ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್ ಲಾಟರಿ ಹೊಡೀತಾ’’ ಎಂದು ಕೇಳುತ್ತಾರೆ. ಬೆಟ್ಟವನ್ನೆಲ್ಲ ಕೆದಕಿ, ಉತ್ಖನನ ಮಾಡಿ ಸಂಜೀವಿನಿ ಕೊಟ್ಟ ನಾರಾಯಣ ಬಲದ ಮ್ಯಾಜಿಕ್ ಅದು. ಎಚ್.ಎಸ್. ಶಿವಪ್ರಕಾಶ್ ಹೇಳುವಂತೆ ಅವರು ಜೀವರತ್ನ. ಬಿಡುವಾದಾಗೆಲ್ಲ ಕೊಂಚ ಬಂದು ಹೋಗಿ. ಅನಂತಮೂರ್ತಿ ತುಂಬ ಗೆಲುವಾಗುತ್ತಾರೆ ಎಂದು ಎಸ್ತರ್ ಹಲವು ಬಾರಿ ನಾರಾಯಣ್ಗೆ ಹೇಳಿದ್ದರಂತೆ.
ಕೆವಿಎನ್ ಎಚ್ಚರಗೊಳ್ಳದ ನಿದ್ರೆಯಲ್ಲಿ ಮುಳುಗಿದ್ದಾರೆ. ಎಚ್ಚರಗೊಂಡ ನಮಗೆ ಆಕಾಶ ಕಡು ಕಪ್ಪಾಗಿದೆ. ಸುತ್ತಮುತ್ತಲಿನ ಗಿಡ, ಮರ, ಹುಲ್ಲಿನ ಗರಿಗಳೂ ಅಲುಗಾಡದಂತೆ ಕಾಣಿಸುತ್ತಿವೆ. ಊದುಗಡ್ಡಿಯ ಹೊಗೆ ಸುರುಳಿ ಸುತ್ತಿಕೊಳ್ಳುತ್ತಲೇ ಇದೆ. ಎರಡು ಸಾಕು ನಾಯಿಗಳು ಕೂಡ ನೀರ್ಗಣ್ಣಾಗಿ ಓಡಾಡುತ್ತಿವೆ. ಗುಂಪಿನಲ್ಲಿದ್ದರೂ ಒಂಟಿ. ಒಂಟಿ. ಶೂನ್ಯಭಾವ. ಯಾವ ಆಸರೆಯೂ ಇಲ್ಲದೇ ಇದ್ದಾಗ ದೇವರೇ ಎಂದು ಮೊರೆ ಇಡೋಣ ಎಂದರೆ ನಿರೀಶ್ವರವಾದ ಉಸಿರಿನ ಲಯದಂತಿದೆ. ಆತ್ಮದಲ್ಲಿ ತಲ್ಲೀನವಾಗೋಣ. ಆ ನಿಲ್ದಾಣದಲ್ಲಿ ನಿರಾಳಗೊಳ್ಳೋಣ ಎಂದರೆ ಶಬ್ದಕೋಶದಲ್ಲಿ ಬಿಟ್ಟರೆ ಅದು ಬೇರೆಲ್ಲೂ ಇಲ್ಲ ಎಂದು ವಿ.ಜಿ.ಭಟ್ಟ ಹೇಳಿ ಹೋಗಿದ್ದು ಕಿವಿಯಲ್ಲಿ ಮಾರ್ದನಿಸುತ್ತಿದೆ. ಯಾವುದೂ ಇಷ್ಟವಿಲ್ಲ. ಯಾರಲ್ಲೂ ಸ್ವಯಂ ಪ್ರಭೆ ಇಲ್ಲ. ‘ನಾರಾಯಣ ಏಕೆ ನಮ್ಮನ್ನಲ್ಲೆ ಬಿಟ್ಟು ಹೋದೆ. ನಿನ್ನ ಪಕ್ಕ ನಮಗೂ ಜಾಗ ಕೊಡಪ್ಪ’ ಎಂಬ ಕರುಳಿನ ಕೂಗು ಕೇಳಿಸುತ್ತಲೇ ಇದೆ. ‘ಅತ್ತಾರೆ ಅತ್ತುಬಿಡು’ ಎಂದು ಸಾಕ್ಷಾತ್ ಬೇಂದ್ರೆ ಹೇಳಿದರೂ ಮನಸ್ಸು ಸ್ವೀಕರಿಸುತ್ತಿಲ್ಲ. ನಿನಗೆ ನೀನೇ ಎಂಬ ತತ್ವಜ್ಞಾನದ ಓದು ಏಕೋ ಸಮಾಧಾನಕೊಡುತ್ತಿಲ್ಲ. ಸಿಕ್ಕುಗಳನ್ನು ಬಿಡಿಸುವ ಕುಶಲ ನೇಕಾರನಿಲ್ಲ ಎಂದ ಕೂಡಲೇ ಹಳೆಯ ಗಂಟುಗಳು ಎಳೆ ಬಿಚ್ಚಿಕೊಳ್ಳುತ್ತಿವೆ. ಕೊರಳು ಸುತ್ತುತ್ತಿವೆ. ಬಿಗಿಯತೊಡಗಿವೆ. ಬಿಡಿಸುವಾತ ಏನು ಮಾಡಿದರೂ ಎಚ್ಚರಗೊಳ್ಳುವುದೇ ಇಲ್ಲ. ಶೋಕವೇ ಮುಗಿಸು ನಿನ್ನ ಕತೆ ಎಂದು ನಮಗೆ ನಾವೇ ಹೇಳಿಕೊಳ್ಳಲಾರೆವು.
ಕೆವಿಎನ್ ಸಂಜೀವಿನಿ
ಕೆ.ವಿ.ನಾರಾಯಣ ಎಂದರೆ ಅಧ್ಯಾಪಕ, ವಿಮರ್ಶಕ, ಸಂಸ್ಕೃತಿ ಚಿಂತಕ, ನುಡಿ ವಿಜ್ಞಾನಿ, ದೇಶಿ ದರ್ಶಕ, ಮೀಮಾಂಸೆಕಾರ, ರಂಗ ನಟ, ಅನುವಾದಕ, ಯೋಜನಾಕಾರ, ಆಡಳಿತಗಾರ ಎಂಬ ಪದನಾಮಗಳು ಸಾಲುಗಟ್ಟಿದರೂ ಮುಂಗೋಳಿ ಕೂಗಿ ಮೂಡಣ ಕೆಂಪೇರಿದಾಗ ಕೆವಿಎನ್ ಅವರನ್ನು ತಪ್ಪದೆ ಸ್ಮರಿಸಿಕೊಳ್ಳುವವರಿಗೆ ಮಾತ್ರ ಸಮಾಧಾನವಿಲ್ಲ. ನಮ್ಮ ಕೆವಿಎನ್ ಇಷ್ಟೇ ಅಲ್ಲ. ಮತ್ತೇನು ಎಂದರೆ ಹೃದಯ ಹೇಳುತ್ತೆ. ಮಾತಾಗುವುದಿಲ್ಲ. ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್ ಜತೆ ಮಾತನಾಡಿದರೆ ಸಾಕು…. ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್ ಲಾಟರಿ ಹೊಡೀತಾ’’ ಎಂದು ಕೇಳುತ್ತಾರೆ. ಬೆಟ್ಟವನ್ನೆಲ್ಲ ಕೆದಕಿ, ಉತ್ಖನನ ಮಾಡಿ ಸಂಜೀವಿನಿ ಕೊಟ್ಟ ನಾರಾಯಣ ಬಲದ ಮ್ಯಾಜಿಕ್ ಅದು. ಎಚ್.ಎಸ್. ಶಿವಪ್ರಕಾಶ್ ಹೇಳುವಂತೆ ಅವರು ಜೀವರತ್ನ.
ಬಿಡುವಾದಾಗೆಲ್ಲ ಕೊಂಚ ಬಂದು ಹೋಗಿ. ಅನಂತಮೂರ್ತಿ ತುಂಬ ಗೆಲುವಾಗುತ್ತಾರೆ ಎಂದು ಎಸ್ತರ್ ಹಲವು ಬಾರಿ ನಾರಾಯಣ್ಗೆ ಹೇಳಿದ್ದರಂತೆ.
ಮಾತು-ಬರಹ ಹೊಳಹು -ಉತ್ಸಾಹ
ಮಾತಲ್ಲ ಕೆವಿಎನ್ ಬರಹಗಳು ಕೂಡ ಹೊಸ ಹೊಳಹುಗಳ ಹಿಗ್ಗಿನಲ್ಲಿ ನಮಗೆ ಹಕ್ಕಿಯ ಲಾಘವವನ್ನು ತರುತ್ತವೆ. ಮನೋರೂಪಣೆಗಳನ್ನು ಬದಲಾಯಿಸುತ್ತವೆ. ನಮಗೆ ನಾವೇ ಹೊಸಬರಾಗಿಸುವ ಖುಷಿಯನ್ನು ತರುತ್ತವೆ. ಭುಜಂಗಯ್ಯ, ನಾಯಿಗುತ್ತಿ, ಐತ, ಪೀಂಚಲು, ಮಂದಣ್ಣ, ಅಮಾಸ, ಡಾ. ತಿಮ್ಮಪ್ಪ, ಚೋಮ ಮೊದಲಾದ ಕಥಾ ಪಾತ್ರಗಳಿಗೆ ಅರಿವು ಮತ್ತು ಇರುವನ್ನು ಬದಲಾಯಿಸುವ ಸಾಮರ್ಥ್ಯವಿದೆ ಎಂದುಕೊಂಡಿದ್ದೇವೆ. ಆದರೆ ಕೆವಿಎನ್ ಅವರ ನೈಜ ಚಿಂತನೆ ಕೂಡ ಮನದ ಬೇರು, ಕಾಂಡ, ಚಿಗುರಿಗೆ ಚೈತ್ರವನ್ನು ತರುತ್ತದೆ.
ಕೆಲವೊಂದು ನಿದರ್ಶನಗಳನ್ನು ಗಮನಿಸೋಣ.
ಮಕ್ಕಳ ಆಟದ ರೈಲು ನಿಜದ ಬುಲೆಟ್ ಟ್ರೇನ್ !
ಕಳೆದ ವರ್ಷ ಅಕ್ಟೋಬರ್ ನಲ್ಲಿ ‘ಭಾಷಾ ನೀತಿ’ಯನ್ನು ರೂಪಿಸಲು ತಜ್ಞರ ಸಮಿತಿ ರಚಿಸಲಾಗಿದೆ. ತುಳು, ಕೊರಗ, ಕೊಡವ, ಬಡಗ, ಸಿದ್ಧಿ, ಕುರುಬ, ವರ್ಲಿ, ಚೆಂಚು, ಇರುಳ, ಗೌಳಿ, ಯರವ, ಸೋಲಿಗ, ಉರ್ದು, ಬ್ಯಾರಿ ಮೊದಲಾದ ಸಣ್ಣ ಭಾಷೆಗಳ ಸಂರಕ್ಷಣೆ ಇದರ ಗುರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.
“ಕರ್ನಾಟಕದಲ್ಲಿ 230 ಭಾಷೆಗಳಿದ್ದು, ಸರಕಾರದ ಈ ತೀರ್ಮಾನವು ಕನ್ನಡ ನುಡಿಯನ್ನು ಇನ್ನಷ್ಟು ಸಮಗ್ರ ಮತ್ತು ಸಶಕ್ತಗೊಳಿಸಲಿದೆ,’’ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಘೋಷಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಕನ್ನಡ ಸಂಗೋಪನೆಗೆ ಇರುವ ಸಂಸ್ಥೆಗಳ ಕೆಲಸದ ವೈಖರಿಗೆ ನುಡಿ ಕೇಂದ್ರಿವಾಗಿದೆಯೇ ಹೊರತು ನುಡಿಯುವವರಲ್ಲ. ಅಳಿವಿನ ಅಂಚಿನಲ್ಲಿರುವ ನುಡಿಗಳು ಎಂದಾಗ ಅದನ್ನು ಮಾತನಾಡುವವರ ಸ್ಥಿತಿ-ಗತಿಯನ್ನು ಮನಸ್ಸಿಗೆ ತಂದುಕೊಳ್ಳಬೇಕು. ನುಡಿ ಅರಿಗರ ಉಳಿವು, ನುಡಿಯ ಉಳಿವು ಕೂಡ ಆಗಿರುತ್ತದೆ ಈ ಸಂಗತಿಯನ್ನು ಕೆ.ವಿ.ನಾರಾಯಣ, ತಮ್ಮ ನುಡಿಗಳ ಅಳಿವು ಬೇರೆ ದಿಕ್ಕಿನ ನೋಟ- ಕೃತಿಯಲ್ಲಿ ಮಂಡಿಸಿದ್ದಾರೆ. (ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಗಳಿಸಿದೆ.)
ನುಡಿ ಮತ್ತು ನುಡಿ ಅರಿಗರ ನಡುವೆ ಕಂದರ
“ ಸರಕಾರದ ಈಗಿನ ನೀತಿ, ರೀತಿ, ನಡವಳಿಕೆಯು “ನುಡಿಗಳನ್ನು ‘ಕಾಪಿಡುವ’ ರೀತಿಯು ಸಂರಕ್ಷಣಾಲಯಗಳಲ್ಲಿ ಪ್ರಾಣಿಗಳನ್ನು, ಅಪರೂಪದ ವಸ್ತುಗಳನ್ನು ವಸ್ತು ಸಂಗ್ರಹಾಲಯಗಳಲ್ಲಿ ಇರಿಸುವ ಮಾದರಿಯನ್ನೇ ಹೋಲುತ್ತದೆ. ಇದನ್ನು ದಿಟವಾಗಿ ಕಾಪಿಡುವ ಬಗೆ ಎಂದು ಒಪ್ಪುವುದು ಕಷ್ಟ. ನುಡಿಗಳನ್ನು ನುಡಿಗಳನ್ನಾಡುವ ಸಮುದಾಯಗಳಿಂದ, ನುಡಿಗಳ ಬಳಕೆಯ ಸಂದರ್ಭಗಳಿಂದ ಬೇರ್ಪಡಿಸುವ ಮೂಲಕ ನುಡಿಗಳನ್ನು ಕಾಪಾಡಿಕೊಳ್ಳುವುದು ಸರಿಯಾದ ಹಾದಿಯಾಗಲಾರದುʼʼ
“ಅಂಚಿನ ಸಮುದಾಯಗಳ ನುಡಿಗಳನ್ನು ಕಾಪಿಡುವ ಯತ್ನವನ್ನು ನಡೆಸುತ್ತಾ ಹೋಗುತ್ತಿರುವಾಗಲೇ ಆ ಸಮುದಾಯಗಳಿಗೆ ಇರುವ ಬದುಕುವ ಅವಕಾಶಗಳನ್ನು ಕಡಿಮೆ ಮಾಡುತ್ತಾ ಹೋದರೆ ಆಗ ನುಡಿಗಳನ್ನು ಕಾಯ್ದುಕೊಳ್ಳುವ ಯತ್ನಗಳಿಗೆ ನೈತಿಕವಾಗಿ ಯಾವ ಸಮರ್ಥನೆಯೂ ಇಲ್ಲದಂತಾಗುತ್ತದೆʼʼ
‘’ಇದರಲ್ಲಿ ನುಡಿಯನ್ನು ಕಾಪಿಡುವುದು ಎನ್ನುವ ಕೆಲಸ ತನ್ನಿಂದ ತಾನೇ ಸ್ವತಂತ್ರವಾದುದಲ್ಲ. ಡಿಯನ್ನಾಡುವವರನ್ನು ಕಾಪಿಡುವುದನ್ನು ಮರೆತು ನುಡಿಯನ್ನಷ್ಟೇ ಕಾಪಿಡುವ ಮಾತು ಯುಕ್ತವಾದುದಲ್ಲ’’ ಎಂಬ ಕೆವಿಎನ್ ಅವರ ಚಿಂತನೆ ನುಡಿಗಳ ಉಳಿವಿನ ಈಗಿನ ಯೋಜನೆಗಳಿಗೆ ಎಳ್ಳುನೀರು ಬಿಟ್ಟು ಹೊಸ ಜೀವ ನೀಡಬೇಕಾದ ತುರ್ತುನ್ನು ಹೇಳುತ್ತದೆ. ಇದೇ ಜೀವರತ್ನ.
ನುಡಿಯೆರಿಗರನ್ನು ಸಂಗೋಪಿಸಿದರೆ ನುಡಿಯನ್ನು ಸಂಗೋಪನೆ ಮಾಡಿದಂತೆ ಎಂಬುದು ಇನ್ನೂ ಬಹುಜನರ ತಲೆಗೆ ಹೋಗಿಯೇ ಇಲ್ಲ.
ಇಂಗ್ಲಿಷ್ ಬರುವುದಕ್ಕೂ ಯಶಸ್ಸಿಗೂ ಗಂಟು ಹಾಕಿದ್ದೇವೆ. ನುಡಿಗಳಿಗೂ ಕೌಶಲಗಳಿಗೂ ಕರಳು ಸಂಬಂಧವಿದೆ ಎಂದುಕೊಂಡಿದ್ದೇವೆ. ಈ ನಂಬಿಕೆಯ ತಳಪಾಯವನ್ನೇ ಕೆವಿಎನ್ ಈ ಕೃತಿಯಲ್ಲಿ ಕಿತ್ತು ಹಾಕುತ್ತಾರೆ.
ಇಂಗ್ಲಿಷ್ ಯಶಸ್ಸಿಗೆ ರಹದಾರಿಯೇ?
ಕೌಶಲಗಳನ್ನು ನುಡಿಯಲ್ಲಿ ದಾಟಿಸಲು ಆಗುವುದಿಲ್ಲ. ಗಣಕವೋ, ಮೊಬೈಲ್, ಇಲ್ಲವೇ ನಾವು ಚಲಾಯಿಸುವ ವಾಹನಗಳು ಕೆಟ್ಟು ಹೋಗುತ್ತವೆ. ಆಗ ಯಾರೋ ಒಬ್ಬರು ರಿಪೇರಿ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಆದರೆ ಕೆಟ್ಟು ನಿಂತಿರುವುದು ಸರಾಗವಾಗುವುದಿಲ್ಲ.
ಇದಕ್ಕಿಂತ ಕ್ರಿಯಾವರ್ತದಲ್ಲಿ ಅಂದರೆ, ಮಾಡಿ ತೋರಿಸಿದಾಗ, ಹಲವು ಬಾರಿ ಪುನರಾವರ್ತಿಸಿದಾಗ ಗೊತ್ತಾಗುತ್ತದೆ. ಇದು ಎಲ್ಲಕೌಶಲಗಳಿಗೂ ಅನ್ವಯವಾಗುತ್ತದೆ. ನೋಡಿ ಕಲಿ ಎಂಬುದು ಮೂಲಭೂತ ಸಂಗತಿ. ಹೇಳುತ್ತ ಕಲಿ ಅಲ್ಲ. ಹೇಳಿಕೊಡುವ ಕೌಶಲದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ತೆಲುಗು ಎಂಬುದ ಹೆಚ್ಚು ಕಡಿಮೆ ಎಂಬುದು ಇರುವುದಿಲ್ಲ. ಕೆಲವೊಂದು ಸಮುದಾಯಗಳಿಗೆ ವಿಶಿಷ್ಟ ತಿಳಿವು ಇರುತ್ತದೆ. ಸೋಲಿಗರಿಗೆ ಆನೆ, ಜೇನು ಕುರುಬರಿಗೆ ಜೇನು, ಓಂಗೆ, ಜಾರುವಾ, ಗ್ರೇಟ್ ಅಂಡಮಾನೀಸ್ ಗಳಿಗೆ ಜಲಚರ, ಎಸ್ಕಿಮೊಗಳಿಗೆ ಮಂಜಗಡ್ಡೆ, ಕುಂಬಾರ, ಕಮ್ಮಾರ, ದೇವಾಂಗರಿಗೆ ಮಡಿಕೆ, ಕಬ್ಬಿಣ, ನೇಯ್ಗೆ ಕೌಶಲಗಳಿರುತ್ತವೆ. ನೇಯುವುದರ ಕುರಿತು ಒಂದು ಗಂಟೆ ಹೇಳಿಕೊಟ್ಟರೂ ಲಾಳಿಗೆ ಕಂಡಿಕೆ ಹಾಕುವ ಮೊದಲ ಕೆಲಸವೂ ಬರುವುದಿಲ್ಲ.
ಎಷ್ಟೋ ವೇಳೆ ಹಲವು ಸಮುದಾಯಗಳು ತಾವು ಮಾಡುವ ಅಭ್ಯಾಸಗಳು ಬಾಯಿಗೆ ಬಂದರೆ ಅದರ ಮಹತ್ವ, ಅಸ್ತಿತ್ವವೇ ಕಳೆದು ಹೋಗುತ್ತದೆ ಎಂದೇ ನಂಬುತ್ತಾರೆ.
ಬುಡಕಟ್ಟು ವಾಸಿಗಳ ಹಲವು ನಂಬಿಕೆ. ಆಚರಣೆ, ತಿಳಿವು, ಕೌಶಲ ಅವರಿಗೆ ಮಾತ್ರ ಸೀಮಿತ. ಅದು ಹೊರಗೆ ದಾಟುವುದೇ ಇಲ್ಲ. ಅವರನ್ನು ಉಳಿಸಿಕೊಂಡರೆ ಮಾತ್ರ ಅವರ ವಿಶಿಷ್ಟತೆ ಉಳಿದುಕೊಳ್ಳುತ್ತದೆ ಎಂಬುದನ್ನು ಕೆವಿಎನ್ ಮನದಟ್ಟಾಗುವಂತೆ ನಿರೂಪಿಸಿದ್ದಾರೆ. ಆದರೆ ನಮ್ಮ ಮೊದ್ದು ತಲೆಗಳಿಗೆ ಈ ವಿಷಯವಿನ್ನೂಹೋಗಿಲ್ಲ. ಇಂಗ್ಲಿಷ್ನೊಂದಿಗೆ ಬಿಸ್ ನೆಸ್ ಹಾಸುಹೊಕ್ಕಾಗಿರುವುದರಿಂದ ನುಡಿಗಳಿಗೂ ಕೌಶಲಗಳಿಗೂ ಇರುವ ನಂಟನ್ನುಬಿಡಿಸುವುದು ಕಡು ಕಷ್ಟ.
ಕೆವಿಎನ್ ಅವರ ಇತ್ತೀಚಿನ ಕೃತಿ ಕುವೆಂಪು ಅವರನ್ನು ಹೊಸ ಓದಿನ ನಿಕಷಕ್ಕೆ ಒಡ್ಡುತ್ತದೆ. ಇಲ್ಲಿಯ ತನಕ ಕಾಣದ ಲೋಕಕ್ಕೆ ಕರೆದೊಯ್ಯುತ್ತದೆ.
ಕುವೆಂಪು ಓದಿಗೆ ವಸಂತ
ಕಳೆದ ವರ್ಷಾಂತ್ಯದಲ್ಲಿ ಪ್ರಕಟಣವಾದ ‘ಹೊಸ ಓದುಗರಿಗೆ ಕುವೆಂಪು’ ಕೃತಿ ವಿಮರ್ಶೆ ಕೂಡ ಎಂತಹ ಸೃಜನಶೀಲ ಕ್ರಿಯೆ ಎಂಬುದನ್ನು ಮನಗಾಣಿಸುತ್ತದೆ.
ನಮ್ಮ ನೋಟ, ಅನುಭವ, ಚಿಂತನೆಯಲ್ಲಿ ದೊಡ್ಡ ಪಲ್ಲಟಗಳನ್ನು ಉಂಟು ಮಾಡುತ್ತದೆ. ಇದು ಎಲೆ ಉದುರುವ ಶಿಶಿರ. ಹೊಸದು ಹುಟ್ಟಿಸುವ ವಸಂತ.
ಕೃತಿಯನ್ನು ಅರಿಯುವ ಮಾಪುಗೋಲುಗಳು ಕೃತಿಯಲ್ಲೇ ಸಿಗುತ್ತವೆ ಎಂಬ ಕೆವಿಎನ್ ವಿಮರ್ಶಾ ಮಾರ್ಗ ಈ ಕೃತಿಯಲ್ಲಿ ಮತ್ತಷ್ಟು ವಿಸ್ತಾರ ಪಡೆದಿದೆ. ‘ಚರಿತ್ರೆಯ ಕಪ್ಪುಕುಳಿಗೆ ಸಿಲುಕದ ಮಲೆಗಳಲ್ಲಿ ಮದುಮಗಳು’, ‘ಮತ್ತೆ ಮತ್ತೆ ಮಲೆಗಳಲ್ಲಿ ಮದುಮಗಳು’ ಬರಹಗಳ ಕಾಣ್ಕೆಗಳನ್ನು ಅರಿತರೆ ಹೊಸ ಓದಿನ ಆವೇಗವನ್ನುಂಟು ಮಾಡುತ್ತದೆ. ಇದರಲ್ಲಿ ವಿಚಾರಿತ ಸುಂದರ ಮತ್ತು ಅವಿಚಾರಿತ ರಮಣೀಯ ಎಂಬ ಪರಿಕಲ್ಪನೆಗಳ ಮೂಲಕ ಹೂವಯ್ಯ, ಸೀತೆ ಸೇರಿದಂತೆ ಎಲ್ಲ ಪಾತ್ರಗಳು ಇರುವ, ಆಗುವ, ಹೊಸ ಅನುಭವ ಪಡೆಯುವ, ಓದುಗರನ್ನೂ ಇಂಥದ್ದೇ ಪ್ರಕ್ರಿಯೆಗಳಿಗೆ ಒಳಗಾಗಿಸುವ ಬಗೆ ಕಾಣಿಸುತ್ತದೆ. ಹೂವಯ್ಯನ ಪಾತ್ರವನ್ನು ತರ್ಕದ ತಿರುಗಣಿಯಲ್ಲಿ ತಿರುಗಿಸುತ್ತಲೇ ಅಲ್ಲಲ್ಲಿ ಅಪಸ್ವರ ಎತ್ತುವವರಿಗೆ ನಾವಿರುವ ಬದುಕಿನ ನಮ್ಮದೇ ಸ್ವರೂಪವನ್ನು ತೋರಿಸುತ್ತವೆ.
ಇಲ್ಲಿ ಕೃತಿ ಮತ್ತು ವಿಮರ್ಶೆ ಜತೆ ಜತೆಯಲ್ಲೇ ಇರುತ್ತದೆ. ಇದನ್ನು ಕಂಡಾಗ ಅದು ಇದು ಮೇಲು ಎಂಬ ತರತಮಗಳು ವಿಜೃಂಭಿಸುವುದಿಲ್ಲ. ಕೃತಿಯೊಂದಿಗೇ ಸಾಗಿ ಶಬರಿಯಂತೇ ಹಣ್ಣುಗಳ ರುಚಿ ನೋಡಿ ಒಗ್ಗದೇ ಇರುವುದನ್ನು ಬದಿಗಿರಿಸುವುದು, ರುಚಿ ಇರುವುದನ್ನು ಅದರ ಬೇರು, ಕಾಂಡ, ಚಿಗುರಿನಲ್ಲಿರುವ ಜೀವ ಸಂಚಾರದ ಎಳೆ ನಾಳಗಳಲ್ಲೂ ತಿಳಿಯುವ ರೀತಿ ಗೊತ್ತಾಗುತ್ತದೆ. ಎಲ್ಲೋ ಅಜ್ಞಾತವಾಗಿರುವ, ಮುಸುಕಿನ ಪದರಗಳನ್ನು ತೆಗೆಯುವುದು, ನೋಡಿದರೂ ಕಾಣದ ಹೊಳಪು ಬೆಳಕನ್ನು ಕಾಣಿಸುವುದು ಈ ಕೃತಿಯ 12 ಬರಹಗಳಲ್ಲಿದೆ.
“ಕಾಲ ಸರಿದಂತೆ ಕೃತಿಗಳು ಕೃತಿಕಾರರಿಂದ ಬಿಡುಗಡೆ ಪಡೆದು ಓದುಗರನ್ನು ತಲುಪಲು ಹವಣಿಸುತ್ತಿರುತ್ತವೆ,’’ ಕುವೆಂಪು ಓದಿನ ಕ್ರಮಗಳು ಹೀಗೆ ರೂಪುಗೊಳ್ಳಬೇಕು,’’ ಎಂದು ಕೆವಿಎನ್ ದೃಢವಾಗಿ ಪ್ರತಿಪಾದಿಸುತ್ತಾರೆ.
ಇದನ್ನೂ ಓದಿ ದೆಹಲಿಯಲ್ಲಿ ದಿನಕ್ಕೆ 20 ಸಿಗರೇಟು ‘ಉಚಿತ’ ಕೊಡುಗೆ! ‘ವಿಷ’ ಕಲೆತು ತತ್ತರಿಸಿದ ಪ್ರಾಣವಾಯು!
ಹಳತು ಮತ್ತು ಹೊಸತು, ವೈಜ್ಞಾನಿಕತೆ ಮತ್ತು ವೈಚಾರಿಕತೆ, ಆಜ್ಞೇಯತಾವಾದ ಮತ್ತು ನಾಸ್ತಿಕವಾದ, ವೈಯಕ್ತಿಕ ಬದಲಾವಣೆ ಮತ್ತು ಜಗತ್ತಿನ ಬದಲಾವಣೆ, ಮನುಜ ಮಥ ಮತ್ತು ವಿಶ್ವಪಥ, ಕರ್ಮ ಸಿದ್ದಾಂತ, ಪುನರ್ಜನ್ಮದ ಕುರಿತು ಕುವೆಂಪು ಅವರ ಭಾಷಣ, ಬರಹಗಳಲ್ಲಿರುವ ಗ್ರಹಿಕೆಯ ಸಮಸ್ಯೆಗಳನ್ನು ಈ ಕೃತಿ ತುಂಬ ಖಚಿತವಾಗಿ ಅನಾವರಣಗೊಳಿಸುತ್ತದೆ. ಇದು ನಮ್ಮ ಪೂರ್ವಸಿದ್ಧ ಅಕೃತಿಗಳನ್ನು ಮರು ರೂಪಿಸಿಕೊಳ್ಳಲು ಒತ್ತಾಯಿಸುತ್ತದೆ.
ಇಂತಹ ಸಂದರ್ಭಗಳಲ್ಲಿ ಒಂದು ಬಗೆಯ ಸಿದ್ಧ ಓದಿನ ಕ್ರಮಕ್ಕೆ ಒಗ್ಗಿಕೊಂಡವರು, ಪಕ್ಕಾ ಬಿಂಬಗಳನ್ನು ಕಟ್ಟಿಕೊಂಡವರಿಗೆ ನಿಲುವುಗಳ ತಾಕಲಾಟವನ್ನು ಖಂಡಿತ ತರುತ್ತದೆ. ಕುವೆಂಪು ಕುರಿತು ಕಳೆದ 75 ವರುಷಗಳಲ್ಲಿ 400 ಪುಸ್ತಕಗಳು, 60 ಪಿಎಚ್ ಡಿಗಳು, ಸಾವಿರಕ್ಕೂ ಮಿಗಿಲಾದ ಲೇಖನಗಳು ಬಂದಿವೆ. ‘ಹೊಸ ಓದುಗರಿಗೆ ಕುವೆಂಪು’ ಈ ಎಲ್ಲದರೊಳಗೆ ಖಂಡಿತ ಒಂದಾಗುವುದಿಲ್ಲ. ಅನನ್ಯವಾಗಿ ನಮ್ಮ ಜೊತೆ ಸೇರುತ್ತದೆ.
ಕೆವಿಎನ್ ತೊಂಡು ಮೇವಿನ ಹಾದಿಗಳು
*
ಕೃತಿಕಾರರಿಗೆ ನಮ್ಮ ಓದು ಕಟ್ಟುಬೀಳಬೇಕಾಗಿಲ್ಲ. ಕೃತಿಯನ್ನು ಅರಿಯುವ ಹಾದಿಗಳು ಮತ್ತು ಅಳೆಯುವ ಮಾಪುಗೋಲುಗಳು ಅದರಲ್ಲೇ ಅಡಕವಾಗಿರುತ್ತವೆ.
**
ವಿಚಾರಿತವಾಗಿರುವುದೇ ಸುಂದರವಲ್ಲ, ಅವಿಚಾರತ ಕೂಡ ರಮಣೀಯವಾಗಿರುತ್ತದೆ.
*
ಕತೆ, ಕಾದಂಬರಿ ಪಾತ್ರಗಳಿಗೆ ಆಗುವಿಕೆ ಮುಖ್ಯ, ಇರುವಿಕೆ ಅಲ್ಲ. ಈ ಆಗುವಿಕೆಯನ್ನು ನಾವು ಸಾಹಿತ್ಯ ಕೃತಿ ನೀಡುವ ಅನುಭವವನ್ನಾಗಿ ಬದಲಿಸಿಕೊಳ್ಳಬೇಕಾಗುತ್ತದೆ.
**
ಸಿದ್ಧಾಂತಗಳು ಸಾಹಿತ್ಯ ಕೃತಿಯೊಳಗೆ ಯಾವ ಆಕಾರ ತಳೆಯುತ್ತವೆ, ಓದುಗರಿಗೆ ಯವ ರೂಪದಲ್ಲಿ ಲಭ್ಯವಾಗುತ್ತದೆ ಎನ್ನುವುದು ಮುಖ್ಯ.
ಕೃತಿಕಾರರು ವೈಚಾರಿಕ ಆಕೃತಿಗಳಿಗೆ ಬದ್ಧವಾಗಿದ್ದರೂ ಅವರ ಕೃತಿ ಜಗತ್ತಿನ ವಿನ್ಯಾಸಗಳು ಅದನ್ನು ಸಮರ್ಥಿಸುವ ರೀತಿಯಲ್ಲಿಇರುತ್ತವೆ ಎನ್ನಲಾಗದು. ಪಾಶ್ಚಾತ್ಯ ವೈಚಾರಿಕ ಆಕೃತಿಗಳ ಆಮದು ಅಚ್ಚುಗಳಲ್ಲಿ ನಮ್ಮ ಕೃತಿಗಳನ್ನು ಇಳಿಸಿ ಮೇಲೆತ್ತಿ ಬೆಲೆ ಕಟ್ಟುವ ಮಾದರಿಯಲ್ಲಿ ಸೃಜನಶೀಲತೆ ಇರುವುದಿಲ್ಲ.. ಗಿಳಿಶಾಸ್ತ್ರದ ಪಟ್ಟಿಯಲ್ಲಿ ನಮ್ಮ ಸ್ವಂತದ ಗೊಂದಲಗಳಿಗೆ ಉತ್ತರವಿರುವುದಿಲ್ಲ.
ಇದು ಕೆವಿಎನ್ ಅವರ ಮಾತು ಮತ್ತು ಕೃತಿಗಳ ಸ್ಥೂಲ ನೋಟ. ಅವರ ಅರಿವಿನ ಹಾದಿಯ ಪಯಣಿಗರಾದರೆ ನಮಗೆ ನಾವು ಹೊಸ ಮನುಷ್ಯರಾಗುತ್ತೇವೆ.

ಕೆ ವೆಂಕಟೇಶ್
ಕತೆಗಾರ, ಹಿರಿಯ ಪತ್ರಕರ್ತ



