ತಾಲೂಕಿನಾದ್ಯಂತ ನೂರಾರು ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿರುವ, lಖಾತೆ ಹಾಗೂ ಪಹಣಿ ಹೊಂದಿರುವ ಜಮೀನುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ‘ಅರಣ್ಯ ಭೂಮಿ’ ಎಂದು ಕಬಳಿಸಲು ಮುಂದಾಗಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಜೆ.ವಿ.ರಘುನಾಥ್ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಈ ನಡೆಯನ್ನು ಖಂಡಿಸಿ ಹಾಗೂ ಹೋರಾಟನಿರತ ರೈತರ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಡಿಸೆಂಬರ್ 10 ರಂದು ‘ಚಲೋ ಚಿಂತಾಮಣಿ’ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಚಿಂತಾಮಣಿ ತಾಲೂಕಿನ ಯಗವಕೋಟೆ ಗ್ರಾಮದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರ್ ಮತ್ತು ಕಂದಾಯ ಇಲಾಖೆಯಿಂದಲೇ ಅಧಿಕೃತವಾಗಿ ಸಾಗುವಳಿ ಚೀಟಿ,ಖಾತೆ ಮತ್ತು ಪಹಣಿ ಪಡೆದು ಉಳುಮೆ ಮಾಡುತ್ತಿರುವ ರೈತರಿಗೆ ಅರಣ್ಯ ಅಧಿಕಾರಿಗಳು ಈಗ ನೋಟಿಸ್ ನೀಡುತ್ತಿದ್ದಾರೆ.ಸ್ಯಾಟಲೈಟ್ ಸರ್ವೆ ನೆಪದಲ್ಲಿ ಮುನಗಾನಹಳ್ಳಿ ಹೋಬಳಿಯ ಹಲವು ಹಳ್ಳಿಗಳು ಹಾಗೂ ಕೈವಾರ ಹೋಬಳಿ ಸೇರಿದಂತೆ ತಾಲೂಕಿನ ಸುಮಾರು 20 ರಿಂದ 25 ಗ್ರಾಮಗಳ 1,500ಕ್ಕೂ ಹೆಚ್ಚು ಎಕರೆ ರೈತರ ಜಮೀನನ್ನು ಅರಣ್ಯಕ್ಕೆ ಸೇರಿಸಲು ಕಾಂಪೌಂಡ್ ನಿರ್ಮಿಸಲಾಗುತ್ತಿದೆ ಎಂದು ರಘುನಾಥ್ ರೆಡ್ಡಿ ಆರೋಪಿಸಿದರು.
“ಈ ಹಿಂದೆ ಶ್ರೀನಿವಾಸಪುರ ತಾಲೂಕಿನಲ್ಲೂ ಇದೇ ರೀತಿ ರೈತರ ಮೇಲೆ ಕೇಸು ದಾಖಲಿಸಿ ಭೂಮಿ ಕಿತ್ತುಕೊಳ್ಳಲಾಗಿತ್ತು.ಈಗ ಚಿಂತಾಮಣಿಯಲ್ಲೂ ಅದೇ ತಂತ್ರ ಅನುಸರಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸರ್ವೆ ನಡೆಸಬೇಕು.ಅರಣ್ಯ ಇಲಾಖೆಯವರು ಹಿಂದೆ ನೆಟ್ಟಿರುವ ಗಿಡಗಳ ವ್ಯಾಪ್ತಿಗೆ ಮಾತ್ರ ಕಾಂಪೌಂಡ್ ಹಾಕಿಕೊಳ್ಳಲಿ,ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರು ಉಳುಮೆ ಮಾಡುತ್ತಿರುವ ಭೂಮಿಯ ತಂಟೆಗೆ ಬರಬಾರದು” ಎಂದು ಎಚ್ಚರಿಕೆ ನೀಡಿದರು.
“ಯಾವುದೇ ಶಾಂತಿಸಭೆ ನಡೆಸದೆ ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳು ಏಕಾಏಕಿ ಜಮೀನು ವಶಪಡಿಸಿಕೊಳ್ಳಲು ಬಂದಾಗ ಸ್ಥಳದಲ್ಲಿ ಗಲಾಟೆಯಾಗಿದೆ.ಈ ವೇಳೆ ತಹಸೀಲ್ದಾರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ,ರೈತರಿಗೆ ಜೀವಾವಧಿ ಶಿಕ್ಷೆಯಾಗುವಂತಹ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಎಲ್ಲಾ ಸುಳ್ಳು ಕೇಸುಗಳನ್ನು ತಕ್ಷಣವೇ ಬೇಷರತ್ತಾಗಿ ವಾಪಸ್ ಪಡೆಯಬೇಕು” ಎಂದು ಅವರು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಮುಂದಿನ ದಿನಗಳಲ್ಲಿ ಒಬ್ಬನೇ ಒಬ್ಬ ರೈತನ ತಂಟೆಗೆ ಬಂದರೂ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ ಅವರು,ಡಿಸೆಂಬರ್.10 ರಂದು ನಡೆಯಲಿರುವ ‘ಚಲೋ ಚಿಂತಾಮಣಿ’ ಬೃಹತ್ ಹೋರಾಟದಲ್ಲಿ ತಾಲೂಕಿನ ಸಮಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.




