ಚುನಾವಣೆ 2023 | ಹಳೇ ಮೈಸೂರು ಭಾಗದಲ್ಲಿ ಕ್ಷೇತ್ರ ಉಳಿಸಿಕೊಳ್ಳುವುದೇ ಬಿಜೆಪಿಗೆ ಸವಾಲು

Date:

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆಯಲ್ಲಿ ಸೋಲಿನ ಭಯದಲ್ಲಿರುವ ಕೇಸರಿ ಪಡೆಗೆ ಒಂದೊಂದು ಸ್ಥಾನವೂ ಮುಖ್ಯವಾಗಿದೆ. ಈ ನಡುವೆ, ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಕೊಳ್ಳಲು ಬಿಜೆಪಿ ಸೆಣಸಾಡುತ್ತಿದೆ. ಆದರೆ, ಸದ್ಯ ತನ್ನ ತೆಕ್ಕೆಯಲ್ಲಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದೇ ಬಿಜೆಪಿಗೆ ಸವಾಲಾಗಿದೆ. ಅದಕ್ಕಾಗಿ, ಬಿಜೆಪಿಯ ಪ್ರಭಾವಿ ನಾಯಕರು ಹಳೇ ಮೈಸೂರು ಭಾಗಕ್ಕೆ ಮತ್ತೆ-ಮತ್ತೆ ಭೇಟಿ ನೀಡಲಾರಂಭಿಸಿದ್ದಾರೆ.

ಈ ಭಾಗದ ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸುತ್ತಿರುವ ಬಿಜೆಪಿಗೆ, ಈ ಎರಡೂ ಕ್ಷೇತ್ರಗಳು ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದುಕೊಂಡಿದ್ದ ಕ್ಷೇತ್ರಗಳನ್ನು ಮತ್ತೆ ಗೆಲ್ಲುವುದು ಸವಾಲಾಗಿದೆ. ಈ ನಾಲ್ಕು ಜಿಲ್ಲೆಗಳ ಚಾಮರಾಜ, ಕೃಷ್ಣರಾಜ, ನಂಜನಗೂಡು, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಕೆ.ಆರ್‌ ಪೇಟೆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕೇಸರಿ ನಾಯಕರು ಈ ಜಿಲ್ಲೆಗಳತ್ತ ದೌಡಾಯಿಸುತ್ತಿದ್ದಾರೆ.

ಪಕ್ಷದ ಕಾರ್ಯತಂತ್ರದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಈ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿದ್ದು, ತೀವ್ರ ಪೈಪೋಟಿವೊಡ್ಡಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ, ಈ ಎರಡೂ ಜಿಲ್ಲೆಗಳಲ್ಲಿ ಬಿಜೆಪಿಯ ಇಬ್ಬರೂ ನಾಯಕರು ವ್ಯಾಪಕ ಪ್ರಚಾರ ನಡೆಸಲಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಗೆದ್ದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಇಬ್ಬರ ಪ್ರವಾಸ ಹೆಚ್ಚು ಕೇಂದ್ರೀಕೃತವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಮಿತ್ ಶಾ ಅವರು ಇಂದು (ಏ.24) ಮೈಸೂರಿಗೆ ಭೇಟಿ ನೀಡಿದ್ದು, ಗುಂಡ್ಲುಪೇಟೆಯಲ್ಲಿ ರೋಡ್‌ ಶೋ ನಡೆಸಿದ್ದಾರೆ. ಅಲ್ಲಿನ ಬಿಜೆಪಿ ಅಭ್ಯರ್ಥಿ ಸಿ.ಎಸ್ ನಿರಂಜನ್ ಕುಮಾರ್ ಅವರಿಗೆ ಐದು ಬಾರಿ ಶಾಸಕರಾಗಿದ್ದ ಎಚ್‌.ಎಸ್‌ ಮಹದೇವಪ್ರಸಾದ್‌ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಎಚ್‌ ಎಂ ಗಣೇಶ್ ಪ್ರಸಾದ್‌ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ, ನಿರಂಜನ್‌ ಪರವಾಗಿ ಅಮಿತ್‌ ಶಾ ಪ್ರಚಾರ ನಡೆಸಿದ್ದಾರೆ. ಅಲ್ಲಿಂದ ಹಾಸನ ಜಿಲ್ಲೆಯೆಡೆಗೆ ಮುಖ ಮಾಡಿದ್ದು, ಸಕಲೇಶಪುರ ಕ್ಷೇತ್ರದ ಆಲೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿಯೂ ರೋಡ್‌ ಶೋ ನಡೆಸಿದ್ದಾರೆ.

ಏಪ್ರಿಲ್ 30 ರಂದು ಮೈಸೂರು ನಗರದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮೇ 6 ರಂದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್‌ 26ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡ್ಯದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-1: ಈ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ

ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಸ್‌ ಎ ರಾಮದಾಸ್ ಬದಲಿಗೆ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ ಎಸ್ ಶ್ರೀವತ್ಸ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನು, ಚಾಮರಾಜದಲ್ಲಿ ಹಾಲಿ ಬಿಜೆಪಿ ಶಾಸಕ ಎಲ್ ನಾಗೇಂದ್ರ ಅವರಿಗೆ ಕಾಂಗ್ರೆಸ್‌ನ ಹರೀಶ್ ಗೌಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇನ್ನು ವರುಣಾ ಮತ್ತು ಚಾಮರಾಜನಗರವೆಂದು ಎರಡು ಬೃಹತ್ ದೋಣಿಗಳ ಮೇಲೆ ಕಾಲಿಟ್ಟಿರುವ ವಿ ಸೋಮಣ್ಣ, ವರುಣಾದಲ್ಲಿ ಸಿದ್ದರಾಮಯ್ಯ ಮತ್ತು ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯದ ನಾಯಕ, ಮಾಜಿ ಸಚಿವ ಸಿ ಪುಟ್ಟರಂಗ ಶೆಟ್ಟಿ ಅವರ ಸವಾಲು ಎದುರಿಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಸೋಲುಣ್ಣುವ ಆತಂಕ ಸೋಮಣ್ಣಗಿದೆ ಎನ್ನಲಾಗಿದೆ.

ಈ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-2: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ

ಇನ್ನು, ನಂಜನಗೂಡು ಕ್ಷೇತ್ರವನ್ನೂ ಬಿಜೆಪಿ ಕಳೆದುಕೊಳ್ಳುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದ ಕಾಂಗ್ರೆಸ್‌ ನಾಯಕ ಧ್ರುವನಾರಾಯಣ್ ಇತ್ತೀಚೆಗಷ್ಟೇ ನಿಧರಾದರು. ಅಲ್ಲಿ ಅವರ ಪುತ್ರ ದರ್ಶನ್ ಧ್ರುವನಾರಾಯಣ್ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಅವರಿಗೆ ತಂದೆ ಅಗಲಿಕೆಯ ಅನುಕಂಪದ ಅಲೆ ಒಂದೆಡೆಯಾದರೆ, ಜೆಡಿಎಸ್‌ ಕೂಡ ಅವರಿಗೆ ಬೆಂಬಲ ನೀಡಿದೆ. ಹೀಗಾಗಿ, ಅಲ್ಲಿನ ಹಾಲಿ ಬಿಜೆಪಿ ಶಾಸಕ ಹರ್ಷವರ್ಧನ್‌ ಕೂಡ ಸೋಲಿನ ಭೀತಿ ಎದುರಿಸುತ್ತಿದ್ದಾರೆ.

ಈ ವರದಿ ಓದಿದ್ದೀರಾ?: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ

ಜೆಡಿಎಸ್‌ ಬೆಂಬಲದೊಂದಿಗೆ ಕೊಳ್ಳೇಗಾಲದಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಎನ್‌ ಮಹೇಶ್‌ ಬಿಜೆಪಿ ಸೇರಿದ್ದಾರೆ. ಅವರೂ ಕ್ಷೇತ್ರದಲ್ಲಿ ಭಾರೀ ವಿರೋಧ ಎದುರಿಸುತ್ತಿದ್ದು, ಗೆಲುವಿಗೆ ಹರಸಾಹಸಪಡುತ್ತಿದ್ದಾರೆ. ಉಳಿದಂತೆ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರೀತಂ ಗೌಡ ಅವರನ್ನು ಮಣಿಸಿ, ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂದು ಜೆಡಿಎಸ್‌ ಯತ್ನಿಸುತ್ತಿದೆ. ರೇವಣ್ಣ ಅವರ ಇಡೀ ಕುಟುಂಬವೇ ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಪಿ ಸ್ವರೂಪ್‌ ಪರವಾಗಿ ಅಖಾಡಕ್ಕಿಳಿದಿದೆ. ಕೆ.ಆರ್‌ ಪೇಟೆಯಲ್ಲಿ ಹಾಲಿ ಬಿಜೆಪಿ ಶಾಸಕ, ಸಚವ ಕೆ.ಸಿ ನಾರಾಯಣಗೌಡ ಕೂಡ ಮತ್ತೆ ಗೆಲ್ಲಲು ಹೆಣಗಾಡುತ್ತಿದ್ದಾರೆ.

ಹೀಗಾಗಿ, ಹೊಸ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಹವಣಿಸುತ್ತಿರುವ ಬಿಜೆಪಿಗೆ, ಹಾಲಿ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದೂ ಭಾರೀ ಸವಾಲಾಗಿದೆ. ಬಿಜೆಪಿ ರಾಷ್ಟ್ರ ನಾಯಕರು ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರದಲ್ಲಿ ಗಿರಕಿ ಹೊಡೆಯಲಾರಂಭಿಸಿದ್ದಾರೆ. ಅವರ ಕಸರತ್ತು ಫಲಿಸುವುದೇ ಅಥವಾ ಇರುವ ಕ್ಷೇತ್ರಗಳನ್ನೂ ಕಳೆದುಕೊಳ್ಳುವುದೇ? ಚುನಾವಣಾ ಕಣ ಉತ್ತರಿಸಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಇಂಧನ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ವಿಜಯಪುರದಲ್ಲಿ ಎಸ್‌ಯುಸಿಐ ಕಾರ್ಯಕರ್ತರು ಪ್ರತಿಭಟನೆ...

ಹಾವೇರಿ | ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ

ಶ್ರೀಕಂಠಪ್ಪ ಬಡಾವಣೆಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ ಆಗ್ರಹಿಸಿ ಹಾವೇರಿ ನಗರದ ಹೊರವಲಯದ...

ಧಾರವಾಡ | ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಮೊಬೈಲ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ತುಂಬಿದ್ದ ಕಲ್ಲು ಕ್ವಾರಿಗೆ...