‘ಬಾಂಬೆ ಗಿರಾಕಿ’ ನಾರಾಯಣಗೌಡ ಈ ಬಾರಿ ಬಿಜೆಪಿಯಿಂದ ಗೆಲ್ಲುತ್ತಾರೆಯೇ?

Date:

`ಬಾಂಬೆ ಗಿರಾಕಿ’ ಎಂದೇ ಖ್ಯಾತಿ ಪಡೆದಿರುವ ಕೆ.ಆರ್‌ ಪೇಟೆ ಶಾಸಕ, ಸಚಿವ ಕೆ.ಸಿ ನಾರಾಯಣಗೌಡ, ಆಪರೇಷನ್‌ ಕಮಲದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಬಿಜೆಪಿಗೆ ನೆಲೆಯೇ ಇಲ್ಲದ ಕೆ.ಆರ್‌ ಪೇಟೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಾರರು, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ಇತ್ತೀಚೆಗಿನ ಬೆಳವಣಿಗೆಗಳು ಅವರು ಬಿಜೆಪಿಯಲ್ಲೇ ಬೇರು ಬಿಡಲಿದ್ದಾರೆ ಎಂಬುದನ್ನು ಸೂಚಿಸುತ್ತಿವೆ. ಆದರೂ, ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ, ಗೆಲ್ಲಲಾರರು ಎಂಬ ಅಭಿಪ್ರಾಯಗಳೂ ಕ್ಷೇತ್ರದಾದ್ಯಂತ ವ್ಯಕ್ತವಾಗುತ್ತಿವೆ.

ಬಾಂಬೆ ಬಿಟ್ಟು ಸುಮಾರು ಎರಡು ದಶಕಗಳೇ ಕಳೆದರೂ, ಇಂದಿಗೂ ಸಚಿವ ನಾರಾಯಣಗೌಡಗೆ `ಬಾಂಬೆ ಗಿರಾಕಿ’ ಎಂಬ ಬಿರುದು ಹಾಗೆ ಉಳಿದಿದೆ. ಅದಕ್ಕೆ ಕಾರಣವೂ ಇದೆ. ಬಾಂಬೆ ಬಿಟ್ಟ ನಾರಾಯಣಗೌಡ ನೇರವಾಗಿ ಬಂದದ್ದು ಹುಟ್ಟೂರಿನ ತಾಲೂಕು ಕೆ.ಆರ್‌ ಪೇಟೆಗೆ. ಬರುತ್ತಿದ್ದಂತೆಯೇ ರಾಜಕಾರಣ ಆರಂಭಿಸಿದ ನಾರಾಯಣಗೌಡ 2008ರ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿ, ಲೆಕ್ಕಕ್ಕಿಲ್ಲದಷ್ಟು ಓಟು ಪಡೆದು ಸೋತಿದ್ದರು.

2008ರ ಚುನಾವಣೆಯವರೆಗೂ ಕೆ.ಆರ್‌ ಪೇಟೆಯನ್ನು ಪ್ರತಿನಿಧಿಸುತ್ತಿದ್ದ, ಜೆಡಿಎಸ್‌ ನಾಯಕ, ಮಾಜಿ ಸ್ಪೀಕರ್‌ ಕೆ.ಆರ್‌ ಪೇಟೆ ಕೃಷ್ಣ ಅವರು 2008ರ ಚುನಾವಣೆಯಲ್ಲಿ ಸೋತು, ರಾಜಕಾರಣದಿಂದ ದೂರ ಉಳಿದರು. ಅವರು ದೂರ ಸರಿದಿದ್ದರಿಂದಾಗಿ ಕೆ.ಆರ್‌ ಪೇಟೆಯಲ್ಲಿ ಜೆಡಿಎಸ್‌ಗೆ ಕೃಷ್ಣರಂತಹ ಜನಾನುರಾಗಿ ರಾಜಕಾರಣಿ ಅಥವಾ ದುಡ್ಡಿನ ಕುಳದ ಅಭ್ಯರ್ಥಿಯ ಅಗತ್ಯವಿತ್ತು. ಆಗ, ಜೆಡಿಎಸ್‌ ನಾಯಕರಿಗೆ ಕಂಡಿದ್ದೇ ಈ ಬಾಂಬೆ ಗಿರಾಕಿ ನಾರಾಯಣಗೌಡ. ಜೆಡಿಎಸ್‌ ನಾರಾಯಣಗೌಡಗೆ ಮಣೆ ಹಾಕಿತ್ತು. ಬಳಿಕ ಅವರು ನಡೆಸಿದ್ದು ದುಡ್ಡಿನ ಕರಾಮತ್ತು. ಜೆಡಿಎಸ್‌ ಟಿಕೆಟ್‌ಗಾಗಿ ದೊಡ್ಡಗೌಡರ ಮನೆಗೆ ದೊಡ್ಡ ಸೂಟ್‌ಕೇಸ್‌ ಕೂಡ ಕೊಟ್ಟಿದ್ದರೆಂಬ ಆರೋಪಗಳೂ ಇವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆ.ಆರ್‌ ಪೇಟೆಗೆ ದೇವರಂತೆ ಕಂಡಿದ್ದ ನಾರಾಯಣಗೌಡ

2006ರಲ್ಲಿ ಬಾಂಬೆ ಬಿಟ್ಟು, ಕೆ.ಆರ್‌ ಪೇಟೆಗೆ ಬಂದ ನಾರಾಯಣಗೌಡ ಎರಡು ವರ್ಷಗಳ ಕಾಲ ನಿರಂತರವಾಗಿ ಕೆ.ಆರ್‌ ಪೇಟೆ ತಾಲೂಕಿನಾದ್ಯಂತ ಸುತ್ತಾಡಿದ್ದರು. 2008ರ ಚುನಾವಣೆವರೆಗೂ ಕ್ಷೇತ್ರದಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಿಗೂ ಭೇಟಿ ನೀಡುತ್ತಿದ್ದ ನಾರಾಯಣಗೌಡ, ತಮ್ಮ ಮತ್ತು ತಮ್ಮ ತಂದೆ-ತಾಯಿಯ ಭಾವಚಿತ್ರವಿದ್ದ ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಿಸಿದ್ದರು. ಅಲ್ಲದೆ, ಹಳ್ಳಿಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ಹಂಚಿದ್ದರು. ಅವರ ರಾಜಕಾರಣವನ್ನು ಅರಿಯದಿದ್ದ ಜನರು ಭಗವಂತನೇ ದೇವಲೋಕದಿಂದ ಧರೆಗಿಳಿದು ಬಂದ ಎಂಬಂತೆ ನಾರಾಯಣಗೌಡರನ್ನು ಕೊಂಡಾಡಲಾರಂಭಿದ್ದರು.

ಜನಮನ್ನಣೆ ದೊರೆಯುತ್ತಿದೆಯೆಂದು ಭಾವಿಸಿದ್ದ ನಾರಾಯಣಗೌಡ 2008ರ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು. ಆದರೆ, ಮತ್ತೋರ್ವ ದುಡ್ಡಿನ ಕುಳವೇ ಆಗಿದ್ದ ಕೆ.ಬಿ ಚಂದ್ರಶೇಖರ್‌ ಎದುರು ನಾರಾಯಣಗೌಡರ ಕರಾಮತ್ತು ನಡೆಯಲಿಲ್ಲ. 2013ರ ವೇಳೆ, ಚಂದ್ರಶೇಖರ್‌ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳಲಾರಂಭಿಸಿದ್ದರು. ಇದನ್ನೂ ಬಂಡವಾಳ ಮಾಡಿಕೊಂಡ ನಾರಾಯಣಗೌಡ ಮತ್ತೆ ಕ್ಷೇತ್ರ ಪರ್ಯಟನೆ ಆರಂಭಿಸಿದ್ದರು.

2013ರ ಚುನಾವಣೆ ವೇಳೆಗೆ ಜನರ ಗಮನವನ್ನು ಮತ್ತಷ್ಟು ಸೆಳೆದಿದ್ದ ನಾರಾಯಣಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದರೂ, ಜೆಡಿಎಸ್‌ನಲ್ಲಿಯೇ ಉಳಿದಿದ್ದರು. ಆ ಅವಧಿಯಲ್ಲಿ ‘ಆರಂಭದಲ್ಲಿ ಅಗಸ ಎತ್ತೆತ್ತಿ ಒಗೆಯುತ್ತಾನೆ’ ಎಂಬಂತೆ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳೂ ನಡೆದವು. ಕೆ.ಬಿ ಚಂದ್ರಶೇಖರ್‌ ದುಡ್ಡಿನ ಗಿರಾಕಿ, ತಾನಷ್ಟೇ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೇನೂ ಕೆಲಸ ಮಾಡುತ್ತಿಲ್ಲವೆಂದು ಭಾವಿಸಿದ್ದ ಕ್ಷೇತ್ರದ ಜನರಿಗೆ ನಾರಾಯಣಗೌಡ ದೇವರಂತೆ ಕಾಣಿಸಿಕೊಂಡರು.

2018ರ ಬಯಲಾಯ್ತು ಅಸಲಿಯತ್ತು

2018ರ ಚುನಾವಣೆಯಲ್ಲಿ ಎರಡನೇ ಬಾರಿಗೆ ನಾರಾಯಣಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದರು. ಆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಿದ್ದರು. ಹೇಗೂ ತಮ್ಮದೇ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿಸಿನೆಸ್ ಮಾಡಿದ್ದ ಮತ್ತು ಬಿಸಿನೆಸ್‌ ಮೈಂಡ್‌ ಹೊಂದಿದ್ದ ನಾರಾಯಣಗೌಡ ಪುಗಸಟ್ಟೆಯಾಗಿ ಹಣ ಕಳೆದುಕೊಳ್ಳುವವರಾಗಿರಲಿಲ್ಲ. 2006ರಿಂದ 2008ರವರೆಗೆ ಖರ್ಚು ಮಾಡಿದ್ದ ಹಾಗೂ 2008, 2013 ಮತ್ತು 2018ರ ಚುನಾವಣೆಗಾಗಿ ಸುರಿದಿದ್ದ ಹಣವನ್ನು ಹಿಂಪಡೆಯಬೇಕೆಂಬ ಯೋಚನೆಯೂ ಅವರಲ್ಲಿತ್ತು ಎನ್ನಲಾಗಿದೆ. ಹಾಗಾಗಿ, ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.

ಅಷ್ಟೊತ್ತಿಗೆ ಬಿಜೆಪಿ ‘ಆಪರೇಷನ್‌ ಕಮಲ’ ಆರಂಭಿಸಿತ್ತು. ಹಣ ಚೆಲ್ಲಿದ್ದ ನಾರಾಯಣಗೌಡ, ಬಿಜೆಪಿಯ ಪುಡಿಗಾಸಿಗಾಗಿ ಬಿಜೆಪಿಗೆ ಸೇರಲಿಲ್ಲ. ಅದರ ಅಗತ್ಯವೂ ಅವರಿಗಿರಲಿಲ್ಲ. ಆದರೆ, ‘ಹೊಡೆದರೆ ಆನೆಯನ್ನೇ ಹೊಡೆಯಬೇಕು’ ಎಂಬಂತೆ, ಮಂತ್ರಿಗಿರಿಯ ಬೇಡಿಕೆ ಇಟ್ಟರು. ಅದನ್ನು ಬಿಜೆಪಿ ದಯಪಾಲಿಸಲು ಒಪ್ಪಿತ್ತು. ಅಂತೆಯೇ ಬಿಜೆಪಿಗೆ ಪಕ್ಷಾಂತರ ಮಾಡಿದ ನಾರಾಯಣಗೌಡ ಸಚಿವರೂ ಆದರು. ಆದರೆ, ಅವರು ಬಯಸಿದ್ದ ಖಾತೆ ಸಿಗಲಿಲ್ಲ. ಅಲ್ಲದೆ, ಬಿಜೆಪಿಯಲ್ಲಿ ಅಂತಹ ಗೌರವವೂ ಅವರಿಗೆ ಸಿಗುತ್ತಿಲ್ಲ.

ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ನಾರಾಯಣಗೌಡ

ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದ ನಾರಾಯಣಗೌಡ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯೂ ಆದರು. ಆದರೆ, ಬಿಜೆಪಿ ಅವರನ್ನು ಹೊರಗಿನವರು ಎಂಬಂತೆ ನೋಡಲಾರಂಭಿಸಿತು. ಅಲ್ಲದೆ, ಮಂಡ್ಯ ಜಿಲ್ಲಾ ಉಸ್ತುವಾರಿಯನ್ನೂ ಕಿತ್ತುಕೊಂಡಿತು. ಇದು, ನಾರಾಯಣಗೌಡರಲ್ಲಿ ಇರಿಸು-ಮುರಿಸು ಉಂಟುಮಾಡಿತ್ತು. ಅಲ್ಲದೆ, ಬಿಜೆಪಿ ಪ್ರಾಬಲ್ಯವೇ ಇಲ್ಲದ ಕೆ.ಆರ್‌ ಪೇಟೆಯಲ್ಲಿ ತಾವು ಗೆಲ್ಲುವುದು ಸುಲಭವಲ್ಲ ಎಂಬುದನ್ನೂ ನಾರಾಯಣಗೌಡ ಅರಿತುಕೊಂಡಿದ್ದರು. ಹೀಗಾಗಿ, 2023ರ ಚುನಾವಣೆಯಲ್ಲಿ ಬಿಜೆಪಿಗೆ ‘ಗುಡ್‌ ಬೈ’ ಹೇಳಿ, ಕಾಂಗ್ರೆಸ್‌ ಸೇರುತ್ತಾರೆ. ಈ ಬಗ್ಗೆ ಮಾರ್ಚ್‌ 21ರಂದು ಘೋಷಿಸುತ್ತಾರೆ ಎಂಬ ಚರ್ಚೆಗಳೂ ಆರಂಭವಾಗಿದ್ದವು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸಚಿವ ನಾರಾಯಣಗೌಡ ಭಾವಚಿತ್ರವಿರುವ ಬ್ಯಾಗ್‌ಗಳು ವಶ; ಎಫ್‌ಐಆರ್‌ ದಾಖಲು

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಕ್ಷೇತ್ರವೂ ಆದ ಕೆ.ಆರ್‌ ಪೇಟೆಯಲ್ಲಿ ನಾರಾಯಣಗೌಡ ಮೂಲಕ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿತ್ತು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳಲು ಇದ್ದೊಬ್ಬ ಶಾಸಕನೂ ಪಕ್ಷ ತೊರೆಯುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಹೀಗಾಗಿ, ನಾರಾಯಣಗೌಡರನ್ನು ಖುದ್ದು ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ಮಾಡಿದ್ದರು. ಬಳಿಕ, ನಾರಾಯಣಗೌಡರನ್ನು ದೆಹಲಿಗೆ ಕರೆಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿ ತೊರೆಯದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ನಾಯಕತ್ವ ನೀಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ನಾರಾಯಣಗೌಡ ಬಿಜೆಪಿಯಲ್ಲೇ ಉಳಿಯುವುದು ನಿಚ್ಚಳವಾಗಿದೆ.

ನಾರಾಯಣಗೌಡ ಭಾವಚಿತ್ರ – ಬಿಜೆಪಿ ಚಿಹ್ನೆಯ ಬ್ಯಾಗ್‌ಗಳು ಪತ್ತೆ

ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ನಾರಾಯಣಗೌಡ ಬಿಜೆಪಿಯಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಯೊಂದು ಅದನ್ನು ಖಾತ್ರಿ ಪಡಿಸಿದೆ. ಮಾರ್ಚ್‌ 27ರಂದು ಚಾಮರಾಜಪೇಟೆಯಲ್ಲಿರುವ ‘ಯೂನಿಕ್ಸ್ ಪ್ರಾಡಕ್ಟ್’ ಎಂಬ ಬ್ಯಾಗ್ ಫ್ಯಾಕ್ಟರಿ ಮೇಲೆ ಎಂಸಿಸಿ ತಂಡದ ನೋಡಲ್ ಅಧಿಕಾರಿ ಎಂ.ಎಸ್.ಉಮೇಶ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ, ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆಗಳಿರುವ 4,000 ಬ್ಯಾಗ್‌ಗಳು ಪತ್ತೆಯಾಗಿವೆ. ಈ ಬ್ಯಾಗ್‌ಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಿ, ಆಮಿಷವೊಡ್ಡಿ ಮತಗಳನ್ನು ಸೆಳೆಯುವ ಉದ್ದೇಶದಿಂದ ತಯಾರಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪಕ್ಷಕ್ಕಾಗಿ ನಾಲ್ಕು ದಶಕಗಳ ಕಾಲ ದುಡಿದ ದೇವರಾಜ್ ಗೆ ಜೆಡಿಎಸ್ ವರಿಷ್ಠರಿಂದ ದ್ರೋಹ: ಕಾಂಗ್ರೆಸ್ ಸೇರುವುದಾಗಿ ಘೋಷಣೆ

ಸದಾ ಅಧಿಕಾರದ ಧಾವಂತದಲ್ಲಿರುವ ನಾರಾಯಣಗೌಡ ಬಿಜೆಪಿಗರ ಮತ್ತೊಂದು ಆಮಿಷದಿಂದಾಗಿ ಬಿಜೆಪಿಯಲ್ಲೇ ಉಳಿದಿದ್ದಾರೆ. ಆದರೆ, ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲಲಾರರು ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ. ಅಲ್ಲದೆ, ಕ್ಷೇತ್ರದ ಜೆಡಿಎಸ್‌ನ ಪ್ರಬಲ ನಾಯಕ ಬಿ.ಎಲ್‌ ದೇವರಾಜು ಕಾಂಗ್ರೆಸ್‌ ಸೇರಿದ್ದಾರೆ. ಅವರಿಗೇ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆಯಿದೆ. 2019ರ ಉಪಚುನಾವಣೆಯಲ್ಲಿ ಕೆಲವೇ ಸಾವಿರ ಮತಗಳ ಅಂತರದಿಂದ ನಾರಾಯಣಗೌಡ ವಿರುದ್ಧ ಸೋತಿದ್ದ ದೇವರಾಜು, ಈ ಬಾರಿ ಪ್ರಬಲ ಪೈಪೋಟಿ ನೀಡಲಿದ್ದಾರೆ. ಕೆ.ಆರ್ ಪೇಟೆಯ ಪ್ರಜ್ಞಾವಂತ ಮತದಾರರು, ಬಾಂಬೆ ಗಿರಾಕಿಗಳನ್ನು ಮತ್ತೆ ಬಾಂಬೆಗಟ್ಟಿ, ಯೋಗ್ಯ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವತ್ತ ಮನಸ್ಸು ಮಾಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ನೀರಿನ ಗ್ಯಾರಂಟಿ ಕೊಡುವವರಿಗೆ ಮತ ನೀಡಿ: ಆಂಜನೇಯ ರೆಡ್ಡಿ

ಸುಮಾರು 15 ವರ್ಷಗಳಿಂದ ರಾಜಕೀಯ ಪಕ್ಷಗಳು, ರಾಜಕಾರಣಿಗಳಿಂದ ಭರವಸೆಗಳು ಬಿಟ್ಟರೆ ಅಗತ್ಯವಿರುವ...

ಚಿಕ್ಕಬಳ್ಳಾಪುರ | ಭ್ರಷ್ಟಾಚಾರ ಲೀಗಲೈಜ್ ಮಾಡಿದ್ದೇ ಬಿಜೆಪಿ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿ

ಭ್ರಷ್ಟಾಚಾರವನ್ನು ಲೀಗಲೈಜ್ ಮಾಡಿದ್ದು, ಬಿಜೆಪಿಯವರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ...

ತುಮಕೂರು | ಪ್ರಧಾನಿ ಆಗಲು ಯೋಗ್ಯರಾದ ಸಾಕಷ್ಟು ಮುಖಂಡರು ಕಾಂಗ್ರೆಸ್‌ನಲ್ಲಿ ಇದ್ದಾರೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗಲು ಯಾರಿದ್ದಾರೆ? ನರೇಂದ್ರಮೋದಿ ಬಿಟ್ಟರೆ ಪ್ರಧಾನಿ ಆಗುವ ಅರ್ಹತೆ ಯಾರಿಗೂ...

ಹಾಸನ ಯುವ ನಾಯಕನ ಕಾಮಕೃತ್ಯದ ಪೆನ್‌ಡ್ರೈವ್ ಆರೋಪ; ಮೌನ ಮುರಿಯದ ಮಾಜಿ ಪ್ರಧಾನಿ

ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪೆನ್‌ಡ್ರೈವ್ ಭಾರೀ ಸುದ್ದಿ ಮಾಡ್ತಾ...