ಆರೋಪಿಯೋರ್ವನ ಅಪರಾಧ ಹಿನ್ನೆಲೆಯನ್ನು ಆತನಿಗೆ ಜಾಮೀನು ನೀಡಲು ಯಾವುದೇ ಕಾರಣಕ್ಕೂ ‘ಸಕಾರಾತ್ಮಕ’ ಅಥವಾ ಅನುಕೂಲಕರ ಅಂಶವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕನೊಂದಿಗೆ ನಂಟು ಹೊಂದಿದ್ದಾನೆ ಎನ್ನಲಾದ ಕನ್ನೌಜ್‌ನ ಮಾಜಿ ಬ್ಲಾಕ್ ಪ್ರಮುಖ್ ನವಾಬ್ ಸಿಂಗ್ ಯಾದವ್‌ಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಈ ತೀರ್ಪು ನೀಡಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ಉಮರ್ ಖಾಲಿದ್ ಜಾಮೀನು ಅರ್ಜಿ
2025ರ ಡಿಸೆಂಬರ್ 16ರಂದು ಅಲಹಾಬಾದ್ ಹೈಕೋರ್ಟ್ ನವಾಬ್ ಸಿಂಗ್ ಯಾದವ್‌ಗೆ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠವು ಸಂಪೂರ್ಣವಾಗಿ ವಜಾಗೊಳಿಸಿದೆ.
ಆರೋಪಿಯ ವಿರುದ್ಧ ಇರುವ ಹಳೆಯ ಪ್ರಕರಣಗಳು ಮತ್ತು ಅಪರಾಧ ಹಿನ್ನೆಲೆಯನ್ನೇ ಆತನಿಗೆ ಜಾಮೀನು ನೀಡಲು ಸಕಾರಾತ್ಮಕ ಆಧಾರವಾಗಿ ಹೈಕೋರ್ಟ್ ಪರಿಗಣಿಸಿತ್ತು. ಹೈಕೋರ್ಟ್‌ನ ಈ ಕ್ರಮವು ಕಾನೂನಿನ ದೃಷ್ಟಿಯಿಂದ ತಪ್ಪಾಗಿದೆ ಎಂದು ಸುಪ್ರೀಂ ಪೀಠ ಅಭಿಪ್ರಾಯಪಟ್ಟಿದೆ.
ಆರೋಪಿಯ ಮೇಲೆ ಈಗಾಗಲೇ ಹಲವು ಪ್ರಕರಣಗಳಿರುವುದು ಅಥವಾ ಕ್ರಿಮಿನಲ್ ದಾಖಲೆಗಳಿರುವುದು ಆತನಿಗೆ ಉದಾರವಾಗಿ ಜಾಮೀನು ನೀಡಲು ಅನುಕೂಲಕರ ಅರ್ಹತೆಯಾಗುವುದಿಲ್ಲ; ಬದಲಿಗೆ ನ್ಯಾಯಾಲಯಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಜಾಮೀನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರು ತಮ್ಮ ವಿರುದ್ಧ ಇರುವ ಅಪರಾಧ ಹಿನ್ನೆಲೆ ಮತ್ತು ಪ್ರಕರಣಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಂಪೂರ್ಣವಾಗಿ ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಜಾಮೀನು ನೀಡುವುದು ನ್ಯಾಯಾಂಗ ವಿವೇಚನೆಗೆ ಒಳಪಟ್ಟಿರುತ್ತದೆ. ಆರೋಪಿ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಅಥವಾ ಅಪರಾಧವನ್ನು ಮರುಕಳಿಸುವ ಸಾಧ್ಯತೆಯಿದೆಯೇ ಎಂದು ನಿರ್ಧರಿಸಲು ಆತನ ಹಳೆಯ ಅಪರಾಧ ದಾಖಲೆ ಪ್ರಮುಖ ಪಾತ್ರ ವಹಿಸುತ್ತದೆ. ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿ ಪರಿಶೀಲಿಸುವಾಗ ಆರೋಪಿಯ ಹಿಂದಿನ ಅಪರಾಧ ದಾಖಲೆಗಳನ್ನು ಕಡೆಗಣಿಸಬಾರದು ಮತ್ತು ಅದನ್ನು ಜಾಮೀನು ಮಂಜೂರಾತಿಗೆ ಸಬೂಬಾಗಿ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.




