ದೇವರಾಜ್‌ಗೆ ಕೆ.ಆರ್ ಪೇಟೆ ಕಾಂಗ್ರೆಸ್‌ ಟಿಕೆಟ್‌; ಬಂಡಾಯ ಶಮನವೇ ಸಮಸ್ಯೆ!

Date:

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್‌ ಸೇರಿದ್ದ ಬಿ.ಎಲ್‌ ದೇವರಾಜ್‌ ಅವರಿಗೆ ಕೈ ಪಡೆ ಟಿಕೆಟ್‌ ನೀಡಿದೆ. ಬಿಜೆಪಿ ಸಚಿವ ಕೆ.ಸಿ ನಾರಾಯಣಗೌಡರನ್ನು ಮಣಿಸಲೇಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್‌ಗೆ ತನ್ನೊಳಗೇ ಬಂಡಾಯದ ಭೀತಿ ಶುರುವಾಗಿದೆ.

ಬಿ.ಎಲ್‌ ದೇವರಾಜ್‌ ಅವರು 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕೆ.ಸಿ ನಾರಾಯಣಗೌಡ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. 9,731 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಈ ಬಾರಿಯೂ ಜೆಡಿಎಸ್‌ನಿಂದ ಸ್ಪರ್ಧಿಸುವ ಇರಾದೆಯನ್ನೂ ಹೊಂದಿದ್ದರು. ಆದರೆ, ಜೆಡಿಸ್‌ ನಾಯಕರು ಇದಕ್ಕೆ ಮಣೆ ಹಾಕಲಿಲ್ಲ. ಎಚ್‌.ಡಿ ಕುಮಾರಸ್ವಾಮಿ ಅವರು ಕೆ.ಆರ್‌ ಪೇಟೆ ಕ್ಷೇತ್ರದಲ್ಲಿ ತಮ್ಮ ಆಪ್ತ ಎಚ್‌.ಡಿ ಮಂಜು ಅವರಿಗೆ ಟಿಕೆಟ್‌ ಘೋಷಣೆ ಮಾಡಿದರು. ಇದರಿಂದಾಗಿ ಬಿ.ಎಲ್‌ ದೇವರಾಜ್‌ ಸೇರಿದಂತೆ ಜೆಡಿಎಸ್‌ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೃಷ್ಣೇಗೌಡ ಮತ್ತು ಸಂತೋಷ್‌ ಬಂಡಾಯವೇಳಲು ಕಾರಣವಾಗಿತ್ತು. ಈ ಮೂವರೂ ಒಂದಾಗಿ ಕೆ.ಆರ್‌ ಪೇಟೆಯಲ್ಲಿ ಬೃಹತ್ ಸಮಾವೇಶವನ್ನೂ ಮಾಡಿದ್ದರು. ಆ ನಂತರ ದೇವರಾಜ್‌ ಕಳೆದ ತಿಂಗಳು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

ಜೆಡಿಎಸ್‌ ಬಂಡಾಯದ ಮತಗಳು ಕಾಂಗ್ರೆಸ್‌ಗೆ ಸಿಗಬಹುದೆಂಬ ಲೆಕ್ಕಾಚಾರದಲ್ಲಿ ದೇವರಾಜ್‌ ಅವರಿಗೆ ಕೈ ನಾಯಕರು ಟಿಕೆಟ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ ದೇವರಾಜ್‌ಗೆ ಟಿಕೆಟ್‌ ನೀಡಿರುವುದು, ಮೂಲಕಾಂಗ್ರೆಸ್ಸಿಗರಿಗೆ, ಟಿಕೆಟ್‌ ಆಕ್ಷಾಂಕ್ಷಿಗಳಿಗೆ ಅಸಮಾಧಾನ ಹುಟ್ಟುಹಾಕುವ ಸಾಧ್ಯತೆ ಇದೆ. ಇದು ಸಹಜವೂ ಹೌದು.

ಕೆ.ಆರ್‌ ಪೇಟೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸೇರಿದಂತೆ ಆರು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ವಿಜಯ್ ರಾಮೇಗೌಡ, ಮಾಜಿ ಶಾಸಕ ಬಿ ಪ್ರಕಾಶ್, ಕಿಕ್ಕೇರಿ ಸುರೇಶ್, ಎಂ.ಡಿ ಕೃಷ್ಣಮೂರ್ತಿ ಮತ್ತು ಬಿ ನಾಗೇಂದ್ರ ಕುಮಾರ್ ಕೈ ಟಿಕೆಟ್‌ಗಾಗಿ ಕಾದುಕುಳಿತಿದ್ದರು. ಇವರಲ್ಲಿ ಸತತ ಮೂರು ಚುನಾವಣೆಗಳಲ್ಲಿ ಕೆ.ಬಿ ಚಂದ್ರಶೇಖರ್‌ ನಿರಂತರವಾಗಿ ಸೋಲುಂಡಿದ್ದರಿಂದ ಈ ಬಾರಿ ಟಿಕೆಟ್‌ ನಿರಾಕರಿಸುವುದು ನಿಚ್ಚಳವಾಗಿತ್ತು.

ಉಳಿದಂತೆ, ಬಿ ಪ್ರಕಾಶ್, ಕಿಕ್ಕೇರಿ ಸುರೇಶ್ ಮತ್ತು ವಿಜಯ್ ರಾಮೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅದರಲ್ಲೂ ವಿಜಯ್ ರಾಮೇಗೌಡ ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದರು. ಕ್ಷೇತ್ರಾದ್ಯಂತ ಸಂಚರಿಸಿ, ಕಾರ್ಯಕರ್ತರೊಂದಿಗಿನ ಉತ್ತಮ ಒಡನಾಟವನ್ನೂ ಬೆಳೆಸಿಕೊಂಡಿದ್ದರು. ವಿಜಯ್ ಅವರಿಗೆ ಟಿಕೆಟ್ ನೀಡಿದರೆ, ಗೆಲುವು ಖಚಿತವೆಂಬ ಅಭಿಪ್ರಾಯವೂ ಹಲವರಲ್ಲಿತ್ತು.

ಇದೆಲ್ಲದರ ನಡುವೆ, ಟಿಕೆಟ್‌ ಘೋಷಣೆಯಾದ ಬಳಿಕ ಉದ್ಭವಿಸಬಹುದಾದ ಬಂಡಾಯವನ್ನು ಮೊದಲೇ ಶಮನ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. ಅದಕ್ಕಾಗಿ, ಮಂಡ್ಯ ಜಿಲ್ಲೆಯ ಎಲ್ಲ ಕಾಂಗ್ರೆಸ್‌ ಆಕಾಂಕ್ಷಿಗಳೊಂದಿಗೆ ಫೆಬ್ರವರಿ ತಿಂಗಳಲ್ಲಿಯೇ ಸಭೆ ನಡೆಸಿ, ಟಿಕೆಟ್ ಸಿಗುವ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದರು. ಆಗಿನ್ನೂ, ಬಿ.ಎಲ್‌ ದೇವರಾಜ್ ಕಾಂಗ್ರೆಸ್‌ ಸೇರಿರಲಿಲ್ಲ.

ಈ ಸುದ್ದಿ ಓದಿದ್ದೀರಾ?: ‘ಬಾಂಬೆ ಗಿರಾಕಿ’ ನಾರಾಯಣಗೌಡ ಈ ಬಾರಿ ಬಿಜೆಪಿಯಿಂದ ಗೆಲ್ಲುತ್ತಾರೆಯೇ?

ಎರಡು ವಾರಗಳ ಹಿಂದಷ್ಟೇ ಕಾಂಗ್ರೆಸ್‌ ಸೇರಿದ ಜೆಡಿಎಸ್‌ ಬಂಡಾಯಗಾರ ದೇವರಾಜ್‌ಗೆ ಕೈ ನಾಯಕರು ಟಿಕೆಟ್‌ ನೀಡಿದ್ದಾರೆ. ಇದರಿಂದಾಗಿ, ಕೆ.ಆರ್‌ ಪೇಟೆ ಟಿಕೆಟ್‌ ಆಕಾಂಕ್ಷಿಗಳು ಬಂಡಾಯದ ಬಾವುಟ ಬೀಸುವುದು ಖಚಿತವೆಂದು ಹೇಳಲಾಗುತ್ತಿದೆ. ಮೂರು ಬಾರಿ ಟಿಕೆಟ್‌ ನೀಡಿದರೂ ಗೆಲ್ಲಲಿಲ್ಲವೆಂಬ ಕಾರಣ ನೀಡಿ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್‌ ಅವರನ್ನು ಕಾಂಗ್ರೆಸ್‌ ನಾಯಕರು ತಣ್ಣಗಾಗಿಸಬಹುದು. ಆದರೆ, ಉಳಿದವರ ವಿಚಾರ ಹಾಗಿಲ್ಲ.

ಅದರಲ್ಲೂ, ವಿಜಯ್‌ ರಾಮೇಗೌಡ ಬೀಸುವ ಬಂಡಾಯದ ಬಾವುಟ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನಲಾಗಿದೆ. ಒಂದು ವೇಳೆ, ವಿಜಯ್‌ ಅವರು ಬಂಡಾಯವೆದ್ದರೆ, ಕಾಂಗ್ರೆಸ್‌ಗೆ ಗೆಲುವು ಅಷ್ಟು ಸುಲಭವಲ್ಲ. ಅವರ ಬಂಡಾಯ ಜೆಡಿಎಸ್‌ಗೆ ವರದಾನವಾಗಬಹುದು ಎಂಬ ಅಭಿಪ್ರಾಯಗಳೂ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ. ಇದೆಲ್ಲವನ್ನೂ ಕಾಂಗ್ರೆಸ್‌ ಹೇಗೆ ನಿಭಾಯಿಸುತ್ತದೆ ಮತ್ತು ದೇವರಾಜ್‌ ಅವರನ್ನು ಹೇಗೆ ಗೆಲ್ಲಿಸಿಕೊಂಡು ಬರುತ್ತದೆ ಕಾದುನೋಡಬೇಕು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ರೈತರಿಂದ ಖರೀದಿಸುವ ಹಾಲಿನ ದರ 1.5 ರೂ. ಕಡಿತ; ಮನ್ಮುಲ್ ವಿರುದ್ಧ ಆಕ್ರೋಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ಮುಲ್‌) ರೈತರಿಂದ ಖರೀದಿಸುವ ಪ್ರತಿ ಲೀಟರ್...

ರಾಜ್ಯದ ಬರ ಪರಿಸ್ಥಿತಿ, ರೈತರ ಸಂಕಷ್ಟ ಪರಿಹರಿಸುವ ಚರ್ಚೆಗಳಿಗೆ ಸದನದಲ್ಲಿ ಪ್ರಾಮುಖ್ಯತೆ ನೀಡಿ; ಎಎಪಿ ಒತ್ತಾಯ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ 16ನೇ ವಿಧಾನಸಭೆಯ ವಿಧಾನ ಮಂಡಲಗಳ ಚಳಿಗಾಲದ...

ಬೆಂಗಳೂರಿನ ಈ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೊಸದೇನಲ್ಲ ಎಂಬಂತೆ ಆಗಿದೆ. ಬೆಂಗಳೂರಿನ...

ಹಾಸನ | ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ; ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಾಳೆಕೆರೆ ಫಾರೆಸ್ಟ್‌ನಲ್ಲಿ ಸೋಮವಾರ ನಡೆದ...