ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜನರು ಚುನಾವಣಾ ಆಯುಕ್ತರೊಬ್ಬರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕೂಗು ಕೇಳಿಬರುತ್ತಿದೆ. ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಅವೈಜ್ಞಾನಿಕ SIR ವಿರೋಧಿಸಿ ದೇಶದಲ್ಲಿ ಕೂಗು ಇದ್ದೇಯಿದೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ರಿತಿಕಾ ಚೋಪ್ರ ಅವರು ಮಾಡಿದ ತನಿಖಾ ವರದಿಯಿಂದ ಹೊರ ಬಂದ ವಿಚಾರವೆಂದರೆ, ಪ್ರಧಾನಿ ಮೋದಿ ಅವರ ನೇತೃತ್ವದ ಸಮಿತಿಯೇ ಆಯ್ಕೆ ಮಾಡಿದ ಚುನಾವಣಾ ಆಯುಕ್ತ ಡಾ. ಸುಖ್‌ಬಿರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಅವರು SIR ಪ್ರಕ್ರಿಯೆಯ ನಿರ್ಣಯ ಮತ್ತು ನಿರ್ಧಾರಗಳು ಏಕಪಕ್ಷೀಯವಾಗಿದೆ, ಕಾನೂನು ಬಾಹಿರವಾಗಿದೆ, ಕೇಂದ್ರಿಕೃತವಾಗುತ್ತಿದೆ ಹಾಗೂ ಅನಧೀಕೃತವಾಗಿದೆ ಎಂದು ಗಂಭೀರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಳೆದ 10 ತಿಂಗಳಲ್ಲಿ ಒಟ್ಟು 14 ಪತ್ರಗಳನ್ನು ಬರೆದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆಗಳು ಮತ್ತುಷ್ಟು ಜೋರಾಗಿವೆ.
ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ಬೆನ್ನಲ್ಲೇ, ಸೆಪ್ಟೆಂಬರ್ 26ರಂದು ಚುನಾವಣಾ ಆಯೋಗ ನಡೆಸಿದ ಸಭೆ ಮತ್ತು ನಂತರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಈಗಾಗಲೇ ನಡೆಯುತ್ತಿರುವ ಚರ್ಚೆಗೆ ಹೊಸ ಆಯಾಮ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಷಿ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಹಲವು ನಿರ್ಣಯಗಳನ್ನು ‘ಸರ್ವಾನುಮತ’ದಿಂದ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಆದರೆ, ಇದು ಕೇವಲ ಸಾಮಾನ್ಯ ಆಡಳಿತಾತ್ಮಕ ಸಭೆಯಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ SIR ಪ್ರಕ್ರಿಯೆ, ECI-Net ವ್ಯವಸ್ಥೆ, ಅಧಿಕಾರಗಳ ಕೇಂದ್ರೀಕರಣ, Form-6 ಸೇರಿದಂತೆ ಹಲವು ವಿಷಯಗಳ ಕುರಿತು ಚುನಾವಣಾ ಆಯುಕ್ತರ ನಡುವಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕ ಚರ್ಚೆಗೆ ಬಂದಿರುವ ಸಂದರ್ಭದಲ್ಲಿ ನಡೆದ ಈ ಸಭೆ, ಈಗಾಗಲೇ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಅವುಗಳಿಗೆ ‘ತೇಪೆ ಹಚ್ಚುವ’ ಪ್ರಯತ್ನದಂತೆ ಕಾಣುತ್ತದೆ.
ಮೊದಲನೆಯದಾಗಿ, SIR ಸಂದರ್ಭದಲ್ಲಿ ‘ಅನ್‌ಮ್ಯಾಪ್ಡ್’ ಮತ್ತು ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಎಂದು ನೋಟಿಸ್ ಪಡೆದ ಮತದಾರರ ವಿಚಾರಣೆಯ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ BLOಗಳು ಅಂತಹ ಮತದಾರರ ಮನೆಗಳಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ ECI-Netನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಆಯೋಗ ಹೇಳಿದೆ. ಪ್ರತಿಯೊಬ್ಬ ಮತದಾರರೂ ERO/AERO ಕಚೇರಿಗೆ ತೆರಳಿ ವೈಯಕ್ತಿಕ ವಿಚಾರಣೆ ಎದುರಿಸಬೇಕಾಗಿಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಯಲಿದ್ದು, ಅಗತ್ಯವಿದ್ದರೆ ಮತದಾರರ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಭಾಗವಹಿಸಬಹುದು. ಆನ್‌ಲೈನ್ ವಿಚಾರಣೆಯ ವ್ಯವಸ್ಥೆಯನ್ನೂ ಬಲಪಡಿಸಲಾಗುವುದು ಎಂದು ಹೇಳಲಾಗಿದೆ.
ಗಂಭಿರವಾದ ಪ್ರಶ್ನೆ ಏಳುವುದೇ ಇಲ್ಲಿ: Form-6 ಕುರಿತ ಆಯೋಗದ ಸ್ಪಷ್ಟೀಕರಣವೂ ಮಹತ್ವದ್ದಾಗಿದೆ. SIR ಅವಧಿಯಲ್ಲಿ Form-6ಗೆ ಜೋಡಿಸಲಾದ ಹೆಚ್ಚುವರಿ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಆಯೋಗ ಹೇಳಿದೆ. ಆದರೆ, SIR ಮುಗಿದ ನಂತರ ಸಾಮಾನ್ಯ ಅವಧಿಯಲ್ಲಿ Registration of Electors Rules-1960ರ ಪ್ರಕಾರ ಅನ್ವಯಿಸುವ ಸಾಮಾನ್ಯ ನಮೂನೆಗಳನ್ನೇ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಇದರಿಂದ, ಒಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ: SIR ಸಂದರ್ಭದಲ್ಲಿ ಮಾತ್ರ ಹೆಚ್ಚುವರಿ ಅವಶ್ಯಕತೆಗಳು ಅನ್ವಯಿಸುವುದಾದರೆ, ಈ ವಿಶೇಷ ವ್ಯವಸ್ಥೆಯ ಅಗತ್ಯ ಮತ್ತು ಅವಧಿಯ ಕುರಿತು ಆಯೋಗವು ತಗೆದುಕೊಂಡ ತೀರ್ಮಾನ ತಪ್ಪಾಗಿತ್ತು ಎಂದು ಅಲ್ಲವೆ? ಅಕ್ಟೋಬರ್ ನಂತರ ಎಲ್ಲರು ಎಂದಿನಂತೆ ಫಾರಂ-6 ಹಾಕಿಕೊಂಡು ಮತದಾರರ ಪಟ್ಟಿಗೆ ವಾಪಾಸು ಬರಬಹುದು ಎಂದಾದರೆ, SIR ಎಂಬ ಪರಿಷ್ಕರಣೆಯ ಅಗತ್ಯ ಏನಿತ್ತು? ಅದಕ್ಕಾಗಿ ಸಮಯ ಮತ್ತು ಹಣ ಖರ್ಚು ಯಾಕೆ ಮಾಡಬೇಕಿತ್ತು, ಜನರನ್ನು ಪರದಾಡಿಸಿದ್ದು ಯಾಕೆ? Form-6 ಬದಲಾವಣೆ ಕುರಿತು ಆಯುಕ್ತರ ನಡುವೆಯೇ ಭಿನ್ನಾಭಿಪ್ರಾಯಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣವು ಇನ್ನಷ್ಟು ಮಹತ್ವ ಪಡೆಯುತ್ತದೆ.
ಎರಡನೆಯದಾಗಿ, ಮತದಾರರ ತಪ್ಪಿಲ್ಲದಿದ್ದರೂ, ಸಾಫ್ಟ್‌ವೇರ್ ಅಥವಾ ಮ್ಯಾಪಿಂಗ್ ಪ್ರಕ್ರಿಯೆಯಿಂದ ಉಂಟಾದ ವ್ಯತ್ಯಾಸಗಳಿದ್ದರೆ, ಅದರ ಭಾರವನ್ನು ಸಾಮಾನ್ಯ ಮತದಾರರ ಮೇಲೆಯೇ ಏಕೆ ಹಾಕಬೇಕು? ಸೆ.26ರ ನಿರ್ಣಯವು ಈ ಹಿಂದೆ ಅನುಸರಿಸಲಾಗುತ್ತಿದ್ದ ವಿಧಾನವನ್ನು ತಪ್ಪಾಗಿತ್ತು ಎಂದು ಒಪ್ಪಿಕೊಂಡತೆಯೇ ಆಗುತ್ತದೆ. ಅಲ್ಲದೆ ಈಗಾಗಲೇ SIR ನಡೆದ ರಾಜ್ಯಗಳ ಮತದಾರರಿಗೆ ನೇರಾನೇರ ತಾರತಮ್ಯ ಮಾಡಿದಂತೆ!
ಮೂರನೆಯದಾಗಿ, ದಾಖಲೆಗಳನ್ನು ನೀಡಲು ಮತದಾರರು ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ; BLOಗಳೇ ಮನೆಗೆ ತೆರಳಿ ದಾಖಲೆಗಳನ್ನು ಪಡೆಯಬೇಕು ಎಂಬ ನಿರ್ಧಾರವೂ ಗಮನಾರ್ಹ. ಇದು ವಿಶೇಷವಾಗಿ ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಮುಖ್ಯವಾಗಿದೆ. ಆದರೆ, ಇದೇ ಸೌಲಭ್ಯ ಹಿಂದಿನ ಹಂತಗಳಲ್ಲಿ SIR ನಡೆದ ರಾಜ್ಯಗಳಲ್ಲೂ ಸಮಾನವಾಗಿ ದೊರಕಿತ್ತೇ ಎಂಬ ಪ್ರಶ್ನೆ ಉಳಿಯುತ್ತದೆ. ಒಂದು ಚುನಾವಣಾ ಪ್ರಕ್ರಿಯೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಮತದಾರರ ಮೇಲಿನ ಹೊರೆ ಬದಲಾಗಬಾರದು ಎಂಬುದು ತಾಂತ್ರಿಕ ಸಮಾನತೆಯ ಮೂಲ ಪ್ರಶ್ನೆಯಾಗಿದೆ.
ನಾಲ್ಕನೆಯದಾಗಿ, ECI-Net ವ್ಯವಸ್ಥೆಯ ಪರಿಶೀಲನೆಗೆ ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಹಾಗೂ IIT/IIITಯ ಸ್ವತಂತ್ರ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ಆಯೋಗ ಹೇಳಿದೆ. ಕ್ಷೇತ್ರಾಧಿಕಾರಿಗಳಿಗೆ ಅವರ ಕಾನೂನುಬದ್ಧ ಅಧಿಕಾರಗಳಿಗೆ ಅನುಗುಣವಾಗಿ ಮಾತ್ರ ECI-Net ಪ್ರವೇಶವಿರುತ್ತದೆ ಎಂದೂ ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಹೊಸ IT ಮಾಡ್ಯೂಲ್‌ಗಳನ್ನು ಆಯೋಗದ ಅನುಮೋದನೆಗೂ ಮುನ್ನ Committee of Officersನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಲಾಗಿದೆ.
ನನ್ನ ದೃಷ್ಟಿಯಲ್ಲಿ, ಈ ಕ್ರಮಗಳು ECI-Net ಮತ್ತು SIR ಅನುಷ್ಠಾನದ ಕುರಿತು ಉದ್ಭವಿಸಿರುವ ಗಂಭೀರ ಪ್ರಶ್ನೆಗಳನ್ನು ಸ್ವತಃ ಆಯೋಗವೂ ಪರಿಗಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ತೋರಿಸುತ್ತವೆ.
ಆದರೆ, ಪ್ರಶ್ನೆಗಳು ಇಲ್ಲಿಗೆ ಮುಗಿಯುವುದಿಲ್ಲ. SIR ಪ್ರಕ್ರಿಯೆಯಲ್ಲಿ ಸಂಭವಿಸಿದ ತಪ್ಪುಗಳು, ಮತದಾರರಿಗೆ ನೀಡಲಾದ ನೋಟಿಸ್‌ಗಳು, ಮ್ಯಾಪಿಂಗ್ ಸಮಸ್ಯೆಗಳು ಹಾಗೂ ಮತದಾರರ ಮೇಲಾದ ಆಡಳಿತಾತ್ಮಕ ಹೊರೆಗಳ ಕುರಿತು ಸಂಪೂರ್ಣ ಪರಿಶೀಲನೆ ಅಗತ್ಯವಿದೆ. ತಪ್ಪುಗಳು ನಡೆದಿರುವುದು ನಿಚ್ಚಳ. ಆದರೆ, ಅವುಗಳಿಗೆ ಹೊಣೆಗಾರಿಕೆ ನಿಗದಿಯಾಗಬೇಕು. ಅರ್ಹ ಮತದಾರರು ಯಾರೂ ಪಟ್ಟಿಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಬೇಕು ಎಂದಾದರೆ, ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ದೋಷಪೂರಿತ ಎಂದು ಸಾಬೀತಾಗಿರುವ SIR ಪ್ರಕ್ರಿಯೆ ರದ್ದಾಗಬೇಕು, ಜನಸ್ನೇಹಿಯಾದ ವೈಜ್ಷಾನಿಕ ಪರಿಷ್ಕರಣೆ ನಡೆಯಬೇಕು.
ಈ ಲೇಖನ ಓದಿದ್ದೀರಾ?: 14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!
ಜನರ, ನಾಗರಿಕ ಸಂಘಟನೆಗಳ ಬೇಡಿಕೆ ಸ್ಪಷ್ಟವಾಗಿದೆ: ಏಕಪಕ್ಷೀಯ ಮತ್ತು ಕಾನೂನು ಬಾಹಿರ ನಡೆಯನ್ನು ಅನುಸರಿಸುತ್ತಿರುವ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ದೇಶದ ಜನರಲ್ಲಿ ಕ್ಷಮೆ ಕೇಳಬೇಕು. ಆಯುಕ್ತರ ಮೇಲೆ ಸಿವಿಲ್ ಅಥವಾ ಕ್ರಿಮಿನಲ್ ಪ್ರೊಸಿಡಿಂಗ್ಸ್ ನಡೆಯಬಾರದೆನ್ನುವ 2023ರ ಚುನಾವಣಾ ಆಯುಕ್ತರ ಕಾಯಿದೆಯ ತಿದ್ದುಪಡಿಯನ್ನು ರದ್ದು ಮಾಡಿ ಆಯುಕ್ತರ ಮೇಲೆ ಸುಪ್ರಿಂ ಕೋರ್ಟ್ ಸುಮೊಟೊ ಪ್ರಕರಣ ದಾಖಲಿಸಿ, ಬಂಧಿಸಬೇಕು, ಇದರಲ್ಲಿ ಭಾಗಿಯಾದ ಎಲ್ಲರ ಮೇಲೆ ಗಂಭೀರ ತನಿಖೆಯಾಗಬೇಕು, SIR ಪ್ರಕ್ರಿಯೆಯ ಕಾನೂನುಬದ್ಧತೆ ಮತ್ತು ಅದರ ಪರಿಣಾಮಗಳ ಕುರಿತು ಪಾರದರ್ಶಕ ಪರಿಶೀಲನೆ ನಡೆಯಬೇಕು. SIR ರದ್ದು ಮಾಡಿ ಪಟ್ಟಿಯಿಂದ ಹೊರಗಿಡಲಾದ ಕೋಟ್ಯಾಂತರ ಅರ್ಹ ಮತದಾರರನ್ನು ತಕ್ಷಣ ಸೇರಿಸಬೇಕು, ಮತದಾರರನ್ನು ಹೊರಗಿಟ್ಟು ನಡೆಸಿದ ಚುನಚಾವಣೆಗಳನ್ನೂ ರದ್ಧು ಮಾಡಿ ಮರು ಚುನಾವಣೆಗಳನ್ನು ನಡೆಸಬೇಕು. ಚುನಾವಣಾ ಆಯೋಗದ ಮೇಲಿನ ಜನರ ವಿಶ್ವಾಸವನ್ನು ಪುನಃಸ್ಥಾಪಿಸುವುದು ಯಾವುದೇ ತಾತ್ಕಾಲಿಕ ‘ತೇಪೆ’ಗಿಂತ ಮುಖ್ಯ.
ಪ್ರಜಾಪ್ರಭುತ್ವದಲ್ಲಿ ಮತದಾರರು ಆಡಳಿತ ವ್ಯವಸ್ಥೆಯ ಅನುಕೂಲಕ್ಕಾಗಿ ಇರುವವರು ಅಲ್ಲ. ಆಡಳಿತ ವ್ಯವಸ್ಥೆಯೇ ಮತದಾರರ ಹಕ್ಕುಗಳನ್ನು ರಕ್ಷಿಸಲು ಇರುವ ವ್ಯವಸ್ಥೆಯಾಗಿದೆ.



