ಕೃಷ್ಣಾ ನದಿಯಿಂದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಹಾರಾಷ್ಟ್ರದ ಉಜನಿ ಆಣೆಕಟ್ಟಿಗೆ 40 ಟಿಎಂಸಿ ನೀರನ್ನು ತಿರುವು ಪಡೆಯುವ ಮಹಾರಾಷ್ಟ್ರ ಸರ್ಕಾರದ ಉದ್ದೇಶಕ್ಕೆ ಅಖಂಡ ಕರ್ನಾಟಕ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಕೃಷ್ಣಾ ನದಿಯ ನೀರನ್ನು ಉಜನಿ ಆಣೆಕಟ್ಟಿಗೆ ಕೊಂಡೊಯ್ಯಬಾರದು. ಒಂದು ವೇಳೆ ಕಾನೂನು ಉಲ್ಲಂಘಿಸಿ ಬಲವಂತವಾಗಿ ನೀರು ತಿರುವು ಮಾಡಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠಲ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರ ಮುಖ್ಯಮಂತ್ರಿ ಅವರು ಅ.9ರಂದು ಮುಂಬೈನಲ್ಲಿ ನಡೆದ ‘ಇಂಡಿಯಾ ಟುಡೆ ಕಾನ್‌ಕ್ಲೇವ್’ ಕಾರ್ಯಕ್ರಮದಲ್ಲಿ ಕೃಷ್ಣಾ ನದಿಯಿಂದ 40 ಟಿಎಂಸಿ ನೀರನ್ನು ಉಜನಿ ಆಣೆಕಟ್ಟಿಗೆ ತಿರುವು ಪಡೆಯುವ ಯೋಜನೆಯ ಪ್ರಸ್ತಾಪ ಮಾಡಿದ್ದಾರೆ. ಮರಾಠವಾಡದ ಎರಡು ಜಿಲ್ಲೆಗಳು ಹಾಗೂ ಸಾಂಗ್ಲಿ ಮತ್ತು ಸೋಲ್ಲಾಪುರ ಜಿಲ್ಲೆಗಳ ಕೆಲವು ಭಾಗಗಳಿಗೆ ನೀರು ಪೂರೈಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಯೋಜನೆಯ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. ವಿಶ್ವಬ್ಯಾಂಕ್ ನೆರವು ಪಡೆಯುವ ಉದ್ದೇಶವಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ₹24 ಕೋಟಿ ಮಂಜೂರು ಮಾಡಲಾಗಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹19,000 ಕೋಟಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿರುವುದು ಆತಂಕಕಾರಿ ಬೆಳವಣಿಗೆ” ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ?
ಮಹಾರಾಷ್ಟ್ರ ಸರ್ಕಾರ ಇಷ್ಟೊಂದು ದೊಡ್ಡ ಯೋಜನೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಮುಂದುವರಿಸಿ ಕಾಮಗಾರಿ ಆರಂಭಿಸುವ ಹಂತಕ್ಕೆ ಬಂದಿದ್ದರೂ ಕರ್ನಾಟಕ ಸರ್ಕಾರಕ್ಕೆ ಈ ವಿಷಯದ ಮಾಹಿತಿ ಇರಲಿಲ್ಲವೇ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದೆಯೇ ಎಂದು ಅವರು ಪ್ರಶ್ನಿಸಿದರು.
ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಾರಾಷ್ಟ್ರದ ನೀರು ತಿರುವು ಯೋಜನೆಗೆ ತಕ್ಷಣ ತಡೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 524.256 ಮೀಟರ್‌ಗೆ ನಿಗದಿಪಡಿಸುವ ಕುರಿತು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ಎರಡನೇ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ಸ್ಪಷ್ಟ ತೀರ್ಪು ನೀಡಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಇದಕ್ಕೆ ಅನಗತ್ಯ ತಕರಾರು ಎತ್ತುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯಿಂದ 40 ಟಿಎಂಸಿ ನೀರನ್ನು ಬೇರೆಡೆಗೆ ತಿರುವು ಪಡೆಯಲು ಮಹಾರಾಷ್ಟ್ರಕ್ಕೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
*ಉತ್ತರ ಕರ್ನಾಟಕದ ರೈತರ ಹಿತಾಸಕ್ತಿಗೆ ಧಕ್ಕೆ
ಒಂದೆಡೆ ಮಹಾರಾಷ್ಟ್ರದ ತಕರಾರು, ಮತ್ತೊಂದೆಡೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕಿರಿಕಿರಿ. ಈ ಮೂರು ರಾಜ್ಯಗಳ ನಡುವಿನ ಜಲವಿವಾದಗಳಿಂದ ಉತ್ತರ ಕರ್ನಾಟಕದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರರಾಜ್ಯ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಮಹಾರಾಷ್ಟ್ರ ಸರ್ಕಾರ ಹೊಸದಾಗಿ ನೀರು ತಿರುವು ಯೋಜನೆ ಕೈಗೆತ್ತಿಕೊಳ್ಳುತ್ತಿರುವುದು ಕಾನೂನು ಮತ್ತು ನ್ಯಾಯಸಮ್ಮತ ಪ್ರಕ್ರಿಯೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಲು ಆಗ್ರಹ
ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಸಚಿವರ ನಿಯೋಗವನ್ನು ಪ್ರಧಾನಮಂತ್ರಿ ಅವರ ಬಳಿಗೆ ಕೊಂಡೊಯ್ದು ಮಹಾರಾಷ್ಟ್ರದ ಈ ಯೋಜನೆಗೆ ತಡೆ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರವೂ ಮಹಾರಾಷ್ಟ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿ ಯೋಜನೆಯನ್ನು ಕೈಬಿಡುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಕೃಷ್ಣಾ ನದಿಯ ನೀರು ಉತ್ತರ ಕರ್ನಾಟಕದ ರೈತರ ಬದುಕಿನ ಜೀವನಾಡಿಯಾಗಿದೆ. ಈ ನೀರಿನ ಮೇಲೆ ಬೇರೆ ರಾಜ್ಯಗಳ ಹಕ್ಕು ಸಾಧಿಸುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಯೋಜನೆಯನ್ನು ತಡೆಯದಿದ್ದರೆ ಉತ್ತರ ಕರ್ನಾಟಕದ ರೈತರನ್ನು ಸಂಘಟಿಸಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಅರವಿಂದ ಕುಲಕರ್ಣಿ ಹಾಗೂ ವಿಠಲ ಬಿರಾದಾರ ಎಚ್ಚರಿಕೆ ನೀಡಿದರು.




