ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ನಡೆದಿದ್ದ ಹೈ-ವೋಲ್ಟೇಜ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು (ಮೇ 4) ಬೆಳಿಗ್ಗೆ 8 ಗಂಟೆಯಿಂದ ಬಿಗಿ ಭದ್ರತೆಯ ನಡುವೆ ಆರಂಭವಾಗಿದೆ. ಒಟ್ಟು 234 ಸ್ಥಾನಗಳಿಗೆ ಬಹುಮತ ಸಾಬೀತುಪಡಿಸಲು 118 ಸ್ಥಾನಗಳ ಅಗತ್ಯವಿದ್ದು, ಈ ಬಾರಿ ರಾಜ್ಯದಲ್ಲಿ ದಾಖಲೆಯ ಶೇ. 84.80ರಷ್ಟು ಮತದಾನವಾಗಿದೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ, ಇ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಮರಳಿ ಅಧಿಕಾರ ಹಿಡಿಯಲು ತೀವ್ರ ಹೋರಾಟ ನಡೆಸುತ್ತಿದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಇಡೀ ದೇಶದ ಗಮನವನ್ನು ಅತಿ ಹೆಚ್ಚು ಸೆಳೆದಿರುವುದು ಖ್ಯಾತ ನಟ ದಳಪತಿ ವಿಜಯ್ ಅವರ ನೂತನ ಪಕ್ಷವಾದ ‘ತಮಿಳು ವೆಟ್ರಿ ಕಳಗಂ’ (ಟಿವಿಕೆ). ಸಾಂಪ್ರದಾಯಿಕವಾಗಿ ಡಿಎಂಕೆ ಹಾಗೂ ಎಐಎಡಿಎಂಕೆ ನಡುವಿನ ನೇರ ಹಣಾಹಣಿಯಾಗಿರುತ್ತಿದ್ದ ತಮಿಳುನಾಡು ರಾಜಕೀಯ, ವಿಜಯ್ ಅವರ ಪಕ್ಷದ ಪ್ರವೇಶದಿಂದಾಗಿ ಈ ಬಾರಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಇದನ್ನು ಓದಿದ್ದೀರಾ? ಪಂಚರಾಜ್ಯಗಳ ವಿಧಾನಸಭಾ ಚುನಾವಣೆ: ಮತಎಣಿಕೆ ಇಂದು, ಯಾರಿಗೆ ಒಲಿಯಲಿದೆ ಅಧಿಕಾರ?
ಕಣದಲ್ಲಿರುವ ಪ್ರಮುಖ ಘಟಾನುಘಟಿಗಳ ಪೈಕಿ ಡಿಎಂಕೆ ವರಿಷ್ಠ ಹಾಗೂ ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಭದ್ರಕೋಟೆ ‘ಕೊಳತ್ತೂರು’ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದಾರೆ. 2011ರಿಂದಲೂ ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರ ವಿರುದ್ಧ ಈ ಬಾರಿ ಎಐಎಡಿಎಂಕೆಯ ಪಿ. ಸಂತಾನ ಕೃಷ್ಣನ್ ಮತ್ತು ಟಿವಿಕೆಯ ವಿ.ಎಸ್. ಬಾಬು ಕಣದಲ್ಲಿದ್ದು, ಈ ಕ್ಷೇತ್ರದಲ್ಲಿ ಶೇ. 86.12ರಷ್ಟು ಮತದಾನವಾಗಿದೆ. ಮತ್ತೊಂದೆಡೆ, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಟ ವಿಜಯ್ ಅವರು ಉತ್ತರ ಚೆನ್ನೈನ ‘ಪೆರಂಬೂರ್’ ಕ್ಷೇತ್ರದಿಂದ ತಮ್ಮ ಚೊಚ್ಚಲ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಕಾರ್ಮಿಕರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಡಿಎಂಕೆಯ ಹಾಲಿ ಶಾಸಕ ಆರ್.ಡಿ. ಶೇಖರ್ ಅವರನ್ನು ವಿಜಯ್ ಎದುರಿಸುತ್ತಿದ್ದು, ಬರೋಬ್ಬರಿ ಶೇ. 89.74ರಷ್ಟು ಬೃಹತ್ ಮತದಾನವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ನಗರ ಪ್ರದೇಶದ ಮತದಾರರು ಹಾಗೂ ಯುವಜನತೆಯನ್ನು ಗುರಿಯಾಗಿಸಿಕೊಂಡು ಟಿವಿಕೆ ತೀವ್ರ ಪ್ರಚಾರ ನಡೆಸಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಡಿಎಂಕೆ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗುವ ಭವಿಷ್ಯ ನುಡಿದಿದ್ದರೂ, ಕೆಲವು ಸಮೀಕ್ಷೆಗಳು ವಿಜಯ್ ಅವರ ಟಿವಿಕೆಗೆ ಅಚ್ಚರಿಯ ಮಟ್ಟದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




