‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ಕಗ್ಗೊಲೆ ನಡೆಸುವಂತೆ ಮತ್ತು ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರ ಎಸಗುವಂತೆ ಇಂದಿರಾ ಗಾಂಧಿ ಕಾಂಗ್ರೆಸ್‌ಗೆ ಹೇಳಿದ್ದರೇ ಎಂದು ಅಕಾಲಿಗಳ ಕಟು ಪ್ರತಿಕ್ರಿಯೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಕುರಿತು ಪಂಜಾಬ್‌ನಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮನಸ್ಥಿತಿ ಹೇಗಿತ್ತು ಎಂಬುದನ್ನು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ ಎಂದು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಹೇಳಿದೆ. ಸೇನಾ ಕಾರ್ಯಾಚರಣೆಯ ಚಿತ್ರಗಳನ್ನು ನೋಡಿದ ಇಂದಿರಾ ಗಾಂಧಿ ತೀವ್ರವಾಗಿ ನೊಂದಿದ್ದರು ಎಂದು ಸೋನಿಯಾ ಬರೆದಿದ್ದಾರೆ.
ಇಂದಿರಾ ಗಾಂಧಿ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಇತ್ತು ಮತ್ತು ಅದನ್ನು ಅವರು ಮೊದಲೇ ತಮ್ಮ ಬಳಿ ಹೇಳಿಕೊಂಡಿದ್ದರು ಎಂದೂ ಸೋನಿಯಾ ಗಾಂಧಿ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಕಾಲಿ ದಳ, ‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ಕಗ್ಗೊಲೆ ನಡೆಸುವಂತೆ ಮತ್ತು ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರ ಎಸಗುವಂತೆ ಇಂದಿರಾ ಗಾಂಧಿ ಕಾಂಗ್ರೆಸ್‌ಗೆ ಹೇಳಿದ್ದರೇ ಎಂದು ಪ್ರಶ್ನಿಸಿದೆ.
ಈ ರೀತಿಯ ಭಾವನಾತ್ಮಕ ಪುಸ್ತಕಗಳನ್ನು ಬರೆಯುವ ಮೂಲಕ ಕಾಂಗ್ರೆಸ್ ಸಿಖ್ಖರ ಗಾಯದ ಮೇಲೆ ಉಪ್ಪು ಸವರುತ್ತಿದೆ ಎಂದು ಅಕಾಲಿ ದಳದ ಮುಖ್ಯ ವಕ್ತಾರ ಅರ್ಶದೀಪ್ ಸಿಂಗ್ ಕಲೇರ್ ಹೇಳಿದ್ದಾರೆ. ಸಿಖ್ಖರ ವಿರುದ್ಧ ನಡೆದ ಈ ಎಲ್ಲ ಘಟನೆಗಳಿಗೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸಂಪೂರ್ಣ ಹೊಣೆಗಾರರು ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಪುಸ್ತಕದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ‘ಆಪರೇಷನ್ ಬ್ಲೂ ಸ್ಟಾರ್’ ವೇಳೆ ಅಮೃತಸರದ ಸ್ವರ್ಣ ಮಂದಿರದ ಆವರಣದಲ್ಲಿ ಉಂಟಾದ ವಿನಾಶದ ಚಿತ್ರಗಳನ್ನು ತೋರಿಸಿದಾಗ ಇಂದಿರಾ ಗಾಂಧಿ ಅವರ ಕಣ್ಣಲ್ಲಿ ನೀರು ತುಂಬಿತ್ತು. ಆ ದೃಶ್ಯಗಳಿಂದ ಅವರು ತೀವ್ರವಾಗಿ ನೊಂದಿದ್ದರು ಎಂದು ಹೇಳಿದ್ದಾರೆ.
ಈ ಸೇನಾ ಕಾರ್ಯಾಚರಣೆ ಸಿಖ್ ಸಮುದಾಯಕ್ಕೆ ಅತ್ಯಂತ ನೋವುಂಟುಮಾಡಿತ್ತು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಒಪ್ಪಿಕೊಂಡಿದ್ದಾರೆ. ಸ್ವರ್ಣ ಮಂದಿರದ ಆವರಣಕ್ಕೆ ಭಾರಿ ಹಾನಿಯಾಗಿತ್ತು. ಕಾರ್ಯಾಚರಣೆಯ ವೇಳೆ ಭಕ್ತರು ಮತ್ತು ಉಗ್ರಗಾಮಿಗಳು ಮೃತಪಟ್ಟಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
‘ಆಪರೇಷನ್ ಬ್ಲೂ ಸ್ಟಾರ್’ ಮುಗಿದ ಬೆನ್ನಲ್ಲೇ ಇಂದಿರಾ ಗಾಂಧಿ ಅವರಿಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರತೊಡಗಿದ್ದವು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಸೋನಿಯಾ ಗಾಂಧಿ ಅವರ ಪ್ರಕಾರ, ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಅರಿವು ಇಂದಿರಾ ಗಾಂಧಿ ಅವರಿಗೆ ಇತ್ತು. ತಾವು ಮೃತಪಟ್ಟರೆ ಆ ಬಳಿಕ ಎದುರಾಗಬಹುದಾದ ಪರಿಸ್ಥಿತಿಯ ಬಗ್ಗೆ ಅವರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಲಾರಂಭಿಸಿದ್ದರು.
ರಾಹುಲ್ ಗಾಂಧಿಗೆ ಧೈರ್ಯವಾಗಿರಲು ಹೇಳಿದ್ದರು
‘ನನಗೇನಾದರೂ ಆದರೆ ನೀನು ಧೈರ್ಯವಾಗಿರಬೇಕು. ಅಳಬಾರದು’ ಎಂದು ಇಂದಿರಾ ಗಾಂಧಿ ತಮ್ಮ ಮೊಮ್ಮಗ ರಾಹುಲ್ ಗಾಂಧಿಗೆ ಹೇಳಿದ್ದರು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.
ಕಾರ್ಯಾಚರಣೆಯ ನಂತರ, 1984ರ ಬೇಸಿಗೆಯಲ್ಲಿ ಇಂದಿರಾ ಗಾಂಧಿ ತಮ್ಮ ಮೊಮ್ಮಕ್ಕಳನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದರು. ಆ ಪ್ರವಾಸವು ಮೊಮ್ಮಕ್ಕಳಿಗೆ ವಿದಾಯ ಹೇಳುವ ಅವರ ಒಂದು ವಿಧಾನವಾಗಿದ್ದಿರಬಹುದು ಎಂಬುದು ಸೋನಿಯಾ ಗಾಂಧಿ ಅವರ ಅನಿಸಿಕೆ.
ಅಕಾಲಿ ದಳದ ಪ್ರತಿಕ್ರಿಯೆ
‘ಚಿತ್ರಗಳನ್ನು ನೋಡಿ ಇಂದಿರಾ ಗಾಂಧಿ ನೊಂದಿದ್ದರು ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ. ಇಂದಿರಾ ಗಾಂಧಿ ಅವರಿಗೆ ನೋವಾಗಿದ್ದು ಚಿತ್ರಗಳನ್ನು ನೋಡಿದ್ದಕ್ಕಷ್ಟೇನಾ ಎಂಬುದು ನನ್ನ ಪ್ರಶ್ನೆ’ ಎಂದು ಅರ್ಶದೀಪ್ ಸಿಂಗ್ ಕಲೇರ್ ಹೇಳಿದ್ದಾರೆ. ‘ಆಪರೇಷನ್ ಬ್ಲೂ ಸ್ಟಾರ್’ ಸಿಖ್ಖರ ಪರಮ ಧಾರ್ಮಿಕ ಕೇಂದ್ರಗಳಾದ ಶ್ರೀ ಅಕಾಲ್ ತಖ್ತ್ ಸಾಹಿಬ್ ಮತ್ತು ಶ್ರೀ ಹರಿಮಂದಿರ ಸಾಹಿಬ್ ಮೇಲೆ ನಡೆಸಿದ ನೇರ ದಾಳಿ ಎಂದು ಅವರು ಆರೋಪಿಸಿದ್ದಾರೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ರೂಪಿಸಿದ್ದ ಸಂಚಿನ ಭಾಗವಾಗಿ ಈ ದಾಳಿ ನಡೆಯಿತು ಮತ್ತು ಅದು ದೇಶ–ವಿದೇಶಗಳ ಸಿಖ್ ಸಮುದಾಯವನ್ನು ತಲ್ಲಣಗೊಳಿಸಿತು ಎಂದು ಹೇಳಿದ್ದಾರೆ. ಶ್ರೀ ಅಕಾಲ್ ತಖ್ತ್ ಸಾಹಿಬ್ ವಿರುದ್ಧ ಸೆಣೆಸಿದ್ದರಿಂದ ಹುಟ್ಟಿದ ಭಯವೇ ಇಂದಿರಾ ಗಾಂಧಿ ಅವರನ್ನು ಒಳಗೊಳಗೇ ಕಾಡುತ್ತಿತ್ತು ಎಂಬುದು ಕಲೇರ್ ಅವರ ಹೇಳಿಕೆ.
ಹರಿಮಂದಿರ ಸಾಹಿಬ್ ಆವರಣದಲ್ಲಿ ಅಮಾಯಕರ ರಕ್ತ ಹರಿಯಿತು
ಕಾರ್ಯಾಚರಣೆಯ ವೇಳೆ ಶ್ರೀ ಹರಿಮಂದಿರ ಸಾಹಿಬ್ ಆವರಣದಲ್ಲಿ ನೂರಾರು ಅಮಾಯಕ ಸಿಖ್ಖರನ್ನು ಹತ್ಯೆ ಮಾಡಲಾಯಿತು ಎಂದು ಕಲೇರ್ ಹೇಳಿದ್ದಾರೆ. ಪವಿತ್ರ ಸರೋವರದ ನೀರು ಅಮಾಯಕರ ರಕ್ತದಿಂದ ಕೆಂಪಾಗಿತ್ತು. ಪಠಣಕ್ಕಾಗಿ ಪ್ರತಿಷ್ಠಾಪಿಸಿದ್ದ ಶ್ರೀ ಗುರು ಗ್ರಂಥ ಸಾಹಿಬ್‌ನ ಪವಿತ್ರ ಪ್ರತಿಗಳ ಮೇಲೆ ಗುಂಡು ಹಾರಿಸಲಾಯಿತು ಮತ್ತು ಗುರುಬಾಣಿ ಕೀರ್ತನೆ ಹಾಡುತ್ತಿದ್ದ ರಾಗಿ ಸಿಂಗ್‌ಗಳನ್ನು ಕೊಲ್ಲಲಾಯಿತು ಎಂದು ಅವರು ಆರೋಪಿಸಿದ್ದಾರೆ. ಇಷ್ಟೆಲ್ಲ ವಿನಾಶ ಸಂಭವಿಸಿದ್ದರೂ, ಚಿತ್ರಗಳನ್ನು ನೋಡಿ ಇಂದಿರಾ ಗಾಂಧಿ ನೊಂದಿದ್ದರು ಎಂದಷ್ಟೇ ಸೋನಿಯಾ ಬರೆದಿದ್ದಾರೆ ಎಂದು ಕಲೇರ್ ಟೀಕಿಸಿದ್ದಾರೆ.
ಕಗ್ಗೊಲೆಗೂ ಇಂದಿರಾ ಗಾಂಧಿ ಆದೇಶ ನೀಡಿದ್ದರೇ?
ಇಂದಿರಾ ಗಾಂಧಿ ತಮ್ಮ ಸಾವಿನ ಬಗ್ಗೆ ಮೊದಲೇ ಹೇಳಿದ್ದರು ಎಂಬ ಸೋನಿಯಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಲೇರ್, ‘ಇಂದಿರಾ ಗಾಂಧಿ ಅವರ ಸಾವಿನ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ನರಮೇಧ ನಡೆಯಿತು. ಹೀಗೆ ಮಾಡುವಂತೆಯೂ ಅವರು ಮೊದಲೇ ಹೇಳಿ ಹೋಗಿದ್ದರೇ?’ ಎಂದು ಪ್ರಶ್ನಿಸಿದ್ದಾರೆ. ದೆಹಲಿಯ ಬೀದಿಗಳಲ್ಲಿ ಸಿಖ್ ಯುವಕರ ಕುತ್ತಿಗೆಗೆ ಉರಿಯುವ ಟೈರ್‌ಗಳನ್ನು ಹಾಕಿ ಕೊಲ್ಲಲಾಯಿತು ಮತ್ತು ಸಿಖ್ ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರ ಎಸಗಲಾಯಿತು ಎಂದು ಅವರು ಹೇಳಿದ್ದಾರೆ. ‘ದೊಡ್ಡ ಮರ ಬಿದ್ದಾಗ ನೆಲ ನಡುಗುತ್ತದೆ’ ಎಂಬ ಹೇಳಿಕೆಯ ಮೂಲಕ ಆಗಿನ ಪ್ರಧಾನಿ ರಾಜೀವ್ ಗಾಂಧಿ ಆ ಭೀಕರ ಹಿಂಸಾಚಾರಕ್ಕೆ ಅನುಮೋದನೆಯ ಮುದ್ರೆ ಒತ್ತಿದರು ಎಂದು ಕಲೇರ್ ಆರೋಪಿಸಿದ್ದಾರೆ.
ಸಿಖ್ಖರ ಸಾವು, ದರ್ಬಾರ್ ಸಾಹಿಬ್ ಮೇಲಿನ ದಾಳಿ ಮತ್ತು 1984ರ ಕಗ್ಗೊಲೆಯ ಬಳಿಕ ‘ನೆಲ ನಡುಗುತ್ತದೆ’ ಎಂದು ನೀಡಿದ ಹೇಳಿಕೆಯೇ ಕಾಂಗ್ರೆಸ್‌ನ ನಿಜಸ್ವರೂಪವನ್ನು ತೋರಿಸುತ್ತದೆ ಎಂದು ಕಲೇರ್ ಹೇಳಿದ್ದಾರೆ. ಕಾಂಗ್ರೆಸ್ ಸಿಖ್ಖರ ವಿರುದ್ಧ ಸದಾ ತಾರತಮ್ಯ ಎಸಗಿದೆ. ಈಗ ಪುಸ್ತಕಗಳಲ್ಲಿ ಭಾವನಾತ್ಮಕ ಸಂಗತಿಗಳನ್ನು ಬರೆಯುವ ಮೂಲಕ ವಾಸ್ತವವನ್ನೂ ತನ್ನ ಇತಿಹಾಸದ ಕರಾಳ ಪುಟಗಳನ್ನೂ ಬದಲಿಸಲು ವಿಫಲ ಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗಾಂಧಿ ಕುಟುಂಬ ಎಂದಾದರೂ ಕ್ಷಮೆ ಕೇಳಿದೆಯೇ?
‘ಈ ಘಟನೆಗಳಿಗಾಗಿ ಕಾಂಗ್ರೆಸ್ ಅಥವಾ ಗಾಂಧಿ ಕುಟುಂಬ ಎಂದಾದರೂ ಸಾರ್ವಜನಿಕವಾಗಿ, ಪ್ರಾಮಾಣಿಕವಾಗಿ ಕ್ಷಮೆ ಕೇಳಿದೆಯೇ? ಶ್ರೀ ಅಕಾಲ್ ತಖ್ತ್ ಸಾಹಿಬ್ ಮೇಲಿನ ದಾಳಿ ಮತ್ತು ದೆಹಲಿಯ ಬೀದಿಗಳಲ್ಲಿ ನಡೆದ ಸಿಖ್ಖರ ಕಗ್ಗೊಲೆಗೆ ಯಾರು ಹೊಣೆ ಹೊರುತ್ತಾರೆ?’ ಎಂದು ಕಲೇರ್ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಕೇಂದ್ರದ ತಪ್ಪುಗಳ ನೋವನ್ನು ತಲೆಮಾರುಗಳಿಂದ ಅನುಭವಿಸುತ್ತಿರುವ ಪಂಜಾಬ್
ಪಂಜಾಬ್‌ನಲ್ಲಿ ನಡೆದ ಘಟನೆಗಳು ಮತ್ತು ದೆಹಲಿಯ ಕಗ್ಗೊಲೆ ಸೇರಿದಂತೆ ಅಂದಿನ ಪರಿಸ್ಥಿತಿಗೆ ಆಗಿನ ಕೇಂದ್ರ ಸರ್ಕಾರ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸಂಪೂರ್ಣ ಹೊಣೆಗಾರರು ಎಂದು ಕಲೇರ್ ಹೇಳಿದ್ದಾರೆ. ಈ ಘಟನೆಗಳು ಸಿಖ್ಖರ ಭಾವನೆಗಳಿಗೆ ಆಳವಾದ ಗಾಯ ಮಾಡಿದ್ದು, ಅದರ ನೋವನ್ನು ಪಂಜಾಬ್‌ನ ಜನರು ಹಲವು ವರ್ಷಗಳಿಂದ ಅನುಭವಿಸಿದ್ದಾರೆ ಎಂದಿದ್ದಾರೆ.
‘ತಪ್ಪು ಮಾಡಿದ್ದು ಕೇಂದ್ರ ಸರ್ಕಾರ. ಅದರ ನೋವು ಅನುಭವಿಸಿದ್ದು ಪಂಜಾಬ್‌ನ ಜನರು. ದೆಹಲಿಯಿಂದ ನೆಲೆ ಕಳೆದುಕೊಂಡು ಬಂದ ಕುಟುಂಬಗಳ ನೋವು ತಲೆಮಾರಿನಿಂದ ತಲೆಮಾರಿಗೆ ಮುಂದುವರಿದಿದೆ. ಕೇವಲ ಒಂದು ಪುಸ್ತಕ ಬರೆದು ಆ ಕುಟುಂಬಗಳ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪೂರ್ವಯೋಜಿತ ಸಂಚಿನಡಿ ಇದೆಲ್ಲವನ್ನೂ ಮಾಡಿತು. ಪುಸ್ತಕ ಬರೆಯುವ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಲೇರ್ ಟೀಕಿಸಿದ್ದಾರೆ.



