ಚಿಂತಾಮಣಿ:ನಗರದ ಗಜಾನನ ಸರ್ಕಲ್ ಬಳಿ ಇರುವ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯಕ್ಕೆ ಇಲಾಖೆಯ ಅಧಿಕಾರಿಗಳಾದ ಶ್ರೀನಿವಾಸ್ ಅವರು ಭೇಟಿ ನೀಡಿ ಹಾಸ್ಟೆಲ್ನಲ್ಲಿರುವ ಮೂಲಭೂತ ಸೌಕರ್ಯ ಹಾಗೂ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ವಿದ್ಯಾರ್ಥಿಗಳಿಗೆ ನೀಡಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಲು ಅಧಿಕಾರಿಗಳು ದಾಸ್ತಾನು ಕೊಠಡಿಗೆ ಭೇಟಿ ನೀಡಿದರು.ಅಕ್ಕಿ,ಬೇಳೆ ಹಾಗೂ ಇತರೆ ದಿನಸಿ ಪದಾರ್ಥಗಳ ದಾಸ್ತಾನು ಮತ್ತು ಅವುಗಳ ಶುಚಿತ್ವವನ್ನು ಖಚಿತಪಡಿಸಿಕೊಂಡರು.
ಅಡುಗೆ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ,ಶುದ್ಧ ಕುಡಿಯುವ ನೀರು ಮತ್ತು ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಪೌಷ್ಟಿಕತೆಯ ಬಗ್ಗೆ ಅಡುಗೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡಿರುವ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತನಾಡಿದ ಶ್ರೀನಿವಾಸ್ ಅವರು,ಹಾಸ್ಟೆಲ್ನಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.ಓದಿಗೆ ಪೂರಕವಾದ ವಾತಾವರಣವಿದೆಯೇ ಮತ್ತು ಸಕಾಲಕ್ಕೆ ಗುಣಮಟ್ಟದ ಊಟೋಪಚಾರ ಸಿಗುತ್ತಿದೆಯೇ ಎಂಬ ಬಗ್ಗೆ ವಿಚಾರಿಸಿದರು.
ಇದನ್ನು ಓದಿದ್ದೀರಾ..?ದಲಿತ ಚಳವಳಿಯ ಹಿರಿಯ ಮುಖಂಡ ಕೋಲಾರದ ಸಿ.ಎಂ.ಮುನಿಯಪ್ಪ ರಿಗೆ ಅಂಬೇಡ್ಕರ್ ಪ್ರಶಸ್ತಿ ಗೌರವ
ಹಾಸ್ಟೆಲ್ ಆವರಣ,ಶೌಚಾಲಯ ಹಾಗೂ ಕೊಠಡಿಗಳ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲು ಸಂಬಂಧಪಟ್ಟ ವಾರ್ಡನ್ ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಾಸ್ಟೆಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.




