ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್ನಲ್ಲಿ 20%ರ ಬದಲು 31.2%ರಷ್ಟು ಎಥನಾಲ್ ಬೆರೆಸುತ್ತಿರುವ ಅಕ್ರಮ ಬೆಳಕಿಗೆ ಬಂದಿದೆ. ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರನ ಎಥನಾಲ್ ಉದ್ಯಮ ಮತ್ತು ಸರ್ಕಾರಿ ನೀತಿಯ ನಡುವಿನ ಹಿತಾಸಕ್ತಿ ಸಂಘರ್ಷವನ್ನು ಮುನ್ನೆಲೆಗೆ ತಂದಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ E20 ಹೆಸರಿನಲ್ಲಿ 20%ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡುತ್ತೇವೆಂದು ಹೇಳಿಕೊಳ್ಳುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಭಾವಿ ತೈಲ ಕಂಪನಿಗಳ ಮೂಲಕ ಪರಿಸರಸ್ನೇಹಿ ಮತ್ತು ಅಗ್ಗದ ‘E20’ ಇಂಧನ ಪೂರೈಸುತ್ತಿದ್ದೇವೆ ಎಂದು ಭಾರೀ ಪ್ರಚಾರವನ್ನೂ ಮಾಡುತ್ತಿದೆ. ಆದರೆ, ಕರ್ನಾಟಕದಲ್ಲಿ ಇದೇ ಸರ್ಕಾರಿ ಕಂಪನಿಗಳು ನಡೆಸುತ್ತಿರುವ ಪೆಟ್ರೋಲ್ ಬಂಕ್ಗಳಲ್ಲಿನ ಇಂಧನವನ್ನು ರಾಜ್ಯ ಸರ್ಕಾರ ನಡೆಸಿದ ಸ್ವತಂತ್ರ ಮತ್ತು ಅಧಿಕೃತ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಭೀಕರ ಸತ್ಯವೊಂದು ಹೊರಬಿದ್ದಿದೆ. ಇಲ್ಲಿ ಸಾರ್ವಜನಿಕರಿಗೆ ಮಾರಾಟವಾಗುತ್ತಿರುವುದು E20 ಇಂಧನವಲ್ಲ. ಬದಲಿಗೆ, ವಾಹನಗಳ ಎಂಜಿನ್ಗಳಿಗೆ ವಿಷವಾಗಿರುವ 31.2%ರಷ್ಟು ಎಥನಾಲ್ (E31) ಬೆರೆಸಿರುವ ಕಳಪೆ ಮಿಶ್ರಣ ಎಂಬುದು ಬಹಿರಂಗವಾಗಿದೆ. ಇದು ತೈಲ ಮಾಫಿಯಾ ಮತ್ತು ಆಡಳಿತಾರೂಢ ಮೋದಿ ಸರ್ಕಾರ ಮತ್ತು ಬಂಡವಾಳಶಾಹಿಗಳ ಕುಮ್ಮಕ್ಕಿನಿಂದ ಸಾಮಾನ್ಯ ಜನರ ಮೇಲೆ ನಡೆದಿರುವ ಇಂಧನ ದರೋಡೆಯನ್ನು ಬಟಾಬಯಲು ಮಾಡಿದೆ.
ತಾವು ಕಷ್ಟಪಟ್ಟು ದುಡಿದ ಹಣವನ್ನು ಪೆಟ್ರೋಲ್ ಪಂಪ್ಗಳಿಗೆ ತೆತ್ತು ಪೆಟ್ರೋಲ್ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ತಾವು ಹಾಕಿಸುತ್ತಿರುವ ಇಂಧನದಲ್ಲಿ ಎಷ್ಟು ಪೆಟ್ರೋಲ್ ಇದೆ ಮತ್ತು ಎಷ್ಟು ಎಥನಾಲ್ ಇದೆ ಎಂದು ತಿಳಿದುಕೊಳ್ಳುವ ಮೂಲಭೂತ ಗ್ರಾಹಕ ಹಕ್ಕಿದೆ. ಆದರೆ, ಕೇಂದ್ರ ಸರ್ಕಾರವು ಇ20 ಹೆಸರಿನಲ್ಲಿ ಇ31 ಪೆಟ್ರೋಲ್ ಮಾರಾಟ ಮಾಡುತ್ತಿದ್ದು, ಗ್ರಾಹಕರ ಕಣ್ಣಿಗೆ ಮಣ್ಣೆರಚಿದೆ. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳು ಇಡೀ ದೇಶದ ತೈಲ ಮಾಫಿಯಾವನ್ನು ಜಗತ್ತಿನೆದುರು ಬೆತ್ತಲೆಗೊಳಿಸಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ಏಳು ಪ್ರಮುಖ ಜಿಲ್ಲೆಗಳಿಂದ ಸಂಗ್ರಹಿಸಲಾದ 63 ಪೆಟ್ರೋಲ್ ಮಾದರಿಗಳ ಪೈಕಿ, NABL ಮಾನ್ಯತೆ ಪಡೆದ ವಿಶ್ವಸನೀಯ ಸಂಸ್ಥೆಯಾದ ಬೆಂಗಳೂರಿನ ‘ಶ್ರೀರಾಮ್ ರಿಸರ್ಚ್ ಇನ್ಸ್ಟಿಟ್ಯೂಟ್’ನಲ್ಲಿ 14 ಮಾದರಿಎಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಬರೋಬ್ಬರಿ 11 ಮಾದರಿಗಳಲ್ಲಿ ಎಥನಾಲ್ ಪ್ರಮಾಣ 20%ನ ಕಾನೂನುಬದ್ಧ ಮಿತಿಯನ್ನು ಮೀರಿರುವುದು ಸಾಬೀತಾಗಿದೆ. ಇಂಡಿಯನ್ ಆಯಿಲ್ (IOCL) ಪೆಟ್ರೋಲ್ನಲ್ಲಿ ಬರೋಬ್ಬರಿ 31.2%ರಷ್ಟು ಎಥನಾಲ್ ಪತ್ತೆಯಾಗಿದ್ದರೆ, ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮಾದರಿಗಳಲ್ಲಿ 30.5%ರಷ್ಟು ಹಾಗೂ ಭಾರತ್ ಪೆಟ್ರೋಲಿಯಂ (BPCL Speed) ಇಂಧನದಲ್ಲಿ 26.5%ರಷ್ಟು ಎಥನಾಲ್ ಕಂಡುಬಂದಿದೆ. ಖಾಸಗಿ ಕಂಪನಿಗಳಾದ ನಯಾರಾ ಮತ್ತು ಶೆಲ್ ಪಂಪ್ಗಳಲ್ಲೂ 25.5%ನಿಂದ 26.1%ರಷ್ಟು ಎಥನಾಲ್ ಬೆರೆಸಿರುವುದು ದೃಢಪಟ್ಟಿದೆ.

ನಿಗದಿತ 20%ರ ಮಿತಿಗೆ ಹೋಲಿಸಿದರೆ 31.2% ಎಂಬುದು ಬರೋಬ್ಬರಿ 56%ರಷ್ಟು ಹೆಚ್ಚುವರಿ ಎಥನಾಲ್ ಅನ್ನು ಕಾನೂನುಬಾಹಿರವಾಗಿ ಬೆರೆಸಿರುವುದನ್ನು ತೋರಿಸುತ್ತದೆ. ತೈಲ ಕಂಪನಿಗಳು ತಾಂತ್ರಿಕ ನೆಪಗಳನ್ನು ಹೇಳಿ ಈ ವರದಿಯನ್ನು ತಳ್ಳಿಹಾಕಲು ಯತ್ನಿಸುತ್ತಿವೆ. ಆದರೆ, ಸ್ವತಂತ್ರ ಪ್ರಯೋಗಾಲಯದ ಈ ವರದಿಯು ಪೆಟ್ರೋಲ್ ಕಳ್ಳತನವನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಮಾತ್ರವಲ್ಲ, ಇಷ್ಟೊಂದು ಭಾರೀ ಪ್ರಮಾಣದ ಅಕ್ರಮ ಮಿಶ್ರಣವು ಕೇಂದ್ರ ಸರ್ಕಾರ ಮತ್ತು ತೈಲ ದೈತ್ಯರ ಆಂತರಿಕ ಒಪ್ಪಂದವಿಲ್ಲದೆ ನಡೆಯಲು ಸಾಧ್ಯವಿಲ್ಲ. ಈ ಕೃತ್ಯದಲ್ಲಿ ಇಬ್ಬರೂ ಶಾಮೀಲಾಗಿದ್ದಾರೆ ಎಂಬುದು ಸ್ಪಷ್ಟ.
ಅಂದಹಾಗೆ, ಎಥನಾಲ್ ಎಂಬುದು ಪೆಟ್ರೋಲ್ನಂತೆ ಗರಿಷ್ಠ ಇಂಧನ ಶಕ್ತಿಯನ್ನು ಹೊಂದಿರುವ ದ್ರವವಲ್ಲ. ಎಥನಾಲ್ ಮಿಶ್ರಣ ಹೆಚ್ಚಾದಷ್ಟು ವಾಹನದ ಎಂಜಿನ್ ಸಾಮರ್ಥ್ಯ ಕುಸಿಯುತ್ತದೆ. ಮೈಲೇಜ್ ಕೂಡ ಭಾರೀ ಪ್ರಮಾಣದಲ್ಲಿ ಪತನಗೊಳ್ಳುತ್ತದೆ. ಸ್ವತಃ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ E20 ಇಂಧನದ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದನ್ನು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದಾರೆ.
ಆದರೆ, ಈಗ ನಿಯಮಬಾಹಿರವಾಗಿ 31.2%ರಷ್ಟು ಭಾರೀ ಪ್ರಮಾಣದ ಎಥನಾಲ್ಅನ್ನು ಪೆಟ್ರೋಲ್ನಲ್ಲಿ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಾಹನ ಸವಾರರು ದಿನನಿತ್ಯ ಅನುಭವಿಸುತ್ತಿರುವ ಆರ್ಥಿಕ ನಷ್ಟ ಸಣ್ಣದಲ್ಲ. ಲೀಟರ್ಗೆ 50 ಕಿ.ಮೀ ಮೈಲೇಜ್ ನೀಡುತ್ತಿದ್ದ ದ್ವಿಚಕ್ರ ವಾಹನವು ಕಳಪೆ ಇಂಧನದಿಂದಾಗಿ ಮೈಲೇಜ್ ಕಳೆದುಕೊಂಡರೆ, ಗ್ರಾಹಕ ಪ್ರತಿ 1,000 ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ ಮುನ್ನೂರು ರೂ.ಗಳವರೆಗೆ ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಕೇವಲ ಹಣದ ನಷ್ಟ ಮಾತ್ರವಲ್ಲದೆ, ಭಾರತದ ರಸ್ತೆಗಳಲ್ಲಿರುವ 80%ಕ್ಕೂ ಹೆಚ್ಚು ವಾಹನಗಳು E10 ಅಥವಾ ಸಾಂಪ್ರದಾಯಿಕ ಪೆಟ್ರೋಲ್ಗೆ ತಕ್ಕಂತೆ ತಯಾರಾದವುಗಳಾಗಿವೆ. ಇಂತಹ ವಾಹನಗಳಿಗೆ 31%ರಷ್ಟು ಎಥನಾಲ್ ಇರುವ ಪೆಟ್ರೋಲ್ ಹಾಕಿದರೆ, ಎಂಜಿನ್ ಒಳಗಿನ ರಬ್ಬರ್ ಗ್ಯಾಸ್ಕೆಟ್ಗಳು, ರಬ್ಬರ್ ಪೈಪ್ಗಳು, ಇಂಧನ ಪಂಪ್ಗಳು ಹಾಗೂ ಇಂಜೆಕ್ಟರ್ಗಳು ತೀವ್ರವಾಗಿ ತುಕ್ಕು ಹಿಡಿದು ಸಂಪೂರ್ಣವಾಗಿ ಹಾನಿಯಾಗುತ್ತವೆ. ಗ್ರಾಹಕನಿಗೆ ಯಾವುದೇ ಮುನ್ಸೂಚನೆ ನೀಡದೆ, ಆತನ ವಾಹನದ ಎಂಜಿನ್ಗೆ ನಿಧಾನವಾಗಿ ವಿಷ ಉಣಿಸುತ್ತಿರುವ ಈ ಆಡಳಿತಾತ್ಮಕ ಅಪರಾಧ ಮತ್ತು ವಾಹನಗಳ ದುರಸ್ತಿಗೆ ಹೊಣೆ ಯಾರು?
ಗಮನಾರ್ಹವಾಗಿ, ಈ ಪೆಟ್ರೋಲ್-ಎಥನಾಲ್ ಮಿಶ್ರಣದ ಹಿಂದೆ ಆರ್ಥಿಕ ಸಾಮ್ರಾಜ್ಯದ ಕರಾಳ ಮುಖವೊಂದಿದೆ. ಇದರ ಬೇರುಗಳು ಸ್ವತಃ ಕೇಂದ್ರ ಸರ್ಕಾರದ ಪ್ರಭಾವಿ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬದ ಕಾರ್ಪೊರೆಟ್ ಸಾಮ್ರಾಜ್ಯದಲ್ಲಿ ಅಡಗಿವೆ. ನಿತಿನ್ ಗಡ್ಕರಿ ಅವರ ಪುತ್ರರಾದ ನಿಖಿಲ್ ಗಡ್ಕರಿ ಮತ್ತು ಸಾರಂಗ್ ಗಡ್ಕರಿ ಅವರು CIAN Agro Industries ಮತ್ತು Manas Agro Industries ನಂತಹ ಬೃಹತ್ ಎಥನಾಲ್ ಉತ್ಪಾದನಾ ಸಂಸ್ಥೆಗಳ ಮಾಲೀಕರು. ಸರ್ಕಾರದ ಎಥನಾಲ್ ಮಿಶ್ರಣ ನೀತಿಯಿಂದ ಈ ಖಾಸಗಿ ಕಂಪನಿಗಳ ಆದಾಯ ಮತ್ತು ಷೇರು ಮೌಲ್ಯ ಗಗನಕ್ಕೇರುತ್ತಿರುವುದು ಗುಟ್ಟೇನೂ ಅಲ್ಲ.
ಎಥನಾಲ್ ಬಳಕೆಯನ್ನು ಉತ್ತೇಜಿಸುವ ರಾಷ್ಟ್ರೀಯ ನೀತಿಯನ್ನು ರೂಪಿಸುವ ಮಂಡಳಿಯಲ್ಲಿಯೂ ಇದೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಇದ್ದಾರೆ. ತಾವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದರೂ ಗಡ್ಕರಿ ಅವರು ತಮ್ಮ ಸಚಿವಾಲಯದ ಕಾರ್ಯ-ನಿರ್ಧಾರಗಳಿಂದ ಹೆಚ್ಚಾಗಿ ಇಂಧನ ಸಚಿವಾಲಯದ ವಕ್ತಾರಿಯಲ್ಲಿ ತೊಡಗಿದ್ದಾರೆ. ಇ20 ಪೆಟ್ರೋಲ್ ಬಗ್ಗೆ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಇದು ಗ್ರಾಹಕರಿಗಾಗಿಯಲ್ಲ, ತಮ್ಮ ಪುತ್ರರ ಲಾಭಕ್ಕಾಗಿ ಎಂಬುದು ಕೂಡ ಎದ್ದುಕಾಣುತ್ತದೆ.
ಆದಾಗ್ಯೂ, ಸಚಿವ ಗಡ್ಕರಿ ಅವರು ದೇಶದ ಒಟ್ಟು ಎಥನಾಲ್ ಉತ್ಪಾದನೆಯಲ್ಲಿ ತಮ್ಮ ಕುಟುಂಬದ ಪಾಲು ಅತ್ಯಂತ ಸಣ್ಣದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಸಾರ್ವಜನಿಕ ನೀತಿಯ ಹೊದಿಕೆಯಡಿಯಲ್ಲಿ ಕೆಲವೇ ಕೆಲವು ಖಾಸಗಿ ಬಂಡವಾಳಶಾಹಿಗಳ ಮತ್ತು ರಾಜಕಾರಣಿಗಳ ಮಕ್ಕಳ ಉದ್ಯಮಗಳನ್ನು ಉದ್ಧಾರ ಮಾಡಲು, ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ಹಾಗೂ ವಾಹನಗಳನ್ನು ಬಲಿ ಕೊಡಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಥೆನಾಲ್ ಪೆಟ್ರೋಲ್ ಬಳಕೆ ಮೈಲೇಜ್ ಡ್ರಾಪ್ ಎಷ್ಟು? ಕೇಂದ್ರ ಸಚಿವ ಗಡ್ಕರಿಯ ಲೂಟಿ ಎಷ್ಟು…?
ರಾಜ್ಯ ಸರ್ಕಾರವು ಪ್ರಯೋಗಾಲಯದ ಅಧಿಕೃತ ವರದಿ ಸಮೇತ ವಂಚನೆಯನ್ನು ಎತ್ತಿ ತೋರಿಸಿದೆ. ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ರವಾನಿಸಿದೆ. ಆದರೆ, ದೈತ್ಯ ತೈಲ ಕಂಪನಿಗಳಾದ IOCL, HPCL ಹಾಗೂ BPCL ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಮಾದರಿ ಸಂಗ್ರಹಣೆಯ ವಿಧಾನವೇ ಸರಿಯಿಲ್ಲ ಎಂಬ ತಾಂತ್ರಿಕ ನೆಪಗಳನ್ನು ಮುಂದೊಡ್ಡುತ್ತಿವೆ. ತಾವೇ ನಡೆಸಿದ ಪರೀಕ್ಷೆಗಳಲ್ಲಿ 19% ರಿಂದ 21%ರಷ್ಟು ಮಾತ್ರ ಎಥನಾಲ್ ಇತ್ತು ಎಂದು ಸಮರ್ಥಿಸಿಕೊಳ್ಳುತ್ತಿವೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಈ ದಂಧೆಯನ್ನು ‘ಪೆಟ್ರೋಲ್ ಚೋರಿ’ ಎಂದು ಕರೆದಿದ್ದಾರೆ. ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲಿಯಂ ಇಂಧನದ ಬೆಲೆ ಲೀಟರ್ಗೆ ನೂರು ರೂಪಾಯಿಯಷ್ಟಿದ್ದರೆ, ಎಥನಾಲ್ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆ ಇರುತ್ತದೆ. ಪೆಟ್ರೋಲ್ ಹೆಸರಿನಲ್ಲಿ ಅಗ್ಗದ ಎಥನಾಲ್ ಅನ್ನು 31%ರಷ್ಟು ಬೆರೆಸಿ ಗ್ರಾಹಕರಿಂದ ಪೂರ್ಣ ಪೆಟ್ರೋಲ್ನ ದರವನ್ನು ವಸೂಲಿ ಮಾಡುವುದು ನೇರವಾದ ಆರ್ಥಿಕ ಸುಲಿಗೆಯೆಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಪತ್ತೆಯಾಗಿರುವ ಈ E31 ಇಂಧನ ವಂಚನೆಯು ಕೇವಲ ಒಂದು ರಾಜ್ಯದ ಸಮಸ್ಯೆ ಮಾತ್ರವಲ್ಲ. ಇದು ಇಡೀ ದೇಶದ ಕೋಟ್ಯಂತರ ವಾಹನ ಮಾಲೀಕರ ಜೇಬಿಗೆ ಹಾಕುತ್ತಿರುವ ಕನ್ನ. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ತಕ್ಷಣವೇ ತಮ್ಮ ಜಾರಿಕೆಯ ಮಾತುಗಳನ್ನು ನಿಲ್ಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಪೆಟ್ರೋಲ್ ಬಂಕ್ನಲ್ಲೂ ತಾವು ಮಾರಾಟ ಮಾಡುತ್ತಿರುವ ಇಂಧನದಲ್ಲಿರುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ಗ್ರಾಹಕರಿಗೆ ಕಾಣಿಸುವಂತೆ ಪ್ರದರ್ಶಿಸುವಂತೆ ಮಾಡಬೇಕು. ಕಳಪೆ ಮತ್ತು ಅತಿಯಾದ ಎಥನಾಲ್ ಇಂಧನದಿಂದ ಎಂಜಿನ್ ಹಾನಿಗೊಳಗಾದ ವಾಹನ ಮಾಲೀಕರಿಗೆ ತೈಲ ಕಂಪನಿಗಳಿಂದಲೇ ದಂಡ ಮತ್ತು ಸೂಕ್ತ ಪರಿಹಾರವನ್ನು ಭರಿಸಬೇಕು. ಜೊತೆಗೆ ಗಡ್ಕರಿ ಕುಟುಂಬ ಸೇರಿದಂತೆ ಎಥನಾಲ್ ಪೂರೈಕೆದಾರ ಖಾಸಗಿ ಕಂಪನಿಗಳಿಗೂ ಮತ್ತು ತೈಲ ಕಂಪನಿಗಳು ಅಕ್ರಮವಾಗಿ ಹೆಚ್ಚುವರಿ ಎಥನಾಲ್ ಖರೀದಿಸುತ್ತಿರುವುದರ ಹಿಂದಿನ ಹುನ್ನಾರದ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆಯಾಗಬೇಕು.



