ತತ್ವಪದಕಾರ ಹಾಗೂ ಅವಧೂತ ಶ್ರೀ ರಂಗಲಿಂಗೇಶ್ವರರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಹಾಪುರ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮುಡಬೂಳ ಘಟಕದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಯಿತು.
ಉಪನ್ಯಾಸ ನೀಡಿದ ಡಾ. ಈರಣ್ಣ ಹವಾಲ್ದಾರ್, ಮುಡಬೂಳ ಗ್ರಾಮದ ತಿಪ್ಪಮ್ಮ- ಲಕ್ಷ್ಮಣ ದಂಪತಿಯ ಪುತ್ರರಾಗಿ 1939ರಲ್ಲಿ ಜನಿಸಿದ ರಂಗಲಿಂಗೇಶ್ವರರು ಬಾಲ್ಯದಿಂದಲೇ ಆಧ್ಯಾತ್ಮಿಕ ವಿಚಾರಗಳತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಭಜನೆ, ತತ್ವಪದ ಹಾಗೂ ಸಂತರ ನಡೆ-ನುಡಿಗಳಿಂದ ಪ್ರಭಾವಿತರಾಗಿ ಆತ್ಮಜ್ಞಾನದ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದರು.
1965ರಲ್ಲಿ ಗುರುೋಪದೇಶ ಪಡೆದ ಅವರು ಕೃಷಿ ಕಾರ್ಯದ ನಡುವೆಯೂ ಆಧ್ಯಾತ್ಮಿಕ ಸಾಧನೆಗೆ ಹೆಚ್ಚಿನ ಸಮಯ ಮೀಸಲಿಟ್ಟರು. ಸದ್ಗುರು ಮಾರುತೇಶ್ವರರ ಸಾನ್ನಿಧ್ಯದಲ್ಲಿ ಜಪ, ತಪ ಹಾಗೂ ಆತ್ಮಜ್ಞಾನದ ಮಾರ್ಗದರ್ಶನ ಪಡೆದರು. 1967ರಲ್ಲಿ 21 ದಿನಗಳ ಅನುಷ್ಠಾನ ಕೈಗೊಂಡ ಬಳಿಕ ಪ್ರವಚನ ಮತ್ತು ಉಪದೇಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು ಎಂದು ವಿವರಿಸಿದರು.

ರಂಗಲಿಂಗೇಶ್ವರರು ‘ಜ್ಞಾನಪ್ರಕಾಶ’, ‘ಭವ ರೋಗ ವೈದ್ಯ’ ಹಾಗೂ ‘ಅವಧೂತ’ ಸೇರಿದಂತೆ ಕೃತಿಗಳನ್ನು ರಚಿಸಿದ್ದು, ತತ್ವಪದಗಳ ಮೂಲಕ ಜೀವನದ ತಾತ್ವಿಕ ಅಂಶಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ವ್ಯಕ್ತಿಯು ತನ್ನನ್ನು ತಾನು ಅರಿತುಕೊಂಡು ಭವಬಂಧನಗಳಿಂದ ಮುಕ್ತವಾಗಬೇಕು ಎಂಬ ಅವರ ಚಿಂತನೆ ಮಹತ್ವದ್ದಾಗಿದೆ ಎಂದರು.
ಸಾಹಿತಿ ಗೋವಿಂದರಾಜ ಆಲ್ದಾಳ ಮಾತನಾಡಿ, ‘ಸಮಾಜವನ್ನು ತಿದ್ದುವ ಮೊದಲು ವ್ಯಕ್ತಿಯು ತನ್ನನ್ನು ತಾನು ತಿದ್ದಿಕೊಳ್ಳಬೇಕು ಎಂಬ ಸಂದೇಶವನ್ನು ರಂಗಲಿಂಗೇಶ್ವರರ ತತ್ವಪದಗಳು ಸಾರುತ್ತವೆ. ಅವು ಕೇವಲ ಧಾರ್ಮಿಕ ವಿಚಾರಗಳಿಗೆ ಸೀಮಿತವಾಗದೆ, ಮನುಷ್ಯನ ಆಂತರಿಕ ಚಿಂತನೆ ಮತ್ತು ಆತ್ಮಸಂವಾದಕ್ಕೆ ದಾರಿ ತೋರಿಸುತ್ತವೆ’ ಎಂದರು.
ರಕ್ಷಿತಾ ಅರವಿಂದರೆಡ್ಡಿ ಮಾತನಾಡಿ, ‘ಬಸವಾದಿ ಶರಣರು ಹಾಗೂ ಹಲವು ಸಂತರು ಸಮಾನತೆ ಮತ್ತು ಮಾನವೀಯತೆಯ ಮಾರ್ಗವನ್ನು ಸಮಾಜಕ್ಕೆ ತೋರಿಸಿದ್ದಾರೆ. ಇದೇ ಪರಂಪರೆಯಲ್ಲಿ ರಂಗಲಿಂಗೇಶ್ವರರ ಚಿಂತನೆಗಳಿಗೂ ಮಹತ್ವವಿದೆ’ ಎಂದರು.
ಶ್ರೀ ತ್ರಿಶೂಲಪ್ಪ ಶರಣರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಲ್ಲಣ್ಣ ಹೊಸಮನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ರವೀಂದ್ರನಾಥ ಎಸ್. ಹೊಸಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ಹಾಗೂ ಸನ್ಮಾನ ನೆರವೇರಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಬಿಸಿಯೂಟ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ
ಈ ಸಂದರ್ಭದಲ್ಲಿ ಅಶೋಕ ಮಲ್ಲಾಬಾದಿ, ಯಲ್ಲಪ್ಪ ಹಳಕಟ್ಟಿ, ನಾಗರಾಜ ದೊರೆ, ಡಾ. ದೇವಿಂದ್ರಪ್ಪ ಹಡಪದ, ಮಲ್ಲಣ್ಣಗೌಡ ಪಾಟೀಲ್, ಶರಣಬಸವ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




