ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ ಹೇಗಾಯಿತು, ಹಳ್ಳಿಗಳು ಖಾಲಿಯಾಗುತ್ತಿರುವ ಹಿಂದಿನ ಅಸಲಿ ಕಾರಣಗಳನ್ನು ಹುಡುಕುವ ಸಣ್ಣ ಪ್ರಯತ್ನ ಇಲ್ಲಿದೆ.
ಉತ್ತರ ಕನ್ನಡ ಎಂದರೆ ನೆನಪಾಗುವುದು ಹಸಿರು ಕಾನನ, ಗುಡ್ಡಗಾಡು ಹಾಗೂ ವೈವಿಧ್ಯತೆಯಿಂದ ಕಂಗೊಳಿಸುವ ಹಳ್ಳಿಗಳು. ಆದರೆ, ಇದೇ ಉತ್ತರ ಕನ್ನಡ ಜಿಲ್ಲೆಯ 40ಕ್ಕೂ ಹೆಚ್ಚು ಗ್ರಾಮಗಳು ಇಂದು ಮನುಷ್ಯ ವಾಸವಿರದ, ‘ಶೂನ್ಯ ಜನವಸತಿ’ಯ ಹಳ್ಳಿಗಳಾಗಿ ಬದಲಾಗಿವೆ ಎಂಬ ಕಹಿ ಸತ್ಯ ಜಿಲ್ಲಾ ಪಂಚಾಯತ್ ಸಮೀಕ್ಷೆಯಲ್ಲಿ ಹೊರಬಿದ್ದಿದೆ.
ಊರು ಖಾಲಿಯಾದದ್ದು ಹೇಗೆ?
ಒಂದು ಗ್ರಾಮ ಖಾಲಿಯಾಗುವುದು ಒಂದೆರಡು ದಿನದಲ್ಲಿ ನಡೆಯುವ ಘಟನೆ ಅಲ್ಲ. ವರ್ಷಗಳ ಕಾಲ ನಿಧಾನವಾಗಿ ನಡೆಯುವ ವಲಸೆಯ ಪರಿಣಾಮ. ಉದ್ಯೋಗಕ್ಕಾಗಿ ಕೆಲವರು ಹೊರಟರೆ, ಮಕ್ಕಳ ಶಿಕ್ಷಣಕ್ಕಾಗಿ ಕುಟುಂಬಗಳು ಪಟ್ಟಣ ಸೇರುತ್ತವೆ. ಆರೋಗ್ಯ, ಸಾರಿಗೆ, ರಸ್ತೆ, ನೀರು ಹಾಗೂ ಇತರ ಮೂಲಸೌಕರ್ಯಗಳ ಕೊರತೆಯೂ ಜನರನ್ನು ಶಾಶ್ವತವಾಗಿ ಸ್ಥಳಾಂತರಗೊಳ್ಳುವಂತೆ ಮಾಡಬಹುದು.
This video cannot be played in your browser. Open the video directly
ಉತ್ತರ ಕನ್ನಡದ ಕೆಲವು ಗ್ರಾಮಗಳಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದೆ. ಕೃಷಿ ಮತ್ತು ಗ್ರಾಮೀಣ ಬದುಕಿನ ಮೇಲೆ ಅವಲಂಬಿತರಾಗಿದ್ದ ಕುಟುಂಬಗಳು ಜೀವನೋಪಾಯಕ್ಕಾಗಿ ಬೇರೆ ಪ್ರದೇಶಗಳಿಗೆ ತೆರಳಿದ್ದು, ಕೆಲವು ಹಳ್ಳಿಗಳಲ್ಲಿ ಕೊನೆಗೆ ಶಾಶ್ವತ ನಿವಾಸಿಗಳೇ ಉಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.
ದಟ್ಟ ಕಾಡಿನ ನಡುವೆ ಮನುಷ್ಯರಿಲ್ಲದ ಹಳ್ಳಿಗಳು
ಜಿಲ್ಲೆಯ ವಿಶೇಷ ಭೌಗೋಳಿಕ ಪರಿಸ್ಥಿತಿಯೂ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಮುಖ್ಯವಾಗಿದೆ. ಉತ್ತರ ಕನ್ನಡದ ಹಲವು ಗ್ರಾಮಗಳು ದಟ್ಟ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳ ನಡುವೆ ನೆಲೆಗೊಂಡಿವೆ.
ಒಮ್ಮೆ ಇಂತಹ ಪ್ರದೇಶಗಳಲ್ಲಿ ಕೃಷಿ, ಜಾನುವಾರು ಸಾಕಣೆ ಹಾಗೂ ಸಣ್ಣಪುಟ್ಟ ಜೀವನೋಪಾಯಗಳೊಂದಿಗೆ ಕುಟುಂಬಗಳು ನೆಲೆಸಿದ್ದವು. ಆದರೆ ಕಾಲ ಬದಲಾದಂತೆ ಹೊಸ ತಲೆಮಾರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪಟ್ಟಣಗಳತ್ತ ತೆರಳಿತು. ಅವರೊಂದಿಗೆ ಕುಟುಂಬಗಳೂ ಸ್ಥಳಾಂತರಗೊಂಡವು.
ಪರಿಣಾಮವಾಗಿ ಕೆಲವು ಗ್ರಾಮಗಳಲ್ಲಿ ಮನೆಗಳು ಮಾತ್ರ ಉಳಿದುಕೊಂಡಿದ್ದು, ಅವುಗಳನ್ನು ನೋಡಿಕೊಳ್ಳುವ ಜನರು ಬೇರೆಡೆ ನೆಲೆಸಿದ್ದಾರೆ.
ಜೋಯಿಡಾ, ಹಳಿಯಾಳ, ಮುಂಡಗೋಡದಲ್ಲಿ ಹೆಚ್ಚು ಪರಿಣಾಮ
ಜೋಯಿಡಾ, ದಾಂಡೇಲಿ, ಹಳಿಯಾಳ ಹಾಗೂ ಮುಂಡಗೋಡ ತಾಲೂಕುಗಳ ಹಲವು ಗ್ರಾಮಗಳಲ್ಲಿ ಜನವಸತಿ ಕುಸಿದಿರುವ ಮಾಹಿತಿ ಇದೆ.
ಜೋಯಿಡಾ ತಾಲೂಕಿನ ಬಾಡಗುಂದ ಗ್ರಾಮದಲ್ಲಿ ಸುಮಾರು 15 ಕುಟುಂಬಗಳು ಗ್ರಾಮ ತೊರೆದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ದೊರೆತಿದೆ. ಇದಕ್ಕೆ ಮೂಢನಂಬಿಕೆಯೂ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ವಿಚಾರದ ನಿಖರ ಕಾರಣಗಳನ್ನು ಅಧಿಕೃತವಾಗಿ ಪರಿಶೀಲಿಸುವ ಅಗತ್ಯವಿದೆ.
ಹಳಿಯಾಳ ತಾಲೂಕಿನ ಚೆನ್ನಾಪುರ, ಬಬಲಿಕೊಪ್ಪ, ಹರವಳ್ಳಿ, ಮಾವಿನಕೊಪ್ಪ, ಬೆಗೂರು, ಮಂಡಕಿ, ವಿಂಚೊಳ್ಳಿ, ಚಿಮನಳ್ಳಿ, ಮಾಲವಾಡ, ಮಲವಡಿ, ಮಾಚಾಪುರ, ಚಿನಗಿನಕೊಪ್ಪ, ಅಂಬಡಗ ಹಾಗೂ ಅಟ್ಲೆ ಸೇರಿದಂತೆ ಹಲವು ಗ್ರಾಮಗಳ ಜನರು ವಿವಿಧ ಕಾರಣಗಳಿಂದ ಬೇರೆಡೆಗೆ ತೆರಳಿದ್ದಾರೆ ಎನ್ನಲಾಗಿದೆ.
ಇನ್ನು ಮುಂಡಗೋಡ ತಾಲೂಕಿನ ಬಂಕಾಸಾಳಿ, ಬೇಚಾರಕ, ಇಂಗಳಿಕಿ ಹಾಗೂ ಹುಡೆಲಕೊಪ್ಪ ಸೇರಿದಂತೆ ಕೆಲವು ಗ್ರಾಮಗಳಲ್ಲೂ ಜನಸಂಖ್ಯೆ ಕಡಿಮೆಯಾಗಿದೆ ಎಂಬ ಮಾಹಿತಿ ಇದೆ.
ಕೆಲವು ಗ್ರಾಮಗಳಲ್ಲಿ ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿದ್ದ ಕುಟುಂಬಗಳಿಗೆ ಮಳೆ ಹಾಗೂ ಬರದ ಪರಿಸ್ಥಿತಿಗಳು ದೊಡ್ಡ ಸವಾಲಾಗಿವೆ. ಕೃಷಿಯಿಂದ ನಿರೀಕ್ಷಿತ ಆದಾಯ ಸಿಗದ ಸಂದರ್ಭದಲ್ಲಿ ಉದ್ಯೋಗ ಅರಸಿ ಪಟ್ಟಣ ಅಥವಾ ನಗರಗಳತ್ತ ತೆರಳುವುದು ಅನಿವಾರ್ಯವಾಗುತ್ತದೆ.
ಕೆಲವರು ಶಾಶ್ವತವಾಗಿ ವಲಸೆ ಹೋದರೆ, ಇನ್ನೂ ಕೆಲವರು ವರ್ಷದ ಕೆಲವು ತಿಂಗಳು ಪಟ್ಟಣಗಳಲ್ಲಿ ದುಡಿದು, ಕೃಷಿ ಚಟುವಟಿಕೆಗಳ ಸಮಯದಲ್ಲಿ ಗ್ರಾಮಕ್ಕೆ ಮರಳುವ ಸ್ಥಿತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ‘ಗ್ರಾಮ ಖಾಲಿ’ ಎಂಬುದರ ಹಿಂದೆ ಕೇವಲ ಒಂದು ಕಾರಣವನ್ನು ಗುರುತಿಸುವ ಬದಲು, ಪ್ರತಿ ಗ್ರಾಮದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಿದೆ.
ಮೂಢನಂಬಿಕೆಯ ನೆರಳು?
ಕೆಲವು ಗ್ರಾಮಗಳಲ್ಲಿ ಜನರು ಮೂಢನಂಬಿಕೆ ಅಥವಾ ‘ನಕಾರಾತ್ಮಕ ಶಕ್ತಿ’ ಕುರಿತ ಭಯದಿಂದ ಊರು ತೊರೆದಿದ್ದಾರೆ ಎಂಬ ಗಾಳಿ ಮಾತುಗಳೂ ಇವೆ.
ಆದರೆ ಇಂತಹ ಹೇಳಿಕೆಗಳನ್ನು ಪರಿಶೀಲನೆಯಿಲ್ಲದೆ ವಾಸ್ತವವೆಂದು ಪರಿಗಣಿಸಲು ಸಾಧ್ಯವಿಲ್ಲ. ಜನರು ಗ್ರಾಮ ತೊರೆದಿರುವ ನಿಖರ ಕಾರಣ ತಿಳಿಯಲು ಕುಟುಂಬವಾರು ಸಮೀಕ್ಷೆ, ಸ್ಥಳೀಯರ ಹೇಳಿಕೆ ಮತ್ತು ಸರ್ಕಾರಿ ದಾಖಲೆಗಳ ಆಧಾರದ ಮೇಲೆ ಅಧ್ಯಯನ ಅಗತ್ಯ.
ಇದು ಕೇವಲ ನಂಬಿಕೆಯ ವಿಚಾರವಲ್ಲ; ಒಂದು ಗ್ರಾಮ ತನ್ನ ಜನರನ್ನು ಏಕೆ ಕಳೆದುಕೊಂಡಿತು ಎಂಬುದನ್ನು ತಿಳಿದುಕೊಳ್ಳುವ ಸಾಮಾಜಿಕ ಅಧ್ಯಯನದ ಅಗತ್ಯವೂ ಹೌದು. ಖಾಲಿಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿದಾಗ ಕಾಣುವುದು ಹಳೆಯ ಮನೆಗಳು, ಬಾಗಿಲು ಮುಚ್ಚಿರುವ ಕಟ್ಟಡಗಳು, ಬಳಕೆಯಾಗದ ದಾರಿಗಳು ಮತ್ತು ನಿಧಾನವಾಗಿ ಪ್ರಕೃತಿಯ ವಶವಾಗುತ್ತಿರುವ ಪ್ರದೇಶಗಳು.
ಒಂದು ಕಾಲದಲ್ಲಿ ಇಲ್ಲಿ ಬದುಕಿದ್ದ ಕುಟುಂಬಗಳ ನೆನಪು ಮಾತ್ರ ಉಳಿದಿದೆ. ಜನರಿಲ್ಲದ ಕಾರಣ ಗ್ರಾಮದಲ್ಲಿ ಶಾಲೆ, ಅಂಗಡಿ, ಸಾರಿಗೆ ಸೇರಿದಂತೆ ಹಲವು ಸೌಲಭ್ಯಗಳೂ ಸಹಜವಾಗಿಯೇ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜನವಸತಿ ಕಡಿಮೆಯಾಗುವುದು ಕೇವಲ ಜನಸಂಖ್ಯೆಯ ಅಂಕಿ-ಅಂಶದ ಸಮಸ್ಯೆಯಲ್ಲ. ಇದು ಗ್ರಾಮೀಣ ಆರ್ಥಿಕತೆ, ಸಾಮಾಜಿಕ ಬದುಕು ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ.
ಸರ್ಕಾರ ಮಾಡಬೇಕಿರುವುದೇನು?
ಶೂನ್ಯ ಜನವಸತಿ ಹೊಂದಿರುವ ಗ್ರಾಮಗಳ ಕುರಿತು ಸರ್ಕಾರ ಸಮಗ್ರ ವರದಿ ಸಿದ್ಧಪಡಿಸಬೇಕಿದೆ. ಯಾವ ಗ್ರಾಮದಿಂದ ಎಷ್ಟು ಕುಟುಂಬಗಳು ಹೊರಹೋದವು? ಅವರು ಯಾವ ಪ್ರದೇಶಕ್ಕೆ ತೆರಳಿದ್ದಾರೆ? ವಲಸೆಗೆ ಪ್ರಮುಖ ಕಾರಣವೇನು? ಗ್ರಾಮಕ್ಕೆ ಮರಳಲು ಅವರು ಸಿದ್ಧರಿದ್ದಾರೆಯೇ? ಮರಳಲು ಯಾವ ಸೌಲಭ್ಯಗಳು ಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.
ಅದರ ಜೊತೆಗೆ ರಸ್ತೆ, ಸಾರಿಗೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ವಿದ್ಯುತ್, ಉದ್ಯೋಗ ಹಾಗೂ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ ಗ್ರಾಮವಾರು ಪರಿಹಾರ ರೂಪಿಸಬೇಕಿದೆ.
ಇನ್ನಷ್ಟು ಹಳ್ಳಿಗಳು ಖಾಲಿಯಾಗದಂತೆ ತಡೆಯಬೇಕಿದೆ
ಇಂದು 40ಕ್ಕೂ ಹೆಚ್ಚು ಗ್ರಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಿಂದ ನಿರಂತರವಾಗಿ ಜನರು ಹೊರಹೋಗುತ್ತಿದ್ದರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಅಧ್ಯಯನ ಅಗತ್ಯ.
ಗ್ರಾಮ ಉಳಿಯಬೇಕಾದರೆ ಅಲ್ಲಿ ಜನರಿಗೆ ಬದುಕುವ ಅವಕಾಶ ಇರಬೇಕು. ಬದುಕುವ ಅವಕಾಶ ಇಲ್ಲದಿದ್ದರೆ ಮನೆ ಉಳಿದರೂ ಊರು ಉಳಿಯುವುದಿಲ್ಲ. “ಜನರು ಊರು ಬಿಟ್ಟು ಹೋಗುವುದನ್ನು ನೋಡುತ್ತಾ ಇರಬೇಕೇ… ಅಥವಾ ಅವರು ಉಳಿಯುವಂತಹ ಬದುಕನ್ನು ಊರಲ್ಲೇ ನಿರ್ಮಿಸಬೇಕೇ?”
ಈ ಪ್ರಶ್ನೆಗೆ ಉತ್ತರ ಹುಡುಕುವುದು ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ; ಜಿಲ್ಲೆಯ ಗ್ರಾಮೀಣ ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ಆಡಳಿತಾತ್ಮಕ ಸವಾಲಾಗಿದೆ.




