ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಸೋಮವಾರ ಬೆಳ್ಳಂ ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಶಿರಸಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಲು ಮತ್ತು 11.30ಕ್ಕೆ ದಾಸನಕೊಪ್ಪದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘ ಉದ್ದೇಶಿಸಿತ್ತು. ಅದಕ್ಕಾಗಿ ಕೋಡಿಹಳ್ಳಿ ಚಂದ್ರಶೇಖರ್ ಶಿರಸಿಗೆ ಆಗಮಿಸಿದ್ದರು.
ಘಟನೆ ಹಿನ್ನೆಲೆ
2013ರಲ್ಲಿ ರೈತರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇರ್ ನೇತೃತ್ವದಲ್ಲಿ ಸುಮಾರು ಆರು ಗಂಟೆಗಳ ಕಾಲ ರೈಲು ತಡೆ ನಡೆಸಲಾಗಿತ್ತು. ಮಹದಾಯಿ ಹೋರಾಟದ ಭಾಗವಾಗಿ ನಡೆದಿದ್ದ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ವಾರಂಟ್ ಜಾರಿಯಾಗಿತ್ತು. ಇದರನ್ವಯ ಹುಬ್ಬಳ್ಳಿ ರೈಲ್ವೆ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಇಂದು ಶಿರಸಿಯಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿದ್ದೀರಾ? ಯಾದಗಿರಿ | ತತ್ವಪದಕಾರ ಅವಧೂತ ಶ್ರೀ ರಂಗಲಿಂಗೇಶ್ವರ ಕುರಿತು ವಿಶೇಷ ಉಪನ್ಯಾಸ
ಶಿರಸಿಯಲ್ಲಿ ಅವರನ್ನು ಬಂಧಿಸಿದ ಹುಬ್ಬಳ್ಳಿ ರೈಲ್ವೆ ಪೊಲೀಸರು, ಬಳಿಕ ಹೆಚ್ಚಿನ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಾಗಿ ಹುಬ್ಬಳ್ಳಿಗೆ ಕರೆದೊಯ್ದಿದ್ದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನಡೆದ ಹೋರಾಟದ ಸಂದರ್ಭದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದ್ದು, ಕೋರ್ಟ್ಗೆ ಹಾಜುರುಪಡಿಸಿದ ಬಳಿಕ ಮುಂದಿನ ಕ್ರಮ ಏನಾಗುವುದೆಂದು ನೋಡಬೇಕಿದೆ.




