ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ ಈಗ ಬೃಹತ್ ರಾಜಕೀಯ ಹಾಗೂ ಕಾನೂನು ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ತಮ್ಮ ನಾಯಕರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಐಆರ್ ಸಂದರ್ಭದಲ್ಲಿ ಮುಸ್ಲಿ ಮತದಾರರ ಹೆಸರುಗಳನ್ನೇ ಡಿಲೀಟ್ ಮಾಡುವ ಹುನ್ನಾರವನ್ನು ಬಿಜೆಪಿ ನಡೆಸುತ್ತಲೇ ಬಂದಿದೆ. ಬೆಳಗಾವಿಯಲ್ಲಿ ಈ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟಾಗಿದೆ. ಸತ್ಯವನ್ನು ಮರೆಮಾಚಿ ನಮ್ಮಿಂದ ಸಹಿ ಪಡೆಯಲಾಗಿದೆ ಎಂದು ಈಗ ಬಿಜೆಪಿ ಕಾರ್ಯಕರ್ತರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.
ಸ್ಥಳೀಯ ನಾಯಕರು ಅರ್ಜಿಗಳ ನಿಜವಾದ ಉದ್ದೇಶವನ್ನು ನಮಗೆ ತಿಳಿಸಿಲ್ಲ. ಕೇವಲ “ಪಕ್ಷದ ಸಂಘಟನಾತ್ಮಕ ಕೆಲಸ” ಅಥವಾ “ವಿಳಾಸ ಬದಲಾವಣೆ/ತಿದ್ದುಪಡಿ” ಎಂಬ ನೆಪ ಹೇಳಿ ತಮ್ಮಿಂದ ಸಹಿ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’
ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಈ ಅರ್ಜಿಗಳನ್ನು ಬಳಸಲಾಗುತ್ತಿದೆ ಎಂಬ ಸುಳಿವು ತಮಗೆ ಇರಲಿಲ್ಲ. ಈಗ ಕಾನೂನು ಕ್ರಮ ಮತ್ತು ಎಫ್‌ಐಆರ್ ಭೀತಿ ಎದುರಾಗಿದ್ದು, ವಿನಾಕಾರಣ ನಾವು ಬಲಿಯಾಗುತ್ತಿದ್ದೇವೆ ಎಂಬ ಆತಂಕವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.
ಈ ಇಡೀ ಪ್ರಕರಣಕ್ಕೆ ಮತ್ತೊಂದು ಪ್ರಮುಖ ತಿರುವು ಸಿಕ್ಕಿರುವುದು ಭಾಷಿಕ ಮತ್ತು ಪ್ರಾದೇಶಿಕ ಹಿನ್ನೆಲೆಯಲ್ಲಿ. ಬೆಳಗಾವಿ ಮೂಲತಃ ಕನ್ನಡ ಮತ್ತು ಮರಾಠಿ ಭಾಷಿಕರ ಪ್ರಾಬಲ್ಯವಿರುವ ಗಡಿ ಪ್ರದೇಶ. ಆದರೆ, ಇಂತಹ ಡಿಲಿಷನ್ ಅರ್ಜಿಗಳನ್ನು ಸಲ್ಲಿಸಿರುವವರ ಪೈಕಿ ಸ್ಥಳೀಯ ಕನ್ನಡಿಗರೂ ಅಲ್ಲದ, ಮರಾಠಿಗರೂ ಅಲ್ಲದ, ಹಿಂದಿ ಭಾಷಿಕ ಮೂಲದ ವ್ಯಕ್ತಿಗಳೂ ಸೇರಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಸ್ಥಳೀಯ ರಾಜಕೀಯ ಹಾಗೂ ಜನಸಂಖ್ಯಾ ಸ್ವರೂಪದ ಅರಿವಿಲ್ಲದ ಹೊರಗಿನವರು ಅಥವಾ ಹಿಂದಿ ಭಾಷಿಕರು ಈ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಯಾರದ್ದೋ ಪ್ರಚೋದನೆ ಅಥವಾ ರಾಜಕೀಯ ತಂತ್ರಗಾರಿಕೆಗೆ ಇವರನ್ನು ಬಳಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಹೆಸರುಗಳನ್ನು ತೆಗೆದುಹಾಕಲು ಯತ್ನಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವುದರಿಂದ, ಚುನಾವಣಾ ಆಯೋಗ ಹಾಗೂ ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿವೆ. ನಾಯಕರ ಮಾತು ನಂಬಿ ಸಹಿ ಹಾಕಿದ ಕೆಳಮಟ್ಟದ ಕಾರ್ಯಕರ್ತರು ಈಗ ನ್ಯಾಯಾಂಗ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾ ಬಿಜೆಪಿ ಘಟಕದಲ್ಲಿ ಆಂತರಿಕ ಅಸಮಾಧಾನ ಮತ್ತು ಗೊಂದಲ ಮನೆಮಾಡಿದೆ.




