ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದ ಬದುಕಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಬಾಬುರಾವ್ ಮೂಡುಬಿ ಹೇಳಿದರು.
ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ಕಾರ್ಯಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪರಸ್ಪರ ಸಹಬಾಳ್ವೆ, ಸಹಕಾರ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು” ಎಂದು ನೀಡಿದರು.

ಬಸವಕಲ್ಯಾಣ ಸಿಪಿಐ ಅಲಿಸಾಬ್ ಮಾತನಾಡಿ, “ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ನಿರಂತರ ಅಧ್ಯಯನ ಮೈಗೂಡಿಸಿಕೊಳ್ಳಬೇಕು. ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದ್ದು, ರೈತರ ಶ್ರಮವನ್ನು ಗೌರವಿಸಬೇಕು” ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ ಚೆಂಗಟೆ ಮಾತನಾಡಿ, “ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ನಿರಂತರ ಅಧ್ಯಯನ ಅಗತ್ಯವಾಗಿದೆ. ಸೃಜನಶೀಲತೆ, ಶಿಸ್ತು, ತಾಳ್ಮೆ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಡಾ.ಬಲಿರಾಂ ಹುಡೆ, ಪ್ರೊ.ಮಾಮನಶೆಟ್ಟಿ, ಪ್ರೊ. ಸಂತೋಷಸಿಂಗ್ ಬಯಾಸ್, ಪ್ರೊ.ವಿಷ್ಣುವರ್ಧನ್, ಪ್ರೊ.ಗಿರೀಶ್ ಯಡ್ರಾಮಿ ಹಾಗೂ ಪ್ರೊ. ಮಂಜುನಾಥ್ ದೇಶಪಾಂಡೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ರೈತ ಗೀತೆ ಕಾರ್ಯಕ್ರಮದ ಗಮನ ಸೆಳೆಯಿತು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಿದವು.

ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಲಿ ಕರೆ
ಕಾರ್ಯಕ್ರಮದಲ್ಲಿ ಡಾ.ಚಂದ್ರಕಾಂತ್ ಗಾಯಕವಾಡ, ಡಾ.ಪ್ರತಿಭಾ ಬಡಿಗೇರ್, ಡಾ. ಶ್ರೀಕಾಂತ್ ಚಹ್ವಾಣ, ಮೀನಾಕ್ಷಿ ಬಿರಾದರ್ ಸೇರಿದಂತೆ ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.




