ದೆಹಲಿಯಲ್ಲಿ ದಿನಕ್ಕೆ 20 ಸಿಗರೇಟು ‘ಉಚಿತ’ ಕೊಡುಗೆ! ‘ವಿಷ’ ಕಲೆತು ತತ್ತರಿಸಿದ ಪ್ರಾಣವಾಯು!

Date:

ಪ್ರತಿ ವರ್ಷ ನವೆಂಬರ್ ಬಂತೆಂದರೆ ದೆಹಲಿ ಜಗತ್ತಿನ ಅತಿ ದೊಡ್ಡ ಗ್ಯಾಸ್ ಚೇಂಬರ್ ಆಗುತ್ತದೆ. ಟಿವಿ ತೆರೆದರೆ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಸರ್ಕಾರ ಮತ್ತೊಂದು ಸರ್ಕಾರವನ್ನು ದೂರುತ್ತದೆ. ಪಂಜಾಬ್ ಹರಿಯಾಣದ ಕಡೆ ಬೆರಳು ತೋರಿಸುತ್ತದೆ; ಹರಿಯಾಣ ದೆಹಲಿಯ ಕಡೆ ನೋಡುತ್ತದೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪಕ್ಕೆ ಮಾತ್ರ ಕೊರತೆಯಿಲ್ಲ. ಆದರೆ ದೆಹಲಿಯ ಜನರ ಶ್ವಾಸಕೋಶಕ್ಕೆ ಮಾತ್ರ ರಜೆ ಸಿಗುವುದಿಲ್ಲ.

- Advertisement -

ನನ್ನ ಪ್ರೀತಿಯ ಓದುಗರೇ,

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ನೀವು ಧೂಮಪಾನ ಮಾಡುತ್ತೀರಾ? ಇಲ್ಲವೇ? ಒಳ್ಳೆಯದು. ಆದರೆ ಒಂದು ಸಣ್ಣ ಸಮಸ್ಯೆಯಿದೆ. ನೀವು ದೆಹಲಿಯಲ್ಲಿ ವಾಸಿಸುತ್ತಿದ್ದರೆ ಸಿಗರೇಟ್ ಸೇದುವುದನ್ನು ಬಿಟ್ಟರೂ ಪ್ರಯೋಜನವಿಲ್ಲ. ಗಾಳಿಯೇ ನಿಮ್ಮ ಪರವಾಗಿ ದಿನಕ್ಕೆ ಹತ್ತಿಪ್ಪತ್ತು ಸಿಗರೇಟ್ ಸೇದುತ್ತಿದೆ! ಇದಕ್ಕೆ ಹಣ ಕೊಡಬೇಕಿಲ್ಲ, ಅಂಗಡಿಗೆ ಹೋಗಬೇಕಿಲ್ಲ, ಲೈಸೆನ್ಸ್ ಬೇಡ. ಸರ್ಕಾರದ ಕಡೆಯಿಂದ ಸಿಗುವ ಉಚಿತ ಕೊಡುಗೆ ಇದು!

ಪ್ರತಿ ವರ್ಷ ನವೆಂಬರ್ ಬಂತೆಂದರೆ ದೆಹಲಿ ಜಗತ್ತಿನ ಅತಿ ದೊಡ್ಡ ಗ್ಯಾಸ್ ಚೇಂಬರ್ ಆಗುತ್ತದೆ. ಟಿವಿ ತೆರೆದರೆ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಸರ್ಕಾರ ಮತ್ತೊಂದು ಸರ್ಕಾರವನ್ನು ದೂರುತ್ತದೆ. ಪಂಜಾಬ್ ಹರಿಯಾಣದ ಕಡೆ ಬೆರಳು ತೋರಿಸುತ್ತದೆ; ಹರಿಯಾಣ ದೆಹಲಿಯ ಕಡೆ ನೋಡುತ್ತದೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪಕ್ಕೆ ಮಾತ್ರ ಕೊರತೆಯಿಲ್ಲ. ಆದರೆ ದೆಹಲಿಯ ಜನರ ಶ್ವಾಸಕೋಶಕ್ಕೆ ಮಾತ್ರ ರಜೆ ಸಿಗುವುದಿಲ್ಲ.

AQI ಎಂಬುದು ಗಾಳಿಯ ಗುಣಮಟ್ಟ ಅಳೆಯುವ ಮಾಪಕ. ಅದರ ಸಂಖ್ಯೆ 400–500 ತಲುಪಿದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಇದನ್ನು ಸ್ವಲ್ಪ ಸರಳವಾಗಿ ನೋಡೋಣ.

ಒಂದು ಘನ ಮೀಟರ್ ಗಾಳಿಯನ್ನು ಕಲ್ಪಿಸಿಕೊಳ್ಳಿ. ಅಂದರೆ ಸುಮಾರು 3.3 ಅಡಿ ಉದ್ದ, ಅಗಲ ಮತ್ತು ಎತ್ತರವಿರುವ ಒಂದು ಗಾಳಿಯ ಪೆಟ್ಟಿಗೆ. ಭಾರತದ CPCB ಮಾನದಂಡದ ಪ್ರಕಾರ, ಅಂಥ ಗಾಳಿಯಲ್ಲಿ PM2.5 ಎಂಬ ಅತಿ ಸೂಕ್ಷ್ಮ ಧೂಳಿನ ಕಣಗಳ ಪ್ರಮಾಣ 250 ಮೈಕ್ರೋಗ್ರಾಂಗಿಂತ ಹೆಚ್ಚಾದರೆ, ಅವುಗಳ AQI ಉಪಸೂಚ್ಯಂಕ 401–500ರ ತೀವ್ರ ಹಂತ ತಲುಪುತ್ತದೆ. ಒಂದು ಸಣ್ಣ ಹೋಲಿಕೆ ಹೇಳಬೇಕೆಂದರೆ, 250 ಮೈಕ್ರೋಗ್ರಾಂ ಎಂದರೆ 0.25 ಮಿಲಿಗ್ರಾಂ ಮಾತ್ರ. ನಾವು ಸಾಮಾನ್ಯವಾಗಿ ತೆಗೆದುಕೊಳ್ಳುವ 500 ಮಿಲಿಗ್ರಾಂ ಮಾತ್ರೆಯ ತೂಕದ ಎರಡು ಸಾವಿರದ ಒಂದು ಭಾಗದಷ್ಟು! ಇಷ್ಟು ಅಲ್ಪ ಪ್ರಮಾಣದ ಸೂಕ್ಷ್ಮ ಕಣಗಳೂ ಉಸಿರಿನ ಮೂಲಕ ಶ್ವಾಸಕೋಶದ ಆಳಕ್ಕೆ ನುಗ್ಗಬಲ್ಲವು.

ಇನ್ನು PM10 ಎಂಬ ಮತ್ತೊಂದು ಬಗೆಯ ಧೂಳಿನ ಕಣಗಳಿವೆ. ಇವು PM2.5 ಕಣಗಳಿಗಿಂತ ತುಸು ದೊಡ್ಡವು. ಒಂದು ಘನ ಮೀಟರ್ ಗಾಳಿಯಲ್ಲಿ PM10 ಪ್ರಮಾಣ 430 ಮೈಕ್ರೋಗ್ರಾಂಗಿಂತ ಹೆಚ್ಚಾದರೆ, ಅದರ AQI ಉಪಸೂಚ್ಯಂಕವೂ 401–500ರ ತೀವ್ರ ಹಂತ ತಲುಪುತ್ತದೆ. ಅಂದರೆ ಕಣ್ಣಿಗೆ ಕಾಣದ ಅಥವಾ ಸುಲಭವಾಗಿ ಗಮನಕ್ಕೆ ಬಾರದ ಧೂಳಿನ ಕಣಗಳೇ ನಮ್ಮ ಉಸಿರಾಟಕ್ಕೆ ಎಷ್ಟು ಅಪಾಯಕಾರಿಯಾಗಬಲ್ಲವು ಎಂಬುದನ್ನು ಊಹಿಸಿ.

ಇಲ್ಲಿ ಒಂದು ಮುಖ್ಯ ಸಂಗತಿಯಿದೆ. ದೆಹಲಿಯ ವಾಯುಮಾಲಿನ್ಯ ಕೇವಲ ದೆಹಲಿ ನಗರದ ಸಮಸ್ಯೆಯಲ್ಲ. ಒಂದು ಜಲಾಶಯಕ್ಕೆ ನೀರು ಅದರ ಸುತ್ತಲಿನ ಸಾವಿರಾರು ಚದರ ಕಿಲೋಮೀಟರ್ ವ್ಯಾಪ್ತಿಯ ಜಲಾನಯನ ಪ್ರದೇಶದಿಂದ ಬರುವಂತೆ, ದೆಹಲಿಯ ಗಾಳಿಯ ಗುಣಮಟ್ಟವನ್ನೂ ಅದರ ಸುತ್ತಲಿನ ವಿಶಾಲ ವಾಯುಪ್ರದೇಶ ನಿರ್ಧರಿಸುತ್ತದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಸುತ್ತಮುತ್ತಲಿನ ಕೃಷಿ, ಕೈಗಾರಿಕೆ, ವಾಹನಗಳು ಹಾಗೂ ನಿರ್ಮಾಣ ಕಾಮಗಾರಿಗಳ ಹೊಗೆ ಮತ್ತು ಧೂಳು ಗಾಳಿಯೊಂದಿಗೆ ಸಂಚರಿಸಿ ದೆಹಲಿಯನ್ನು ತಲುಪುತ್ತವೆ. ಆದ್ದರಿಂದ ದೆಹಲಿಯ ಗಾಳಿಯನ್ನು ಶುದ್ಧಗೊಳಿಸಬೇಕೆಂದರೆ ನಗರದ ಗಡಿಯಲ್ಲಿ ನಿಂತು ಚಿಕಿತ್ಸೆ ಕೊಟ್ಟರೆ ಸಾಲದು; ಇಡೀ ವಾಯುಪ್ರದೇಶವನ್ನು ಒಟ್ಟಾಗಿ ನಿರ್ವಹಿಸಬೇಕು.

delhi aqi

ಹೀಗಿರುವಾಗ ನಮ್ಮ ರಾಜಕಾರಣಿಗಳು ಪರಸ್ಪರ ದೂಷಿಸುವುದರಲ್ಲಿ ನಿರತರಾಗಿದ್ದಾರೆ. ಅವರಿಗೆ ಒಂದು ಪ್ರಶ್ನೆ: ನೀವು ಅಧಿಕಾರದ ಕುರ್ಚಿಯಲ್ಲಿ ಕುಳಿತಾಗ ಗಾಳಿ ಶುದ್ಧವಾಗಿರುತ್ತದೆ, ಜನರು ಮಾತ್ರ ಉಸಿರಾಡುವಾಗ ವಿಷವಾಗುತ್ತದೆಯೇ?

ಪಟಾಕಿಯೇ ವಿಲನ್, ಉಳಿದವರೆಲ್ಲ ನಿರಪರಾಧಿಗಳೇ?

ದೀಪಾವಳಿ ಬಂತೆಂದರೆ ಪಟಾಕಿಗಳ ಮೇಲೆ ನಿಷೇಧ, ನ್ಯಾಯಾಲಯದ ಆದೇಶ, ಧಾರ್ಮಿಕ ಭಾವನೆ, ರಾಜಕೀಯ ಹೇಳಿಕೆಗಳು ಶುರುವಾಗುತ್ತವೆ. ಪಟಾಕಿಗಳು ಮಾಲಿನ್ಯ ಹೆಚ್ಚಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ದೆಹಲಿಯ ಗಾಳಿಯೆಲ್ಲ ಪಟಾಕಿಗಳಿಂದಲೇ ವಿಷವಾಗುತ್ತದೆಯೇ?

ಒಂದು ಪಾತ್ರೆಯಲ್ಲಿ ನೀರು ಕುದಿಯುವಾಗ ಕೊನೆಯ ಒಂದು ಡಿಗ್ರಿ ಬಿಸಿ ಸಾಕು. ದೆಹಲಿಯ ಪರಿಸ್ಥಿತಿಯೂ ಹಾಗೆಯೇ. ವಾಹನಗಳ ಹೊಗೆ, ಕೈಗಾರಿಕೆಗಳ ಮಾಲಿನ್ಯ, ಹೊಲಗಳ ಕೂಳೆ ಸುಡುವ ಹೊಗೆ, ಕಟ್ಟಡ ನಿರ್ಮಾಣದ ಧೂಳು – ಇವೆಲ್ಲ ಸೇರಿ ಗಾಳಿಯನ್ನು ಮೊದಲೇ ವಿಷಮಯವಾಗಿಸಿರುತ್ತವೆ. ಪಟಾಕಿಗಳು ಆ ಬೆಂಕಿಗೆ ತುಪ್ಪ ಸುರಿಯುತ್ತವೆ ಅಷ್ಟೆ.

ಚಳಿಗಾಲದಲ್ಲಿ ಗಾಳಿಯ ಚಲನೆ ಮತ್ತು ವಾತಾವರಣದ ಸ್ಥಿತಿಯಿಂದ ಈ ಮಾಲಿನ್ಯ ಹೊರಹೋಗದೆ ದೆಹಲಿ ಹಾಗೂ ಸುತ್ತಮುತ್ತ ಸಿಲುಕಿಕೊಳ್ಳುತ್ತದೆ. ಹೀಗಿರುವಾಗ ದೆಹಲಿಯ ಗಡಿಯಲ್ಲಿ ಒಂದು ಫಲಕ ಹಾಕಿ ‘ಇಲ್ಲಿ ಮಾಲಿನ್ಯ ಪ್ರವೇಶ ನಿಷಿದ್ಧ’ ಎಂದರೆ ಸಾಕೇ? ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಒಟ್ಟಾಗಿ ಕೆಲಸ ಮಾಡಬೇಕು. ಪ್ರಾದೇಶಿಕ ವಾಯುಮಾಲಿನ್ಯ ನಿರ್ವಹಣಾ ವ್ಯವಸ್ಥೆ ರೂಪಿಸಿ, ಎಲ್ಲರೂ ತಮ್ಮ ಪಾಲಿನ ಹೊಣೆ ಹೊತ್ತುಕೊಳ್ಳಬೇಕು.

ಹಾಗಾದರೆ ಏನು ಮಾಡಬೇಕು?

ನನ್ನ ಪ್ರೀತಿಯ ಓದುಗರೇ, ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳುವುದು ಸುಲಭ. ಆದರೆ ಮಾಲಿನ್ಯ ಸೃಷ್ಟಿಸುವ ವ್ಯವಸ್ಥೆಯನ್ನೇ ಬದಲಿಸುವುದು ಸರ್ಕಾರದ ಕೆಲಸ. ಅದಕ್ಕೆ ಮೂರು ಕಡೆ ಕೈ ಹಾಕಬೇಕು.

ಮೊದಲು ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಿ; ಮೆಟ್ರೋಗೆ ಹೋಗುವ ದಾರಿಯನ್ನೂ ತೋರಿಸಿ!

ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಮೆಟ್ರೋ ಕಟ್ಟುತ್ತದೆ. ಉದ್ಘಾಟನೆಯ ದಿನ ಹೂಮಾಲೆ, ಫೋಟೋ, ಭಾಷಣ ಎಲ್ಲವೂ ಭರ್ಜರಿ. ಆದರೆ ಒಬ್ಬ ಹಿರಿಯ ನಾಗರಿಕನಿಗೆ ಮನೆಯ ಬಾಗಿಲಿನಿಂದ ಮೆಟ್ರೋ ನಿಲ್ದಾಣ ತಲುಪಲು ಆಟೋ ಹುಡುಕಬೇಕು. ನಿಲ್ದಾಣದಿಂದ ಕಚೇರಿಗೆ ಹೋಗಲು ಮತ್ತೊಂದು ವಾಹನ ಬೇಕು. ಕೊನೆಗೆ ಆತ ತನ್ನ ಕಾರನ್ನೇ ತೆಗೆದುಕೊಂಡು ಹೋಗುತ್ತಾನೆ. ಆಗ ಮೆಟ್ರೋ ಕಟ್ಟಿದ ಹಣ ಯಾರಿಗಾಗಿ ಖರ್ಚಾಯಿತು ಎಂದು ಕೇಳಬಾರದಾ?

AIR POLLUTION DELHI

ಮೆಟ್ರೋ ನಿಲ್ದಾಣದಿಂದ ಮನೆಗಳಿಗೆ ಮತ್ತು ಕಚೇರಿಗಳಿಗೆ ಸಣ್ಣ ಬ್ಯಾಟರಿ ವಾಹನಗಳು, ಫೀಡರ್ ಬಸ್‌ಗಳು, ಸುರಕ್ಷಿತ ಪಾದಚಾರಿ ಮಾರ್ಗಗಳು, ಎಲಿವೇಟರ್‌ಗಳು ಇರಬೇಕು. ಅಗತ್ಯವಿರುವಲ್ಲಿ ಚಲಿಸುವ ಪಾದಚಾರಿ ಮಾರ್ಗಗಳನ್ನೂ ನಿರ್ಮಿಸಬಹುದು. ಹಿರಿಯರು, ಮಕ್ಕಳು ಮತ್ತು ಅಂಗವಿಕಲರು ರಸ್ತೆ ದಾಟಲು ಸರ್ಕಸ್ ಮಾಡಬೇಕಾದ ಸ್ಥಿತಿ ಇರಬಾರದು.

ಮಾರುಕಟ್ಟೆ ಪ್ರದೇಶಗಳಲ್ಲಿ ಬಹುಮಹಡಿ ಪಾರ್ಕಿಂಗ್ ನಿರ್ಮಿಸಿ, ಮುಖ್ಯ ವಾಣಿಜ್ಯ ರಸ್ತೆಗಳನ್ನು ವಾಹನಮುಕ್ತ ವಲಯಗಳನ್ನಾಗಿ ಮಾಡಬಹುದು. ಹಳೆಯ ಮತ್ತು ಹೆಚ್ಚು ಹೊಗೆ ಬಿಡುವ ವಾಹನಗಳ ಮೇಲೆ ವರ್ಷಪೂರ್ತಿ ನಿಯಂತ್ರಣ ಇರಬೇಕು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ತಮ್ಮ ನೌಕರರಿಗೆ ಸಾರ್ವಜನಿಕ ಸಾರಿಗೆ ಬಳಸಲು ಪ್ರೋತ್ಸಾಹ ನೀಡಬಹುದು.

ಜನರಿಗೆ ಕಾರು ಬಿಟ್ಟು ಮೆಟ್ರೋ ಬಳಸುವುದು ಸುಲಭವಾಗಬೇಕು. ಇಲ್ಲದಿದ್ದರೆ ಕಾರಿನ ಕೀಲಿಯನ್ನು ಜೇಬಿನಲ್ಲಿಟ್ಟುಕೊಂಡೇ ಮೆಟ್ರೋ ಅಭಿವೃದ್ಧಿಯ ಬಗ್ಗೆ ಭಾಷಣ ಕೇಳುತ್ತಿರುತ್ತಾರೆ!

ಎರಡನೆಯದು, ರೈತನನ್ನು ಬೈಯುವುದಕ್ಕಿಂತ ಬೆಳೆ ಪದ್ಧತಿಯನ್ನು ಬದಲಿಸಿ!

ಪಂಜಾಬ್ ಮತ್ತು ಹರಿಯಾಣದ ರೈತರನ್ನು ಹೊಲದ ಕೂಳೆ ಸುಡುತ್ತಾರೆ ಎಂದು ದೂರುವುದು ಈಗಿನ ಫ್ಯಾಷನ್ ಆಗಿದೆ. ಆದರೆ ಈ ಪರಿಸ್ಥಿತಿ ಹೇಗೆ ಬಂತು ಎಂಬುದನ್ನೂ ಕೇಳಬೇಕಲ್ಲವೇ?

ಸ್ವಾತಂತ್ರ್ಯಾನಂತರ ದೇಶದ ಆಹಾರ ಭದ್ರತೆ ದೊಡ್ಡ ಸವಾಲಾಗಿತ್ತು. ಭಾಕ್ರಾ ನಂಗಲ್ ಅಣೆಕಟ್ಟು ನಿರ್ಮಿಸಿ ನೀರಾವರಿ ಸೌಲಭ್ಯ ವಿಸ್ತರಿಸಲಾಯಿತು. ದೇಶಕ್ಕೆ ಸಾಕಷ್ಟು ಆಹಾರ ಉತ್ಪಾದಿಸಬೇಕೆಂಬ ಉದ್ದೇಶದಿಂದ ಸರ್ಕಾರ ಭತ್ತದ ಕೃಷಿಗೆ ಉತ್ತೇಜನ ನೀಡಿತು. MSP ಮೂಲಕ ಭತ್ತಕ್ಕೆ ಖಚಿತ ಬೆಲೆ ಮತ್ತು ಖರೀದಿ ವ್ಯವಸ್ಥೆ ಕಲ್ಪಿಸಿತು. ರೈತರು ಸಹಜವಾಗಿಯೇ ಲಾಭದಾಯಕ ಬೆಳೆ ಬೆಳೆಯಲು ಮುಂದಾದರು. ಅಂದು ದೇಶದ ಆಹಾರ ಭದ್ರತೆಗೆ ನೆರವಾದ ಈ ನೀತಿ, ಕಾಲಕ್ರಮೇಣ ಅಂತರ್ಜಲದ ಮೇಲೆ ಭಾರಿ ಒತ್ತಡ ತಂದಿತು.

ಈಗ ನೀರು ಕಡಿಮೆಯಾಗಿದೆ. ಭತ್ತದ ನಾಟಿ ಸಮಯವನ್ನು ಮುಂದೂಡುವ ನಿಯಮ ಜಾರಿಯಾಗಿದೆ. ಕೊಯ್ಲು ತಡವಾಗುತ್ತದೆ. ಮುಂದಿನ ಗೋಧಿ ಬೆಳೆಗೆ ಹೊಲ ಸಿದ್ಧಪಡಿಸಲು ರೈತನಿಗೆ ಸಮಯ ಸಾಲದು. ಹೀಗಾಗಿ ಕೂಳೆ ಸುಡುವ ಅನಿವಾರ್ಯತೆ ಎದುರಾಗುತ್ತದೆ.

ಈಗ ರೈತನಿಗೆ ಬೆಂಕಿ ಹಚ್ಚಬೇಡ ಎಂದು ಹೇಳುವುದು ಸುಲಭ. ಆದರೆ ಒಂದು ಪ್ರಶ್ನೆ: ಭತ್ತ ಬೆಳೆಯಬೇಡ ಎಂದರೆ ಅದಕ್ಕೆ ಬದಲಾಗಿ ಯಾವ ಬೆಳೆ ಬೆಳೆಯಬೇಕು? ಅದಕ್ಕೆ ಖರೀದಿದಾರ ಯಾರು? ಬೆಲೆ ಖಾತರಿ ಯಾರು ಕೊಡುತ್ತಾರೆ?

ಜೋಳ, ಸಜ್ಜೆ, ರಾಗಿ, ಬೇಳೆಕಾಳುಗಳಿಗೂ ಭತ್ತದಂತೆ ಖಚಿತ ಮಾರುಕಟ್ಟೆ ಮತ್ತು ಸೂಕ್ತ MSP ನೀಡಬೇಕು. ಬೆಳೆ ಬದಲಿಸಿದರೆ ಆದಾಯ ಕಡಿಮೆಯಾಗುವ ರೈತನಿಗೆ ಪ್ರೋತ್ಸಾಹಧನ ಕೊಡಬೇಕು. ಕೂಳೆಯನ್ನು ಗೊಬ್ಬರವಾಗಿ ಪರಿವರ್ತಿಸಲು ಅಗತ್ಯವಾದ ಯಂತ್ರಗಳನ್ನು ಗ್ರಾಮ ಮಟ್ಟದಲ್ಲಿ ಕಡಿಮೆ ಬಾಡಿಗೆಗೆ ಒದಗಿಸಬೇಕು. ಅದರಿಂದ ಬಯೋಗ್ಯಾಸ್ ಮತ್ತು ಇತರ ಉಪಯುಕ್ತ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನೂ ಸ್ಥಾಪಿಸಬಹುದು.

ರೈತನಿಗೆ ಪರ್ಯಾಯ ಆದಾಯ ಕೊಟ್ಟರೆ ಹೊಲಕ್ಕೆ ಬೆಂಕಿ ಹಚ್ಚುವ ಅಗತ್ಯವೇ ಇರುವುದಿಲ್ಲ. ರೈತನಿಗೆ ದಂಡ, ಸರ್ಕಾರಕ್ಕೆ ಪ್ರಶಂಸೆ – ಇದು ಪರಿಹಾರವಲ್ಲ ಸ್ವಾಮಿ!

ಮೂರನೆಯದು, ಸರ್ಕಾರವೇ ಧೂಳಿನ ಕಾರ್ಖಾನೆ ನಡೆಸುವುದನ್ನು ನಿಲ್ಲಿಸಲಿ!

ಇಲ್ಲಿ ಒಂದು ವಿಚಿತ್ರ ಸಂಗತಿಯಿದೆ. ನಾವು ಕಟ್ಟಡ ನಿರ್ಮಾಣದ ಧೂಳಿನ ಬಗ್ಗೆ ಮಾತನಾಡುತ್ತೇವೆ. ಖಾಸಗಿ ಕಟ್ಟಡಗಳ ಮೇಲೆ ದಂಡ ಹಾಕುತ್ತೇವೆ. ಆದರೆ ನಮ್ಮ ಕಣ್ಣೆದುರೇ ಸರ್ಕಾರದ ಕಾಮಗಾರಿಗಳು ನಡೆಯುತ್ತಿವೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಪ್ರತಿದಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ರಸ್ತೆ, ಮೆಟ್ರೋ, ಫ್ಲೈಓವರ್, ಒಳಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ಕಾಮಗಾರಿಗಳನ್ನು ಹಗಲು-ರಾತ್ರಿ ನಡೆಸುತ್ತಿವೆ. ರಸ್ತೆ ಅಗೆಯುವುದು, ಮಣ್ಣು ರಾಶಿ ಹಾಕುವುದು, ಕಲ್ಲು ಒಡೆಯುವುದು, ಕಾಂಕ್ರೀಟ್ ಕತ್ತರಿಸುವುದು, ಹಳೆಯ ಕಟ್ಟಡಗಳನ್ನು ಕೆಡವುವುದು, ನಿರ್ಮಾಣ ಸಾಮಗ್ರಿ ಸಾಗಿಸುವುದು – ಇವೆಲ್ಲವೂ ಒಂದು ರೀತಿಯ ನಗರ ಮಟ್ಟದ Mining Activity ಇದ್ದಂತೆ.

ಇದರಿಂದ ಎಷ್ಟು ಧೂಳು ಏಳುತ್ತದೆ ಎಂಬುದನ್ನು ಯಾರಾದರೂ ಲೆಕ್ಕ ಹಾಕಿದ್ದಾರೆಯೇ? ಕಾಮಗಾರಿ ನಡೆಯುವಾಗ ರಸ್ತೆಯ ಮೇಲೆ ಮಣ್ಣಿನ ಮೋಡ ಏಳುತ್ತದೆ. ಕೆಲಸ ಮುಗಿದ ಮೇಲೆ ತಿಂಗಳುಗಟ್ಟಲೆ ಮಣ್ಣು ಹಾಗೆಯೇ ಉಳಿಯುತ್ತದೆ. ಮಳೆ ಬಂದರೆ ಕೆಸರು, ಗಾಳಿ ಬೀಸಿದರೆ ಧೂಳು. ನಂತರ ಅದೇ ಸರ್ಕಾರ ಸ್ಮಾಗ್ ಗನ್ ತಂದು ನೀರು ಸಿಂಪಡಿಸುತ್ತದೆ!

ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವೇ ಧೂಳಿನ ಕಾರ್ಖಾನೆ ನಡೆಸಿ, ನಂತರ ಅದೇ ಧೂಳನ್ನು ನಿಯಂತ್ರಿಸಲು ಸ್ಮಾಗ್ ಗನ್ ಖರೀದಿಸುವುದು ಯಾವ ರೀತಿಯ ಆಡಳಿತ ಬುದ್ಧಿವಂತಿಕೆ?

ಸರ್ಕಾರಿ ಕಾಮಗಾರಿಗಳಿಗೂ ಖಾಸಗಿ ಕಟ್ಟಡಗಳಿಗೂ ಒಂದೇ ನಿಯಮ ಇರಬೇಕು. ರಸ್ತೆ ಅಗೆಯುವ ಮೊದಲು ಧೂಳು ನಿಯಂತ್ರಣದ ಯೋಜನೆ ಇರಬೇಕು. ಮಣ್ಣು, ಮರಳು ಮತ್ತು ಸಿಮೆಂಟ್ ಮುಚ್ಚಿದ ವಾಹನಗಳಲ್ಲಿ ಸಾಗಬೇಕು. ನಿರ್ಮಾಣ ಸ್ಥಳಗಳನ್ನು ಹಸಿರು ಪರದೆಗಳಿಂದ ಮುಚ್ಚಬೇಕು. ರಸ್ತೆ ಮೇಲೆ ಬಿದ್ದ ಮಣ್ಣನ್ನು ತಕ್ಷಣ ತೆರವುಗೊಳಿಸಬೇಕು. ಅಗತ್ಯವಿರುವಲ್ಲಿ ನೀರು ಸಿಂಪಡಿಸುವ ಯಂತ್ರ ಮತ್ತು ಸ್ಮಾಗ್ ಗನ್ ಬಳಸಬೇಕು. ಕಾಮಗಾರಿ ಮುಗಿದ ಕೂಡಲೇ ರಸ್ತೆ ದುರಸ್ತಿ ಮಾಡಬೇಕು.

ಇವೆಲ್ಲವೂ ಟೆಂಡರ್‌ನಲ್ಲೇ ಕಡ್ಡಾಯ ಷರತ್ತುಗಳಾಗಿರಬೇಕು. ಗುತ್ತಿಗೆದಾರರಿಗೆ ಹಣ ಕೊಡುವಾಗ ಕೆಲಸದ ಗುಣಮಟ್ಟದ ಜೊತೆಗೆ ಪರಿಸರ ನಿಯಮ ಪಾಲನೆಯನ್ನೂ ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ಮಾತ್ರವಲ್ಲ, ಮರುಮರು ತಪ್ಪು ಮಾಡಿದರೆ ಗುತ್ತಿಗೆಯನ್ನೇ ರದ್ದುಪಡಿಸಬೇಕು.

ಇನ್ನು ಒಣ ಎಲೆ ಮತ್ತು ಕಸ ಸುಡುವುದನ್ನು ನಿಲ್ಲಿಸಬೇಕು. ಪ್ರತಿ ವಾರ್ಡ್‌ನಲ್ಲೂ ಎಲೆಗಳಿಂದ ಗೊಬ್ಬರ ತಯಾರಿಸುವ ವ್ಯವಸ್ಥೆ ಇರಬೇಕು. ಕಸ ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಮಾಡದೆ ಜನರಿಗೆ ಕಸ ಸುಡಬೇಡಿ ಎಂದು ಹೇಳುವುದರಲ್ಲಿ ಅರ್ಥವಿದೆಯೇ?

ಕೊನೆಯದಾಗಿ, ಒಂದು ಸಣ್ಣ ಪ್ರಶ್ನೆ…

ಪ್ರತಿ ವರ್ಷ ನವೆಂಬರ್‌ನಲ್ಲಿ ದೆಹಲಿಯ ಗಾಳಿ ವಿಷವಾಗುತ್ತದೆ. ನ್ಯಾಯಾಲಯಗಳು ಎಚ್ಚರಿಸುತ್ತವೆ. ಸಮಿತಿಗಳು ವರದಿ ಕೊಡುತ್ತವೆ. ಸರ್ಕಾರಗಳು ಸಭೆ ನಡೆಸುತ್ತವೆ. ರಾಜಕಾರಣಿಗಳು ಪರಸ್ಪರ ಆರೋಪ ಮಾಡುತ್ತಾರೆ. ಬೇಸಿಗೆ ಬಂದಾಗ ಎಲ್ಲರೂ ಮರೆತುಬಿಡುತ್ತಾರೆ. ಮುಂದಿನ ನವೆಂಬರ್‌ಗೆ ಮತ್ತೆ ಅದೇ ನಾಟಕ!

ನಮ್ಮ ಸಮಸ್ಯೆ ಪರಿಹಾರಗಳ ಕೊರತೆಯಲ್ಲ; ಅವುಗಳನ್ನು ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಜನರಿಗೆ ಮಾಸ್ಕ್ ಕೊಡುವುದಕ್ಕಿಂತ ಶುದ್ಧ ಗಾಳಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

ಕಾಲಿನೋವಿಗೆ ಬೆನ್ನುಹುರಿಯಲ್ಲಿ ಚಿಕಿತ್ಸೆ ಬೇಕು. ದೆಹಲಿಯ ಮಾಲಿನ್ಯಕ್ಕೂ ಹಾಗೆಯೇ. ಇಲ್ಲದಿದ್ದರೆ ಜನರು ಹತ್ತಿಪ್ಪತ್ತು ಸಿಗರೇಟ್ ಸೇದದಿದ್ದರೂ ಗಾಳಿಯ ಮೂಲಕ ಅದರ ಬೆಲೆ ತೆರುತ್ತಾರೆ. ರಾಜಕಾರಣಿಗಳು ಮಾತ್ರ ಮಾಲಿನ್ಯದ ಹೊಗೆಯಲ್ಲೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುತ್ತಾರೆ!

ಆರ್. ಮುರಳೀಧರ ನಾಯಕ್
ಆರ್. ಮುರಳೀಧರ ನಾಯಕ್
+ posts

ಮಾಜಿ ನಗರ ಮತ್ತು ಗ್ರಾಮ ಯೋಜನಾಧಿಕಾರಿ
ನಗರ ಮತ್ತು ಗ್ರಾಮ ಯೋಜನಾ ಸಂಸ್ಥೆ (TCPO), ಭಾರತ ಸರ್ಕಾರ, ನವದೆಹಲಿ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಆರ್. ಮುರಳೀಧರ ನಾಯಕ್
ಆರ್. ಮುರಳೀಧರ ನಾಯಕ್
ಮಾಜಿ ನಗರ ಮತ್ತು ಗ್ರಾಮ ಯೋಜನಾಧಿಕಾರಿ ನಗರ ಮತ್ತು ಗ್ರಾಮ ಯೋಜನಾ ಸಂಸ್ಥೆ (TCPO), ಭಾರತ ಸರ್ಕಾರ, ನವದೆಹಲಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ಇ20 ಬದಲು ಮಿತಿಮೀರಿ ಇ30 ಮಾರಾಟ; ತೈಲ ಕಂಪನಿಗಳ ಬೃಹತ್ ವಂಚನೆ ಬಯಲು

ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ತೈಲ ಕಂಪನಿಗಳು ಇ20 (E20) ಹೆಸರಿನಲ್ಲಿ...

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ ನಾಡೋಜ

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ...

ಸಂದರ್ಶನ | ಶೋಷಿತರ ಸ್ವಾಭಿಮಾನದ ಹೋರಾಟಕ್ಕೆ ದನಿಯಾದ ದಲಿತ ಚಳವಳಿ : ಮಾರುತಿ ಬೌದ್ಧೆ

ಶೋಷಿತರ ಬದುಕಿನಲ್ಲಿ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬೆಳಕು ಮೂಡಿಸುವ...

ಬೀದರ್‌ | ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಪರಿಹಾರ ಕಲ್ಪಿಸಿ: ಈಶ್ವರ ಖಂಡ್ರೆ

ಬೀದರ್‌ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ 24 ಗಂಟೆಯೊಳಗೆ ಪರ್ಯಾಯ...