ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಸಿಕ್ಕರೆ, ಭಾರತದ ಐತಿಹಾಸಿಕ ‘ಕೊಹಿನೂರ್ ವಜ್ರ’ವನ್ನು ಹಿಂದಿರುಗಿಸುವಂತೆ ಒತ್ತಾಯಿಸುತ್ತೇನೆ ಎಂದು ನ್ಯೂಯಾರ್ಕ್ ನಗರದ ಮೇಯರ್, ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಬ್ರಿಟನ್ ದೊರೆ ಚಾರ್ಲ್ಸ್ ಅವರು ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 11ರ (9/11) ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೂ ಕೆಲವೇ ಗಂಟೆಗಳ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮ್ದಾನಿ, ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
“ದೊರೆಯವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ನನಗೆ ಅವಕಾಶ ದೊರೆತರೆ, ಖಂಡಿತವಾಗಿಯೂ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸುವಂತೆ ಅವರನ್ನು ಪ್ರೋತ್ಸಾಹಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ
ಸ್ಮಾರಕ ಕಾರ್ಯಕ್ರಮದ ವೇಳೆ ದೊರೆ ಚಾರ್ಲ್ಸ್ ಅವರು ಮಮ್ದಾನಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಆದರೆ, ಈ ವೇಳೆ ವಜ್ರದ ವಿಚಾರ ಪ್ರಸ್ತಾಪವಾಯಿತೇ ಎಂಬ ಬಗ್ಗೆ ಬಕಿಂಗ್ ಹ್ಯಾಮ್ ಅರಮನೆ ಹಾಗೂ ಮೇಯರ್ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
105.6 ಕ್ಯಾರೆಟ್ ತೂಕದ ಕೊಹಿನೂರ್ ವಜ್ರವನ್ನು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಶೋಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ. 1849ರಲ್ಲಿ ಪಂಜಾಬ್ ಅನ್ನು ವಶಪಡಿಸಿಕೊಂಡ ನಂತರ, ಈಸ್ಟ್ ಇಂಡಿಯಾ ಕಂಪನಿಯು ಲಾಹೋರ್ ಒಪ್ಪಂದದ ಮೂಲಕ ಈ ವಜ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಬಳಿಕ 1850ರಲ್ಲಿ ಇದನ್ನು ಬ್ರಿಟನ್‌ನ ರಾಣಿ ವಿಕ್ಟೋರಿಯಾ ಅವರಿಗೆ ಹಸ್ತಾಂತರಿಸಲಾಯಿತು. ಪ್ರಸ್ತುತ ಈ ವಜ್ರವು ಲಂಡನ್‌ನ ಟವರ್‌ನಲ್ಲಿರುವ ಬ್ರಿಟಿಷ್ ರಾಜಮನೆತನದ ಕಿರೀಟದಲ್ಲಿದೆ.
ವಸಾಹತುಶಾಹಿ ಆಳ್ವಿಕೆಯಲ್ಲಿ ತಮ್ಮಿಂದ ಕಿತ್ತುಕೊಳ್ಳಲಾದ ಈ ಬೆಲೆಬಾಳುವ ಐತಿಹಾಸಿಕ ಕಲಾಕೃತಿಯನ್ನು ಮರಳಿಸುವಂತೆ ಭಾರತವು ಈ ಹಿಂದಿನಿಂದಲೂ ಬ್ರಿಟನ್ ಅನ್ನು ನಿರಂತರವಾಗಿ ಆಗ್ರಹಿಸುತ್ತಾ ಬಂದಿದೆ.




