್ನು ಇಸ್ರೇಲ್ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಟಿವಿಕೆ ತೆಕ್ಕೆಗೆ ಜಾರಿದ ಕಾಂಗ್ರೆಸ್, ಆಪ್ತಮಿತ್ರ ಸ್ಟಾಲಿನ್ ಬೆನ್ನಿಗೆ ಚೂರಿ ಹಾಕಿತೇ?
ಜೊತೆಗೆ, ಈ ಶಾಂತಿ ಒಪ್ಪಂದ ಯಾವ ರೀತಿಯಲ್ಲಿ ರೂಪುಗೊಂಡರೂ ಸಹ, ಪ್ರಾದೇಶಿಕ ಬೆದರಿಕೆಗಳನ್ನು ಎದುರಿಸಲು ಇಸ್ರೇಲ್ ಸೇನೆಗೆ ಇರುವ ಕಾರ್ಯಾಚರಣೆಯ ಸ್ವಾತಂತ್ರ್ಯ ಖಂಡಿತವಾಗಿಯೂ ಹಾಗೆಯೇ ಉಳಿಯಬೇಕು ಎಂದು ನೆತನ್ಯಾಹು ಆಗ್ರಹಿಸಿದ್ದಾರೆ.
ಅಮೆರಿಕ ಹಾಗೂ ಇರಾನ್ ಮಧ್ಯದ ಚರ್ಚೆಗಳ ಮೇಲೆ ನಿಗಾ ಇಡಲು ಇಸ್ರೇಲ್ ಪ್ರಧಾನಿ ನಿರಂತರವಾಗಿ ಅಮೆರಿಕದ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ಆಪ್ತ ಮೂಲಗಳು ದೃಢಪಡಿಸಿವೆ. ಶಾಂತಿಯ ಹೆಸರಿನಲ್ಲಿ ಇರಾನ್‌ಗೆ ಅನುಕೂಲವಾಗುವಂತಹ ಯಾವುದೇ ರಿಯಾಯಿತಿ ನೀಡುವುದನ್ನು ಇಸ್ರೇಲ್ ಕಟ್ಟುನಿಟ್ಟಾಗಿ ವಿರೋಧಿಸಿದೆ.




