- ಜೆಡಿಎಸ್–ಕಾಂಗ್ರೆಸ್ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್
- ಸಂತೋಷ್ ಅವರನ್ನು ಕಣಕ್ಕಿಳಿಸಲು ಒಪ್ಪದ ಎಚ್.ಡಿ ಕುಮಾರಸ್ವಾಮಿ
ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್ ಸಂತೋಷ್ ಅವರಿಗೆ ಟಿಕೆಟ್ ಕೈತಪ್ಪಿದ್ದು, ಜಿ.ವಿ ಬಸವರಾಜು ಅವರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಾದ್ಯಂತ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿದ್ದ ಸಂತೋಷ್‌ಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಅವರು ಬಿಜೆಪಿ ತೊರೆದು, ಬೇರೆ ಪಕ್ಷಗಳಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್‌ನಿಂದ ಶಿವಲಿಂಗೇಗೌಡರು ಸ್ಪರ್ಧಿಸುವುದು ಈಗಾಗಲೇ ಖಚಿತವಾಗಿದೆ. ಜೆಡಿಎಸ್‌ನಿಂದ ಬಾಣಾವರ ಅಶೋಕ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಈ ಮಧ್ಯೆ ಸಂತೋಷ್‌ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್‌ನಿಂದ ಸ್ಪರ್ಧೆ ಮಾಡಬಹುದು. ಈ ಬಗ್ಗೆ ಈಗಾಗಲೇ ರೇವಣ್ಣ ಹಾಗೂ ದೇವೇಗೌಡರ ಜೊತೆಗೆ ಸಂತೋಷ್ ಮಾತನಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎನ್.ಆರ್ ಸಂತೋಷ್ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಅರಸೀಕೆರೆ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿವೆ. ಹಾಗಾಗಿ, ಸಂತೋಷ್ ಅವರಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಜೆಡಿಎಸ್ ಮುಖಂಡರೂ ಆಸಕ್ತಿ ತೋರಿದ್ದಾರೆ. ಆದರೆ, ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್‌ಗೆ ಜೆಡಿಎಸ್‌ನಿಂದ ಟಿಕೆಟ್ ನೀಡಲು ಎಚ್.ಡಿ ಕುಮಾರಸ್ವಾಮಿ ಒಪ್ಪುತ್ತಿಲ್ಲವೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಸಿಎಂ ಬೊಮ್ಮಾಯಿ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ: ಬಿಜೆಪಿ ಶಾಸಕ ನೆಹರು ಓಲೇಕಾರ್
ರಾಜಕೀಯದಲ್ಲಿ ಏನೂ ಬೇಕಾದರೂ ನಡೆಯಬಹುದು. ಹಾಗಾಗಿ ಸಂತೋಷ್ ಜೆಡಿಎಸ್‌ನಿಂದ ಸ್ಪರ್ಧೆಗೆ ಇಳಿದರೂ ಆಶ್ಚರ್ಯವಿಲ್ಲ ಎಂದು ಅರಸೀಕೆರೆ ಕ್ಷೇತ್ರದ ಮತದಾರರು ಹೇಳುತ್ತಿರುವುದು ಕೇಳಿಬಂದಿದೆ.
ಒಂದು ವರ್ಷದಿಂದಲೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಷೇತ್ರದಲ್ಲಿ ಶಿವಲಿಂಗೇಗೌಡರಿಗೆ ಸ್ಪರ್ಧೆ ನೀಡುತ್ತಲೇ ಬಂದಿರುವ ಸಂತೋಷ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಹೀಗಾಗಿ, ಅವರ ಶ್ರಮ ವ್ಯರ್ಥವಾಗುತ್ತದೆ. ಅದಕ್ಕಾಗಿ ಬೇರೆ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಅವರು ನಿರ್ಧರಿಸಿರುವುದಾಗಿಯೂ ಅವರು ತಮ್ಮ ಆಪ್ತರ ಬಳಿ ಹೇಳಿಕಕೊಂಡಿದ್ದಾರೆ ಎನ್ನಲಾಗಿದೆ.